'ಬಿಜೆಪಿ ಹಾಲಿ ಶಾಸಕರುಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಕೇಳುತ್ತಿದ್ದಾರೆ'
* ಮಾಜಿ ಡಿಸಿಎಂ ಜಿ. ಪರಮೇಶ್ವರ್ ಅಚ್ಚರಿ ಹೇಳಿಕೆ
* ಇಂದು (ಭಾನುವಾರ) ತುರುವೇಕೆರೆಯಲ್ಲಿ ಮಾತನಾಡಿದ ಪರಮೇಶ್ವರ್
* ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದ ಪರಮೇಶ್ವರ್ ಹೇಳಿಕೆ
ತುಮಕೂರು, (ಜು.18): ರಾಜ್ಯ ಬಿಜೆಪಿಯಲ್ಲಿ ಸದ್ದಿಲ್ಲದೇ ಏನೋ ಸಮ್‌ಥಿಂಗ್ ಸಮ್‌ಥಿಂಗ್ ನಡೆಯುತ್ತಿದೆ. ಬಿಎಸ್‌ವೈ ದೆಹಲಿ ಭೇಟಿ ವೇಳೆ ಹೈಕಮಾಂಡ್ ಹಲವು ಮಹತ್ವದ ಸೂಚನೆಗಳನ್ನ ನೀಡಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ವೈ ದಿಢೀರ್ ಬಿಜೆಪಿ ಶಾಸಕಾಂಗ ಸಭೆ ಕರೆದಿದ್ದಾರೆ.
ಇದರ ಮಧ್ಯೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಅವರ ಪಕ್ಷದವರೇ ಪಟ್ಟು ಹಿಡಿದಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಯಡಿಯೂರಪ್ಪ ಚೇರ್ ಉಳಿಯುತ್ತೋ, ಬೀಳುತ್ತೋ?: ಅಚ್ಚರಿ ಹೇಳಿಕೆ ಕೊಟ್ಟ ಡಿಕೆಶಿ
ಇಂದು (ಭಾನುವಾರ) ತುರುವೇಕೆರೆಯಲ್ಲಿ ಮಾತನಾಡಿದ ಪರಮೇಶ್ವರ್, ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಮಸ್ಯೆ ಸ್ಪೋಟಗೊಂಡಿದೆ. ಬಿಜೆಪಿ ಸರ್ಕಾರ ನೀರಿನ ಮೇಲಿನ ಗುಳ್ಳೆಯಂತೆ. ಇದು ಯಾವಾಗ ಬೇಕಾದರೂ ಒಡೆದು ಹೋಗಬಹುದು ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ಸಂಚಲನ ಮೂಡಿಸಿದರು.
ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕು ಎಂದು ಅವರ ಪಕ್ಷದವರೇ ಪಟ್ಟು ಹಿಡಿದಿದ್ದಾರೆ.ಇನ್ನು ಬಿಜೆಪಿ ಹಲವು ಹಾಲಿ ಶಾಸಕರುಗಳು ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ನಿಂದ ಟಿಕೆಟ್ ಕೇಳಿದ್ದಾರೆ ಎಂದು ಹೇಳಿದರು.