ಬೆಂಗಳೂರು, (ಜ.12): ರಾಜ್ಯ ಕಾಂಗ್ರೆಸ್‌ನಲ್ಲಿ CLP ನಾಯಕ ಹಾಗೂ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಪ್ರಕ್ರಿಯೆ ಬಿರುಸುಗೊಂಡಿದೆ. ಮುಂದಿನ ವಾರದಲ್ಲಿ ಬಹುತೇಕ ಈ ಸ್ಥಾನಗಳಿಗೆ ಹೈಕಮಾಂಡ್ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಿದೆ. 

ಈ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಿದ್ದರಾಮಯ್ಯಗೆ ಬುಲಾವ್ ನೀಡಿದ್ದು, ಭಾರೀ ಕುತೂಹಲ ಮೂಡಿಸಿದೆ.

ಡಿಕೆಶಿಗೆ ಪ್ರಭಾವಿ ನಾಯಕ ಅಡ್ಡಗಾಲು: KPCC ಅಧ್ಯಕ್ಷ ಹುದ್ದೆ 3ನೇ ವ್ಯಕ್ತಿ ಪಾಲು..?

ಸೋನಿಯಾ ಸೂಚನೆ ಮೇರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಾಳೆ ಅಂದ್ರೆ ಸೋಮವಾರ ದೆಹಲಿಗೆ ತೆರಳಲಿದ್ದಾರೆ. ಮಂಗಳವಾರ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಿ ರಾಜ್ಯ ಕಾಂಗ್ರೆಸ್‌ ಸ್ಥಿತಿಗತಿ ಬಗ್ಗೆ  ಮಾತುಕತೆ ನಡೆಸಲಿದ್ದಾರೆ ಎನ್ನುವ ಮಾಹಿತಿ ತಿಳಿದುಬಂದಿದೆ.

ಕೆಪಿಸಿಸಿ  ಹುದ್ದೆಯನ್ನು ಒಕ್ಕಲಿಗರಿಗೆ ಕೊಡಬೇಕೋ ಅಥವಾ ಲಿಂಗಾಯತರಿಗೆ ನೀಡಬೇಕೋ ಎನ್ನುವ ಗೊಂದಲದಲ್ಲಿ ಹೈಕಮಾಂಡ್ ಇದೆ. ಇದರಿಂದ ಸಿದ್ದರಾಮಯ್ಯನವರ ಅಭಿಪ್ರಾಯ ತಿಳಿದುಕೊಳ್ಳಲು ದೆಹಲಿಗೆ ಬರುವಂತೆ ಸೂಚಿಸಿದೆ.

KPCC ಅಧ್ಯಕ್ಷ ಕುರ್ಚಿಗೆ ಮತ್ತೊಂದು ಕರ್ಚಿಫ್ : ನಾನೂ ಆಕಾಂಕ್ಷಿ ಎಂದ ಮಾಜಿ ಶಾಸಕ

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಮಾಜಿ ಸಚಿವ ಡಿ. ಕೆ. ಶಿವಕುಮಾರ್ ಹೆಸರು ಫಿಕ್ಸ್ ಆಗಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಎನ್ನಲಾಗಿತ್ತು. ಆದ್ರೆ, ಇದೀಗ ಸಿದ್ದು ಅವರು ಲಿಂಗಾಯತ ಸಮುದಾಯಕ್ಕೆ ಕೊಡಬೇಕಿದ್ರೆ ಎಂ. ಬಿ. ಪಾಟೀಲ್, ಈಶ್ವರ್ ಖಂಡ್ರೆ, ಒಕ್ಕಲಿಗರಿಗೆ ನೀಡುವುದಾದರೆ ಕೃಷ್ಣಬೈರೇಗೌಡ ಅವರಿಗೆ ಕೊಡಿ ಎಂದು ಈಗಾಗಲೇ ಹೈಕಮಾಂಡ್‌ಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಇದರಿಂದ ಹೈಕಮಾಂಡ್ ಗೊಂದಲದಲ್ಲಿ ಸಿಲುಕಿದ್ದು, ಅಂತಿಮವಾಗಿ ಸಿದ್ದರಾಮಯ್ಯ ಅವರನ್ನು ಎದುರಿಗೆ ಕೂರಿಸಿಕೊಂಡು ಚರ್ಚೆ ಮಾಡಲು ದೆಹಲಿ ಬರುವಂತೆ ಹೇಳಿದೆ. ಎಲ್ಲವೂ ಪರಿಪೂರ್ಣವಾಗಿ ನಡೆದರೆ, ಮಂಗಳವಾರವೇ ಕೆಪಿಸಿಸಿ ಅಧ್ಯಕ್ಷಕ್ಕೆ ಹೆಸರು ಫೈನಲ್ ಆಗಲಿದೆ.