Asianet Suvarna News Asianet Suvarna News

ಕಾಂಗ್ರೆಸ್‌ ತೊರೆದ ಗುಲಾಂ ನಬಿ ಆಜಾದ್‌: ಅಧಿಕಾರ ಅನುಭವಿಸಿ ರಾಜೀನಾಮೆ ಸರಿಯಲ್ಲ: ಖರ್ಗೆ

ಗುಲಾಂ ನಬಿ ಆಜಾದ್‌ಗೆ ರಾಜ್ಯಸಭೆ ವಿಪಕ್ಷ ನಾಯಕ ಟಾಂಗ್‌, ಬಿಜೆಪಿ, ಆರ್‌ಎಸ್‌ಎಸ್‌ಗೆ ಹೆದರಿ ತೆಗೆದುಕೊಂಡ ನಿರ್ಧಾರ ಇದು: ಮಲ್ಲಿಕಾರ್ಜುನ ಖರ್ಗೆ 

Congress Leader Mallikarjun Kharge Slams to Ghulam Nabi Azad grg
Author
Bengaluru, First Published Aug 28, 2022, 1:00 AM IST

ಬೆಂಗಳೂರು(ಆ.28):  ಪಕ್ಷದಲ್ಲಿ ಹಲವು ವರ್ಷಗಳ ಕಾಲ ಅಧಿಕಾರ ಎಂಜಾಯ್‌ ಮಾಡಿ ಈಗ ಕಾಂಗ್ರೆಸ್‌ ಪಕ್ಷಕ್ಕೆ ರಾಜೀನಾಮೆ ನೀಡಿರುವುದು ಸರಿಯಲ್ಲ. ಗುಲಾಂ ನಬಿ ಆಜಾದ್‌ ಅವರ ಈ ನಡೆ ಬಿಜೆಪಿ, ಆರ್‌ಎಸ್‌ಎಸ್‌ಗೆ ಹೆದರಿಕೊಂಡು ತೆಗೆದುಕೊಂಡ ನಿರ್ಧಾರದಂತಿದೆ ಎಂದು ರಾಜ್ಯಸಭೆ ವಿರೋಧಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತೊಮ್ಮೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾಂಗ್ರೆಸ್‌ ತೊರೆದು ಬಹುಶಃ ಅವರು ಜಮ್ಮು-ಕಾಶ್ಮೀರದ ಸ್ವರ್ಗಕ್ಕೆ ಹೋಗುತ್ತಿರಬಹುದು. ಇದನ್ನು ವಿವಾದಾತ್ಮಕ ಹೇಳಿಕೆ ಎನ್ನಬೇಡಿ. ವಿದಾಯದ ಭಾಷಣದ ವೇಳೆ ಜಮ್ಮು ಕಾಶ್ಮೀರವನ್ನು ಸ್ವರ್ಗ ಎಂದಿದ್ದರು. ಜತೆಗೆ ಅಲ್ಲೇ ಪಕ್ಷ ಕಟ್ಟುವುದಾಗಿ ಹೇಳಿದ್ದಾರೆ. ಹೀಗಾಗಿ ಜಮ್ಮು-ಕಾಶ್ಮೀರದ ಸ್ವರ್ಗಕ್ಕೆ ಹೋಗುತ್ತಿರಬಹುದು ಎನ್ನುತ್ತಿದ್ದೇನೆ’ ಎಂದು ಹೇಳಿದರು.

ಕಾಂಗ್ರೆಸ್‌ ಅಧ್ಯಕ್ಷರಾಗಿ ಮರಳಲು ರಾಹುಲ್‌ ಗಾಂಧಿಯನ್ನೇ ಒತ್ತಾಯಿಸುತ್ತೇವೆ: ಖರ್ಗೆ

‘49 ವರ್ಷಗಳ ಕಾಲ ಕಾಂಗ್ರೆಸ್‌ ಪಕ್ಷದಲ್ಲಿದ್ದ ಗುಲಾಂ ನಬಿ ಆಜಾದ್‌ ಅವರು ಈಗ ರಾಜೀನಾಮೆ ಸಲ್ಲಿಸಿದ್ದಾರೆ. ಅವರು ಆರು ಬಾರಿ ರಾಜ್ಯಸಭೆ ಸದಸ್ಯರಾಗಿದ್ದರು. 20-25 ವರ್ಷಗಳ ಕಾಲ ಸಚಿವರಾಗಿಯೂ ಕೆಲಸ ಮಾಡಿದ್ದರು. ಪಕ್ಷ ಹಾಗೂ ಸರ್ಕಾರದಲ್ಲಿ ಅತ್ಯುತ್ತಮ ಸ್ಥಾನಗಳನ್ನು ಅನುಭವಿಸಿದ್ದಾರೆ. ಈಗ ಕಾಂಗ್ರೆಸ್‌ ಪಕ್ಷವು ಬಿಜೆಪಿ ಹಾಗೂ ಆರ್‌ಎಸ್‌ಎಸ್‌ ವಿರುದ್ಧ ಹೋರಾಡಬೇಕಾದ ಸಮಯ. ಇಂತಹ ಸಮಯದಲ್ಲಿ ಆಜಾದ್‌ ರಾಜೀನಾಮೆ ನೋಡಿದರೆ ಬಿಜೆಪಿ, ಆರ್‌ಎಸ್‌ಎಸ್‌ಗೆ ಹೆದರಿಕೊಂಡು ರಾಜೀನಾಮೆ ನೀಡಿದ್ದಾರೆ ಎನಿಸುತ್ತದೆ’ ಎಂದು ಟೀಕಿಸಿದರು.

ಮೋದಿ ಕಣ್ಣೀರಿಗೆ ಖರ್ಗೆ ವ್ಯಂಗ್ಯ:

ಆಜಾದ್‌ ಬಗ್ಗೆ ನರೇಂದ್ರ ಮೋದಿ ಅವರು ಕಣ್ಣೀರು ಹಾಕಿರುವ ವಿಚಾರವನ್ನು ವ್ಯಂಗ್ಯವಾಡಿರುವ ಖರ್ಗೆ, ‘ನಾನು ಲೋಕಸಭೆಯಲ್ಲಿ ಐದು ವರ್ಷ ವಿರೋಧಪಕ್ಷದ ನಾಯಕನಾಗಿದ್ದೆ. ಈಗ ಮೇಲ್ಮನೆಯಲ್ಲಿ ಒಂದೂವರೆ ವರ್ಷದಿಂದ ಪ್ರತಿಪಕ್ಷ ನಾಯಕನಾಗಿದ್ದೇನೆ. ಅಲ್ಲಿ ಕಣ್ಣೀರು ಹಾಕೋರು ಯಾರೂ ನನಗೆ ಸಿಗಲಿಲ್ಲ’ ಎಂದು ಮೋದಿ ಹಾಗೂ ಗುಲಾಂ ನಬಿ ಆಜಾದ್‌ ಸಂಬಂಧವನ್ನು ಪರೋಕ್ಷವಾಗಿ ಟೀಕಿಸಿದರು.

ಎಐಸಿಸಿ ಅಧ್ಯಕ್ಷ ಸ್ಥಾನದ ಬಗ್ಗೆ ಗೊತ್ತಿಲ್ಲ

ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ತಮ್ಮ ಹೆಸರು ಕೇಳಿ ಬರುತ್ತಿರುವ ವಿಚಾರವಾಗಿ ಮಾತನಾಡಿದ ಮಲ್ಲಿಕಾರ್ಜುನ ಖರ್ಗೆ, ‘ಹೌದಾ, ಅದರ ಬಗ್ಗೆ ನನಗೆ ಮಾಹಿತಿ ಇಲ್ಲ. ನಾನು ಈಗ ದೆಹಲಿಗೆ ಹೋಗುತ್ತಿದ್ದೇನೆ. ವರಿಷ್ಠರನ್ನು ಭೇಟಿಯಾಗಿ ನನ್ನ ಹೆಸರು ಇದೆಯಾ ಇಲ್ವಾ ಅಂತ ಕೇಳಿಕೊಂಡು ಬಂದು ಹೇಳುತ್ತೇನೆ’ ಎಂದು ಹಾಸ್ಯದ ಧಾಟಿಯಲ್ಲಿ ಉತ್ತರಿಸಿದರು.
 

Follow Us:
Download App:
  • android
  • ios