ಶಿವಮೊಗ್ಗ, (ನ.03): ಸಾಗರ ತಾಲ್ಲೂಕಿನ ಪವಿತ್ರ ಧಾರ್ಮಿಕ ಕ್ಷೇತ್ರ ಸಿಗಂದೂರು ಕ್ಷೇತ್ರವನ್ನು ಎದುರು ಹಾಕಿಕೊಂಡರೆ ಮುಖ್ಯಮಂತ್ರಿ ಯಡಿಯೂರಪ್ಪ ಅವರ ರಾಜಕೀಯ ಜೀವನ ನಾಶವಾಗಲಿದೆ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಎಚ್ಚರಿಸಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸರ್ಕಾರದ ಆಸ್ತಿ ಉಳಿಸಲು ವಿಫಲವಾದ ಅಧಿಕಾರಿಗಳು ಖಾಸಗಿ ಟ್ರಸ್ಟ್ ಗೆ ಕೈ ಹಾಕಿದ್ದಾರೆ ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.

 ಬಿಜೆಪಿ ಮುಖಂಡರ ತಾಳಕ್ಕೆ ತಕ್ಕಂತೆ ಶಿವಮೊಗ್ಗ ಜಿಲ್ಲಾಧಿಕಾರಿ, ಎಸ್.ಪಿ ಕುಣಿಯುತ್ತಿದ್ದಾರೆ. ಸಿಗಂದೂರು ದೇಗುಲ ಮುಜರಾಯಿ ಇಲಾಖೆಗೆ ಸೇರಿಸಲು ಹೊರಟ ನಿಮ್ಮ ಉದ್ದೇಶವಾದರೂ ಏನು ಎಂದು  ಪ್ರಶ್ನಿಸಿದರು.

ಸಿಗಂದೂರು ಚೌಡೇಶ್ವರಿ ದೇವಾಲಯ ವಿವಾದ: ಹೋರಾಟದ ಎಚ್ಚರಿಕೆ ಕೊಟ್ಟ ಮಾಜಿ ಶಾಸಕ

ಈಡಿಗರ ಜಾತಿ ಒಡೆಯಲು ಶಾಸಕ ಹರತಾಳು ಹಾಲಪ್ಪ ಹೊರಟಿದ್ದಾರೆ. ಗೋಕರ್ಣ, ರಾಮಚಂದ್ರಪುರ ಮಠ ಸೇರಿದಂತೆ ಅನೇಕ ದೇವಾಲಯಗಳಲ್ಲಿ ಗಲಾಟೆ ನಡೆದಿದೆ. ಅವುಗಳನ್ನ ಏಕೆ ಮುಜರಾಯಿಗೆ ಸೇರಿಸಲು ಮನಸ್ಸು ಮಾಡಿಲ್ಲ ಎಂದರು.

ಗಲಾಟೆ ಮಾಡಿಕೊಂಡ ಧರ್ಮದರ್ಶಿ ಮತ್ತು ಅರ್ಚಕರನ್ನು ಕರೆದು, ಬುದ್ಧಿವಾದ ಹೇಳಿ ಕಳಿಸಬಹುದಿತ್ತು. ಆದರೆ, ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಲಹಾ ಸಮಿತಿ ರಚಿಸಲಾಗಿದೆ. ಒಬ್ಬ ಜಿಲ್ಲಾಧಿಕಾರಿಯಾದವರು ರಾಜಕಾರಣಿಗಳ ಏಜೆಂಟ್ ರೀತಿ ವರ್ತಿಸಬಾರದು ಗುಡುಗಿದರು.

ಈಡಿಗ ಸಮಾಜಕ್ಕೆ ಸ್ವಯಂಘೋಷಿತ ಸಂಘಟನೆ ಎಂದು ಜಿಲ್ಲಾಧಿಕಾರಿ ಕರೆದಿದ್ದಾರೆ. ರಾಜ್ಯದಲ್ಲಿ ಸುಮಾರು 50 ಲಕ್ಷಕ್ಕೂ ಹೆಚ್ಚು ಈಡಿಗ ಸಮುದಾಯದವರಿದ್ದಾರೆ ಈ ಪದವನ್ನು ಕಡತದಿಂದ ತೆಗೆದು ಹಾಕಬೇಕು. ಸಿಗಂದೂರು ಕ್ಷೇತ್ರವನ್ನು ಎದುರು ಹಾಕಿಕೊಂಡರೆ, ರಾಜಕೀಯವಾಗಿ ಯಡಿಯೂರಪ್ಪ ನಾಶವಾಗಲಿದ್ದಾರೆ ಎಂದು ಶಾಪ ಹಾಕಿದರು.