ಈ ಸರ್ಕಾರ 5 ವರ್ಷ ಇರುವುದಿಲ್ಲ, ಜೆಡಿಎಸ್ ಕಾರ್ಯಕರ್ತರು ಭಯಪಡಬೇಕಿಲ್ಲ: ಎಚ್‌ಡಿಕೆ
ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಜೆಡಿಎಸ್ ಚುರುಕಾಗಿದ್ದು, ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷೇತ್ರದ ವ್ಯಾಪ್ತಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು.
ಬೆಂಗಳೂರು (ಆ.23): ಯಶವಂತಪುರ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಖರ್ ಅವರು ತೊರೆದು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆ ಎಂಬ ವದಂತಿ ಬೆನ್ನಲ್ಲೇ ಜೆಡಿಎಸ್ ಚುರುಕಾಗಿದ್ದು, ಪಕ್ಷದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ ಕ್ಷೇತ್ರದ ವ್ಯಾಪ್ತಿಯ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಯಿತು. ಮಂಗಳವಾರ ಯಶವಂತಪುರ ವಿಧಾನಸಭಾ ಕ್ಷೇತ್ರದ ತಾವರೆಕೆರೆ ಹೋಬಳಿಯಲ್ಲಿ ಪರಾಜಿತ ಅಭ್ಯರ್ಥಿ ಜವರಾಯಿಗೌಡ ಸೇರಿದಂತೆ ನಡೆದ ಜೆಡಿಎಸ್ ಕಾರ್ಯಕರ್ತರ ಜತೆ ಕುಮಾರಸ್ವಾಮಿ ಸುಧೀರ್ಘವಾಗಿ ಸಮಾಲೋಚನೆ ನಡೆಸಿದರು.
ಈ ವೇಳೆ ಮಾತನಾಡಿದ ಅವರು, ಕಾಂಗ್ರೆಸ್‌ನಲ್ಲಿಯೇ ಕಿತ್ತಾಟ ಶುರುವಾಗಿದ್ದು, ಈ ಸರ್ಕಾರ ಐದು ವರ್ಷ ಇರುವುದಿಲ್ಲ. ಕಾರ್ಯಕರ್ತರು ಭಯಪಡಬೇಕಾದ ಅಗತ್ಯವಿಲ್ಲ. ಜೆಡಿಎಸ್ ಅನ್ನು ಸ್ವತಂತ್ರವಾಗಿ ಅಧಿಕಾರಕ್ಕೆ ತರುವವರೆಗೆ ವಿಶ್ರಮಿಸುವುದಿಲ್ಲ ಎಂದು ಹೇಳಿದರು. ಯಶವಂತಪುರ ವಿಧಾನಸಭೆ ಕ್ಷೇತ್ರಕ್ಕೆ ಬಿಡುಗಡೆಯಾಗಿದ್ದ ಹಣ ಏನಾಯಿತು? ಅದನ್ನು ರೈಲಿಗೆ ತೆಗೆದುಕೊಂಡು ಹೋದರಾ? ರಸ್ತೆ ಮಾಡದೆಯೇ ಬಿಲ್ ಮಾಡಿಕೊಂಡಿದ್ದಾರೆ ಎಂದು ಜನರು ಹೇಳುತ್ತಿದ್ದಾರೆ. ಉಪಮುಖ್ಯಮಂತ್ರಿ ನೋಡಿದರೆ ಈಗ ತನಿಖೆ ಮಾಡುತ್ತಿದ್ದಾರೆ. ಕಳ್ಳ ಬಿಲ್ ಮಾಡಿಕೊಂಡಿರುವವರನ್ನು ಕರೆದುಕೊಂಡು ಹೋಗಿ ಏನು ಮಾಡುತ್ತಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
‘ಅತೃಪ್ತ’ ಸೋಮಶೇಖರ್ ಸದ್ಯದಲ್ಲೇ ದಿಲ್ಲಿಗೆ ದೌಡು: ಕಾಂಗ್ರೆಸ್ ಪಕ್ಷ ಸೇರ್ಪಡೆ?
ಕಳೆದ ಬಾರಿ ಸೋಲು ಅನುಭವಿಸಿರುವ ಜವರಾಯಿಗೌಡ ಅವರನ್ನೇ ಮುಂದಿನ ಚುನಾವಣೆಗೂ ಕಣಕ್ಕಿಳಿಸಲಾಗುವುದು ಎಂಬುದನ್ನು ಈಗಲೇ ಹೇಳುವುದಿಲ್ಲ. ಆ ವೇಳೆಯ ಸನ್ನಿವೇಶ ಆಧರಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದರು. ಮೊದಲನೇ ಹಂತದ ಘರ್ ವಾಪಸ್ ಮಾಡಿಕೊಂಡಿದ್ದಾರೆ. ಆದರೆ, ನಾನು ಹೋಗುವುದಿಲ್ಲ ಎಂದು ಎಸ್.ಟಿ.ಸೋಮಶೇಖರ್ ಹೇಳುತ್ತಿದ್ದಾರೆ. ಮೈಸೂರು ಉಸ್ತುವಾರಿ ಸಚಿವರಾಗಿದ್ದ ಅವರಿಗೆ ಕೇಳಿದ್ದಕ್ಕೆಲ್ಲಾ ಮಾಜಿ ಮುಖ್ಯಮಂತ್ರಿಗಳು ಸಹಿ ಹಾಕಿದ್ದರು. ಅಭಿವೃದ್ಧಿಗಾಗಿ ಕಾಂಗ್ರೆಸ್ ಹೋಗುತ್ತಿದ್ದೇನೆ ಎಂದು ಹೇಳುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಹಾಗಾದರೆ ಇವರು ಸಂಪೂರ್ಣವಾಗಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂದು ಆಯಿತಲ್ಲವೇ? ಮೂರು ವರ್ಷಗಳಿಂದ ಈ ಕ್ಷೇತ್ರಕ್ಕೆ ಅವರು ಏನು ಮಾಡಿದರು ಎಂದು ಟಾಂಗ್ ಕೊಟ್ಟರು.