ಬೇಕಿದ್ದರೆ ರಾಜ್ಯಾದ್ಯಂತ ‘ಪೇಸಿಎಂ’ ಮಾಡಿ: ಕಾಂಗ್ರೆಸ್ ವಿರುದ್ಧ ಕಿಡಿಕಾರಿದ ಬೊಮ್ಮಾಯಿ
‘ಪೇ ಸಿಎಂ’ ಅಭಿಯಾನವನ್ನು ರಾಜ್ಯಾದ್ಯಂತ ಮಾಡಲಿ, ಅವರಿಗೆ ಒಳ್ಳೆಯದಾಗಲಿ. ಇದು ಡರ್ಟಿ ಪಾಲಿಟಿಕ್ಸ್‌ನ ಒಂದು ಭಾಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಮೈಸೂರು (ಸೆ.26): ‘ಪೇ ಸಿಎಂ’ ಅಭಿಯಾನವನ್ನು ರಾಜ್ಯಾದ್ಯಂತ ಮಾಡಲಿ, ಅವರಿಗೆ ಒಳ್ಳೆಯದಾಗಲಿ. ಇದು ಡರ್ಟಿ ಪಾಲಿಟಿಕ್ಸ್‌ನ ಒಂದು ಭಾಗ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತೆ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ. ಪೇ ಸಿಎಂ ಅಭಿಯಾನ ಕುರಿತು ಮೈಸೂರು ವಿಮಾನ ನಿಲ್ದಾಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಕಾಂಗ್ರೆಸ್ ಅಧಃಪತನವನ್ನು ಸೂಚಿಸುತ್ತಿದೆ. ಇದೊಂದು ಸುಳ್ಳು ಬೋಗಸ್ ಪ್ರಚಾರ ಅನ್ನೋದು ಜನರಿಗೆ ಗೊತ್ತಿದೆ ಎಂದರು.
ಕಾಂಗ್ರೆಸ್ ಡರ್ಟಿ ಪಾಲಿಟಿಕ್ಸ್ ಮಾಡಿಕೊಂಡು ರಾಜ್ಯದ ಮರ್ಯಾದೆ ಕಳೆಯುತ್ತಿದೆ. ಈ ಅಭಿಯಾನದ ವಿಚಾರದಲ್ಲಿ ನಾನು ಯಾವತ್ತೂ ಜಾತಿ ಬಳಕೆ ಮಾಡಿಲ್ಲ. ಈ ರೀತಿ ಮಾಡಿದಾಗ ಕೆಲವರಿಗೆ ನೋವಾಗಿ ಜಾತಿ ವಿಚಾರ ಮಾತನಾಡಿದ್ದಾರೆ ಎಂದ ಅವರು, ಇತ್ತೀಚೆಗೆ ವೈಯಕ್ತಿಕ ಟೀಕೆ ಹೆಚ್ಚಾಗುತ್ತಿದೆ. ಸದನದಲ್ಲೂ ನಾವು ದಾಖಲೆ ನೀಡುವಂತೆ ಪ್ರತಿಪಕ್ಷವನ್ನು ಕೇಳಿದ್ದೆವು. ಅವರ ಬಳಿ ಯಾವ ದಾಖಲೆಯೂ ಇಲ್ಲ. ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
Chitradurga: ಸಿಎಂ ಬೊಮ್ಮಾಯಿ ಸಹ ಪ್ರಾಮಾಣಿಕ ಹೆಜ್ಜೆಯಿಡುತ್ತಿದ್ದಾರೆ: ಯಡಿಯೂರಪ್ಪ
ರಾಜ್ಯದಲ್ಲಿ ಮತ್ತೆ ಬಿಜೆಪಿ ಕಮಲ ಅರಳಲಿದೆ: ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ರಾಜ್ಯಭೇಟಿ ಹಿನ್ನೆಲೆಯಲ್ಲಿ ‘ಪೇ ಸಿಎಂ’ ಅಭಿಯಾನ ಜಾಸ್ತಿ ಮಾಡುತ್ತಿದ್ದಾರಾ ಎಂಬ ಪ್ರಶ್ನೆಗೆ, ಅದು ನನಗೆ ಗೊತ್ತಿಲ್ಲ ಅದನ್ನು ಅವರಿಗೇ ಕೇಳಬೇಕು ಎಂದರು. ರಾಹುಲ್ ಗಾಂಧಿ ಭಾರತ್ ಜೋಡೋ ಯಾತ್ರೆ ರಾಜ್ಯಕ್ಕೆ ಬರಲಿ, ಹೋಗಲಿ ಯಾವುದೇ ವ್ಯತ್ಯಾಸ ಆಗುವುದಿಲ್ಲ. ರಾಹುಲ್ ಗಾಂಧಿ ಹೋದ ಕಡೆಗಳಲ್ಲೆಲ್ಲ ಕಮಲ ಅರಳಿದೆ. ಮುಂದಿನ ಚುನಾವಣೆಯಲ್ಲಿ ರಾಜ್ಯದಲ್ಲೂ ಕಮಲ ಮತ್ತೆ ಅರಳಲಿದೆ. ಯಾತ್ರೆ ಬಗ್ಗೆ ನಾನು ಇಷ್ಟು ಮಾತ್ರ ಹೇಳಬಲ್ಲೆ ಎಂದರು.
108 ಸಮಸ್ಯೆ ಬಗೆಹರಿಯುತ್ತಿದೆ: ರಾಜ್ಯದಲ್ಲಿ 108 ಆಂಬ್ಯುಲೆನ್ಸ್ ಕಾಲ್ ಸೆಂಟರ್ ಸಮಸ್ಯೆ ಕುರಿತು ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ಮದರ್ ಬೋರ್ಡ್ ಸಮಸ್ಯೆಯಿಂದ ಸಮಸ್ಯೆಯಾಗಿದೆ. ಕೇವಲ ಬೆಂಗಳೂರು ಮಾತ್ರವಲ್ಲ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಮಸ್ಯೆಯಾಗಿದೆ. ಈ ಬಗ್ಗೆ ಆರೋಗ್ಯ ಸಚಿವರ ಜೊತೆ ಚರ್ಚೆ ಮಾಡಿದ್ದೇನೆ. ಸಮಸ್ಯೆ ಬಗೆಹರಿಯುತ್ತಿದೆ ಎಂದು ತಿಳಿಸಿದರು. ಈ ವೇಳೆ ಸಹಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ. ಸೋಮಶೇಖರ್, ಶಾಸಕ ಎಸ್.ಎ. ರಾಮದಾಸ್, ಮೇಯರ್ ಶಿವಕುಮಾರ್ ಮೊದಲಾದವರು ಇದ್ದರು.
ಮುಂದಿನ ಅಧಿವೇಶನದಲ್ಲಿ ಸಭಾಪತಿ ಚುನಾವಣೆ: ವಿಧಾನಪರಿಷತ್ತಿನ ಸಭಾಪತಿ ಸ್ಥಾನದ ಚುನಾವಣೆ ಮುಂದಿನ ವಿಧಾನಮಂಡಲದ ಅಧಿವೇಶನದಲ್ಲಿ ನಡೆಯಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಹೀಗಾಗಿ, ಆ ಸ್ಥಾನದ ನಿರೀಕ್ಷೆ ಇಟ್ಟುಕೊಂಡಿರುವ ಹಾಗೂ ಪಕ್ಷದ ನಾಯಕರು ಮಾತು ಕೊಟ್ಟಿರುವ ಬಸವರಾಜ ಹೊರಟ್ಟಿಅವರು ಇನ್ನಷ್ಟುದಿನಗಳ ಕಾಲ ಸಭಾಪತಿ ಸ್ಥಾನಕ್ಕಾಗಿ ಕಾಯಬೇಕಾಗಿದೆ. ಆಗಲೂ ಅವರನ್ನೇ ಸಭಾಪತಿಯನ್ನಾಗಿ ಮಾಡುತ್ತಾರೆಯೇ ಎಂಬುದರ ಬಗ್ಗೆ ಮುಖ್ಯಮಂತ್ರಿಗಳೂ ಚಕಾರ ಎತ್ತಿಲ್ಲ.
ಹೆಜ್ಜೆ ಹೆಜ್ಜೆಗೂ ಕಾಂಗ್ರೆಸ್ ಹಗರಣಗಳಿವೆ: ಸಿಎಂ ಬೊಮ್ಮಾಯಿ
ಸುದ್ದಿಗಾರರೊಂದಿಗೆ ಮಾತನಾಡಿದ ಬೊಮ್ಮಾಯಿ ಅವರು, ಮುಂದಿನ ಅಧಿವೇಶನದಲ್ಲಿ ಸಭಾಪತಿ ಸ್ಥಾನದ ಚುನಾವಣೆ ನಡೆಯಲಿದೆ ಎಂದಷ್ಟೇ ಹೇಳಿದರು. ಈ ತಿಂಗಳ 21ರಂದು ಸಭಾಪತಿ ಸ್ಥಾನದ ಚುನಾವಣೆ ನಡೆಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ನಿರ್ಣಯ ಕೈಗೊಂಡು ರಾಜ್ಯಪಾಲರಿಗೆ ಪ್ರಸ್ತಾವನೆ ಕಳುಹಿಸಲು ಸರ್ಕಾರ ಸಜ್ಜಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಪಕ್ಷದಿಂದ ಸೂಚನೆ ಬಂದ ಹಿನ್ನೆಲೆಯಲ್ಲಿ ಪ್ರಸ್ತಾವನೆಗೆ ಬ್ರೇಕ್ ಹಾಕಲಾಯಿತು.