Asianet Suvarna News Asianet Suvarna News

ಕರ್ನಾಟಕದಲ್ಲಿ ಸಿಎಂ ಬದಲಾವಣೆ ಚರ್ಚೆಗೆ ಕಾಂಗ್ರೆಸ್‌ ಹೈಕಮಾಂಡ್‌ ಬ್ರೇಕ್‌..!

ಇನ್ನು ಮುಂದೆ ಯಾವುದೇ ಬಣದ ನಾಯಕರು ಅಥವಾ ಶಾಸಕರು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಿದರೆ ಹೈಕಮಾಂಡ್ ನೇರ ಪ್ರವೇಶ ಮಾಡಿ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

Congress High Command Breaks Discussion on CM Change in Karnataka grg
Author
First Published Nov 2, 2023, 4:38 AM IST

ಬೆಂಗಳೂರು(ನ.02):  ಮುಖ್ಯಮಂತ್ರಿ ಬದಲಾವಣೆ, ಐವರು ಉಪ ಮುಖ್ಯಮಂತ್ರಿಗಳ ನೇಮಕ, ದಲಿತ ಮುಖ್ಯಮಂತ್ರಿ ಮೊದಲಾದ ವಿಚಾರಗಳನ್ನು ಮುಂದಿಟ್ಟುಕೊಂಡು ಆಂತರಿಕ ಮೇಲಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಬಣ ರಾಜಕಾರಣ ವಿಕೋಪ ಮುಟ್ಟುವ ಮುನ್ನ ಮಧ್ಯಪ್ರವೇಶ ಮಾಡಿರುವ ಕಾಂಗ್ರೆಸ್ ಹೈಕಮಾಂಡ್‌, ಪಕ್ಷಕ್ಕೆ ಹಾನಿಯಾಗುವ ಹೇಳಿಕೆ ನೀಡದೆ ಸಂಯಮ ಕಾಪಾಡುವಂತೆ ತಾಕೀತು ಮಾಡಿದೆ.

ಅಷ್ಟೇ ಅಲ್ಲದೆ, ಇನ್ನು ಮುಂದೆ ಯಾವುದೇ ಬಣದ ನಾಯಕರು ಅಥವಾ ಶಾಸಕರು ಪಕ್ಷಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡಿದರೆ ಹೈಕಮಾಂಡ್ ನೇರ ಪ್ರವೇಶ ಮಾಡಿ ಶಿಸ್ತು ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಸ್ಪಷ್ಟ ಎಚ್ಚರಿಕೆ ನೀಡಲಾಗಿದೆ.

ಅಡ್ಡದಾರಿಯೇ ಬಿಜೆಪಿಯವರ ಮನೆದೇವರು: ಸಚಿವ ಆರ್.ಬಿ.ತಿಮ್ಮಾಪೂರ

ಪಕ್ಷದ ವಿವಿಧ ಬಣಗಳ ನಡುವಿನ ಆಂತರಿಕ ಬೇಗುದಿ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಬುಧವಾರ ನಗರಕ್ಕೆ ಆಗಮಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದರು.

ಈ ಚರ್ಚೆಯ ವೇಳೆ ವಿವಿಧ ಬಣಗಳ ನಾಯಕರು ಹಾಗೂ ಶಾಸಕರು ನೀಡುತ್ತಿರುವ ಹೇಳಿಕೆ, ಲೋಕಸಭಾ ಚುನಾವಣಾ ಸಿದ್ಧತೆ, ಕೆಪಿಸಿಸಿ ಪುನಾರಚನೆ, ಕಾರ್ಯಾಧ್ಯಕ್ಷರ ನೇಮಕ ಹಾಗೂ ನಿಗಮ-ಮಂಡಳಿ ನೇಮಕ ವಿಚಾರಗಳ ಚರ್ಚೆಯಾಗಿವೆ.

ಈ ಸಂದರ್ಭ ರಾಜ್ಯ ಉಸ್ತುವಾರಿ ಸುರ್ಜೇವಾಲಾ ಅವರು ಪ್ರಮುಖವಾಗಿ ಪಕ್ಷಕ್ಕೆ ಹಾನಿಯಾಗುವ ಹೇಳಿಕೆಗಳನ್ನು ನಿಗ್ರಹಿಸುವಲ್ಲಿ ರಾಜ್ಯ ನಾಯಕರು ಮುಗುಂ ಆಗಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು ಎನ್ನಲಾಗಿದೆ.
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವ ಈ ಹಂತದಲ್ಲಿ ಪಕ್ಷಕ್ಕೆ ಹಾಗೂ ಸರ್ಕಾರದ ವರ್ಚಸ್ಸಿಗೆ ಹಾನಿಯಾಗುವ ಹೇಳಿಕೆಯನ್ನು ತಮ್ಮ ಬೆಂಬಲಿಗರು ನೀಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನ ನಾಯಕತ್ವದಿಂದ ಸಮರ್ಪಕವಾಗಿ ನಡೆದಿಲ್ಲ. ಈ ಧೋರಣೆ ಮುಂದುವರೆಯಬಾರದು. ಇನ್ನು ಮುಂದೆ ನಾಯಕ, ಶಾಸಕ, ಸಚಿವ ಅಥವಾ ಪಕ್ಷದ ಕಾರ್ಯಕರ್ತ ಯಾರೇ ಆಗಿದ್ದರೂ ಹೈಕಮಾಂಡ್ ನೇರ ಕ್ರಮ ಕೈಗೊಳ್ಳಲಿದೆ. ಆಗ ಪಕ್ಷದ ನಾಯಕರು ಹೇಳಿಕೆ ನೀಡಿದವರನ್ನು ರಕ್ಷಿಸುವ ಯತ್ನ ಮಾಡಬಾರದು ಎಂದು ಸೂಕ್ಷ್ಮವಾಗಿ ಹೇಳಿದರು ಎನ್ನಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ:

ಸಭೆಯ ನಂತರ ಪತ್ರಿಕಾಗೋಷ್ಠಿಯಲ್ಲೂ ಇದೇ ಧಾಟಿಯಲ್ಲಿ ಮಾತನಾಡಿದ ಉಸ್ತುವಾರಿ ಸುರ್ಜೇವಾಲಾ ಅವರು, ರಾಜ್ಯದಲ್ಲಿ ಪಕ್ಷ ಹಾಗೂ ಸರ್ಕಾರದ ಆಂತರಿಕ ವಿಚಾರಗಳನ್ನು ಯಾವುದೇ ಶಾಸಕ, ಸಚಿವ ಅಥವಾ ಪಕ್ಷದ ನಾಯಕರು ಬಹಿರಂಗವಾಗಿ ಮಾತನಾಡುವಂತಿಲ್ಲ. ಒಂದು ವೇಳೆ ಪಕ್ಷದ ಶಿಸ್ತು ಉಲ್ಲಂಘಿಸಿ ಮಾತನಾಡಿದರೆ ಸೂಕ್ತ ಕ್ರಮ ಜರುಗಿಸುತ್ತೇವೆ. ಅಗತ್ಯವಾದರೆ ಈ ಸಂಬಂಧ ವಿಪ್ ಜಾರಿ ಮಾಡುತ್ತೇವೆ ಎಂದು ಎಚ್ಚರಿಸಿದರು.

‘ಅಶಿಸ್ತಿನ ಹೇಳಿಕೆಗಳ ಬಗ್ಗೆ ನಮ್ಮ ಗಮನಕ್ಕೆ ಬಂದಿದೆ. ಈ ಬಗ್ಗೆಯೂ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಪಕ್ಷದ ಶಾಸಕರು ತಮ್ಮ ಕ್ಷೇತ್ರ ಹಾಗೂ ಜಿಲ್ಲೆಗೆ ಸಂಬಂಧಿಸಿದ ಅಭಿವೃದ್ಧಿ, ರಾಜ್ಯದ ಜನರಿಗೆ ಅನುಕೂಲವಾಗುವಂತಹ ನೀತಿಗಳ ಬಗ್ಗೆ ಯೋಚಿಸಿ, ಸಲಹೆ ನೀಡಬೇಕು. ಅದಷ್ಟೇ ಅವರ ಜವಾಬ್ದಾರಿ. ಇನ್ನು ಸಚಿವರು ತಮ್ಮ ಇಲಾಖೆ ಹಾಗೂ ಉಸ್ತುವಾರಿ ಜಿಲ್ಲೆಗಳ ಬಗ್ಗೆ ಗಮನಹರಿಸಬೇಕು. ಪಕ್ಷದ ಶಿಸ್ತಿನ ರೇಖೆ ಮೀರುವಂತಹ ಇತರೆ ಯಾವುದೇ ವಿಚಾರಗಳ ಬಗ್ಗೆ ಸಾರ್ವಜನಿಕವಾಗಿ ಮಾತನಾಡುವಂತಿಲ್ಲ. ಆ ರೀತಿ ಮಾತನಾಡುವುದು ಪಕ್ಷದ ಶಿಸ್ತಿನ ಉಲ್ಲಂಘನೆಯಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಅತೃಪ್ತಿ ಇದ್ದರೆ ನಮಗೆ ನೇರವಾಗಿ ಹೇಳಿ:

‘ಅಶಿಸ್ತಿನ ಹೆಳಿಕೆಗಳನ್ನು ಪಕ್ಷ ಸಹಿಸುವುದಿಲ್ಲ. ಪಕ್ಷದಲ್ಲಿ ಶಿಸ್ತು ಉಲ್ಲಂಘನೆ ಯಾರೇ ಮಾಡಿದರೂ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಗತ್ಯ ಬಿದ್ದರೆ ವಿಪ್ ಜಾರಿ ಮಾಡಬೇಕಾಗುತ್ತದೆ. ನಿಮ್ಮ ಧ್ವನಿಗೆ ಪಕ್ಷದಲ್ಲಿ ಅವಕಾಶವಿದೆ. ನೀವು ನಿಮ್ಮ ದೂರು, ಸಲಹೆ, ಅಭಿಪ್ರಾಯಗಳನ್ನು ಮುಖ್ಯಮಂತ್ರಿಗಳು, ಪಕ್ಷದ ಅಧ್ಯಕ್ಷರು ಅಥವಾ ನನ್ನ ಬಳಿ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಬೇಕೇ ಹೊರತು ಸಾರ್ವಜನಿಕವಾಗಿ ಅಲ್ಲ’ ಎಂದು ಹೇಳಿದರು.

ಅಧಿಕಾರ ಹಂಚಿಕೆ ಹೇಳಿಕೆಗಳ ಬಗ್ಗೆ ಪ್ರತಿಕ್ರಿಯಿಸಿ, ‘ಅದನ್ನೇ ಪದೇ ಪದೇ ಹೇಳುತ್ತಿದ್ದೇನೆ. ಅಧಿಕಾರ ಹಂಚಿಕೆಯ ಬಗ್ಗೆ ಚರ್ಚಿಸುವ ಅಧಿಕಾರ ಶಾಸಕರು, ಸಚಿವರಿಗೆ ಇಲ್ಲ. ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ಅವರ ಸಲಹೆಗಳು ಇದ್ದರೆ ಪಕ್ಷದ ವೇದಿಕೆಯಲ್ಲಿ ನೀಡಬಹುದು. ಅವರ ಮಿತಿಗಳನ್ನು ಅರಿತು ರಾಜ್ಯದ ಅಭಿವೃದ್ಧಿ, ನೀತಿ ನಿರೂಪಣೆಯಲ್ಲಿ ಕೆಲಸ ಮಾಡಬೇಕು’ ಎಂದರು.

ಕಾಂಗ್ರೆಸ್‌ನಲ್ಲಿ ಮತ್ತೆ ಬಾಂಬ್ ಸಿಡಿಸಿದ ಸಚಿವ ರಾಜಣ್ಣ: ಡಿಕೆಶಿ ಸೇರಿ 2 ಡಜನ್‌ ಜನರು ಸಿಎಂ ಆಗಲು ಅರ್ಹರಿದ್ದಾರೆ!

ಪತ್ರಿಕಾಗೋಷ್ಠಿಯಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್‌ ಹಾಗೂ ವಿಧಾನಪರಿಷತ್‌ ಸದಸ್ಯ ದಿನೇಶ್ ಗೂಳಿಗೌಡ ಹಾಜರಿದ್ದರು.

ಅಧಿಕಾರ ಹಂಚಿಕೆ ಸಚಿವರು, ಶಾಸಕರ ವ್ಯಾಪ್ತಿಯಲ್ಲಿಲ್ಲ

ಅಧಿಕಾರ ಹಂಚಿಕೆಯ ಬಗ್ಗೆ ಚರ್ಚಿಸುವ ಅಧಿಕಾರ ಶಾಸಕರು, ಸಚಿವರಿಗೆ ಇಲ್ಲ. ಅದು ಅವರ ವ್ಯಾಪ್ತಿಗೆ ಬರುವುದಿಲ್ಲ. ಸರ್ಕಾರ, ಪಕ್ಷದ ವರ್ಚಸ್ಸಿಗೆ ಧಕ್ಕೆಯಾಗುವಂತಹ ಹೇಳಿಕೆಯನ್ನು ಬೆಂಬಲಿಗರು ನೀಡುತ್ತಿದ್ದರೂ ಅದನ್ನು ತಡೆಯುವ ಪ್ರಯತ್ನವನ್ನು ರಾಜ್ಯ ನಾಯಕತ್ವ ಮಾಡಿಲ್ಲ. ಈ ಧೋರಣೆ ಮುಂದುವರಿಯಬಾರದು ಎಂದು ಕಾಂಗ್ರೆಸ್‌ ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ತಿಳಿಸಿದ್ದಾರೆ. 

Follow Us:
Download App:
  • android
  • ios