ಕರ್ನಾಟಕದ ಬಿಜೆಪಿ ಹಗರಣಗಳ ಪಟ್ಟಿ ಕೇಳಿದ ಕಾಂಗ್ರೆಸ್‌ ಹೈಕಮಾಂಡ್‌: ಸಂಸತಲ್ಲಿ ತಿರುಗೇಟು ನೀಡಲು ಪ್ಲ್ಯಾನ್‌..!

ಸಂಸತ್ತಿನಲ್ಲಿ ವಾಲ್ಮೀಕಿ ಮತ್ತು ಮುಡಾ ಹಗರಣಗಳ ಕುರಿತು ಮಾಡುತ್ತಿರುವ ಆರೋಪಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಕೇಳಿಬಂದಿರುವ ಆರೋಪಗಳ ಪಟ್ಟಿ ಸಿದ್ಧಪಡಿಸುವಂತೆ ವರಿಷ್ಠರು ಕೇಳಿದ್ದಾರೆ. ಈ ಆರೋಪಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ ಮುಂದಾಗಿದೆ.
 

Congress high command asked for list of BJP scams in Karnataka grg

ನವದೆಹಲಿ(ಜು.31):  ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿರುವ ವಾಲ್ಮೀಕಿ ನಿಗಮ ಮತ್ತು ಮುಡಾ ಹಗರಣಗಳ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು ಮಂಗಳವಾರ ದೆಹಲಿಗೆ ತೆರಳಿ ಪಕ್ಷದ ವರಿಷ್ಠರಿಗೆ ವಿವರಣೆ ನೀಡಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್‌ ಸೇರಿಕೊಂಡು ಸುಳ್ಳು ಆರೋಪ ಮಾಡುವ ಮೂಲಕ ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದ್ದು, ವರಿಷ್ಠರು ರಾಜ್ಯ ಕಾಂಗ್ರೆಸ್‌ ನೆರವಿಗೆ ಬರಬೇಕು ಎಂದು ಮನವಿ ಮಾಡಿದ್ದಾರೆ.

ಇದೇ ವೇಳೆ ಸಂಸತ್ತಿನಲ್ಲಿ ವಾಲ್ಮೀಕಿ ಮತ್ತು ಮುಡಾ ಹಗರಣಗಳ ಕುರಿತು ಮಾಡುತ್ತಿರುವ ಆರೋಪಕ್ಕೆ ಸೂಕ್ತ ಪ್ರತ್ಯುತ್ತರ ನೀಡಲು ರಾಜ್ಯ ಬಿಜೆಪಿ ಮುಖಂಡರ ವಿರುದ್ಧ ಕೇಳಿಬಂದಿರುವ ಆರೋಪಗಳ ಪಟ್ಟಿ ಸಿದ್ಧಪಡಿಸುವಂತೆ ವರಿಷ್ಠರು ಕೇಳಿದ್ದಾರೆ. ಈ ಆರೋಪಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ಕಾಂಗ್ರೆಸ್‌ ಮುಂದಾಗಿದೆ.

ಮುಡಾ ಹಗರಣಕ್ಕೆ ಸಚಿವ ಬೈರತಿ ಸುರೇಶ್ ನೇರ ಕಾರಣ, ಜೈಲಿಗೆ ಕಳಿಸಿ: ಎಚ್.ವಿಶ್ವನಾಥ್

ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ, ಪಕ್ಷದ ಕರ್ನಾಟಕ ಉಸ್ತುವಾರಿ ರಣದೀಪ್‌ಸಿಂಗ್‌ ಸುರ್ಜೇವಾಲ, ಮಾಜಿ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ಅವರನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಮನೆಯಲ್ಲಿ ಭೇಟಿಯಾದ ಮುಖಂಡರು ರಾಜ್ಯ ರಾಜಕೀಯ ಬೆಳವಣಿಗೆಗಳ ಕುರಿತು ಸುದೀರ್ಘ ಚರ್ಚೆ ನಡೆಸಿದರು.

ಬಳಿಕ ಸುದ್ದಿಗಾರರ ಜತೆಗೆ ಈ ವಿಚಾರವಾಗಿ ಮಾತನಾಡಿದ ಸಿದ್ದರಾಮಯ್ಯ, ಪಕ್ಷದ ಹೈಕಮಾಂಡ್‌ ಜತೆಗೆ ಕರ್ನಾಟಕದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಸಲಾಯಿತು. ನಾವು ಯಾವುದೇ ತಪ್ಪು ಮಾಡದಿದ್ದರೂ ಬಿಜೆಪಿ, ಜೆಡಿಎಸ್‌ನವರು ವಿನಾಕಾರಣ ಆರೋಪ ಮಾಡುತ್ತಿದ್ದಾರೆ. ರಾಜ್ಯ ನಾಯಕರ ಸಹಾಯಕ್ಕೆ ವರಿಷ್ಠರು ಬರಬೇಕು ಎಂದು ನಾವು ಮನವಿ ಮಾಡಿದ್ದೇವೆ ಎಂದು ತಿಳಿಸಿದರು.

ಜೆಡಿಎಸ್- ಬಿಜೆಪಿ ರಾಜ್ಯದಲ್ಲಿ ಸೇಡಿನ ರಾಜಕೀಯ ಮಾಡುತ್ತಿವೆ. ವಾಲ್ಮೀಕಿ ನಿಗಮ, ಮುಡಾ ಪ್ರಕರಣದಲ್ಲಿ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಎಸ್ಟಿಗೆ ಅನ್ಯಾಯ ಮಾಡಿದ್ದಾರೆ ಎಂದು ಬಿಜೆಪಿಯವರು ಆರೋಪ ಮಾಡುತ್ತಿದ್ದಾರೆ. ಇದೆಲ್ಲ ಸುಳ್ಳು. ಅಲ್ಲದೆ ಮುಡಾ ಸೈಟ್‌ ಹಂಚಿಕೆಯಲ್ಲೂ ಯಾವುದೇ ಕಾನೂನು ಉಲ್ಲಂಘನೆ ಆಗಿಲ್ಲ ಎಂದು ವರಿಷ್ಠರಿಗೆ ವಿವರಣೆ ಕೊಟ್ಟಿದ್ದೇವೆ ಎಂದು ಹೇಳಿದರು.

ನಾವು ಯಾವುದೇ ತಪ್ಪು ಮಾಡದಿದ್ದರೂ ಸುಖಾಸುಮ್ಮನೆ ಆರೋಪ ಮಾಡುತ್ತಿದ್ದಾರೆ. ಹೀಗಾಗಿ ಸಹಾಯಕ ಬರಬೇಕು ಎಂದು ಹೈಕಮಾಂಡ್ ನಾಯಕರಿಗೆ ಹೇಳಿದ್ದೇನೆ ಎಂದರು.

ನಾವು ಅವರಿಗೆ ಟಕ್ಕರ್‌ ಕೊಡ್ತೇವೆ-ಸಿಎಂ:

ಸುಳ್ಳು ಆರೋಪಗಳನ್ನು ಮಾಡಿ ಕಾಂಗ್ರೆಸ್ ಸರ್ಕಾರ ಅಸ್ಥಿರಗೊಳಿಸುಲು ಬಿಜೆಪಿ ಹೊರಟಿದೆ. ಕಾಂಗ್ರೆಸ್‌ ಸರ್ಕಾರ ಅಸ್ಥಿರಗೊಳಿಸುತ್ತೇವೆ ಎನ್ನುವುದು ಬಿಜೆಪಿ ಭ್ರಮೆ. ಬಿಜೆಪಿ ಪಾದಯಾತ್ರೆಗೆ ಟಕ್ಕರ್‌ ಕೊಡಲು ನಾವೂ ತಂತ್ರಗಾರಿಕೆ ಮಾಡುತ್ತೇವೆ. ಈ ಕುರಿತು ಬೆಂಗಳೂರಿಗೆ ಹೋಗಿ ಚರ್ಚೆ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.

ಪಾದಯಾತ್ರೆ ಮುಂದೂಡಲು ಬಿಜೆಪಿಗೆ ಜೆಡಿಎಸ್‌ ಮನವಿ: ಎರಡೇ ದಿನದಲ್ಲಿ ನಿಲುವು ಬದಲಾಗಿದ್ದೇಕೆ?

ಇದೇ ವೇಳೆ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಸಂಪೂರ್ಣ ವಿಫಲವಾಗಿದ್ದಾರೆ ಎಂದು ಆರೋಪಿಸಿದ ಸಿದ್ದರಾಮಯ್ಯ, ವಾಲ್ಮೀಕಿ ನಿಗಮ ಹಗರಣದ ವಿಚಾರವಾಗಿ ಯೂನಿಯನ್ ಬ್ಯಾಂಕ್ ಜನರಲ್ ಮ್ಯಾನೇಜರ್ ಮೇಲೆ ಅವರು ಏನು ಕ್ರಮ ತೆಗೆದುಕೊಂಡಿದ್ದಾರೆ ಎಂದು ಪ್ರಶ್ನಿಸಿದರು.

ಬಿಜೆಪಿ ನಾಯಕರ ಪಟ್ಟಿ ಕೊಡಿ:

ಮಾತುಕತೆ ವೇಳೆ ಬಿಜೆಪಿ ನಾಯಕರ ವಿರುದ್ಧ ಈ ಹಿಂದೆ ಕೇಳಿ ಬಂದಿರುವ ಆರೋಪಗಳ ವಿಚಾರವೂ ಪ್ರಸ್ತಾಪವಾಯಿತು ಎನ್ನಲಾಗಿದೆ. ಆಗ ವರಿಷ್ಠರು ರಾಜ್ಯ ಬಿಜೆಪಿ ನಾಯಕರ ವಿರುದ್ಧ ಕೇಳಿಬಂದಿರುವ ಆರೋಪ, ಹಗರಣಗಳ ಕುರಿತ ಪಟ್ಟಿಯನ್ನು ಸಿದ್ಧಪಡಿಸಿಕೊಡುವಂತೆ ಸೂಚಿಸಿದ್ದಾರೆ. ಆ ಪಟ್ಟಿಯನ್ನು ರಾಜ್ಯದ ಕಾಂಗ್ರೆಸ್‌ ಸಂಸದರಿಗೆ ನೀಡಿ ಸಂಸತ್ತಿನಲ್ಲಿ ಮುಡಾ ಮತ್ತು ವಾಲ್ಮೀಕಿ ನಿಗಮ ಹಗರಣ ಕುರಿತು ಧ್ವನಿ ಎತ್ತುವ ಬಿಜೆಪಿ ಸಂಸದರಿಗೆ ಸೂಕ್ತ ಪ್ರತ್ಯುತ್ತರ ನೀಡಲು ಕಾಂಗ್ರೆಸ್‌ ಸಜ್ಜಾಗಿದೆ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios