ರಾಮಮಂದಿರದಲ್ಲಿ ರಾಜಕಾರಣ ಮಾಡುತ್ತಿರುವುದು ಕಾಂಗ್ರೆಸ್: ಪ್ರಲ್ಹಾದ್ ಜೋಶಿ
ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕಾಂಗ್ರೆಸ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು.
ಹುಬ್ಬಳ್ಳಿ (ಜ.17): ರಾಮಮಂದಿರ ಉದ್ಘಾಟನೆ ವಿಷಯದಲ್ಲಿ ನಾವು ರಾಜಕಾರಣ ಮಾಡುತ್ತಿಲ್ಲ. ರಾಜಕಾರಣ ಮಾಡುತ್ತಿರುವುದು ಯಾರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ ಎಂದು ಕಾಂಗ್ರೆಸ್‌ಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ತಿರುಗೇಟು ನೀಡಿದರು. ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯ ಮುಗಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಾವು ಎಲ್ಲರಿಗೂ ಆಹ್ವಾನ ನೀಡಿದ್ದೇವೆ. ಅವರು ಸಹಜವಾಗಿ ಬಂದಿದ್ದರೆ ಯಾವುದೇ ಬಗೆಯ ಚರ್ಚೆನೂ ಆಗುತ್ತಿರಲಿಲ್ಲ. ಆದರೆ, ಎಲ್ಲಿ ಹೋದರೆ ಮತ ಸಿಗುತ್ತದೆ. ಎಲ್ಲಿ ಹೋದರೆ ಸಿಗಲ್ಲ ಎಂದು ಲೆಕ್ಕಾಚಾರ ಹಾಕಿ ಶ್ರೀರಾಮಮಂದಿರ ಉದ್ಘಾಟನೆಯನ್ನು ಬಹಿಷ್ಕರಿಸಿದರು.
ಹೀಗಾಗಿ ಇದು ಜನಮಾನಸದಲ್ಲಿ ಚರ್ಚೆಗೆ ಕಾರಣವಾಗಿದೆ. ರಾಜಕಾರಣ ಮಾಡುತ್ತಿರುವುದು ನಾವಲ್ಲ ಅವರು ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು. ನಾನು ಅಥವಾ ಯಾವುದೇ ಪ್ರಮುಖ ನಾಯಕರು ಆ ರೀತಿ ಪ್ರತಿಕ್ರಿಯೆ ನೀಡಿಲ್ಲ. ಕಾಂಗ್ರೆಸ್‌ನವರು ರಾಮಮಂದಿರ ಉದ್ಘಾಟನೆಗೆ ಬಂದರೆ ಸಂತೋಷ. ಆದರೆ ಬರಲಿಲ್ಲ ಅಂದರೂ ಓಕೆ ಎಂದ ಅವರು, ಕಾಂಗ್ರೆಸ್ಸಿಗರ ಟೀಕೆಗೆ ನಾವು ಪ್ರತಿಕ್ರಿಯೆ ನೀಡುತ್ತಿಲ್ಲ. ಜನರೇ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂದರು.ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳ ಮಸೀದಿ ನಿರ್ನಾಮ ಮಾಡುವ ಬಗ್ಗೆ ಅನಂತಕುಮಾರ ಹೆಗಡೆ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.
ಸಮಾಜಕ್ಕೆ ಹಾಲುಮತ ಸಮುದಾಯ ಕೊಡುಗೆ ಅನನ್ಯ: ಪ್ರಲ್ಹಾದ್ ಜೋಶಿ
ಹಾನಗಲ್ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಸರ್ಕಾರ ತುಷ್ಟಿಕರಣ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಸಿದ್ದರಾಮಯ್ಯ ನೈತಿಕ ಪೊಲೀಸ್ ಗಿರಿ ಬಗ್ಗೆ ದೊಡ್ಡ ದೊಡ್ಡದಾಗಿ ಮಾತನಾಡುತ್ತಿದ್ದರು. ಆದರೆ ಈಗ ಮಹಿಳೆಯೊಬ್ಬಳ ರೇಪ್ ಆಗಿದೆ. ಅದಕ್ಕೆ ಕಂಪ್ಲೇಂಟ್ ಕೊಟ್ಟಿದ್ದಾಳೆ. ಸರ್ಕಾರ, ಪೊಲೀಸರು, ಗೃಹಮಂತ್ರಿಗಳ ಧೋರಣೆ ಸರಿಕಾಣುತ್ತಿಲ್ಲ. ಇದನ್ನೆಲ್ಲ ನೋಡಿದರೆ ಸರ್ಕಾರ ಯಾರನ್ನೋ ರಕ್ಷಿಸಲು ಹೊರಟಿದೆ ಎನ್ನುವುದು ಸ್ಪಷ್ಟವಾಗಿ ಕಂಡು ಬರುತ್ತಿದೆ ಎಂದರು.
ಅಪರಾಧಿಗಳಿಗೆ ಜಾತಿ ಇರುವುದಿಲ್ಲ. ಆದಕಾರಣ ಜಾತಿ ಗಿತಿ ನೋಡದೇ ಪ್ರಕರಣವನ್ನು ಸರಿಯಾಗಿ ತನಿಖೆ ನಡೆಸಬೇಕು. ಇದಕ್ಕಾಗಿ ಪ್ರತ್ಯೇಕ ಎಸ್‌ಐಟಿ ಮಾಡಬೇಕು. ದಕ್ಷ ಅಧಿಕಾರಿಯನ್ನು ನೇಮಿಸಬೇಕು ಎಂದು ಒತ್ತಾಯಿಸಿದರು. ಅನ್ಯಜಾತಿಯವರು ಮಾಡಿದ್ದರೆ ದೊಡ್ಡದಾಗಿ ಮಾಡುತ್ತಿದ್ದರು. ಆದರೆ, ಆ ಯುವತಿ ತಮ್ಮ ಸಮುದಾಯದವರೇ ಮಾಡಿದ್ದಾರೆ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಆದರೂ ಅವರನ್ನು ರಕ್ಷಿಸಲು ಪ್ರಯತ್ನಿಸುತ್ತಿರುವುದೇಕೆ ಎಂದು ಪ್ರಶ್ನಿಸಿದ್ದಾರೆ. ತುಷ್ಟಿಕರಣ ಮಾಡುವುದನ್ನು ಬಿಟ್ಟು ಸರ್ಕಾರ ತನ್ನ ನಿಯತ್ತನ್ನು ತೋರಿಸಬೇಕು ಎಂದು ಆಗ್ರಹಿಸಿದರು.
ಘಟಬಂಧನದ ಅಸ್ತಿತ್ವ ಎಲ್ಲಿದೆ?: ಇಂಡಿಯಾ ಘಟಬಂಧನದ ಅಸ್ತಿತ್ವ ಎಲ್ಲಿದೆ ಎಂಬುದನ್ನು ತೋರಿಸಬೇಕಷ್ಟೇ. ಮಹಾರಾಷ್ಟ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳದಲ್ಲಿ ಜಗಳ ಆಡುತ್ತಿದ್ದಾರೆ. ಕೇರಳದಲ್ಲಿ ಕಮ್ಯುನಿಸ್ಟ್ ಸರ್ಕಾರ ಇದೆ. ಮನೆ ಮುರುಕ ಘಟಬಂಧನದಲ್ಲಿ ಸೋತರೆ ಗಾಂಧಿ ಕುಟುಂಬದ ಮೇಲೆ ಬರಬಾರದು ಎಂಬ ಕಾರಣಕ್ಕೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಮುಂದಕ್ಕೆ ತರಲಾಗುತ್ತಿದೆ. ಇದು ಖರ್ಗೆ ಅವರನ್ನು ಬಲಿ ಕೊಡುವ ಪ್ರಯತ್ನವಾಗಿದೆ ಅಷ್ಟೇ ಎಂದರು.
ರಾಮಮಂದಿರದ ಯಶಸ್ಸಿನ ಪಾಲು ಪಡೆಯಲು ಕಾಂಗ್ರೆಸ್ ಯತ್ನ: ಪ್ರಲ್ಹಾದ್ ಜೋಶಿ ಲೇವಡಿ
ಇಂಡಿಯಾ ಒಕ್ಕೂಟದಲ್ಲಿ ಹೊಂದಾಣಿಕೆಯೇ ಇಲ್ಲ. ಉತ್ತರ ಪ್ರದೇಶದಲ್ಲಿ ಎರಡೇ ಸೀಟು ಕೊಟ್ಟರೂ ಅಲ್ಲಿ ಮೈತ್ರಿ ಮಾಡಿಕೊಳ್ಳುತ್ತೇವೆ ಎಂದು ಕಾಂಗ್ರೆಸ್‌ನವರೇ ಹೇಳುತ್ತಿದ್ದಾರೆ. ಯಾರೊಂದಿಗಾದರೂ ಮೈತ್ರಿ ಮಾಡಿಕೊಳ್ಳುವುದರಿಂದ ಕಾಂಗ್ರೆಸ್ ಸೋಲುವುದು ಗ್ಯಾರಂಟಿ. ಜಗ್ಗೇಶ ಭಾಷೆಯಲ್ಲೇ ಹೇಳಬೇಕೆಂದರೆ ಢಮಾರ್ ಆಗುವುದು ಗ್ಯಾರಂಟಿ. ಹೀಗಾಗಿ, ಖರ್ಗೆ ಅವರನ್ನು ಬಲಿ ಕೊಡುತ್ತಿದ್ದಾರಷ್ಟೇ ಎಂದರು.