ಕಲ್ಯಾಣ ನಾಡಿನ ಬಗ್ಗೆ ಬಿಜೆಪಿ ಜಾಣ ಕುರುಡು: ಜಗದೇವ ಗುತ್ತೇದಾರ್‌ ವಾಗ್ದಾಳಿ

ಕಲ್ಯಾಣ ನಾಡಿನ ಪ್ರಗತಿ ಇವರಿಗೆ ಬೇಕಾಗಿಲ್ಲ, ಬರೀ ನಿಂದನೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ ಗುತ್ತೇದಾರ್‌

Congress Leader Jagadev Guttedar Slams BJP grg

ಕಲಬುರಗಿ(ಅ.19):  ಕಾಂಗ್ರೆಸ್‌ ಮುಖಂಡರಾದ ಸಿದ್ದರಾಮಯ್ಯ ಹಾಗೂ ಡಾ.ಖರ್ಗೆಯವರ ಕುರಿತಂತೆ ವಿಧಾನ ಪರಿಷತ್‌ ಸದಸ್ಯ ಎನ್‌. ರವಿಕುಮಾರ್‌ ಅವರು ನೀಡಿರುವ ಹೇಳಿಕೆಗೆ ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಜಗದೇವ ಗುತ್ತೇದಾರ್‌ ಕಿಡಿಕಾರಿ, ಕಲ್ಯಾಣ ನಾಡಿನ ಪ್ರಗತಿ ಇವರಿಗೆ ಬೇಕಾಗಿಲ್ಲ, ಬರೀ ನಿಂದನೆ ಮಾಡಿ ಕಾಲಹರಣ ಮಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಗುತ್ತೇದಾರ್‌, ಕಾಂಗ್ರೆಸ್‌ ರಾಷ್ಟ್ರೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರ ಕುರಿತು ರವಿಕುಮಾರ್‌ ಹಗುರವಾಗಿ ಮಾತನಾಡುತ್ತಾರೆ. ಖರ್ಗೆಯವರು ಕಾಂಗ್ರೆಸ್‌ ಪಕ್ಷದ ಅಧ್ಯಕ್ಷರಾಗುತ್ತಿರುವದನ್ನು ಸಹಿಸದ ಎನ್‌. ರವಿಕುಮಾರ ಹೊಟ್ಟೆಕಿಚ್ಚಿನಿಂದ ಹಗುರ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾ ಎಂದು ದೂರಿದರು.

ಸಿದ್ದರಾಮಯ್ಯನವರು ರಾಜ್ಯದಲ್ಲಿ ಪ್ರಯಾಣ ಬೆಳೆಸಿದಲ್ಲೆಲ್ಲಾ ಜನರ ಜೈಕಾರ ಕೂಗು, ಅಭಿಮಾನ, ಪ್ರೀತಿ, ಸನ್ಮಾನ ಕಂಡು ಹೆದರಿ ಸಹಿಸದ ಎನ್‌.ರವಿಕುಮಾರ ಹಾಗೂ ಬಿಜೆಪಿಯವರು ಹೆದರಿ ಈ ರೀತಿ ಗೊಂದಲದ ಹೇಳಿಕೆ ನೀಡುತ್ತಿದ್ದಾರೆ ಎಂದರು.

ಶ್ರೀರಾಮುಲರನ್ನ ಪೆದ್ದ ಎಂದ ಸಿದ್ದರಾಮಯ್ಯಗೆ ದುರಂಹಕಾರ: ರವಿಕುಮಾರ್‌

ಕಲ್ಯಾಣ ನಾಡಿನ ಬಗ್ಗೆ ಜಾಣ ಕುರುಡು ನೀತಿ ಯಾಕೆ?:

ಕಲ್ಯಾಣ ಕರ್ನಾಟಕ ಅನುದಾನದ ಬಗ್ಗೆ ಮಾತನಾಡುವ ಎನ್‌. ರವಿಕುಮಾರ ಮತ್ತು ಬಿಜೆಪಿಯವರಿಗೆ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗ ಅಭಿವೃದ್ಧಿ ಹೊಂದುವದು ಸಹಿಸಿಕೊಳ್ಳಲು ಆಗುತ್ತಿಲ್ಲ. ಇದರ ಹೆಸರಿನ ಮೇಲೆ ಅನುದಾನ ನೀಡಿ ಕಲ್ಯಾಣದಾಚೆಗಿನ ಜಿಲ್ಲೆಗಳಿಗೆ ವರ್ಗಾವಣೆ ಮಾಡುತ್ತಿರುವದು ಕಂಡುಬರುತ್ತಿದೆ. ಕಲ್ಯಾಣದಾಚೆಗಿನ ಬೇರೆ ಜಿಲ್ಲೆಗಳಿಗೆ ಸುಮಾರು 48.57 ಕೋಟಿ ರುಪಾಯಿ ಹಂಚಿಕೆಯಾಗಿದೆ. ಕಲ್ಯಾಣ ಕರ್ನಾಟಕದ ಮೂಲ ಸವಲತ್ತು, ಮಾನವಾಭಿವೃದ್ಧಿ ಇತರೆ ಕೆಲಸಗಳಿಗೆ ಬಳಕೆಯಾಗಬೇಕಾದ ಇಂತಹ ಅನುದಾನ ಬೇರೆ ಜಿಲ್ಲೆಗಳ ಪಾಲಾಗುತ್ತಿದೆ. ಇದು ಎನ್‌. ರವಿಕುಮಾರಗೆ ಕಾಣುತ್ತಿಲ್ಲವೆ ಎಂದು ಪ್ರಶ್ನಿಸಿದ್ದಾರೆ.

ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ರೈತರು ತೀವ್ರ ಸಂಕಷ್ಟದಲ್ಲಿದ್ದಾರೆ. ರೈತರಿಗೆ ಬಿಜೆಪಿ ಸರ್ಕಾರ ಅಲ್ಪ ಪ್ರಮಾಣದಲ್ಲಿ ಬೆಳೆ ಪರಿಹಾರ ನೀಡುತ್ತಿದ್ದು, ಅದು ಕೂಡಾ ಸುಮಾರು 2 ತಿಂಗಳಿನಿಂದ ಸರಿಯಾಗಿ ನೀಡದೇ ಶೇಕಡಾ 40 ಪ್ರತಿಶತ ರೈತರಿಗೆ ನೀಡಿದ್ದು, ಬಾಕಿ ಉಳಿದ ರೈತರಿಗೆ ಇನ್ನೂ ಅನುದಾನ ಬಂದಿಲ್ಲವೆಂದು ಜಿಲ್ಲೆಯಲ್ಲಿ ಮೇಲಧಿಕಾರಿಗಳು ಹರಿಕೆ ಉತ್ತರ ನೀಡುತ್ತಿದ್ದಾರೆ. ತಾವು ಮೊದಲು ಸಂಕಷ್ಟದಲ್ಲಿರುವ ರೈತರಿಗೆ ಬೆಳೆ ಪರಿಹಾರ ನೀಡಲು ಸಂಬಂಧಿಸಿದ ಅಧಿಕಾರಿಗಳಿಗೆ ಕೇಳುವದು, ಸರ್ಕಾರದ ಮೇಲೆ ಒತ್ತಡ ತಂದು ಅನುದಾನ ಬಿಡುಗಡೆ ಮಾಡಬೇಕು ಎಂದು ಗುತ್ತೇದಾರ್‌ ಆಗ್ರಹಿಸಿದ್ದಾರೆ. 
 

Latest Videos
Follow Us:
Download App:
  • android
  • ios