ಬಿಜೆಪಿ-ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ಸಿಗೆ ಭಯ: ಎಚ್.ಡಿ.ರೇವಣ್ಣ
ಕೆಎಂಎಫ್‌ನಿಂದ ನೇರವಾಗಿ ರೈತರಿಂದಲೇ ಮೆಕ್ಕೆ ಜೋಳ ಖರೀದಿ ಮಾಡಿ ಎಂದು ಒತ್ತಾಯ ಮಾಡಿದ್ದ ರೇವಣ್ಣ ಅವರಿಗೆ, ‘ಅವರೇ ನಿರ್ದೇಶಕರಲ್ಲವೇ. ಅವರೇ ಕೆಎಂಎಫ್ ನಲ್ಲಿ ಒತ್ತಾಯ ಮಾಡಬಹುದಲ್ಲವೇ’ ಎಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರ ಹೇಳಿಕೆಗೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಗುರುವಾರ ತಿರುಗೇಟು ನೀಡಿದ್ದಾರೆ.
ಹಾಸನ (ಅ.13): ಕೆಎಂಎಫ್‌ನಿಂದ ನೇರವಾಗಿ ರೈತರಿಂದಲೇ ಮೆಕ್ಕೆ ಜೋಳ ಖರೀದಿ ಮಾಡಿ ಎಂದು ಒತ್ತಾಯ ಮಾಡಿದ್ದ ರೇವಣ್ಣ ಅವರಿಗೆ, ‘ಅವರೇ ನಿರ್ದೇಶಕರಲ್ಲವೇ. ಅವರೇ ಕೆಎಂಎಫ್ ನಲ್ಲಿ ಒತ್ತಾಯ ಮಾಡಬಹುದಲ್ಲವೇ’ ಎಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ರಾಜಣ್ಣ ಅವರ ಹೇಳಿಕೆಗೆ ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ ಗುರುವಾರ ತಿರುಗೇಟು ನೀಡಿದ್ದಾರೆ. ‘ನಾನು ನಿರ್ದೇಶಕನಾಗಿ ನನ್ನ ಕೆಲಸ ನಾನು ಮಾಡಿದ್ದೇನೆ. ಅವರು ಸಹಕಾರ ಸಚಿವರಲ್ಲವೆ ಅವರ ಕೆಲಸ ಅವರು ಮಾಡಲಿ’ ಎಂದು ಮೂದಲಿಸಿದ್ದಾರೆ. ನಗರದ ಸಂಸದರ ನಿವಾಸದಲ್ಲಿ ಗುರುವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ಕೆಎಂಎಫ್ ನಿರ್ದೇಶಕನಾಗಿ ಸಂಬಂಧಪಟ್ಟ ಎಲ್ಲಾ ಇಲಾಖೆಗೆ ನಾನು ಪತ್ರ ಬರೆದಿದ್ದೇನೆ.
14,500 ಮೆಟ್ರಿಕ್ ಟನ್ ಪ್ರತಿ ತಿಂಗಳು ಜೋಳ ಪಶು ಅಹಾರಕ್ಕೆ ಬೇಕು. ರಾಜ್ಯದ ಸಹಕಾರಿ ಸಚಿವರಿಗೆ ಈ ಬಗ್ಗೆ ಪತ್ರ ಬರೆದಿದ್ದೇನೆ. ಸಂಬಂಧಪಟ್ಟ ಎಲ್ಲಾ ಇಲಾಖೆಗೆ ನಾನು ಕೆಎಂಎಫ್ ನಿರ್ದೇಶಕನಾಗಿ ಪತ್ರ ಬರೆದಿದ್ದೇನೆ. ನಿರ್ದೇಶಕನಾಗಿ ನನ್ನ ಕರ್ತವ್ಯ ಮಾಡಿದ್ದೇನೆ. ನಾವು ಲೂಟಿ ಮಾಡಬೇಕು, ನಮ್ಮ ಸರ್ಕಾರ ಇರೋದು ಐದು ವರ್ಷ, ಲೂಟಿ ಮಾಡಲೇಬೇಕು ಎಂದು ನಿಮ್ಮ ಭಾವನೆ ಇದ್ದರೆ ಏನು ಮಾಡಲು ಆಗುವುದಿಲ್ಲ. ಕೆಎಂಎಫ್ ಹುಂಡಿ ದುಡ್ಡು ಹೊಡಿಬೇಕು ಎಂದರೆ ನಾವೇನು ಮಾಡಲು ಆಗುತ್ತದೆ? ನಾನು ಮಾಜಿ ಸಚಿವನಾಗಿ ಕೆಎಂಎಫ್ ಸಭೆಗೆ ಬಾಗಿಯಾಗಿದ್ದೇನೆ. ನಾನು ಕೇಳದೆ ಇದ್ದರೂ ಸಹಕಾರಿ ಸಚಿವರಾಗಿ, ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಮಾಡಬೇಕಲ್ಲವೇ ಎಂದು ಪ್ರಶ್ನೆ ಮಾಡಿದರು.
ಸ್ವಲ್ಪ ದಿನ ಗ್ಯಾರಂಟಿ ಯೋಜನೆ ನಿಲ್ಲಿಸಿ ರೈತರ ಉಳಿಸಿ: ರಾಜ್ಯ ಸರ್ಕಾರಕ್ಕೆ ರೇವಣ್ಣ ಒತ್ತಾಯ
‘ಜಿಲ್ಲೆಯಲ್ಲಿ ಎನ್.ಡಿ.ಆರ್.ಎಫ್ ಮಾರ್ಗಸೂಚಿ ಪ್ರಕಾರವೇ ದೊಡ್ಡ ಪ್ರಮಾಣದಲ್ಲಿ ರಾಗಿ ಜೋಳ ಬೆಳೆ ನಷ್ಟವಾಗಿದೆ. 73,950 ಹೆಕ್ಟೇರ್ ರಾಗಿ, ಜೋಳ ಬೆಳೆ ನಾಶವಾಗಿದೆ. ಅಧಿಕಾರಿಗಳ ಪ್ರಕಾರವೇ ಜಿಲ್ಲೆಯಲ್ಲಿ 64 ಕೋಟಿ 77 ಲಕ್ಷ ರು. ಮೌಲ್ಯದ ಬೆಳೆ ನಾಶವಾಗಿದೆ. 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹೂವಿನ ಬೆಳೆ ನಾಶವಾಗಿದೆ. ಜಿಲ್ಲೆಯಲ್ಲಿ ಏಳು ಸಾವಿರ ಹೆಕ್ಟೇರ್ ಆಲೂಗಡ್ಡೆ ಬೆಳೆ ನಾಶವಾಗಿದೆ. ತೆಂಗು ಬೆಳೆ ಕೂಡ ರೋಗದಿಂದ ನಾಶವಾಗುವ ಆತಂಕ ಇದೆ. ಈ ಸರ್ಕಾರಕ್ಕೆ ಇದನ್ನು ಗಮನಿಸಲು ಟೈಂ ಇಲ್ಲ. ಇವರದು ಬೇರೆ ಕೆಲಸ. ಕೆಎಂಎಫ್ ಅನ್ನು ಲೂಟಿ ಹೊಡೆಯುವವರೆಗೆ ಬಿಡುವುದಾದರೆ ಬಿಟ್ಟು ಬಿಡಲಿ’ ಎಂದು ಬೇಸರ ವ್ಯಕ್ತಪಡಿಸಿದರು.
ಅ.10ರ ರಾತ್ರಿ ತಮ್ಮ ಆಪ್ತ ಅಶ್ವಥ್ ನಾರಾಯಣ್ ಮೇಲೆ ದಾಳಿ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿ, ‘ಎಸ್.ಪಿ.ಜಿ. ಭದ್ರತೆ ಇದ್ದಾಗಲೇ ನಮ್ಮ ತಾಯಿ ಮತ್ತು ಪತ್ನಿ ಮೇಲೆ ಆಸಿಡ್ ದಾಳಿ ಆಗಿತ್ತು. ಇನ್ನು ಹಾಡಹಗಲೆ ಕೃಷ್ಣೇಗೌಡರ ಕೊಲೆಯಾಗಿ ಎರಡು ತಿಂಗಳುಗಳೆ ಕಳೆದಿದೆ. ಈ ಪ್ರಕರಣದ ಪ್ರಮುಖ ಆರೋಪಿಯೇ ಪೊಲೀಸರ ಕಣ್ಣು ತಪ್ಪಿಸಿಕೊಂಡು ತಿರುಗಾಡುತ್ತಿದ್ದಾರೆ. ತಿಂಗಳಲ್ಲಿ ಎಂಪಿ ಚುನಾವಣೆ ಬರುತ್ತದೆ. ನಾವೇನಾದರೂ ಹೆದರಿಕೊಂಡು ಕೂರುತ್ತೇವೆ ಅಂದುಕೊಳ್ಳೋದು ಬೇಡಾ! ಹಾಸನದ ಎಸ್ಪಿ ಹೊಸಬರಿದ್ದಾರೆ. ಕೆಲಸ ಮಾಡುತ್ತಿದ್ದಾರೆ. ಅವರು ತನಿಖೆ ಮಾಡುತ್ತಿದ್ದಾರೆ. ಹಾಗಾಗಿ ನಾನು ಏನೂ ಮಾತನಾಡುವುದಿಲ್ಲ. ಜಿಲ್ಲೆಯಲ್ಲಿ ರೌಡಿಗಳನ್ನು ಮಟ್ಟ ಹಾಕಬೇಕು, ಮಟ್ಕ ದಂಧೆ ನಿಲ್ಲಿಸಬೇಕು’ ಎಂದರು.
ಜ್ವರಕ್ಕೆ ಕಾರಣ ಪತ್ತೆ ಹಚ್ಚುವ ಉಪಕರಣ ಕಂಡು ಹಿಡಿದ ಯುವ ವಿಜ್ಞಾನಿ ಕೋಮಲ್!
ಮೈತ್ರಿಯಿಂದ ಕಾಂಗ್ರೆಸ್‌ಗೆ ಭಯ: ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿ, ‘ನಾವು ಮೈತ್ರಿ ಯಾರ ಜೊತೆಯಲ್ಲಾದರೂ ಮಾಡಿಕೊಳ್ತೀವಿ, ಇವರಿಗೇನು ಹೊಟ್ಟೆ ಉರಿ? 135 ಸೀಟು ಇಟ್ಟುಕೊಂಡು ಕಾಂಗ್ರೆಸ್ ಕರೆಯುತ್ತಿದೆ. ಚುನಾವಣೆ ಬಂದಾಗ ನಾವು ಸೀಟ್ ಹಂಚಿಕೆ ಬಗ್ಗೆ ಮಾತಾಡುತ್ತೇವೆ. ಮೈತ್ರಿಯಿಂದ ಈ ರಾಜ್ಯದಲ್ಲಿ ಆಡಳಿತ ಪಕ್ಷಕ್ಕೆ ಭಯ ಶುರುವಾಗಿರಬೇಕು’ ಎಂದು ರೇವಣ್ಣ ಚೇಡಿಸಿದರು.