ಬಿಜೆಪಿ ಸರ್ಕಾರ ಸುಳ್ಳು ಭರವಸೆ ನೀಡಿ ಜನರನ್ನು ಸಂಕಷ್ಟಕ್ಕೆ ದೂಡಿದೆ: ಎಚ್.ಕೆ. ಪಾಟೀಲ್
ಚುನಾವಣೆ ಸಂದರ್ಭದಲ್ಲಿ ನಿಮ್ಮ ಮುಂದೆ ಬಂದು 100 ದಿವಸದೊಳಗೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ. ಎಲ್ಲರೂ ಬ್ಯಾಂಕ್ ಖಾತೆ ತೆರೆಯಿರಿ ಎಂದರು. ಈವರೆಗೂ ಯಾರಿಗಾದರೂ ಒಂದು ನಯಾಪೈಸೆ ಬಂತಾ?: ಪಾಟೀಲ್
ಮುಳಗುಂದ(ಆ.28): ದೇಶದ ಜನತೆಗೆ ಚುನಾವಣೆ ಸಂದರ್ಭಗಳಲ್ಲಿ ರಾಜ್ಯ, ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಸುಳ್ಳು ಭರವಸೆಗಳನ್ನು ನೀಡಿ ಬಡ, ಮಧ್ಯಮ ವರ್ಗದ ಜನತೆಯನ್ನು ಸಂಕಷ್ಟಕ್ಕೆ ದೂಡಿದೆ. ದೇಶವನ್ನು ಒಡೆದು ಆಳ್ವಿಕೆ ನಡೆಸುತ್ತಿರುವ ಬಿಜೆಪಿ ವಚನ ಭ್ರಷ್ಟಸರ್ಕಾರವಾಗಿದೆ ಎಂದು ಶಾಸಕ ಎಚ್.ಕೆ. ಪಾಟೀಲ ಆರೋಪಿಸಿದರು. ಅವರು ಶನಿವಾರ ಪಟ್ಟಣದ ಬಾಲಲೀಲಾ ಮಹಾಂತ ಶಿವಯೋಗಿಗಳ ಕಲಾಭವನದಲ್ಲಿ ಕೆಪಿಸಿಸಿ, ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ವತಿಯಿಂದ ಆಯೋಜಿಸಿದ್ದ ಮುಳಗುಂದ ಬ್ಲಾಕ್ ಅಲ್ಪ ಸಂಖ್ಯಾತರ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ನಿಮ್ಮ ಮುಂದೆ ಬಂದು 100 ದಿವಸದೊಳಗೆ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ. ಎಲ್ಲರೂ ಬ್ಯಾಂಕ್ ಖಾತೆ ತೆರೆಯಿರಿ ಎಂದರು. ಈವರೆಗೂ ಯಾರಿಗಾದರೂ ಒಂದು ನಯಾಪೈಸೆ ಬಂತಾ? ಬಡವರನ್ನು ಉದ್ಧಾರ ಮಾಡುತ್ತೇವೆ, ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದರು. ಇಂದು ರೈತರು, ಬಡವರು ಜೀವನ ನಡೆಸೋದೆ ಕಷ್ಟಕರವಾಗಿದೆ. ತುಂಬಿದ ಬೆಳೆ ವಿಮಾ ಕಂತು ಸಹ ಬಂದಿಲ್ಲ. ಮಾತು ಎತ್ತಿದರೆ ಜಾತಿ, ಧರ್ಮ ಎಂದು ಮನಸ್ಸುಗಳನ್ನು ಒಡೆದು ಆಡಳಿತ ಮಾಡುತ್ತಿದ್ದಾರೆ ಎಂದು ಟೀಕಾಪ್ರಹಾರ ನಡೆಸಿದರು.
40 % ಕಮಿಷನ್ ತನಿಖೆಯಾದರೆ ಸರ್ಕಾರದ ಬಹುಪಾಲು ಸಚಿವರು ಜೈಲಿಗೆ: ಉಗ್ರಪ್ಪ
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ತಮ್ಮ ಆಡಳಿತಾವಧಿಯಲ್ಲಿ 14 ಕೋಟಿ ಬಡಜನತೆಯನ್ನು ಬಡತನ ರೇಖೆಯಿಂದ ಮೇಲೆತ್ತಿದರು. ಬಿಜೆಪಿ ಆಡಳಿತದಲ್ಲಿ 25 ಕೋಟಿ ಜನರನ್ನು ಬಡತನ ರೇಖೆಗಿಂತ ಕೆಳಗೆ ದೂಡಿದ್ದಾರೆ. ಇದೇ ಅಚ್ಛೆ ದೀನ್ ಎಂದು ವ್ಯಂಗ್ಯವಾಡಿದರು.
ರಾಷ್ಟ್ರೀಯ ಭಾವನೆ ಬರಲಿ
ಇವತ್ತಿನದು ಕಲುಷಿತ ರಾಜಕಾರಣವಾಗಿದೆ. ಜಾತಿ ರಾಜಕಾರಣ ಬಿಟ್ಟು, ರಾಷ್ಟ್ರೀಯ ಭಾವನೆ ಇರಬೇಕು. ಇದೆಲ್ಲಾ ಆಗುತ್ತಾ? ಬಿಜೆಪಿ ಆಡಳಿತದಿಂದ ದೇಶದ ವಾತಾವರಣ ಕಲುಷಿತವಾಗಿದೆ. ದೇಶದಲ್ಲಿ ಅಶಾಂತಿ ಸೃಷ್ಟಿಸಿ ಆಡಳಿತ ನಡೆಸುತ್ತಿರುವ ಸರ್ಕಾರಕ್ಕೆ ಮುಂದಿನ ದಿನಮಾನಗಳಲ್ಲಿ ಜನರೇ ತಕ್ಕಪಾಠ ಕಲಿಸುತ್ತಾರೆ ಎಂದರು.
ಇಂದು ನೂತನವಾಗಿ ನೇಮಕವಾದ ಪದಾಧಿಕಾರಿಗಳು ಕಾಂಗ್ರೆಸ್ ಬಗ್ಗೆ ಜನರಲ್ಲಿ ತಿಳಿವಳಿಕೆ ನೀಡಬೇಕು. ರಾಷ್ಟ್ರ ಕಟ್ಟುವ ಕೆಲಸಕ್ಕೆ ಎಲ್ಲರೂ ಕೈಜೋಡಿಸೋಣ. ಪಕ್ಷ ಸಂಘಟನೆಗೆ ಎಲ್ಲರೂ ಶ್ರಮಿಸೋಣ. ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಆಡಳಿತಕ್ಕೆ ತರೋಣ ಎಂದು ಕರೆ ನೀಡಿದರು.
ಹೇಳಿ ಬಂದ ಯಡಿಯೂರಪ್ಪ, ತಿಂಗಳಿಗೊಮ್ಮೆ ಕರ್ನಾಟಕಕ್ಕೆ ಬರ್ತಾರಂತೆ ಮೋದಿ
ಮಾಜಿ ಸಂಸದ ಐ.ಜಿ. ಸನದಿ ಮಾತನಾಡಿ, ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ನಮಗೆ ಜಾತಿ ಬರಲಿಲ್ಲ, ಅಲ್ಲಿ ರಾಷ್ಟ್ರಪ್ರೇಮ ಬಂತು. ಅನೇಕ ಮಹನೀಯರ ತ್ಯಾಗ ಬಲಿದಾನದಿಂದ ಭಾರತ ದೇಶ ಸ್ವಾತಂತ್ರ್ಯವಾಯಿತು. ಅದರಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಇರಲಿಲ್ಲ, ಭಾರತೀಯರು ಇದ್ದರು. ಪ್ರಜಾಪ್ರಭುತ್ವ ಆಶಯಗಳನ್ನು ಗಾಳಿಗೆ ತೂರಿ ಆಡಳಿತ ನಡೆಸುತ್ತಿದ್ದಾರೆ. ಅಲ್ಪಸಂಖ್ಯಾತರ ಮತಗಳು ಇಂದು ಬೇಡವಾಗಿದೆ. ಪ್ರಜಾಪ್ರಭುತ್ವದ ಆಶಯದಂತೆ ಆಡಳಿತ ನಡೆಸೋದು ಕಾಂಗ್ರೆಸ್. ಭಾರತೀಯರೆಲ್ಲರೂ ಒಂದೇ ಎನ್ನುವ ಭಾವನೆ ಎಲ್ಲರಲ್ಲಿಯೂ ಬರಬೇಕು. ಅಂತಹ ಸೌಹಾರ್ದ ಭಾವನೆ ಇರೋದು ಕಾಂಗ್ರೆಸ್ ಪಕ್ಷದಲ್ಲಿ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ವಾಸಣ್ಣ ಕುರುಡಗಿ, ಪಪಂ ಸದಸ್ಯ ಕೆ.ಎಲ್. ಕರಿಗೌಡ್ರ ಮಾತನಾಡಿದರು. ಇದೇ ಸಂದರ್ಭದಲ್ಲಿ ಬಿಜೆಪಿದಿಂದ ಮಹ್ಮದಸಾಬ ಕರ್ನಾಚಿ ಕಾಂಗ್ರೆಸ್ಗೆ ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಪಪಂ ಅಧ್ಯಕ್ಷ ಹೊನ್ನಪ್ಪ ಹಳ್ಳಿ, ಗದಗ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾ ಅಧ್ಯಕ್ಷ ಫಾರೂಕ್ ಹುಬ್ಬಳ್ಳಿ, ಮುಳಗುಂದ ಬ್ಲಾಕ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮನಸ್ಸೂರ ಎಂ. ಹಣಗಿ, ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪುರ, ಪಪಂ ಸದಸ್ಯರಾದ ನಾಗರಾಜ ದೇಶಪಾಂಡೆ, ಷಣ್ಮುಖಪ್ಪ ಬಡ್ನಿ, ಮಹಾಂತಪ್ಪ ನೀಲಗುಂದ, ಮಹಾದೇವಪ್ಪ ಗಡಾದ, ಮುಖಂಡರಾದ ಮಹ್ಮಮದ ಖಾಜಿ, ಇಮ್ಮಾಮಸಾಬ ಶೇಖ, ಎಂ.ಡಿ. ಬಟ್ಟೂರ, ಬಸವರಾಜ ವಾಲಿ, ಅಶೋಕ ಸೊನಗೋಜಿ, ಹಸನಸಾಬ ಗಾಡಿ, ಪಪಂ ಉಪಾಧ್ಯಕ್ಷೆ ಉಮಾ ಮಟ್ಟಿ, ಜಿಪಂ ಮಾಜಿ ಅಧ್ಯಕ್ಷ ಸಿದ್ದು ಪಾಟೀಲ ಇದ್ದರು.