ಕಾಂಗ್ರೆಸ್‌ನ ಕೆಜಿಎಫ್‌ ಬಾಬುಗೆ ಜೆಡಿಎಸ್‌ ಗಾಳ ಮನೆಗೇ ಹೋಗಿ ಆಹ್ವಾನ ನೀಡಿದ ಇಬ್ರಾಹಿಂ ನಿರ್ಧಾರಕ್ಕೆ ಸಮಯ ಕೇಳಿದ ಬಾಬು ಕ್ಷೇತ್ರಕ್ಕೆ 350 ಕೋಟಿ ಖರ್ಚು ಮಾಡಲು ಸಿದ್ಧ ಎಂದ ಬಾಬು

ಬೆಂಗಳೂರು (ಅ.224) : ಕಾಂಗ್ರೆಸ್‌ ಟಿಕೆಟ್‌ ಮೇಲೆ ಕಣ್ಣಿಟ್ಟು ಚಿಕ್ಕಪೇಟೆ ವಿಧಾನಸಭೆ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಉದ್ಯಮಿ ಕೆಜಿಎಫ್‌ ಬಾಬು (ಯೂಸುಫ್‌ ಷರೀಫ್‌) ಅವರನ್ನು ಜೆಡಿಎಸ್‌ನತ್ತ ಸೆಳೆಯುವ ಪ್ರಯತ್ನ ಆರಂಭವಾಗಿದ್ದು, ಜೆಡಿಎಸ್‌ ರಾಜ್ಯಾಧ್ಯಕ್ಷ ಸಿ.ಎಂ. ಇಬ್ರಾಹಿಂ ಅವರು ಖುದ್ದು ಬಾಬು ಅವರ ಮನೆಗೆ ಹೋಗಿ ಪಕ್ಷಕ್ಕೆ ಆಹ್ವಾನ ನೀಡಿದ್ದಾರೆ.

ಕೆಜಿಎಫ್ ಬಾಬು ಮನೆ ಮೇಲೆ ಇಡಿ ದಾಳಿ ಅಂತ್ಯ: ಸತತ 18 ಗಂಟೆ ಶೋಧ, ಹಲವು ದಾಖಲೆ ವಶ

ಈ ಬಗ್ಗೆ ಇಬ್ರಾಹಿಂ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿರುವ ಕೆಜಿಎಫ್‌ ಬಾಬು, ‘ಸಿ.ಎಂ. ಇಬ್ರಾಹಿಂ ಅವರು ಜೆಡಿಎಸ್‌ ಪಕ್ಷಕ್ಕೆ ಬರುವಂತೆ ಆಹ್ವಾನ ನೀಡಿದ್ದಾರೆ. ಆದರೆ, ಯೋಚಿಸಿ ಹೇಳುತ್ತೇನೆ, ಸಮಯಾವಕಾಶ ಕೊಡಿ ಎಂದು ಹೇಳಿದ್ದೇನೆ. ಈ ಬಗ್ಗೆ ಯಾವುದೇ ನಿರ್ಧಾರ ತಿಳಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್‌ ನನಗೆ ಟಿಕೆಟ್‌ ನಿರಾಕರಿಸಿಲ್ಲ. 350 ಕೋಟಿ ರು.ಗಳನ್ನು ಕ್ಷೇತ್ರದ ಬಡವರಿಗಾಗಿ ವೆಚ್ಚ ಮಾಡುತ್ತೇನೆ ಎಂದು ಹೇಳಿದ್ದೇನೆ. ಇದಕ್ಕೆ ಕಾಂಗ್ರೆಸ್‌ ಮುಖಂಡ ಆರ್‌.ವಿ. ದೇವರಾಜ್‌ ಹಾಗೂ ಶಾಸಕ ಉದಯ್‌ ಗರುಡಾಚಾರ್‌ ವಿರೋಧ ವ್ಯಕ್ತಪಡಿಸಿದ್ದಾರೆ. ಚಿಕ್ಕಪೇಟೆ ಕ್ಷೇತ್ರದ ಜನರ ಋುಣ ನನ್ನ ಮೇಲಿದೆ. ಆ ಋುಣವನ್ನು ತೀರಿಸುವುದರಿಂದ ನನ್ನನ್ನು ಯಾರೂ ತಡೆಯಲಾಗುವುದಿಲ್ಲ. ನಾನು ಯಾವುದೇ ಪಕ್ಷದಲ್ಲಿದ್ದರೂ ಕ್ಷೇತ್ರದ ಜನರಿಗಾಗಿ 350 ಕೋಟಿ ರು. ಖರ್ಚು ಮಾಡುವುದು ಸತ್ಯ. ಇದಕ್ಕೆ ಹೈಕೋರ್ಚ್‌ ಅನುಮತಿಯನ್ನೂ ಪಡೆಯುತ್ತೇನೆ ಎಂದು ಹೇಳಿದರು.

ಎರಡೂ ಪಕ್ಷದ ಟಿಕೆಟ್‌ ಸಿಗುತ್ತದೆ:

ನನಗೆ ಕಾಂಗ್ರೆಸ್‌ ಪಕ್ಷವೂ ಟಿಕೆಟ್‌ ನೀಡುತ್ತದೆ. ಜೆಡಿಎಸ್‌ ಪಕ್ಷವೂ ಟಿಕೆಟ್‌ ನೀಡುತ್ತದೆ. ಯಾವುದೇ ಪಕ್ಷದಿಂದ ಸ್ಪರ್ಧಿಸಿದರೂ ಕ್ಷೇತ್ರಕ್ಕೆ 350 ಕೋಟಿ ರು. ಖರ್ಚು ಮಾಡುವುದು ನಿಶ್ಚಿತ. ಬಡವರಿಗೆ 3 ಸಾವಿರ ಮನೆಗಳನ್ನು ಕಟ್ಟಿಕೊಡುವುದಾಗಿ ಹೇಳಿರುವ ಮಾತು ಉಳಿಸಿಕೊಳ್ಳುತ್ತೇನೆ. ಇದರಿಂದ ನನ್ನನ್ನು ಯಾರೂ ತಡೆಯಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಜಮೀರ್‌ಗೆ ಸಾಲ ಕೊಟ್ಟು ಸಂಕಷ್ಟಕ್ಕೆ ಸಿಲುಕಿದ ಕಾಂಗ್ರೆಸ್‌ ನಾಯಕ ಕೆಜಿಎಫ್ ಬಾಬು!

ಸಮಾಜ ಸೇವೆಗೆ ಅಡ್ಡಿಯಿಲ್ಲ- ಇಬ್ರಾಹಿಂ:

ಕೆಜಿಎಫ್‌ ಬಾಬು ಹಣ ವೆಚ್ಚ ಮಾಡಲು ಕಾಂಗ್ರೆಸ್‌ ಆಕ್ಷೇಪ ವ್ಯಕ್ತಪಡಿಸಿದೆ. ನಾವೂ ಚುನಾವಣೆಗೆ 350 ಕೋಟಿ ರು. ಖರ್ಚು ಮಾಡುವುದನ್ನು ಒಪ್ಪುವುದಿಲ್ಲ. ಅದು ಸಾಧ್ಯವೂ ಇಲ್ಲ. ಆದರೆ ಬೇರೆ ಸಮಯದಲ್ಲಿ ಅವರಿಗೆ ಸೇವೆ ಮಾಡಬೇಕು ಎನಿಸಿದರೆ ಅದನ್ನು ತಡೆಯಲು ಆಗುವುದಿಲ್ಲ. ಅವರು ದುಡಿದಿರುವ ಹಣ ಖರ್ಚು ಮಾಡಲು ಅವರು ಸಂಪೂರ್ಣ ಸ್ವತಂತ್ರರು. ಅದಕ್ಕೆ ನಾವು ಅಡ್ಡಿಯಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿದರು.

ವಿಧಾನಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ಕೆಜಿಎಫ್‌ ಬಾಬು ಅವರು ಸೋತ ಬಳಿಕ ಚಿಕ್ಕಪೇಟೆ ಕ್ಷೇತ್ರದಲ್ಲಿ ಸ್ಪರ್ಧಿಸುವ ಇರಾದೆಯೊಂದಿಗೆ ಕೆಲಸ ಮಾಡುತ್ತಿದ್ದಾರೆ. ಅಲ್ಲದೆ ಕಾಂಗ್ರೆಸ್‌ ಪಕ್ಷ ಟಿಕೆಟ್‌ ನೀಡಲಿ, ಬಿಡಲಿ ನಾನು ಸ್ಪರ್ಧಿಸುವುದು ಖಚಿತ ಎಂದಿದ್ದರು. ಇದಕ್ಕೆ ಕೆಪಿಸಿಸಿ ಶಿಸ್ತು ಸಮಿತಿ ನೋಟಿಸ್‌ ಸಹ ನೀಡಿತ್ತು. ಇದಕ್ಕೆ ಕ್ಷಮೆ ಯಾಚಿಸಿದ್ದರು.