ಸುದೀಪ್ ಹೇಳಿಕೆ ಬಳಿಕ ಕಾಂಗ್ರೆಸ್, ಜೆಡಿಎಸ್ ಟೀಕೆಗಳನ್ನು ಮಾಡಲು ಆರಂಭಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುದೀಪ್‌ಗೆ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಹಕ್ಕಿದೆ. ಕಾಂಗ್ರೆಸ್, ಜೆಡಿಎಸ್‌ನವರದ್ದು ರೋಗಗ್ರಸ್ಥ ಮನಸ್ಥಿತಿ’ ಎಂದು ಕಿಡಿಕಾರಿದ ಗೌರವ್ ಭಾಟಿಯಾ.
ಬೆಂಗಳೂರು(ಏ.09): ‘ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ನಿಂತ ನಟ ಸುದೀಪ್ ಅವರನ್ನು ಟೀಕಿಸುವ ಮೂಲಕ ಕಾಂಗ್ರೆಸ್, ಜೆಡಿಎಸ್ ರಾಜ್ಯದ ಕನ್ನಡಿಗರಿಗೆ ಅಪಮಾನ ಮಾಡಿವೆ’ ಎಂದು ಬಿಜೆಪಿ ರಾಷ್ಟ್ರೀಯ ವಕ್ತಾರ ಗೌರವ್ ಭಾಟಿಯಾ ಟೀಕಾಪ್ರಹಾರ ನಡೆಸಿದ್ದಾರೆ.
ಶನಿವಾರ ಮಲ್ಲೇಶ್ವರದಲ್ಲಿನ ಬಿಜೆಪಿ ಮಾಧ್ಯಮ ಕೇಂದ್ರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಟ ಸುದೀಪ್ ಅವರು ಕನ್ನಡದ ಹೆಮ್ಮೆಯ ನಟ. ಬಿಜೆಪಿ ಮತ್ತು ಬಸವರಾಜ ಬೊಮ್ಮಾಯಿ ಹೇಳುವ ನಾಯಕರ ಪರವಾಗಿ ಪ್ರಚಾರ ಮಾಡಲಿದ್ದಾರೆ. ಎಸ್‌ಟಿ ಸಮುದಾಯದ ಸುದೀಪ್ ಬೆಂಬಲ ಪಕ್ಷಕ್ಕೆ ಬಲ ತಂದಿದೆ. ಸುದೀಪ್ ಹೇಳಿಕೆ ಬಳಿಕ ಕಾಂಗ್ರೆಸ್, ಜೆಡಿಎಸ್ ಟೀಕೆಗಳನ್ನು ಮಾಡಲು ಆರಂಭಿಸಿವೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸುದೀಪ್‌ಗೆ ಯಾವುದೇ ಪಕ್ಷಕ್ಕೆ ಬೆಂಬಲ ನೀಡುವ ಹಕ್ಕಿದೆ. ಕಾಂಗ್ರೆಸ್, ಜೆಡಿಎಸ್‌ನವರದ್ದು ರೋಗಗ್ರಸ್ಥ ಮನಸ್ಥಿತಿ’ ಎಂದು ಕಿಡಿಕಾರಿದರು.
ನಾನು ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ
‘ಸೋಲುವ ಭೀತಿಗೊಳಗಾಗಿ ಕಾಂಗ್ರೆಸ್‌ನವರು ಟೀಕೆ ಮಾಡಲು ಆರಂಭಿಸಿದ್ದಾರೆ. ತನಿಖಾ ಸಂಸ್ಥೆಗಳ ಭಯದಿಂದಾಗಿ ಈ ಟೀಕೆ ಮಾಡುವುದು ಸರಿಯಲ್ಲ. ಕಾಂಗ್ರೆಸ್‌ಗೆ ಯಾರಾದರೂ ಬೆಂಬಲ ನೀಡಿದರೆ, ಆಗ ಅವರಿಗೂ ತನಿಖೆ ಸಂಸ್ಥೆಗಳ ಭಯ ಇದೆ ಎಂದರ್ಥನಾ? ಕಾಂಗ್ರೆಸ್-ಜೆಡಿಎಸ್‌ಗೆ ಯಾವುದು ಸರಿಯೋ, ಅದಷ್ಟೇ ಸರೀನಾ? ಸುದೀಪ್‌ಗೆ ತಮ್ಮದೇ ಆದ ಅಸ್ಮಿತೆ, ಖ್ಯಾತಿ, ಪ್ರತಿಭೆ ಇದೆ. ಕಾಂಗ್ರೆಸ್-ಜೆಡಿಎಸ್ ಟೀಕೆಯನ್ನು ಬಿಜೆಪಿ ಖಂಡಿಸುತ್ತದೆ’ ಎಂದರು.
‘ಕಾಂಗ್ರೆಸ್‌ನ ಗ್ಯಾರಂಟಿ ಎಂದರೆ ಭ್ರಷ್ಟಾಚಾರದ ಗ್ಯಾರಂಟಿ. ದ್ರಾಕ್ಷಿ ಸಿಕ್ಕಿಲ್ಲ ಎಂದು ಅದು ಹುಳಿ ಎಂದರ್ಥವಲ್ಲ. ಸುದೀಪ್ ಬೆಂಬಲ ಸಿಗದ ಕಾಂಗ್ರೆಸ್-ಜೆಡಿಎಸ್‌ನವರದ್ದು ಇದೇ ಮನಸ್ಥಿತಿ. ಎಸ್‌ಟಿ ಸಮುದಾಯದ ಸುದೀಪ್ ಅವರನ್ನು ಗುರಿಯಾಗಿಸಿಕೊಂಡಿವೆ’ ಎಂದ ಅವರು, ‘ಕಾಂಗ್ರೆಸ್‌ಗೆ ಅದರ ಸಿದ್ಧಾಂತವೇ ಗೊತ್ತಿಲ್ಲ. ಪಕ್ಷಕ್ಕೆ ನಾಯಕರು ಯಾರು ಎಂದು ಗೊತ್ತಿಲ್ಲ. ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಕೋಲಾರಕ್ಕೆ ಬಂದರೆ ಯಾವ ಪರಿಣಾಮವೂ ಆಗುವುದಿಲ್ಲ’ ಎಂದು ಹೇಳಿದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.
