‘ಭಾರತ ಐಕ್ಯತಾ ಯಾತ್ರೆಗೆ ಯಾವ ಶಾಸಕರು ಕೆಲಸ ಮಾಡುವುದಿಲ್ಲವೋ ಅಂತಹವರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಕೆಲಸ ಮಾಡಿದರೆ ಮಾತ್ರ ನಿಮ್ಮ ಅವಧಿ ಮುಂದುವರೆಯುತ್ತದೆ, ಇಲ್ಲದಿದ್ದರೆ ನಿಮ್ಮ ಅವಧಿ ಅಲ್ಲಿಗೇ ಮುಗಿಯಲಿದೆ. ಹೀಗಾಗಿ ಯಾತ್ರೆಯ ಜವಾಬ್ದಾರಿಯನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ’ ಎಂದು ಪಕ್ಷದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು (ಸೆ.17): ‘ಭಾರತ ಐಕ್ಯತಾ ಯಾತ್ರೆಗೆ ಯಾವ ಶಾಸಕರು ಕೆಲಸ ಮಾಡುವುದಿಲ್ಲವೋ ಅಂತಹವರಿಗೆ ವಿಶ್ರಾಂತಿ ನೀಡಬೇಕಾಗುತ್ತದೆ. ಕೆಲಸ ಮಾಡಿದರೆ ಮಾತ್ರ ನಿಮ್ಮ ಅವಧಿ ಮುಂದುವರೆಯುತ್ತದೆ, ಇಲ್ಲದಿದ್ದರೆ ನಿಮ್ಮ ಅವಧಿ ಅಲ್ಲಿಗೇ ಮುಗಿಯಲಿದೆ. ಹೀಗಾಗಿ ಯಾತ್ರೆಯ ಜವಾಬ್ದಾರಿಯನ್ನು ಯಾರೂ ಹಗುರವಾಗಿ ಪರಿಗಣಿಸಬೇಡಿ’ ಎಂದು ಪಕ್ಷದ ಶಾಸಕರಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಖಡಕ್‌ ಎಚ್ಚರಿಕೆ ನೀಡಿದ್ದಾರೆ.

ಹೈಕಮಾಂಡ್‌ ಸೂಚನೆ ಉಲ್ಲೇಖಿಸಿ ಕಟುವಾಗಿ ಮಾತನಾಡಿದ ಅವರು, ‘ಕೆಲವರು ನನ್ನ ಬಿಟ್ಟರೆ ನಮ್ಮ ಕ್ಷೇತ್ರದಲ್ಲಿ ಏನೂ ಮಾಡಲು ಸಾಧ್ಯ ಎಂಬ ಭ್ರಮೆಯಲ್ಲಿದ್ದಾರೆ. ಕೇರಳದಲ್ಲಿ ಸುಮಾರು 13 ಹಾಲಿ ಶಾಸಕರಿಗೆ ಟಿಕೆಟ್‌ ನಿರಾಕರಿಸಲಾಗಿತ್ತು. ಹೀಗಾಗಿ ಹೈಕಮಾಂಡ್‌ ಯಾವ ನಿರ್ಧಾರವನ್ನಾದರೂ ತೆಗೆದುಕೊಳ್ಳಬಹುದು. ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ 1 ದಿನ 5 ಸಾವಿರ ಜನರನ್ನು ಕರೆ ತರಲಾಗದು ಎಂದರೆ ಒಪ್ಪಲು ಸಾಧ್ಯವಿಲ್ಲ. ನಿಮಗೆ ಆಗುವುದಿಲ್ಲ ಎಂದಾದರೆ ಕೆಲಸ ಮಾಡಲು ಸಾಕಷ್ಟುಮಂದಿ ಉತ್ಸುಕರಿದ್ದಾರೆ’ ಎಂದು ಹೇಳುವ ಮೂಲಕ ಜವಾಬ್ದಾರಿ ನಿಭಾಯಿಸದಿದ್ದರೆ ಟಿಕೆಟ್‌ ತಪ್ಪಲಿದೆ ಎಂಬ ಸ್ಪಷ್ಟ ಸಂದೇಶ ರವಾನಿಸಿದರು.

Chamarajanagar: ಭಾರತ್‌ ಜೋಡೋ ನಡಿಗೆ ದೇಶಕ್ಕೊಂದು ಕೊಡುಗೆ: ಡಿ.ಕೆ.ಶಿವಕುಮಾರ್‌

ಬೆಂಗಳೂರಿನ ಅಂಬೇಡ್ಕರ್‌ ಭವನದಲ್ಲಿ ನಡೆದ ಕೆಪಿಸಿಸಿ ಪದಾಧಿಕಾರಿಗಳು ಹಾಗೂ ಸಂಯೋಜಕರ ಸಭೆಯಲ್ಲಿ ಮಾತನಾಡಿದ ಅವರು, ಪಾದಯಾತ್ರೆ ಸಿದ್ಧತೆಗೆ ಪಾದಯಾತ್ರೆ ಸಾಗುವ ಭಾಗಗಳ ಶಾಸಕರಿಂದ ಸೂಕ್ತ ಸ್ಪಂದನೆ ದೊರೆಯದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

‘ಈ ಪಾದಯಾತ್ರೆಗೆ ಮನೆ ಮನೆಗೂ ಹೋಗಿ ನಿಮ್ಮ ಮನೆ ಕಾರ್ಯಕ್ರಮಕ್ಕೆ ಆಹ್ವಾನಿಸುವ ರೀತಿ ಜನರನ್ನು ಕರೆಯಬೇಕು. ಪ್ರತಿ ಶಾಸಕರು 5 ಸಾವಿರ ಜನರನ್ನು ಕರೆತರಬೇಕು ಎಂದು ಕರ್ನಾಟಕ ಕಾಂಗ್ರೆಸ್‌ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಹೇಳಿದ್ದಾರೆ. ಪ್ರತಿ ನಿತ್ಯ ಇಬ್ಬರು ಶಾಸಕರಿಗೆ ಅವಕಾಶ ನೀಡಲಿದ್ದು, ನಿತ್ಯ ಕನಿಷ್ಠ 20 ಸಾವಿರ ಮಂದಿ ಹೆಜ್ಜೆ ಹಾಕಬೇಕು. ಈ ಜವಾಬ್ದಾರಿಯಲ್ಲಿ ನಿರ್ಲಕ್ಷ್ಯ ತೋರಿದರೆ ಪರಿಣಾಮ ಎದುರಿಸಬೇಕಾಗುತ್ತದೆ’ ಎಂದು ಹೇಳಿದರು.

ನನ್ನನ್ನೂ ಪರಿಶೀಲಿಸುತ್ತಿದ್ದಾರೆ: ‘ಎಐಸಿಸಿ ಒಂದು ವಿಶೇಷ ತಂಡ ನೀಡಿದೆ. ನಾನು, ಹರಿಪ್ರಸಾದ್‌, ವೀರಪ್ಪ ಮೊಯ್ಲಿ ಸೇರಿದಂತೆ 16 ನಾಯಕರನ್ನು ಕರೆದು ಈ ತಂಡವನ್ನು ನೇಮಿಸಿರುವುದಾಗಿ ಸೂಚಿಸಿದ್ದಾರೆ. ಅವರು ನಿಮ್ಮ ಜತೆ ಗುರುತಿಸಿಕೊಳ್ಳುವುದಿಲ್ಲ. ನೀವು ಹಾಗೂ ನಾನು ಏನೆಲ್ಲಾ ಮಾಡುತ್ತಿದ್ದೇವೆ ಎಂದು ಆ ತಂಡ ಪರಿಶೀಲನೆ ಮಾಡುತ್ತಿದೆ. ನಾನು ಕೇವಲ ಸಭೆ ಸಮಾರಂಭಗಳಿಗೆ ಹೋಗುತ್ತಿದ್ದೇನೋ ಅಥವಾ ಪಕ್ಷ ಸಂಘಟನೆಗೆ ಹಳ್ಳಿ ಹಳ್ಳಿಗೆ ಹೋಗುತ್ತಿದ್ದೇನೋ ಎಂದು ಗಮನಿಸುತ್ತಿದ್ದಾರೆ. ಅದೇ ರೀತಿ ಪ್ರತಿ ಕ್ಷೇತ್ರದ ಶಾಸಕರು, ಪರಾಜಿತ ಅಭ್ಯರ್ಥಿಗಳು, ಟಿಕೆಟ್‌ ಆಕಾಂಕ್ಷಿಗಳ ಕೆಲಸವನ್ನು ನೋಡುತ್ತಿದ್ದಾರೆ’ ಎಂದರು.

‘ಯಾರು ಪಕ್ಷದ ಪರವಾಗಿ ಕೆಲಸ ಮಾಡಲು ಸಾಧ್ಯವಿಲ್ಲವೋ ಅವರಿಗೆ ವಿಶ್ರಾಂತಿ ನೀಡಿ ಕೆಲಸ ಮಾಡುವವರಿಗೆ ಪಕ್ಷದಲ್ಲಿ ಅವಕಾಶ ನೀಡಲಾಗುವುದು ಎಂದು ರಾಷ್ಟ್ರೀಯ ನಾಯಕರು ಈಗಾಗಲೇ ತಿಳಿಸಿದ್ದು, ಈ ಸಂದರ್ಭದಲ್ಲಿ ನಾನದನ್ನು ನಿಮಗೆ ನೆನಪಿಸುತ್ತಿದ್ದೇನೆ. ನಮ್ಮ ಕರ್ತವ್ಯಗಳಿಗೆ ನಾವೆಲ್ಲರೂ ಹೊಣೆಗಾರರಾಗಬೇಕು’ ಎಂದು ಸ್ಪಷ್ಟಪಡಿಸಿದರು.

ಡಿಕೆಶಿಗೆ ಇ.ಡಿ ಸಮನ್ಸ್‌; ಭಾರತ ಏಕತಾ ಯಾತ್ರೆ, ಅಧಿವೇಶನದ ವೇಳೆ ಕಿರುಕುಳ ಎಂದ ಕಾಂಗ್ರೆಸ್‌ ಅಧ್ಯಕ್ಷ

ಇನ್ನೂ ಧಮ್‌, ವೇಗ ಬೇಕು ಎಂದಿದ್ದೇನೆ: ಕಾರ್ಯಕ್ರಮದ ಬಳಿಕ ಸುದ್ದಿಗೋಷ್ಠಿ ನಡೆಸಿ ಸಭೆಯಲ್ಲಿ ತರಾಟೆಗೆ ತೆಗೆದುಕೊಂಡ ಬಗ್ಗೆ ಸ್ಪಷ್ಟನೆ ನೀಡಿದ ಡಿ.ಕೆ.ಶಿವಕುಮಾರ್‌, ‘ಶಾಸಕರು ಈಗ ಸಹಕಾರ ನೀಡುತ್ತಿಲ್ಲ ಎಂಬುದು ಪ್ರಶ್ನೆಯಲ್ಲ. ಇನ್ನೂ ಧಮ್‌ ಬೇಕು, ಇನ್ನೂ ವೇಗ ಬೇಕು. ಹೀಗಾಗಿ ಇನ್ನೂ ಹೆಚ್ಚು ಕೆಲಸ ಮಾಡಿ ಎಂದು ಶಾಸಕರಿಗೆ ಹೇಳಿದ್ದೇನೆ. ಶಾಸಕರಿಗೆ ಅವರ ಕರ್ತವ್ಯದ ಬಗ್ಗೆ ದಾಖಲೆ ಇರಬೇಕು. ಹಾಗಾಗಿ ಜವಾಬ್ದಾರಿಗಳನ್ನು ನೀಡಿದ್ದೇನೆ’ ಎಂದು ಹೇಳಿದರು. ಸಭೆಗೆ ಬಂದು ಹೋದರೆ ಸಾಲದು, ಕೆಲಸ ಮಾಡಬೇಕು. ಎಐಸಿಸಿಯ ರಾಷ್ಟ್ರೀಯ ನಾಯಕರು ಬರುತ್ತಾರೆ ಎಂಬುದು ಗಮನದಲ್ಲಿರಬೇಕು ಎಂದು ಹೇಳಿದ್ದೇನೆ. ಅದನ್ನು ಹೊರತುಪಡಿಸಿ ಬೇರೇನೂ ಇಲ್ಲ ಎಂದರು.