ದಳದ ಹೊಸ ಮಂತ್ರ: ಕೈ ಜೊತೆಗಿನ ಕುಸ್ತಿ ಸಾಕು, ಕಮಲದ ದೋಸ್ತಿ ಬೇಕು

ಬೆಂಗಳೂರು(ಜೂ.14): ಬಿಜೆಪಿ ರಾಜ್ಯ ದೋಸ್ತಿ ಸರ್ಕಾರವನ್ನು ಉರುಳಿಸುವ ಪ್ರಯತ್ನ ಬಿಟ್ಟು ಹಲವು ದಿನಗಳೇ ಕಳೆದಿವೆ. ಹೈಕಮಾಂಡ್ ಸ್ಪಷ್ಟ ಸಂದೇಶದ ಹಿನ್ನೆಲೆಯಲ್ಲಿ ದೋಸ್ತಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟದ ಹಾದಿ ಹಿಡಿದಿದೆ. ಈ ಮಧ್ಯೆ ದೋಸ್ತಿ ಸರ್ಕಾರ ತನ್ನಿಂದ ತಾನೇ ಬೀಳುತ್ತದೆ ಎನ್ನುತ್ತಿದ್ದಾರೆ ಕಮಲ ನಾಯಕರು.

ಇದಕ್ಕೆ ಪುಷ್ಠಿ ಎಂಬಂತೆ ರಾಜ್ಯ ಸಮ್ಮಿಶ್ರ ಸರ್ಕಾರದಲ್ಲಿ ಬಿರುಕು ಮೂಡಿರುವುದು ಸ್ಪಷ್ಟವಾಗಿದ್ದು, ಜೆಡಿಎಸ್ ಮತ್ತು ಕಾಂಗ್ರೆಸ್ ಎರಡೂ ಪಕ್ಷಗಳಲ್ಲಿ ಮೈತ್ರಿ ಮುರಿದುಕೊಳ್ಳಲು ಪರಿತಪಿಸುತ್ತಿರುವ ನಾಯಕರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ.

ಬಿಜೆಪಿಯೊಂದಿಗೆ ಸೇರಿ ಸರ್ಕಾರ ರಚಿಸಲು ದಳದ ಕೆಲವು ನಾಯಕರು ಉತ್ಸುಕತೆ ತೋರಿದ್ದು, ಬಿಜೆಪಿ ಮಾತ್ರ ಇದಕ್ಕೆ ಸ್ಪಷ್ಟವಾಗಿ ನಿರಾಕರಿಸಿದೆ. ಒಂದು ವೇಳೆ ಈಗಲೇ ಚುನಾವಣೆ ನಡೆದರೆ ಬಿಜೆಪಿಗೆ ಸ್ಪಷ್ಟ ಬಹುಮತ ಬರುವ ಹಿನ್ನೆಲೆಯಲ್ಲಿ ಮೈತ್ರಿ ಕಸರತ್ತು ಬೇಡ ಎಂದು ಹೈಕಮಾಂಡ್ ಸೂಚಿಸಿದೆ ಎನ್ನಲಾಗಿದೆ.

ಈ ಮಧ್ಯೆ ಕಾಂಗ್ರೆಸ್ ಕೂಡ ಮೈತ್ರಿ ಬಗ್ಗೆ ನಿರಾಸಕ್ತಿ ತೋರಿದ್ದು, ಜೆಡಿಎಸ್ ಜೊತೆಗಿನ ಮೈತ್ರಿ ಕಡಿದುಕೊಳ್ಳಲು ಕೆಲವು ನಾಯಕರು ಹೈಕಮಾಂಡ್'ಗೆ ದಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ.

ಸರ್ಕಾರದಲ್ಲಿ ಕೆಲವು ಕಾಂಗ್ರೆಸ್ ಸಚಿವರಿಗೆ ಬೆಲೆ ಇಲ್ಲದಂತಾಗಿದ್ದು, ಸಿದ್ದರಾಮಯ್ಯ ಅವರನ್ನು ಮತ್ತೆ ಸಿಎಂ ಮಾಡುವ ಮೂಲಕ ಈ ಎಲ್ಲ ಬೆಳವಣಿಗೆಗಳಿಗೆ ಇತಿಶ್ರೀ ಹಾಡಲು ಕೆಲವು ಕೈ ನಾಯಕರು ಒತ್ತಾಯಿಸುತ್ತಿದ್ದಾರೆ ಎನ್ನಲಾಗಿದೆ.