'ಬಿಜೆಪಿಗೆ ಕಾಂಗ್ರೆಸ್ ಒಂದೇ ಪರ್ಯಾಯವಲ್ಲ'
ರಾಜ್ಯದಲ್ಲಿ 13 ಸ್ಥಾನಗಳಲ್ಲಿ ಎಸ್‌ಯುಸಿಐ ಪಕ್ಷ ಕಣಕ್ಕೆ; ಡಾ.ಸುನೀತಕುಮಾರ ಟಿ.ಎಸ್. ಮಾಹಿತಿ
ವಿಜಯಪುರ(ಏ.04): ಬೆಂಗಳೂರು, ಮೈಸೂರು, ಕಲಬುರ್ಗಿ, ಬಳ್ಳಾರಿ, ಧಾರವಾಡ, ರಾಯಚೂರು, ವಿಜಯಪುರ ದಾವಣಗೆರೆ ಸೇರಿದಂತೆ ರಾಜ್ಯದ ಸುಮಾರು 13 ಸ್ಥಾನಗಳಲ್ಲಿ ಎಸ್‌ಯುಸಿಐ ಪಕ್ಷ ಕಣಕ್ಕಿಳಿಯಲಿದೆ ಎಂದು ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಸುನೀತ ಕುಮಾರ ಟಿ.ಎಸ್. ತಿಳಿಸಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ಸೇ ಬಿಜೆಪಿಗೆ ಪರ್ಯಾಯ ಎಂಬಂತೆ ಸಿಪಿಐಎಂ, ಸಿಪಿಐಗಳಂತಹ ಎಡಪಕ್ಷಗಳು ಮತ್ತು ಪ್ರಗತಿಪರರ ಒಂದು ಗುಂಪು ಭಾವಿಸಿರುವುದು ಅತ್ಯಂತ ವಿಷಾದದ ಸಂಗತಿಯಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಬೆಲೆ ಏರಿಕೆ, ಭ್ರಷ್ಟಾಚಾರ, ಗುಂಪುಗಾರಿಕೆ, ಒಳಜಗಳ, ಜಾತಿವಾದ ನಡೆದಿಲ್ಲವೇ, ಕಾಂಗ್ರೆಸ್ ಕುರಿತ ಜನರ ಆಕ್ರೋಶ, ಅಸಮಾಧಾನಗಳೇ ಬಿಜೆಪಿ ಬೆಳವಣಿಗೆಗೆ ಕಾರಣವಲ್ಲವೇ ಎಂದು ಪ್ರಶ್ನಿಸಿದರು.
ಬಿಜೆಪಿಯ ಡಬಲ್ ಎಂಜಿನ್ ಸರ್ಕಾರದ ಅಭಿವೃದ್ಧಿ ಶೂನ್ಯ: ಎಂ.ಬಿ.ಪಾಟೀಲ
ಕಾಂಗ್ರೆಸ್, ಜೆಡಿಎಸ್ ಜೊತೆಗೆ ಮೈತ್ರಿ ಮೂಲಕ ಸೀಟುಗಿಟ್ಟಿಸುವ ಅವಕಾಶವಾದಿ ಧೋರಣೆಯಿಂದ ಎಡ ಮೈತ್ರಿಕೂಟ ರಚನೆ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೋರಾಟದ ರಾಜಕೀಯವನ್ನು ಚುನಾವಣೆಗಳ ಸಂದರ್ಭದಲ್ಲೂ ಜನರ ಬಳಿಗೆ ಒಯ್ಯಲು ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷ ಏಕಾಂಗಿಯಾಗಿ ಸ್ಪರ್ಧೆ ಮಾಡುತ್ತಿದೆ ಎಂದರು.
ಚುನಾವಣಾ ಆಯೋಗದ ನೇಮಕಾತಿಯಲ್ಲೂ ಪಾರದರ್ಶಕತೆ ಇಲ್ಲವಾಗಿದ್ದು, ಈಗ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಿದೆ. ಚುನಾವಣಾ ಆಯುಕ್ತರನ್ನು ಪ್ರಧಾನಿ, ವಿರೋಧ ಪಕ್ಷದ ನಾಯಕ, ಸುಪ್ರೀಂ ಕೋರ್ಟಿನ ಮುಖ್ಯ ನ್ಯಾಯಮೂರ್ತಿಗಳು ಸೇರಿ ನೇಮಕ ಮಾಡಬೇಕು ಎಂದು ಆದೇಶಿಸಿದೆ. ಇಂಥ ಸಂದರ್ಭದಲ್ಲಿ ಎಡ ಮತ್ತು ಪ್ರಜಾಸತ್ತಾತ್ಮಕ ಪಕ್ಷಗಳ ಮೈತ್ರಿಯ ಮೂಲಕ ಪರ್ಯಾಯ ರಾಜಕೀಯ ಶಕ್ತಿಯನ್ನು ಕಟ್ಟುವುದು ಅತ್ಯಂತ ಅಗತ್ಯವಾಗಿದೆ. ಬಿಜೆಪಿಯೇತರ ಪಕ್ಷಗಳ ಮೈತ್ರಿಯೇ ಇದಕ್ಕೆ ಪರಿಹಾರವಾಗಿದೆ ಎಂದರು.
ಪೂರ್ಣ ಬಹುಮತ ಇರುವ ಕೇಂದ್ರ ಸರ್ಕಾರ ಎಲ್ಲ ಪ್ರಜಾಸತ್ತಾತ್ಮಕ ಸಂಸ್ಥೆಗಳನ್ನು ದುರುಪಯೋಗ ಮಾಡಿಕೊಂಡು ತನ್ನನ್ನು ವಿರೋಧಿಸಿದ ಎಲ್ಲರನ್ನೂ ಮಟ್ಟಹಾಕುತ್ತಿದೆ. ಐಟಿ, ಇಡಿ, ಸಿಬಿಐ ಹೀಗೆ ಅನೇಕ ಮಹತ್ವದ ಸಂಸ್ಥೆಗಳು ತಮ್ಮ ಸ್ವಾಯತ್ತತೆ ಕಳೆದುಕೊಂಡಿವೆ. ಜನಪರ ಹೋರಾಟಗಾರರನ್ನು ಯುಎಪಿಎ, ದೇಶದ್ರೋಹದಂಥ ಕರಾಳ ಕಾಯಿದೆಗಳಡಿ ಬಂಧಿಸಿ ಸೆರೆಮನೆವಾಸಕ್ಕೆ ತಳ್ಳಲಾಗುತ್ತಿದೆ ಎಂದು ದೂರಿದರು.
ಜನತೆ ಬೆಲೆ ಏರಿಕೆ, ನಿರುದ್ಯೋಗ, ಹಣದುಬ್ಬರ, ಶಿಕ್ಷಣ ಆರೋಗ್ಯ ಕ್ಷೇತ್ರಗಳ ವ್ಯಾಪಾರೀಕರಣ, ಎಲ್ಲೆ ಮೀರಿದ ಭ್ರಷ್ಟಾಚಾರಗಳಿಂದ ನಲುಗಿದ್ದಾರೆ. ಕೇಂದ್ರ ಹಾಗೂ ರಾಜ್ಯಗಳಲ್ಲಿ ಅಧಿಕಾರದಲ್ಲಿ ಇರುವ ಬಿಜೆಪಿ ಡಬಲ್ ಎಂಜಿನ್ ಸರ್ಕಾರ ಜನರನ್ನು ಡಬಲ್ ದೋಚುತ್ತಿದೆ. ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್‌ಗಳ ಬೆಲೆ ಕೈಗೆ ಎಟುಕದಂತಾಗಿದೆ. ರಸಗೊಬ್ಬರದ ಮೇಲಿನ ಸಬ್ಸಿಡಿಯನ್ನು ತೀವ್ರ ಕಡಿತಗೊಳಿಸಲಾಗಿದೆ. ರೇಷನ್ ವಿತರಣೆಯ ಬಜೆಟ್‌ನ್ನು ಕಡಿತಗೊಳಿಸಿ ಬಡವರ ಹೊಟ್ಟೆಮೇಲೆ ಹೊಡೆಯಲಾಗಿದೆ. ಆಯುಷ್ಮಾನ್ ಭಾರತ ಆರೋಗ್ಯ ಯೋಜನೆ ಜನರ ಆಯುಷ್ಯ ಕಸಿಯುತ್ತಿದೆ. ಆದರೆ, ಅಂಬಾನಿ-ಅದಾನಿಯಂಥ ಬಂಡವಾಳಶಾಹಿಗಳ ತಿಜೋರಿಗಳು ಮಾತ್ರ ತುಂಬುತ್ತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಹೀಗಾಗಿ, ಇದಕ್ಕೆ ಪರ್ಯಾಯವಾಗಿ ಹಾಗೂ ಪರಿಹಾರವಾಗಿ ಜನಹಿತಚಿಂತನೆಯುಳ್ಳ ಎಸ್‌ಯುಸಿಐ ಪಕ್ಷಕ್ಕೆ ಜನತೆ ಬೆಂಬಲ ನೀಡಬೇಕು ಎಂದು ಕೋರಿದರು.
ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಆಯ್ಕೆ:
ವಿಜಯಪುರ ನಗರ ಕ್ಷೇತ್ರದಿಂದ ಕಾರ್ಮಿಕ ಮುಖಂಡ ಮಲ್ಲಿಕಾರ್ಜುನ ಎಚ್.ಟಿ. ಅವರನ್ನು ಕಣಕ್ಕಿಳಿಸಲು ನಿರ್ಧರಿಸಲಾಗಿದ್ದು, ಮಲ್ಲಿಕಾರ್ಜುಮನ ತಮ್ಮ ವಿದ್ಯಾರ್ಥಿ ದೆಸೆಯಿಂದಲೇ ಸಾಮಾಜಿಕ ಹೋರಾಟಗಳಲ್ಲಿ ತೊಡಗಿಸಿಕೊಂಡವರು. ವಿಜಯಪುರ ಜಿಲ್ಲೆಯಾದ್ಯಂತ ಆಶಾ, ಆಂಗನವಾಡಿ, ಹಾಸ್ಟೆಲ್, ಡಿ ಗ್ರೂಪ್ ನೌಕರರ, ಗಾರ್ಡನ್ ವರ್ಕರ್ಸ್, ಬಿಸಿಊಟ, ಮುಂತಾದ ಕಾರ್ಮಿಕರ ಸಮಸ್ಯೆಗಳಿಗೆ ಧ್ವನಿಯಾಗಿದ್ದಾರೆ ಎಂದರು.
ಕೋಮುವಾದ ಪಕ್ಷಗಳಿಂದ ದೇಶ ಇಬ್ಭಾಗ: ಮುಖ್ಯಮಂತ್ರಿ ಚಂದ್ರು
ಎಸ್‌ಯುಸಿಐನ ಜಿಲ್ಲಾ ಕಾರ್ಯದರ್ಶಿ ಬಿ.ಭಗವಾನರೆಡ್ಡಿ ಮತ್ತು ಪಕ್ಷದ ಅಭ್ಯರ್ಥಿಯಾದ ಮಲ್ಲಿಕಾರ್ಜುನ ಎಚ್.ಟಿ. ಜಿಲ್ಲಾ ಸಮಿತಿಯ ಸದಸ್ಯರಾದ ಸಿದ್ದಲಿಂಗ ಬಾಗೇವಾಡಿ, ಎಚ್.ಟಿ.ಭರತಕುಮಾರ ಹಾಗು ಸದಸ್ಯರಾದ ಶಿವರಂಜಿನಿ, ಶಿವಬಾಳಮ್ಮ ಮುಂತಾದವರು ಇದ್ದರು.
ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಮೇ 10ರಂದು ಮತದಾನ ನಡೆಯಲಿದ್ದು, ಮೇ 13ಕ್ಕೆ ಮತ ಎಣಿಕೆ ನಡೆಯಲಿದೆ. ಏಪ್ರಿಲ್ 13ಕ್ಕೆ ಚುನಾವಣೆ ಅಧಿಸೂಚನೆ ಹೊರಡಿಸಲಿದ್ದು, ಏಪ್ರಿಲ್ 13ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನಾಮಪತ್ರ ಹಿಂಪಡೆಯಲು ಏಪ್ರಿಲ್ 24 ಕಡೆಯ ದಿನಾಂಕ.