ಬೆಂಗಳೂರು(ಏ.03):  ಬೆಳಗಾವಿ ಲೋಕಸಭಾ ಉಪಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಪರ ಕಾರ್ಯ ನಿರ್ವಹಿಸಲು ಯುವ ಕಾಂಗ್ರೆಸ್‌ನ ರಾಜ್ಯ ಹಾಗೂ ಜಿಲ್ಲಾ ಘಟಕಗಳ 59 ಮಂದಿ ಪದಾಧಿಕಾರಿಗಳನ್ನು ನಿಯೋಜಿಸಲಾಗಿದೆ.

ಯುವ ಕಾಂಗ್ರೆಸ್‌ನ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಗಳು, ಕಾರ್ಯದರ್ಶಿಗಳು, ಜಿಲ್ಲಾ ಘಟಕಗಳ ಅಧ್ಯಕ್ಷರು, ಉಪಾಧ್ಯಕ್ಷರ ಪೈಕಿ ಆಯ್ದ 59 ಮಂದಿಗೆ ಉಪ ಚುನಾವಣಾ ಕಾರ್ಯದ ಜವಾಬ್ದಾರಿ ನೀಡಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಯುವ ಕಾಂಗ್ರೆಸ್‌ ಘಟಕದ ಪದಾಧಿಕಾರಿಗಳಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಭವ್ಯ ಕೆ.ಆರ್‌, ನಿಖಿಲ್‌ ಆರ್‌.ಕೊಂಡಜ್ಜಿ, ಪ್ರಸನ್ನ ಹಿರೇಮಠ, ಸಂತೊಷ್‌ ಶೆಟ್ಟಿ, ಮೃನಾಲ್‌ ಹೆಬಾಳ್ಕರ್‌, ಅಬ್ದುಲ್‌ ರೆಹಮಾನ್‌, ಪ್ರದೀಪ್‌ ಟಿ.ಎಸ್‌., ಅಭಿಷೇಕ್‌, ಅನಿಲ್‌ಕುಮಾರ್‌ ಎಸ್‌., ಚೈತ್ರಾ ವಿ., ಲಾವಣ್ಯ ಟಿ.ಎನ್‌. ಮಾರುತಿ, ಸಂಯುಕ್ತ ಪಾಟೀಲ್‌, ಸಂದೀಪ್‌ ಕುಮಾರ್‌, ಸವಿತಾ ಬಿ., ವಿನಯ್‌ ತಿಮ್ಮಾಪುರ್‌, ವಿವೇಕ್‌ ಯಾವಗಲ್‌, ಮಹೇಶ್‌ ಜಲವಾದಿ ಸೇರಿದಂತೆ ಇತರೆ ಪದಾಧಿಕಾರಿಗಳಿದ್ದಾರೆ.

'ನೀವು ಸಿಎಂ ಆಗಿರಿ ಉಳಿದ ಎಲ್ಲ ಖಾತೆಯ ಜವಾಬ್ದಾರಿ ವಿಜಯೇಂದ್ರಗೆ ಕೊಡಿ'

ಪಕ್ಷದ ಅಭ್ಯರ್ಥಿ ಪರ ಕಾರ್ಯ ನಿರ್ವಹಿಸಲು ಸಂಪೂರ್ಣ ಜವಾಬ್ದಾರಿ ನೀಡಿದ್ದು, ಅಭ್ಯರ್ಥಿ ಗೆಲುವಿಗಾಗಿ ಪಕ್ಷದ ಕೆಲಸದಲ್ಲಿ ಕೂಡಲೇ ಕಾರ್ಯೋನ್ಮುಖರಾಗಬೇಕು. ತಕ್ಷಣವೇ ಕ್ಷೇತ್ರಕ್ಕೆ ತೆರಳಿ ಕಾಂಗ್ರೆಸ್‌ ಅಭ್ಯರ್ಥಿ ಸತೀಶ್‌ ಜಾರಕಿಹೊಳಿ ಹಾಗೂ ಪಕ್ಷದ ಪ್ರಮುಖರ ಬಳಿ ವರದಿ ಮಾಡಿಕೊಳ್ಳಬೇಕು. ಹೆಚ್ಚಿನ ಸಮಯವನ್ನು ಕ್ಷೇತ್ರದಲ್ಲಿ ಪ್ರಚಾರಕ್ಕೆ ಮೀಸಲಿಡಬೇಕು. ನಿತ್ಯ ತಾವು ನಡೆಸುವ ಪ್ರಚಾರದ ಸಮಗ್ರ ಮಾಹಿತಿಯನ್ನು ಕೆಪಿಸಿಸಿ ನಿಯಂತ್ರಣ ಕೊಠಡಿಗೆ ವರದಿ ಮಾಡಬೇಕು ಎಂದು ಪ್ರದೇಶ ಯುವ ಕಾಂಗ್ರೆಸ್‌ನ ಅಧ್ಯಕ್ಷ ಎಂ.ಎಸ್‌.ರಕ್ಷಾ ರಾಮಯ್ಯ ಅವರು ಸೂಚಿಸಿದ್ದಾರೆ.