ನಾಳೆಯಿಂದ ಸಿದ್ದರಾಮಯ್ಯ, ಡಿಕೆಶಿ ಜಂಟಿ ಬಸ್ ಯಾತ್ರೆ
ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ‘ಪ್ರಜಾಧ್ವನಿ ಯಾತ್ರೆ’ಗೆ ಚಾಲನೆ, 10 ದಿನ 20 ಜಿಲ್ಲೆಗಳಲ್ಲಿ ಸಮಾವೇಶ ನಡೆಸಲು ಯೋಜನೆ.

ಬೆಂಗಳೂರು(ಜ.10): ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಜಂಟಿ ಬಸ್ ಯಾತ್ರೆಯಾದ ‘ಪ್ರಜಾಧ್ವನಿ ಯಾತ್ರೆ’ ಬುಧವಾರ (ಜ.11)ದಿಂದ ಆರಂಭವಾಗಲಿದೆ. ಇದಕ್ಕಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರ ಜಂಟಿ ನೇತೃತ್ವದಲ್ಲಿ ಹಿರಿಯ ನಾಯಕರ ತಂಡ ಮಂಗಳವಾರ ಸಂಜೆಯೇ ಬೆಳಗಾವಿಗೆ ತೆರಳಲಿದೆ. ಜ.11ರಿಂದ ಜ.28ರವರೆಗೆ ಒಟ್ಟು 10 ದಿನಗಳ ಕಾಲ ನಡೆಯುವ ಪ್ರವಾಸವನ್ನು ರಾಜ್ಯದ ಎಲ್ಲಾ ಹಿರಿಯ ಕಾಂಗ್ರೆಸ್ ನಾಯಕರೂ ಒಗ್ಗಟ್ಟಾಗಿ ನಡೆಸಲಿದ್ದು, ಈ ವೇಳೆ 20 ಜಿಲ್ಲೆಗಳಲ್ಲಿ ಸಮಾವೇಶಗಳನ್ನು ನಡೆಸಲಿದ್ದಾರೆ.
ಜ.11ರಂದು ಬೆಳಗ್ಗೆ 8.30 ಗಂಟೆಗೆ ಬೆಳಗಾವಿಯಿಂದ ಬಸ್ ಯಾತ್ರೆ ಅಧಿಕೃತವಾಗಿ ಶುರುವಾಗಲಿದೆ. ಮೊದಲ ದಿನ ಚಿಕ್ಕೋಡಿ ಹಾಗೂ ಬೆಳಗಾವಿಯಲ್ಲಿ ಸಮಾವೇಶ ನಡೆಸಿದ ಬಳಿಕ ಜ.12 ರಿಂದ 16 ರವರೆಗೆ ಸಂಕ್ರಾಂತಿ ಹಿನ್ನೆಲೆಯಲ್ಲಿ ಬಿಡುವು ನೀಡಲಾಗುತ್ತದೆ. ಬಳಿಕ ಜ.17 ರಂದು ಹೊಸಪೇಟೆ ಹಾಗೂ ಸಂಜೆ ಕೊಪ್ಪಳದಲ್ಲಿ ಸಮಾವೇಶ, ಜ.18 ರಂದು ಬಾಗಲಕೋಟೆ ಹಾಗೂ ಅಂದು ಸಂಜೆ ಗದಗ, ಜ.19 ರಂದು ಬೆಳಗ್ಗೆ ಹಾವೇರಿ, ಸಂಜೆ ದಾವಣಗೆರೆಯಲ್ಲಿ ಸಮಾವೇಶ ನಡೆಸಲಾಗುತ್ತದೆ.
ಕಾಂಗ್ರೆಸ್‌ನಿಂದ ನನಗೆ ಟಿಕೆಟ್ ಸಿಗುವ ವಿಶ್ವಾಸ: ಕೃಷ್ಣ
ಇನ್ನು ಜ.20ರಂದು ಬಿಡುವು ನೀಡಿ ಜ.21ರಂದು ಹಾಸನ, ಸಂಜೆ ಚಿಕ್ಕಮಗಳೂರು, ಜ.22ರಂದು ಬೆಳಗ್ಗೆ ಉಡುಪಿ, ಸಂಜೆ ಮಂಗಳೂರು, ಜ.23 ಬೆಳಗ್ಗೆ ಕೋಲಾರ, ಸಂಜೆ ಚಿಕ್ಕಬಳ್ಳಾಪುರ, ಜ.24ರಂದು ಬೆಳಗ್ಗೆ ತುಮಕೂರು, ಸಂಜೆ ದೊಡ್ಡಬಳ್ಳಾಪುರ (ಬೆಂಗಳೂರು ಗ್ರಾಮಾಂತರ), ಜ.25ರಂದು ಬೆಳಗ್ಗೆ ಚಾಮರಾಜ ನಗರ, ಸಂಜೆ ಮೈಸೂರು, ಜ.27 ಬೆಳಗ್ಗೆ ಮಂಡ್ಯ, ಸಂಜೆ ರಾಮನಗರದಲ್ಲಿ ಸಮಾವೇಶ ನಡೆಯಲಿದೆ. ಬಳಿಕ ಜ.28ರಂದು ಬೆಳಗ್ಗೆ ಯಾದಗಿರಿ ಹಾಗೂ ಸಂಜೆ ಬೀದರ್‌ನಲ್ಲಿ ಸಮಾವೇಶ ನಡೆಸಿ ಮೊದಲ ಹಂತದ ಹಿರಿಯ ನಾಯಕರ ಜಂಟಿ ಬಸ್ ಯಾತ್ರೆಗೆ ತೆರೆ ಎಳೆಯಲಾಗುವುದು ಎಂದು ತಿಳಿದುಬಂದಿದೆ.