Asianet Suvarna News Asianet Suvarna News

ಸಿದ್ದು, ದಿನೇಶ್‌ ರಾಜೀನಾಮೆ ಅಂಗೀಕಾರಕ್ಕೆ ದಿಲ್ಲೀಲಿ ಲಾಬಿ?

ಸಿದ್ದರಾಮಯ್ಯ ಹಾಗೂ ದಿನೇಶ್ ಗುಂಡೂರಾವ್ ಬಿಟ್ಟ ಹುದ್ದೆ ಮೇಲೆ ವಿರೋಧಿ ಬಣದ ಕಣ್ಣು ಬಿದ್ದಿದೆ.  ರಾಜೀನಾಮೆ ಅಂಗೀಕರಿಸುವಂತೆ ಲಾಬಿ ನಡೆಸಲಾಗುತ್ತಿದೆ. 

Congress Leader Lobbying For KPCC President Opposition Leader Post
Author
Bengaluru, First Published Dec 11, 2019, 8:29 AM IST

ನವದೆಹಲಿ[ಡಿ.11]:  ರಾಜ್ಯದಲ್ಲಿ 15 ಕ್ಷೇತ್ರಗಳಲ್ಲಿ ನಡೆದ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ನ ಹೀನಾಯ ಪ್ರದರ್ಶನ ಪಕ್ಷದ ಮುಂದಾಳುಗಳಾದ ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ರನ್ನು ಹಣಿಯಲು ಕಾದು ಕುಳಿತಿದ್ದ ಪಕ್ಷದಲ್ಲಿನ ಅವರ ವಿರೋಧಿ ಬಣಕ್ಕೆ ಅಯಾಚಿತ ಅವಕಾಶವೊಂದನ್ನು ಒದಗಿಸಿಕೊಟ್ಟಿದೆ. ಇದನ್ನು ಸದ್ಬಳಕೆ ಮಾಡಿಕೊಳ್ಳಲು ರಾಜ್ಯ ಕಾಂಗ್ರೆಸ್‌ನ ಸಿದ್ದರಾಮಯ್ಯ ವಿರೋಧಿ ಬಣ ದೆಹಲಿಯಲ್ಲಿ ಈಗ ದಿಢೀರ್‌ ಸಕ್ರಿಯವಾಗಿದೆ.

ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ, ರಾಜ್ಯಸಭಾ ಸದಸ್ಯರಾದ ಬಿ.ಕೆ. ಹರಿಪ್ರಸಾದ್‌, ಜಿ.ಸಿ.ಚಂದ್ರಶೇಖರ್‌, ನಾಸಿರ್‌ ಹುಸೇನ್‌ ಹಾಗೂ ಸಂಸದ ಡಿ.ಕೆ.ಸುರೇಶ್‌ ಅವರು ಸಂಸತ್ತಿನ ಸೆಂಟ್ರಲ್ ಹಾಲ್ನಲ್ಲಿ ಮಂಗಳವಾರ ಸುದೀರ್ಘ ಸಭೆ ನಡೆಸಿದ್ದಾರೆ.

ಸೋಲಿನ ನೈತಿಕ ಹೊಣೆ ಹೊತ್ತು ಕಾಂಗ್ರೆಸ್‌ ಶಾಸಕಾಂಗ ಪಕ್ಷ ಮತ್ತು ವಿರೋಧ ಪಕ್ಷದ ನಾಯಕತ್ವಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಹಾಗೆಯೇ, ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷ ಸ್ಥಾನಕ್ಕೆ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿದ್ದು, ಎಐಸಿಸಿ ಅಧ್ಯಕ್ಷರ ಅಂಗೀಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಈ ಪತ್ರಗಳನ್ನು ಅಂಗೀಕರಿಸುವಂತೆ ಹೈಕಮಾಂಡ್‌ ಮುಂದೆ ಲಾಬಿ ಮಾಡುವುದೇ ಸಿದ್ದರಾಮಯ್ಯ ವಿರೋಧಿ ಬಣದ ಮೊದಲ ಕಾರ್ಯಸೂಚಿಯಾಗಿದೆ. ಈ ರಾಜೀನಾಮೆ ಅಂಗೀಕರಿಸುವ ಅಗತ್ಯವನ್ನು ಹೈಕಮಾಂಡ್‌ಗೆ ಮನದಟ್ಟು ಮಾಡಿಕೊಟ್ಟರೆ ಉಳಿದಂತೆ ನಮ್ಮ ಮುಂದಿನ ಕಾರ್ಯತಂತ್ರದ ಕಿಟಕಿ, ಬಾಗಿಲುಗಳು ತೆರೆದುಕೊಳ್ಳಲಿವೆ ಎಂಬುದು ಈ ಬಣದ ನಂಬಿಕೆ.

ಸದ್ಯ ಕಾಂಗ್ರೆಸ್‌ನ ಮುಂಚೂಣಿ ಜೋಡೆತ್ತುಗಳಾಗಿರುವ ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ನಾಯಕತ್ವವು ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಅವನತಿಯಂಚಿಗೆ ತಂದು ನಿಲ್ಲಿಸಿದೆ. ಈ ಹೊತ್ತಲ್ಲಿ ನಾಯಕತ್ವ ಬದಲಾಗದಿದ್ದರೆ ಸಾಂಪ್ರದಾಯಿಕವಾಗಿ ದೊಡ್ಡ ಪ್ರಮಾಣದಲ್ಲಿ ಮತಬ್ಯಾಂಕ್‌ ಹೊಂದಿರುವ ಕರ್ನಾಟಕದಲ್ಲಿ ಪಕ್ಷ ನೆಲೆ ಕಳೆದುಕೊಳ್ಳಲಿದೆ. ಆದ್ದರಿಂದ ಸಿದ್ದರಾಮಯ್ಯ ಆ್ಯಂಡ್‌ ಟೀಂ ಅನ್ನು ಬದಲಾಯಿಸದೆ ಹೋದರೆ ಕರ್ನಾಟಕದಲ್ಲೂ ಕಾಂಗ್ರೆಸ್‌ ಅಸ್ತಿತ್ವ ಉಳಿಸಿಕೊಳ್ಳಲು ಪರದಾಡಬೇಕಾಗಬಹುದು ಎಂಬುದನ್ನು ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲು ಈ ನಾಯಕರು ಮುಂದಾಗಿದ್ದಾರೆ ಎನ್ನಲಾಗಿದೆ.

ರಾಜ್ಯ ರಾಜಕೀಯಲ್ಲಿ ಬಿಗ್ ಟ್ವಿಸ್ಟ್: ಮೂರೂ ಡಿಸಿಎಂ ಹುದ್ದೆಗಳು ರದ್ದು?...

ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ನೇತೃತ್ವದಲ್ಲಿ 2018ರ ವಿಧಾನಸಭೆ ಚುನಾವಣೆ, 2019ರ ಲೋಕಸಭೆ ಚುನಾವಣೆ, ಮಹಾನಗರ ಪಾಲಿಕೆಗಳಿಗೆ ನಡೆದ ಚುನಾವಣೆ ಮತ್ತು ಈಗ ನಡೆದಿರುವ ಉಪ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋತಿದೆ. ಈ ಸೋಲಿನ ಹೊಣೆ ಸಿದ್ದರಾಮಯ್ಯ ಹಾಗೂ ದಿನೇಶ್‌ ಗುಂಡೂರಾವ್‌ ಮೇಲೆ ಹೊರಿಸಬೇಕು ಎಂದು ಹೈಕಮಾಂಡ್‌ಗೆ ಮನದಟ್ಟು ಮಾಡಿಕೊಡಲೇಬೇಕು ಎಂದು ಈ ನಾಯಕರು ಪಣ ತೊಟ್ಟಿದ್ದಾರೆ.

ಸಿದ್ದು ಮಾತಿನಿಂದ ಕಾಂಗ್ರೆಸ್‌ಗೆ ನಷ್ಟ:

ಸಿದ್ದರಾಮಯ್ಯ ಅವರ ಮಾತಿನ ಧಾಟಿಯಿಂದಾಗಿ ರಾಜ್ಯದ ಅನೇಕ ಪ್ರಮುಖ ಸಮುದಾಯದ ಮತಗಳು ಕಾಂಗ್ರೆಸ್‌ನಿಂದ ದೂರ ಸರಿಯುತ್ತಿವೆ. ಇದು ಈಗ ಮಾತ್ರವಲ್ಲ ದೀರ್ಘ ಕಾಲದಲ್ಲೂ ಕಾಂಗ್ರೆಸ್‌ಗೆ ನಷ್ಟತರಲಿದೆ. ಆದ್ದರಿಂದ ಸಿದ್ದರಾಮಯ್ಯ ಅವರೊಬ್ಬರಿಗೆ ಮಣೆ ಹಾಕದೆ ಸಾಮೂಹಿಕ ನಾಯಕತ್ವದಡಿ ಪಕ್ಷ ಕಟ್ಟಲು ಹೈಕಮಾಂಡ್‌ ಮುಂದಾಗಬೇಕು ಎಂದು ಹೈಕಮಾಂಡ್‌ ಮನವೊಲಿಸಲು ಈ ನಾಯಕರು ಸಜ್ಜಾಗಿದ್ದಾರೆ ಎನ್ನಲಾಗಿದೆ.

ಒಂದು ವೇಳೆ ಸಿದ್ದರಾಮಯ್ಯ ಮತ್ತು ದಿನೇಶ್‌ ಗುಂಡೂರಾವ್‌ ರಾಜೀನಾಮೆ ಅಂಗೀಕಾರವಾದರೆ ಮಾಜಿ ಸಚಿವ ಡಿ.ಕೆ.ಶಿವಕುಮಾರ್‌ ಮತ್ತು ಎಚ್‌.ಕೆ. ಪಾಟೀಲ… ಈ ಹುದ್ದೆಗಳಿಗೆ ಬರಬಹುದು. ಕೇಂದ್ರದ ಮಾಜಿ ಸಚಿವ ಮಲ್ಲಿಕಾರ್ಜುನ ಖರ್ಗೆ ಕೆಪಿಸಿಸಿ ಅಧ್ಯಕ್ಷರಾದರೂ ಪರವಾಗಿಲ್ಲ ಎಂಬುದು ಈ ಗುಂಪಿನ ನಿಲುವು. ಆದರೆ ಖರ್ಗೆ ಹೈಕಮಾಂಡ್‌ ಮಟ್ಟದಲ್ಲಿ ಪ್ರಬಲ ನಾಯಕರಾಗಿ ಹೊರಹೊಮ್ಮಿದ್ದರೂ ರಾಜ್ಯದ ವಾಸ್ತವ ಚಿತ್ರಣವನ್ನು ಹೈಕಮಾಂಡ್‌ ಮುಂದೆ ಇಡುತ್ತಿಲ್ಲ. ರಾಜ್ಯ ಕಾಂಗ್ರೆಸ್‌ ಹೊಣೆ ಹೊತ್ತಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ… ಅವರೂ ಪಕ್ಷಪಾತಿಯಾಗಿದ್ದಾರೆ ಎಂಬ ಬೇಸರ ಈ ನಾಯಕರಿಗೆ ಇದೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನ, ವಿಧಾನಸಭೆಯಲ್ಲಿನ ಪ್ರತಿಪಕ್ಷ ನಾಯಕನ ಸ್ಥಾನ, ಶಾಸಕಾಂಗ ಪಕ್ಷದ ನಾಯಕ ಸ್ಥಾನ, ಉಭಯ ಸದನಗಳ ಉಪ ನಾಯಕನ ಸ್ಥಾನ ಮತ್ತು ಉಭಯ ಸದನಗಳಲ್ಲಿನ ಮುಖ್ಯ ಸಚೇತಕ ಹುದ್ದೆಗಳು ಸಿದ್ದರಾಮಯ್ಯ ಹಾಗೂ ಅವರ ತಂಡದ ಕೈ ತಪ್ಪಬೇಕು ಎಂಬುದು ಈ ಬಣದ ಪ್ರಯತ್ನ.

ಡಿ.14ರ ಬಳಿಕ ಸೋನಿಯಾ ಭೇಟಿ:  ಈ ವಿಚಾರವಾಗಿ ಡಿ.12ಕ್ಕೆ ಮತ್ತೆ ಸಭೆ ಸೇರಿ ತಮ್ಮ ಕಾರ್ಯತಂತ್ರವನ್ನು ರೂಪಿಸಬೇಕು. ಡಿ.14ಕ್ಕೆ ಕಾಂಗ್ರೆಸ್‌ ನಡೆಸುವ ‘ಭಾರತ್‌ ಬಚಾವೋ’ ದೇಶವ್ಯಾಪಿ ರಾರ‍ಯಲಿಯ ಬಳಿಕದ ದಿನಗಳಲ್ಲಿ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರನ್ನು ಭೇಟಿಯಾಗಿ ರಾಜ್ಯದ ಪರಿಸ್ಥಿತಿ ವಿವರಿಸೋಣ ಎಂಬ ತೀರ್ಮಾನಕ್ಕೆ ಮಂಗಳವಾರದ ಸಭೆಯಲ್ಲಿ ಬರಲಾಗಿದೆ ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios