Asianet Suvarna News Asianet Suvarna News

ಬಿಜೆಪಿಯವರು ಸ್ವಾತಂತ್ರ್ಯಕ್ಕಾಗಿ ಹೋರಾಡಿಯೇ ಇಲ್ಲ: ಎಂ.ಬಿ. ಪಾಟೀಲ್‌

ಕಾಂಗ್ರೆಸ್‌ನಿಂದ ಸುಸ್ಥಿರ ಅಭಿವೃದ್ಧಿ, ಬಿಜೆಪಿಗೆ ಸಾಮಾನ್ಯರ ಸಮಸ್ಯೆ ಅರ್ಥವಾಗಲ್ಲ, ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶದಲ್ಲಿ ಎಂ.ಬಿ. ಪಾಟೀಲ್‌ ವಾಗ್ದಾಳಿ

Congress Leader MB Patil Slams BJP grg
Author
First Published Sep 6, 2022, 9:51 PM IST

ಕೊಪ್ಪಳ(ಸೆ.06): ದೇಶದ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯವರು ಹೋರಾಡಿಯೇ ಇಲ್ಲ. ಅದೇನಿದ್ದರೂ ಕಾಂಗ್ರೆಸ್‌ ಮಹಾನ್‌ ನಾಯಕರ ಹೋರಾಟದ ಫಲ. ಅಲ್ಲದೇ ಸ್ವಾತಂತ್ರ್ಯ ಬಂದಾಗ ದಯನೀಯ ಸ್ಥಿತಿಯಲ್ಲಿದ್ದ ಭಾರತವನ್ನು ಕಟ್ಟಿ, ಬೆಳೆಸಿದ್ದು ಕಾಂಗ್ರೆಸ್‌ ಪಕ್ಷ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ್‌ ಹೇಳಿದರು. ಸೋಮವಾರ ಶಿವಶಾಂತ ಮಂಗಲಭವನಲ್ಲಿ ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ ಉದ್ಘಾಟಿಸಿ ಮಾತನಾಡಿದರು. ವಿವಾದಿತ ವೀರ್‌ ಸಾವರ್ಕರ್‌ ಮೆರೆಸಲು ಬಿಜೆಪಿಯವರು ಮುಂದಾಗುತ್ತಾರೆ. ಅವರ ರಥಯಾತ್ರೆ ಮಾಡುತ್ತಾರೆ. ಆದರೆ, ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ರಾಜ್ಯದ ಕಿತ್ತೂರು ರಾಣಿ ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರ ನಾಯಕರು ಯಾಕೆ ಇವರಿಗೆ ನೆನಪಾಗುವುದಿಲ್ಲ? ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಚಿವ ಬಸವರಾಜ ರಾಯರಡ್ಡಿ, ವಾಜಪೇಯಿ ಅವರು ಕಾಂಗ್ರೆಸ್‌ ಆಡಳಿತವನ್ನು ಅನುಸರಿಸಿದ್ದರು. ಆದರೆ, ಈಗಿನ ಪ್ರಧಾನಿ ನರೇಂದ್ರ ಮೋದಿ ಅವರು ಕೇವಲ ಭಾವನಾತ್ಮಕವಾಗಿ ಆಡಳಿತ ಮಾಡುತ್ತಿದ್ದಾರೆ ಎಂದರು.

ಪಿಎಸ್​ಐ ನೇಮಕಾತಿ ಹಗರಣ: ಆಡಿಯೋದಲ್ಲಿರುವ ಧ್ವನಿ ನನ್ನದೆ ಎಂದು ಒಪ್ಪಿಕೊಂಡ ಬಿಜೆಪಿ ಶಾಸಕ

ಹಣ ಜಾತಿಯ ಮೂಲಕ ಬಿಜೆಪಿ ರಾಜಕೀಯ ವ್ಯವಸ್ಥೆ ಹಾಳು ಮಾಡಿದೆ. ಇಂಥ ಕೆಟ್ಟಆಡಳಿತದಿಂದ ಮತದಾರರು ಬೇಸರಗೊಂಡಿದ್ದಾರೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರದಲ್ಲಿ ಗೆಲುವು ನಿಶ್ಚಿತ ಎಂದರು. ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಶಿವರಾಜ ತಂಗಡಗಿ ಮಾತನಾಡಿ, ಸುಳ್ಳು ಹೇಳಿಕೊಂಡು ಅಧಿಕಾರಕ್ಕೆ ಬಂದಿರುವ ಬಿಜೆಪಿಗೆ ಜನರು ಈ ಬಾರಿ ತಕ್ಕ ಪಾಠ ಕಲಿಸಲಿದ್ದಾರೆ ಎಂದು ವಾಗ್ದಾಳಿ ಮಾಡಿದರು. ಪಿಎಸ್‌ಐ ಅಕ್ರಮದಲ್ಲಿ ಭಾಗಿಯಾಗಿರುವ ಶಾಸಕ ಬಸವರಾಜ ದಢೇಸೂಗುರು ಅವರನ್ನು ಬಂಧಿಸಿ, ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಿದರು.

ಲಿಂಗಾಯತರನ್ನು ತಲೆಮೇಲೆ ಹೊತ್ತುಕೊಂಡಿದ್ದೇವೆ: ಅನ್ಸಾರಿ

ನಾವು ಲಿಂಗಾಯತರನ್ನು ದೂರ ಇಟ್ಟಿಲ್ಲ. ಲಿಂಗಾಯತರನ್ನು ಈಗಲೂ ತಲೆಮೇಲೆ ಹೊತ್ತುಕೊಂಡಿದ್ದೇವೆ. ಆದರೆ, ಲಿಂಗಾಯತ ಯುವಕರನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಮಾಜಿ ಸಚಿವ ಇಕ್ಬಾಲ್‌ ಅನ್ಸಾರಿ ವಿಷಾಧಿಸಿದರು.

ಸಮಾವೇಶದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‌ ಪಕ್ಷ ಯಾವತ್ತು ಲಿಂಗಾಯತರನ್ನು ಬಿಟ್ಟಿಲ್ಲ. ಅವರನ್ನು ದಾರಿ ತಪ್ಪಿಸುತ್ತಿದ್ದಾರೆ. ಈಗ ಎಂ.ಬಿ. ಪಾಟೀಲ್‌ ಅವರು ಇದೆಲ್ಲವನ್ನು ಅರ್ಥ ಮಾಡಿಸುತ್ತಿದ್ದಾರೆ ಎಂದರು. ಕಾಂಗ್ರೆಸ್‌ ಪಕ್ಷದಲ್ಲಿ ಕಿವಿ ಕಚ್ಚುವವರು ಇದ್ದಾರೆ. ಅವರ ಮಾತು ಕೇಳಬೇಡಿ. ಅವರು ಇಲ್ಲದ್ದನ್ನೇ ಹೇಳುತ್ತಾರೆ. ಒಂದೇ ಒಂದು ಸದಸ್ಯತ್ವ ಮಾಡಿಸದಿದ್ದರೂ ಕಿವಿ ಕಚ್ಚುವುದು ಬಹಳ. ಅಂಥವರ ಮಾತು ಕೇಳಬೇಡಿ. ಕೆಲವರು ಕಾಂಗ್ರೆಸ್‌ ಪಕ್ಷದಲ್ಲಿ ಇದ್ದರೂ ದುಡಿಯುವುದು ಮಾತ್ರ ಬಿಜೆಪಿಯವರಿಗೆ. ಅಂಥವರ ಬಗ್ಗೆಯೂ ಎಚ್ಚರ ಇರಬೇಕು ಎನ್ನುವ ಮೂಲಕ ವ್ಯಂಗ್ಯವಾಗಿ ಪಕ್ಷದಲ್ಲಿನ ಆಂತರಿಕ ಕಚ್ಚಾಟವನ್ನು ಸೂಕ್ಷ್ಮವಾಗಿ ಪಕ್ಷದ ನಾಯಕರ ಗಮನಕ್ಕೆ ತರುವ ಪ್ರಯತ್ನ ಮಾಡಿದರು.

ಕಾಂಗ್ರೆಸ್‌ ಮಾಜಿ ಜಿಲ್ಲಾಧ್ಯಕ್ಷ ಕೆ. ಬಸವರಾಜ ಹಿಟ್ನಾಳ ಅವರು ಸ್ವಾಗತಿಸಿ, ಮಾತನಾಡಿದರು. ಮಾಜಿ ಸಂಸದ ಶಿವರಾಮಗೌಡ, ಮಲ್ಲಿಕಾರ್ಜುನ ನಾಗಪ್ಪ, ಜಿಪಂ ಮಾಜಿ ಸದಸ್ಯ ಮುಕುಂದರಾವ್‌ ಭವಾನಿಮಠ ಅವರು ಮಾತನಾಡಿದರು.
ಮುಖಂಡರಾದ ಮಾಲತಿ ನಾಯಕ, ಎಸ್‌.ಬಿ. ನಾಗರಳ್ಳಿ, ಕೃಷ್ಣ ಇಟ್ಟಂಗಿ, ಎಚ್‌.ಎಲ್‌. ಹಿರೇಗೌಡ್ರ, ಗೂಳಪ್ಪ ಹಲಿಗೇರಿ, ಜುಲ್ಲು ಖಾದ್ರಿ, ರಾಜು ನಾಯಕ, ರಾಮಣ್ಣ ಸಾಲಭಾವಿ, ನಗರಸಭೆ ಅಧ್ಯಕ್ಷೆ ಶಿವಗಂಗಾ ಹಿರೇಗೌಡ್ರ, ಕಿಸೋರಿ ಬೂದನೂರು, ಇಂದಿರಾ ಭಾವಿಕಟ್ಟಿ, ಶ್ರೀಶೈಲಜಾ ಹಿರೇಮಠ ಮೊದಲಾದವರು ಇದ್ದರು.

ವೀರಶೈವ, ಲಿಂಗಾಯತರು ಒಗ್ಗೂಡಿ ಹೋಗೋಣ

ಲಿಂಗಾಯತ ಪ್ರತ್ಯೇಕ ಧರ್ಮ ಹೋರಾಟಕ್ಕಾಗಿ ಮುಂಚೂಣಿಯಲ್ಲಿದ್ದು ಶ್ರಮಿಸಿದ್ದ ಎಂ.ಬಿ. ಪಾಟೀಲ ಅವರು ಇದೀಗ ತಮ್ಮ ವರಸೆ ಬದಲಾಯಿಸಿದ್ದು, ವೀರಶೈವ ಮತ್ತು ಲಿಂಗಾಯತರನ್ನು ಒಗ್ಗೂಡಿಸುವ ಪ್ರಯತ್ನದ ಭಾಗವಾಗಿ ಸಭೆ ನಡೆಸಿದ್ದು, ವೀರಶೈವರು, ಲಿಂಗಾಯತರು ಒಗ್ಗೂಡಿ ಸಮಾಜದ ಏಳ್ಗೆಗೆ ಶ್ರಮಿಸೋಣ ಎಂದು ಮನವಿ ಮಾಡಿದರು.

ನಗರದ ಕೇತೇಶ್ವರ ಕಲ್ಯಾಣಮಂಟಪದಲ್ಲಿ ಸೋಮವಾರ ಲಿಂಗಾಯತ ಮಹಾಸಭಾ ಮತ್ತು ವೀರಶೈವ ಲಿಂಗಾಯತ ಮಹಾಸಭಾ ಜಂಟಿಯಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಅವರು, ಪರಸ್ಪರ ಅರ್ಥೈಸಿಕೊಳ್ಳಲು ಆಗಿರುವ ತೊಡಕನ್ನು ಮತ್ತೆ ಕೆದಕದೆ ಒಗ್ಗಟ್ಟಿನಿಂದ ಶ್ರಮಿಸೋಣ ಎಂದು ಕೋರಿದರು.

ಕರ್ನಾಟಕದ ಹಲವು ಮಠದ ಸ್ವಾಮೀಜಿಗಳ ಕಾಮ ಪುರಾಣ ಬಿಚ್ಚಿಟ್ಟ ಮಹಿಳೆ, ಆಡಿಯೋ ವೈರಲ್

ಈಗ ಚುನಾವಣೆಯ ವರ್ಷವಾಗಿರುವುದರಿಂದ ಆ ಕುರಿತು ಏನೂ ಮಾತನಾಡುವುದು ಬೇಡ. ಮುಂದಿನ ದಿನಗಳಲ್ಲಿ ಪ್ರಯತ್ನ ಮಾಡಿ ಸಮಾಜಕ್ಕೆ ದೊರೆಯಬೇಕಾಗಿರುವ ಮೀಸಲಾತಿ ಸೌಲಭ್ಯವನ್ನು ಪಡೆಯೋಣ ಎಂದರು. ವೀರಶೈವ ಮಹಾಸಭಾವನ್ನು ಹುಟ್ಟು ಹಾಕಿದ್ದು ಸುಮ್ಮನೆ ಅಲ್ಲ. ಅದಕ್ಕೆ ಅದರದೇ ಆದ ಹಿನ್ನೆಲೆ ಇದೆ. ಅನೇಕರು ಅವಿರತವಾಗಿ ಶ್ರಮಿಸಿದ್ದಾರೆ. ಹಾಗೆಯೆ ಲಿಂಗಾಯತ ಮಹಾಸಭಾ ಹುಟ್ಟಿಗೂ ಅದರದೆ ಆದ ಇತಿಹಾಸವಿದೆ. 1964ರಲ್ಲಿ ಜನ್ಮತಳೆದ ವೀರಶೈವ ಮಹಾಸಭಾ ಸಂಘಟನೆಗಾಗಿ ಸದಾ ಶ್ರಮಿಸುತ್ತಿದೆ. ನಮ್ಮ ಉದ್ದೇಶವೂ ಅದೇ ಆಗಿದೆ ಹಾಗೂ ಅವರ ಉದ್ದೇಶವೂ ಅದೇ ಆಗಿದೆ. ಆದರೆ, ನಾವು ಅವರನ್ನು (ವೀರಶೈವರನ್ನು) ಅರ್ಥೈಸುವಲ್ಲಿ ವಿಫಲವಾದೆವು ಅಥವಾ ಅವರು ನಮ್ಮನ್ನು ಅರ್ಥೈಸುವಲ್ಲಿ ಆಗಲಿಲ್ಲವೋ? ಗೊತ್ತಾಗಲಿಲ್ಲ. ಹೀಗಾಗಿ ಸಮಸ್ಯೆಯಾಯಿತು. ಆದರೆ, ಈಗ ಪಂಚಪೀಠದವರು, ವಿರಕ್ತಮಠದವರು, ವೀರಶೈವರು, ಲಿಂಗಾಯತರು ಸೇರಿದಂತೆ ಎಲ್ಲರನ್ನು ಒಗ್ಗೂಡಿಕೊಂಡೆ ಹೋಗುವುದಕ್ಕೆ ಶ್ರಮಿಸೋಣ ಎಂದರು.

ನಿವೃತ್ತ ಶಿಕ್ಷಕರಾದ ಗವಿಸಿದ್ದಪ್ಪ ಕೊಪ್ಪಳ ಮಾತನಾಡಿದರು. ಶಾಸಕ ಅಮರೇಗೌಡ ಭಯ್ಯಾಪುರ, ಮಾಜಿ ಸಂಸದ ಶಿವರಾಮಗೌಡ, ಬಸವರಾಜ ಮಳಿಮಠ, ರುದ್ರಮುನಿ ಗಾಳಿ, ದಾನಪ್ಪ ಶೆಟ್ಟರ್‌, ಗುರುರಾಜ ಹಲಿಗೇರಿ, ನಗರಸಭೆ ಅಧ್ಯಕ್ಷೆ ಶಿವಗಂಗಾ ಹಿರೇಗೌಡ್ರ ಮೊದಲಾದವರು ಇದ್ದರು.
 

Follow Us:
Download App:
  • android
  • ios