ಹಾವೇರಿ ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಬಿಜೆಪಿ ಭದ್ರಕೋಟೆ ವಶಪಡಿಸಿಕೊಳ್ಳಲು ಕಾಂಗ್ರೆಸ್‌ ತೀವ್ರ ಪ್ರಯತ್ನ ನಡೆಸುತ್ತಿದೆ.

ನಾರಾಯಣ ಹೆಗಡೆ

ಹಾವೇರಿ(ಏ.25):  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಯಲ್ಲಿ ಚುನಾವಣಾ ಕದನ ಕುತೂಹಲ ಮೂಡಿಸಿದೆ. ಜಿಲ್ಲೆಯ 6 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದು, ಬಿಜೆಪಿ ಭದ್ರಕೋಟೆ ವಶಪಡಿಸಿಕೊಳ್ಳಲು ಕಾಂಗ್ರೆಸ್‌ ತೀವ್ರ ಪ್ರಯತ್ನ ನಡೆಸುತ್ತಿದೆ.

ಉತ್ತರ ಕರ್ನಾಟಕದ ಹೆಬ್ಬಾಗಿಲು, ಏಲಕ್ಕಿ ಕಂಪಿನ ಹಾವೇರಿ ಜಿಲ್ಲೆಯ 6 ಕ್ಷೇತ್ರಗಳ ಪೈಕಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ ಸೇರಿದಂತೆ 5 ಕ್ಷೇತ್ರಗಳು ಬಿಜೆಪಿ ಮುಷ್ಟಿಯಲ್ಲಿವೆ. 2018ರ ಚುನಾವಣೆಯಲ್ಲಿ 4 ಕ್ಷೇತ್ರಗಳನ್ನು ಗೆದ್ದಿದ್ದ ಬಿಜೆಪಿ, 2019ರಲ್ಲಿ ಹಿರೇಕೆರೂರು ಮತ್ತು ರಾಣಿಬೆನ್ನೂರಿಗೆ ನಡೆದ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರ ಗೆದ್ದು ಇಡೀ ಜಿಲ್ಲೆ ಕಮಲಮಯವಾಗಿ ಕಾಂಗ್ರೆಸ್‌ ಮುಕ್ತ ಜಿಲ್ಲೆ ಎನಿಸಿತ್ತು. ಆ ಮೂಲಕ ಹಾವೇರಿ ಜಿಲ್ಲೆ ಬಿಜೆಪಿಯ ಭದ್ರಕೋಟೆ ಎನಿಸಿತ್ತು. ಹಾನಗಲ್ಲ ಶಾಸಕರಾಗಿದ್ದ ಸಿ.ಎಂ. ಉದಾಸಿ ನಿಧನದಿಂದ ತೆರವಾದ ಸ್ಥಾನಕ್ಕೆ 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿ ಸರ್ಕಾರಕ್ಕೆ ಸಡ್ಡು ಹೊಡೆದ ಕಾಂಗ್ರೆಸ್‌ ಗೆದ್ದು ಬೀಗಿತ್ತು. ಆ ಮೂಲಕ ಜಿಲ್ಲೆಯ ಒಂದು ಕ್ಷೇತ್ರ ಕಾಂಗ್ರೆಸ್‌ ವಶಕ್ಕೆ ಹೋಗುವಂತಾಯಿತು.

ಚುನಾವಣೆ ಅಂತ್ಯದವರೆಗೆ ಕಾಂಗ್ರೆಸ್‌ ಗ್ಯಾರಂಟಿ ಆಮೇಲೆ ಗಳಗಂಟಿ: ಸಿಎಂ ಲೇವಡಿ

ಸರ್ಕಾರದ ಸಾಧನೆ, ತವರು ಜಿಲ್ಲೆಗೆ ಮುಖ್ಯಮಂತ್ರಿ ಬೊಮ್ಮಾಯಿ ನೀಡಿದ ಹಲವು ಯೋಜನೆ, ಅಭಿವೃದ್ಧಿಗೆ ಹರಿದ ಅನುದಾನ, ಮೋದಿ ಅಲೆ, ತಳ ಮಟ್ಟದಲ್ಲಿ ಪ್ರಬಲವಾಗಿರುವ ಸಂಘಟನೆ ನೆಚ್ಚಿಕೊಂಡು ಈ ಬಾರಿ ಬಿಜೆಪಿ ಚುನಾವಣೆ ಎದುರಿಸುವ ಉತ್ಸಾಹದಲ್ಲಿದೆ. ಕಾಂಗ್ರೆಸ್‌ ಕೂಡ ಸರ್ಕಾರದ ವೈಫಲ್ಯ, ಬೆಲೆಯೇರಿಕೆ, ಆಡಳಿತ ವಿರೋಧಿ ಅಲೆಯನ್ನು ಮುಂದಿಟ್ಟುಕೊಂಡು ಬಿಜೆಪಿಯ ಕೋಟೆ ಭೇದಿಸಲು ಹೊರಟಿದೆ. ಜಿಲ್ಲೆಯಲ್ಲಿ ಜೆಡಿಎಸ್‌ ಸಂಘಟನೆ ಅಷ್ಟಾಗಿ ಇಲ್ಲದ್ದರಿಂದ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಎಲ್ಲ ಕ್ಷೇತ್ರಗಳಲ್ಲಿ ನೇರ ಪೈಪೋಟಿ ಏರ್ಪಟ್ಟಿದೆ.

ಶಿಗ್ಗಾಂವಿ: ಬೊಮ್ಮಾಯಿಗೆ ಸುಲಭದ ತುತ್ತಾಗುತ್ತಾ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರತಿನಿಧಿಸುವ ಶಿಗ್ಗಾಂವಿ-ಸವಣೂರು ವಿಧಾನಸಭಾ ಕ್ಷೇತ್ರ ಹಲವು ಕಾರಣಗಳಿಗೆ ರಾಜ್ಯದ ಗಮನ ಸೆಳೆದಿದೆ. ಮುಸ್ಲಿಂ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬೊಮ್ಮಾಯಿ ಹ್ಯಾಟ್ರಿಕ್‌ ಗೆಲುವು ದಾಖಲಿಸಿದ್ದರು. ಈ ಸಲ ಬೌಂಡರಿ ಬಾರಿಸಲು ಸಜ್ಜಾಗಿರುವ ಅವರಿಗೆ ಠಕ್ಕರ್‌ ಕೊಡಲು ಕಾಂಗ್ರೆಸ್‌ ಅಲ್ಪಸಂಖ್ಯಾತ ಅಭ್ಯರ್ಥಿ ಯಾಸೀರ್‌ಖಾನ್‌ ಪಠಾಣ ಅವರನ್ನು ಕಣಕ್ಕಿಳಿಸಿದೆ.
ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಕಟ್ಟಿಹಾಕಲು ಕಾಂಗ್ರೆಸ್‌ ನಾಯಕರು ನಡೆಸಿದ ತಂತ್ರಗಾರಿಕೆಯೇ ಈಗ ಕಾಂಗ್ರೆಸ್‌ ಕೈ ಕಟ್ಟಿಹಾಕಿದೆ. ಮೊದಲು ವಿನಯ ಕುಲಕರ್ಣಿ ಹೆಸರು ಮುಂಚೂಣಿಗೆ ತಂದು, ಬಳಿಕ ಯೂಸುಫ್‌ ಸವಣೂರು ಎಂಬವರಿಗೆ ಟಿಕೆಟ್‌ ಘೋಷಿಸಿತು. ಒಂದೇ ದಿನದಲ್ಲಿ ಅಭ್ಯರ್ಥಿ ಬದಲಿಸಿ ಯಾಸೀರ್‌ ಖಾನ್‌ ಪಠಾಣಗೆ ಟಿಕೆಟ್‌ ನೀಡಿತು. ಇದರಿಂದ ಬೊಮ್ಮಾಯಿ ವಿರುದ್ಧ ಮೂರು ಸಲ ಸೋತಿದ್ದ ಮಾಜಿ ಶಾಸಕ ಅಜ್ಜಂಪೀರ್‌ ಖಾದ್ರಿ ಮುನಿಸುಕೊಂಡಿದ್ದು,

ಅದಿನ್ನೂ ಶಮನವಾಗಿಲ್ಲ.

ಮತ್ತೊಬ್ಬ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಶಶಿಧರ ಯಲಿಗಾರ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಸಾವಿರಾರು ಕೋಟಿ ಅನುದಾನ ತಂದಿರುವ ಬೊಮ್ಮಾಯಿ ತಮ್ಮ ಅಭಿವೃದ್ಧಿ ಕಾರ್ಯವನ್ನೇ ನೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್‌ ಅಲ್ಪಸಂಖ್ಯಾತ ಮತಗಳ ಮೇಲೆ ಕಣ್ಣಿಟ್ಟಿದ್ದರೆ, ಜೆಡಿಎಸ್‌ನ ಶಶಿಧರ ಯಲಿಗಾರ ಪಂಚಮಸಾಲಿ ಮತಗಳನ್ನು ಸೆಳೆಯುವ ಯತ್ನದಲ್ಲಿದ್ದಾರೆ. ಇವರೆಲ್ಲರನ್ನು ಎದುರಿಸಿ ಮುಖ್ಯಮಂತ್ರಿ ಬೊಮ್ಮಾಯಿ ಬೌಂಡರಿ ಬಾರಿಸುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ.

ಹಿರೇಕೆರೂರು: ಬಿ.ಸಿ.ಪಾಟೀಲ, ಬಣಕಾರ ಮಧ್ಯೆ ಭಾರೀ ಸ್ಪರ್ಧೆ

ಅಲಿಖಿತ ಸಾದರ ಲಿಂಗಾಯತ ಹಿರೇಕೆರೂರು ಕ್ಷೇತ್ರದಲ್ಲಿ ಪಕ್ಷ, ಚಿಹ್ನೆಗಿಂತ ಬಿ.ಸಿ.ಪಾಟೀಲ ಮತ್ತು ಯು.ಬಿ.ಬಣಕಾರ ವೈಯಕ್ತಿಕ ವರ್ಚಿಸ್ಸಿನ ಮೇಲೆಯೇ ಕಳೆದ ನಾಲ್ಕು ಚುನಾವಣೆಗಳು ನಡೆದುಕೊಂಡು ಬಂದಿವೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದಿದ್ದ ಬಿ.ಸಿ.ಪಾಟೀಲ ಈ ಸಲ ಬಿಜೆಪಿ ಅಭ್ಯರ್ಥಿಯಾಗಿದ್ದರೆ, ಆಗ ಬಿಜೆಪಿ ಅಭ್ಯರ್ಥಿಯಾಗಿದ್ದ ಯು.ಬಿ. ಬಣಕಾರ ಈ ಸಲ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದಾರೆ. 2018ರಲ್ಲಿ ಕಾಂಗ್ರೆಸ್‌ನಿಂದ ಗೆದ್ದು ಆ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದ ಬಿ.ಸಿ.ಪಾಟೀಲ ಉಪಚುನಾವಣೆಯಲ್ಲಿ ಗೆದ್ದು ಕೃಷಿ ಸಚಿವರಾಗಿದ್ದರು. ಉಪಚುನಾವಣೆ ವೇಳೆ ಪಾಟೀಲ, ಬಣಕಾರ ಜೋಡೆತ್ತಿನಂತೆ ಇದ್ದು ಬಿಜೆಪಿ ಪ್ರಚಾರ ನಡೆಸಿದ್ದರು. ತಮ್ಮ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿರುವ ಬಣಕಾರ ಸದ್ದಿಲ್ಲದೆ ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. 2004, 2008, 2018, 2019ರಲ್ಲಿ ಹೀಗೆ ನಾಲ್ಕು ಬಾರಿ ಗೆದ್ದಿರುವ ಬಿ.ಸಿ.ಪಾಟೀಲ 5ನೇ ಗೆಲುವಿನತ್ತ ಕಣ್ಣಿಟ್ಟಿದ್ದಾರೆ.

ಇಬ್ಬರು ಸಾದರ ಲಿಂಗಾಯತ ನಾಯಕರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದೆ. ನೀರಾವರಿ ಯೋಜನೆ, ರಟ್ಟೀಹಳ್ಳಿ ತಾಲೂಕು ರಚನೆ ಸೇರಿ ತಾವು ಮಾಡಿರುವ ಅನೇಕ ಅಭಿವೃದ್ಧಿ ಕಾರ್ಯಗಳನ್ನೇ ಬಿ.ಸಿ.ಪಾಟೀಲ ನೆಚ್ಚಿಕೊಂಡಿದ್ದಾರೆ. ಹಿಂದಿನ ಸೋಲಿನ ಅನುಕಂಪವನ್ನೇ ಬಂಡವಾಳ ಮಾಡಿಕೊಂಡು ಬಣಕಾರ ಮುನ್ನಡೆಯುತ್ತಿದ್ದಾರೆ. ಜೆಡಿಎಸ್‌ನಿಂದ ಜಯಣ್ಣ ಜಾವಣ್ಣನವರ ಕಣದಲ್ಲಿದ್ದರೂ ಹೊಸಬರನ್ನು ಜನತೆ ಬೆಂಬಲಿಸುವ ಸಾಧ್ಯತೆ ಕಂಡುಬರುತ್ತಿಲ್ಲ.

ಹಾವೇರಿ: ಹಳೆ ಹುಲಿ ರುದ್ರಪ್ಪ, ಹೊಸ ಮುಖ ಗವಿಸಿದ್ದಪ್ಪ ನಡುವೆ ಫೈಟ್‌

ಹಾವೇರಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಚಿವ ರುದ್ರಪ್ಪ ಲಮಾಣಿ ಕಾಂಗ್ರೆಸ್‌ನಿಂದ ಸ್ಪರ್ಧಿಸುತ್ತಿದ್ದರೆ, ಬಿಜೆಪಿಯಿಂದ ಹೊಸ ಮುಖ ಗವಿಸಿದ್ದಪ್ಪ ದ್ಯಾಮಣ್ಣವರ ಕಣಕ್ಕಿಳಿದಿದ್ದಾರೆ. ಹಾಲಿ ಶಾಸಕ ನೆಹರು ಓಲೇಕಾರ ಅವರಿಗೆ ಟಿಕೆಟ್‌ ಕೈತಪ್ಪಿದ್ದರೂ ತಟಸ್ಥರಾಗಿದ್ದಾರೆ. ಕೆಲ ಆಕಾಂಕ್ಷಿಗಳ ಅಸಮಾಧಾನವೂ ತಣ್ಣಗಾಗಿರುವುದು ಬಿಜೆಪಿ ಪಾಲಿಗೆ ಸಮಾಧಾನ ತರಿಸಿದೆ. ಕಾಂಗ್ರೆಸ್‌ನಲ್ಲೂ ಬಂಡಾಯ ಶಮನವಾಗಿದೆ. ಕಳೆದ ಚುನಾವಣೆಯಲ್ಲಿನ ತಪ್ಪುಗಳನ್ನು ತಿದ್ದಿಕೊಂಡು ರುದ್ರಪ್ಪ ಲಮಾಣಿ ಮುನ್ನಡೆಯುತ್ತಿದ್ದಾರೆ. ಉಪತಹಸೀಲ್ದಾರ್‌ ಆಗಿದ್ದ ಸಂದರ್ಭದಲ್ಲಿ ಜನಸಾಮಾನ್ಯರಿಗೆ ಮಾಡಿದ ಸಹಾಯವೇ ಗವಿಸಿದ್ದಪ್ಪ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ. ಇದೇ ಮೊದಲ ಸಲ ಬಿಜೆಪಿ ಎಸ್ಸಿ ಎಡಗೈ ಸಮುದಾಯಕ್ಕೆ ಅವಕಾಶ ನೀಡಿದೆ. ಎರಡೂ ಪಕ್ಷಗಳ ಅಭ್ಯರ್ಥಿಗಳ ಸರಳ ವ್ಯಕ್ತಿತ್ವದ ಬಗ್ಗೆ ಚರ್ಚೆಯಾಗುತ್ತಿದೆ. ಕಳೆದುಕೊಂಡ ಕ್ಷೇತ್ರ ಮರಳಿ ಪಡೆಯಲು ಕಾಂಗ್ರೆಸ್‌ ಯತ್ನಿಸುತ್ತಿದ್ದರೆ, ಕ್ಷೇತ್ರ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಮಲ ಪಡೆ ಕೆಲಸ ಮಾಡುತ್ತಿದೆ.

ಹಾನಗಲ್ಲ: ಉಪಚುನಾವಣೆ ಸೇಡು ತೀರಿಸಿಕೊಳ್ಳಲು ಬಿಜೆಪಿ ತಂತ್ರ

ಬಿಜೆಪಿಯಿಂದ ಸಿ.ಎಂ. ಉದಾಸಿ, ಕಾಂಗ್ರೆಸ್‌ನಿಂದ ಮನೋಹರ ತಹಶೀಲ್ದಾರ್‌ ಎಂಬಂತಿದ್ದ ಹಾನಗಲ್ಲ ಕ್ಷೇತ್ರದಲ್ಲಿ ಈಗ ಚಿತ್ರಣ ಬದಲಾಗಿದೆ. ಬಿಜೆಪಿಯ ಸಿ.ಎಂ. ಉದಾಸಿ ನಿಧನದಿಂದ ತೆರವಾಗಿದ್ದ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಶ್ರೀನಿವಾಸ ಮಾನೆ ಜಯಭೇರಿ ಬಾರಿಸಿದ್ದರು. ಈಗ ಬಿಜೆಪಿಯಿಂದ ಶಿವರಾಜ ಸಜ್ಜನರ ಕಣಕ್ಕಿಳಿದಿದ್ದು, ಕಾಂಗ್ರೆಸ್‌ನಿಂದ ಹಾಲಿ ಶಾಸಕ ಶ್ರೀನಿವಾಸ ಮಾನೆ ಸ್ಪರ್ಧಿಸುತ್ತಿದ್ದಾರೆ. ಉಪಚುನಾವಣೆಯಲ್ಲಿ ಇಡೀ ಸಿಎಂ ಬೊಮ್ಮಾಯಿ ನೇತೃತ್ವದ ಸಚಿವ ಸಂಪುಟವೇ ಬಂದು ನಿಂತರೂ ಕಾಂಗ್ರೆಸ್‌ ಸೋಲಿಸಲು ಸಾಧ್ಯವಾಗಿರಲಿಲ್ಲ. ಆಡಳಿತಾರೂಢ ಬಿಜೆಪಿಗೆ ಆ ಫಲಿತಾಂಶ ಇರುಸು-ಮುರುಸು ತಂದಿತ್ತು. ಉಪಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ಶಿವರಾಜ ಸಜ್ಜನರ ಅವರಿಗೆ ಬಿಜೆಪಿ ಮತ್ತೊಂದು ಅವಕಾಶ ನೀಡಿದೆ.

ಮೀಸಲಾತಿ ನೀಡಿ ಅಂಬೇಡ್ಕರ್‌ ಆಶಯ ಈಡೇರಿಸಿದ್ದೇ ಬಿಜೆಪಿ: ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ

ಕಾಂಗ್ರೆಸ್‌ನ ಮಾನೆ ಮತ್ತದೇ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ನಲ್ಲಿದ್ದ ಮನೋಹರ ತಹಶೀಲ್ದಾರ್‌ ಜೆಡಿಎಸ್‌ನಿಂದ ಕಣಕ್ಕಿಳಿದಿದ್ದಾರೆ. ಅವರ ಸ್ಪರ್ಧೆ ಕಾಂಗ್ರೆಸ್‌ಗೆ ಎಷ್ಟರಮಟ್ಟಿಗೆ ಹೊಡೆತ ನೀಡಲಿದೆ ಎಂಬುದನ್ನು ಕಾದುನೋಡಬೇಕಿದೆ.

ಬ್ಯಾಡಗಿ: ಬಿಜೆಪಿಯ ಬಳ್ಳಾರಿ, ಕಾಂಗ್ರೆಸ್‌ನ ಶಿವಣ್ಣನವರ ನಡುವೆ ಬಿಗ್‌ ಫೈಟ್‌

ಕೆಂಪು ಮೆಣಸಿನಕಾಯಿ ಮಾರುಕಟ್ಟೆಗೆ ಹೆಸರಾಗಿರುವ ಬ್ಯಾಡಗಿ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ನಡುವೆ ಭಾರೀ ಜಿದ್ದಾಜಿದ್ದಿ ಏರ್ಪಟ್ಟಿದೆ. ಬಿಜೆಪಿಯಿಂದ ಹಾಲಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಕಾಂಗ್ರೆಸ್‌ನಿಂದ ಬಸವರಾಜ ಶಿವಣ್ಣನವರ ಕಣಕ್ಕಿಳಿದಿದ್ದಾರೆ. 2018ರಲ್ಲಿ ವಿರೂಪಾಕ್ಷಪ್ಪ ಬಳ್ಳಾರಿ ಕ್ಷೇತ್ರದಲ್ಲಿ ಬಿಜೆಪಿ ಬಾವುಟ ಹಾರಿಸಿದ್ದರು. ಈ ಸಲವೂ ಮತ್ತೆ ಅದೇ ಹುಮ್ಮಸ್ಸಿನಲ್ಲಿರುವ ಅವರು ಪ್ರಚಾರದಲ್ಲಿ ತೊಡಗಿಕೊಂಡಿದ್ದಾರೆ. ಸಿಟ್ಟಿಂಗ್‌ ಎಂಎಲ್‌ಎ ಆದರೂ 2018ರಲ್ಲಿ ಟಿಕೆಟ್‌ ಸಿಗದೇ ಕೂತಿದ್ದ ಬಸವರಾಜ ಶಿವಣ್ಣನವರ ಅವರಿಗೆ ಈ ಸಲ ಅವಕಾಶ ಸಿಕ್ಕಿದೆ. ಎರಡೂ ಪಕ್ಷಗಳಲ್ಲಿನ ಮೇಲ್ನೋಟಕ್ಕೆ ಭಿನ್ನಮತ ಶಮನವಾಗಿದೆ. ಒಗ್ಗಟ್ಟಿನಿಂದ ಚುನಾವಣೆ ಎದುರಿಸುವ ಪಕ್ಷಕ್ಕೆ ಗೆಲುವು ಸುಲಭವಾಗಲಿದೆ.

ರಾಣಿಬೆನ್ನೂರು: ಬಹುಕೋನ ಸ್ಪರ್ಧೆ ಖಚಿತ

2018ರ ಚುನಾವಣೆ ಬಳಿಕ ಸಾಕಷ್ಟು ರಾಜಕೀಯ ಬದಲಾವಣೆ ಕಂಡಿರುವ ರಾಣಿಬೆನ್ನೂರು ಕ್ಷೇತ್ರದಲ್ಲಿ ಈ ಸಲ ಬಹುಕೋನ ಸ್ಪರ್ಧೆ ಕಂಡುಬರುತ್ತಿದೆ. ಬಿಜೆಪಿಯಿಂದ ಹಾಲಿ ಶಾಸಕ ಅರುಣಕುಮಾರ ಪೂಜಾರ ಕಣಕ್ಕಿಳಿದಿದ್ದಾರೆ. ಕಾಂಗ್ರೆಸ್‌ನಿಂದ ಕೆ.ಬಿ.ಕೋಳಿವಾಡರ ಪುತ್ರ ಪ್ರಕಾಶ ಕೋಳಿವಾಡಗೆ ಟಿಕೆಟ್‌ ನೀಡಲಾಗಿದೆ. 2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದಿದ್ದ ಆರ್‌.ಶಂಕರ್‌ ಈ ಸಲ ಎನ್‌ಸಿಪಿಯಿಂದ ಕಣಕ್ಕಿಳಿದಿದ್ದಾರೆ. ಬಿಜೆಪಿ ಟಿಕೆಟ್‌ಗಾಗಿ ಪ್ರಯತ್ನಿಸಿದ್ದ ಸಂತೋಷ ಕುಮಾರ್‌ ಪಾಟೀಲ ಪಕ್ಷೇತರರಾಗಿ ಸಾಮರ್ಥ್ಯ ಸಾಬೀತಿಗೆ ಇಳಿದಿದ್ದರೆ, ಜೆಡಿಎಸ್‌ ಅಭ್ಯರ್ಥಿ ಮಂಜುನಾಥ ಗೌಡಶಿವಣ್ಣವರ ಕೂಡ ಎಲ್ಲರಿಗೆ ಸರಿಸಮನಾದ ರೀತಿಯಲ್ಲೇ ಪ್ರಚಾರ ನಡೆಸಿದ್ದಾರೆ. ಇದರಿಂದ ಕ್ಷೇತ್ರದಲ್ಲಿ ಭಾರೀ ರಾಜಕೀಯ ಚಟುವಟಿಕೆ ನಡೆಯುತ್ತಿದೆ. ಶಂಕರ್‌ ಕಾಂಗ್ರೆಸ್‌ ಮತಗಳನ್ನು ಒಡೆಯುವ ಸಾಧ್ಯತೆಯಿದ್ದರೆ, ಸಂತೋಷ್‌ ಕುಮಾರ್‌ ಬಿಜೆಪಿಗೆ ಮುಳುವಾಗುವ ಸಾಧ್ಯತೆಯಿದೆ. ಇವೆಲ್ಲವುಗಳಿಂದ ಮತದಾರರು ಫುಲ್‌ ಕನ್‌ಫ್ಯೂಸ್‌ ಆಗಿದ್ದಾರೆ.