ರಾಸಲೀಲೆ ಸಿ.ಡಿ. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯ ರಾಜಕಾರಣದಲ್ಲಿ ಭಾರೀ ಕೋಲಾಹಲ ಸೃಷ್ಟಿಸಿದೆ. ಇದರ ಮಧ್ಯೆ ಸದನದಲ್ಲಿ ಕಾಂಗ್ರೆಸ್ ಹಿರಿಯ ನಾಯಕರೊಬ್ಬರು ವ್ಯಂಗ್ಯವಾಡಿದ್ದಾರೆ.
ಬೆಂಗಳೂರು, (ಮಾ.24): ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿ.ಡಿ. ಪ್ರಕರಣ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚನಲ ಮೂಡಿಸಿದೆ.
ಈಗಾಗಲೇ ಈ ಸಿ.ಡಿ. ರಮೇಶ್ ಜಾರಕಿಹೊಳಿ ಅವರ ಸಚಿವ ಸ್ಥಾನ ನುಂಗಿ ಹಾಕಿದೆ. ಇದರ ಬೆನ್ನಲ್ಲೇ ಇನ್ನುಳಿದ 6 ಸಚಿವರುಗಳು ಸಹ ತಮ್ಮ ವಿರುದ್ಧ ಮಾನಹಾನಿ ಸುದ್ದಿ ಪ್ರಕಟಿಸದಂತೆ ತಡೆಯಾಜ್ಞೆ ನೀಡುವಂತೆ ಕೋರ್ಟ್‌ನಿಂದ ಸ್ಟೇ ತಂದಿದ್ದಾರೆ.
ಇನ್ನು ಈ ಬಗ್ಗೆ ಕಾಂಗ್ರೆಸ್ ಹಿರಿಯ ನಾಯಕ ಸಿ.ಎಂ. ಇಬ್ರಾಹಿಂ ತಮ್ಮದೆ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದು, ಮುರಿದ 6 ಸಚಿವರು ಹೋಲ್ ಸೇಲ್ ಆಗಿ ಸ್ಟೇ ತಂದಿದ್ದಾರೆ ಎಂದು ಸದನದಲ್ಲಿಯೇ ಕುಟುಕಿದರು.
ಜಾರಕಿಹೊಳಿ ಸೀಡಿ VS ಮೇಟಿ ಸೀಡಿ; ಕಾಂಗ್ರೆಸ್ ಬ್ರಹ್ಮಾಸ್ತ್ರಕ್ಕೆ ಬಿಜೆಪಿ ಪ್ರತ್ಯಸ್ತ್ರ
ಕಮ್ಮರ್ ತೋಡ್, ಪಲ್ಲಂಗ್ ತೋಡ್ ಸರ್ಕಾರವೆಂದು ಕಾಂಗ್ರೆಸ್ ನ ಸಿ.ಎಂ.ಇಬ್ರಾಹಿಂ ಲೇವಡಿ ಮಾಡಿದರೆ, ಪ್ರತಿಪಕ್ಷಗಳಿಗೆ ತಾಕತ್ತಿದ್ದರೆ ತಮ್ಮ ತಮ್ಮ ಕುಟುಂಬ ಸದಸ್ಯರನ್ನು ಸದನಕ್ಕೆ ಕರೆ ತಂದು ಸಿಡಿ ಪ್ರಕರಣದ ಬಗ್ಗೆ ಚರ್ಚಿಸಲಿ ಎಂದು ಬಿಜೆಪಿಯ ತೇಜಸ್ವಿನಿಗೌಡ ಸವಾಲೆಸೆದರು.
ವಿಧಾನ ಪರಿಷತ್ ಅಧಿವೇಶನ ಬುಧವಾರ ಅನಿರ್ದಿಷ್ಟಾವಧಿಗೆ ಮುಂದೂಡಿಕೆಯಾಗುವ ಮುನ್ನ ಈ ಪ್ರಹಸನ ನಡೆಯಿತು.
ಭೋಜನ ವಿರಾಮದ ಬಳಿಕ ಸದನ ಮತ್ತೆ ಸೇರುತ್ತಿದ್ದಂತೆಯೇ ಸಭಾಪತಿ ಪೀಠದ ಮುಂದೆ ಪ್ರತಿಪಕ್ಷಗಳಾದ ಕಾಂಗ್ರೆಸ್, ಜೆಡಿಎಸ್ ಧರಣಿ ಮುಂದುವರಿಯಿತು.
ಈ ಮಧ್ಯೆ ಸ್ವಸ್ಥಾನದಲ್ಲಿದ್ದ ಸಿ.ಎಂ.ಇಬ್ರಾಹಿಂ ಮಂಚ ಮುರಿದ 6 ಸಚಿವರು ಹೋಲ್ ಸೇಲ್ ಆಗಿ ಸ್ಟೇ ತಂದಿದ್ದಾರೆ ಎಂದಾಗ ಆಡಳಿತ ಪಕ್ಷದ ಭಾರತಿಶೆಟ್ಟಿ, ತೇಜಸ್ವಿನಿಗೌಡ ಮಹಿಳೆಯರಿಗೆ ಅಪಮಾನಿಸುವ ನಡವಳಿಕೆ ಸರಿಯಲ್ಲ. ಇದೇ ರೀತಿ ಮಾತು ಮುಂದುವರಿಸಿದರೆ ಸಭಾತ್ಯಾಗ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಆದರೂ ಸಿ.ಎಂ.ಇಬ್ರಾಹಿಂ ಮಾತು ಮುಂದುವರಿಸಲು ಪ್ರಯತ್ನಿಸಿದಾಗ ಸಭಾಪತಿ ಬಸವರಾಜ ಹೊರಟ್ಟಿ ತಡೆಯೊಡ್ಡಿ, ತೇಜಸ್ವಿನಿಗೌಡ ಕೋರಿಕೆ ಪುರಸ್ಕರಿಸಿ ಮಾತನಾಡಲು ಅವಕಾಶ ಕೊಟ್ಟರು.
ಸಿಡಿ ಪ್ರಕರಣದ ಕುರಿತು ಪ್ರತಿಪಕ್ಷಗಳು ಚರ್ಚಿಸಬೇಕೆಂಬ ಉದ್ದೇಶ ಸ್ವಾಗತಿಸುವೆ. ಆದರೆ ಅದಕ್ಕೂ ಮುಂಚೆ ಪ್ರತಿಪಕ್ಷಗಳ ಎಲ್ಲ ಸದಸ್ಯರಿಗೆ ತಾಕತ್ತಿದ್ದರೆ ತಮ್ಮ ತಮ್ಮ ಕುಟುಂಬದ ಎಲ್ಲ ಸದಸ್ಯರನ್ನು ಕರೆ ತಂದು ಪ್ರೇಕ್ಷಕರ ಗ್ಯಾಲರಿಯಲ್ಲಿ ಕೂಡ್ರಿಸಿ ಚರ್ಚಿಸಲಿ ಎಂದು ಸವಾಲು ಹಾಕಿದರು.
