ರಾಜ್ಯದಲ್ಲಿ ಇನ್ನಷ್ಟು ಮದ್ಯದಂಗಡಿ ಲೈಸೆನ್ಸ್ ನೀಡಲು ಕಾಂಗ್ರೆಸ್ ಸರ್ಕಾರ ಸಜ್ಜು
389 ಹೆಚ್ಚುವರಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ, 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಬೆಂಗಳೂರು (ಸೆ.23): ರಾಜ್ಯದಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆಗಳ ಲೈಸೆನ್ಸ್ ವಿತರಣೆಗೆ ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ಸಿದ್ಧಗೊಂಡಿದೆ. 389 ಹೆಚ್ಚುವರಿ ಎಂಎಸ್‌ಐಎಲ್ ಮದ್ಯ ಮಾರಾಟ ಮಳಿಗೆ, 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯ್ತಿಗಳ ವ್ಯಾಪ್ತಿಯಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಪರವಾನಗಿ ಹಾಗೂ ಸೂಪರ್ ಮಾರುಕಟ್ಟೆಗಳಲ್ಲೂ ಮದ್ಯ ಮಾರಾಟ ಮಳಿಗೆ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಸಂಪನ್ಮೂಲ ಕ್ರೋಡೀಕರಣಕ್ಕೆ ಸಂಬಂಧಿಸಿದಂತೆ 2023-24ನೇ ಸಾಲಿಗೆ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಅಬಕಾರಿ ಇಲಾಖೆಯು ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದರಲ್ಲಿ ಹೊಸದಾಗಿ ಮದ್ಯ ಮಾರಾಟ ಮಳಿಗೆ ಲೈಸೆನ್ಸ್ ವಿತರಣೆ ಮಾಡುವ ಬಗ್ಗೆ ಪ್ರಸ್ತಾಪಿಸಿರುವುದು ವಿವಾದಕ್ಕೆ ಕಾರಣವಾಗಿದೆ.
ಇನ್ನು ದಶಕಕ್ಕೂ ಹಿಂದೆ ಸ್ಥಗಿತಗೊಂಡಿರುವ ಆರ್.ವಿ.ಬಿ. (ಸ್ವತಂತ್ರ ಬಿಯರ್ ಮಾರಾಟ ಮಳಿಗೆ) ಪರವಾನಗಿಗಳನ್ನು ಪುನರ್ ವಿತರಣೆ ಮಾಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈಗಾಗಲೇ ರಾಜ್ಯದಲ್ಲಿ ಒಟ್ಟು 12,593 ವಿವಿಧ ಪರವಾನಗಿಗಳ ಮದ್ಯ ಮಾರಾಟ ಮಳಿಗೆಗಳಿವೆ. ಇದೀಗ ಹೊಸದಾಗಿ 389 ಎಂಎಸ್‌ಐಎಲ್ (ಸಿಎಲ್-11ಸಿ) ಶಾಪ್ ತೆರೆಯಲು ಅನುಮತಿ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪೈಕಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಭಾಗದಲ್ಲಿ 91, ಬೆಳಗಾವಿ 20, ಕಲಬುರಗಿ 20, ಹೊಸಪೇಟೆ 22, ಮಂಗಳೂರು 51, ಮೈಸೂರು ನಗರದಲ್ಲಿ 43 ಪರವಾನಗಿ ನೀಡಬಹುದು ಎಂದು ಅಬಕಾರಿ ಇಲಾಖೆ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ಡಿಸಿಎಂ ಹುದ್ದೆ ಆಸೆ ಪಡೋರಿಗೆ ನಾನು ಉತ್ತರ ಕೊಡೋದಿಲ್ಲ: ಡಿಕೆಶಿ
3 ಸಾವಿರ ಜನಸಂಖ್ಯೆಗೆ ಮದ್ಯ ಮಾರಾಟ ಮಳಿಗೆ: ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಹೊಸ ಮದ್ಯದಂಗಡಿ ತೆರೆಯಲು ಅವಕಾಶ ನೀಡಬೇಕು. 3 ಸಾವಿರ ಜನಸಂಖ್ಯೆ ಇರುವ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಸಿಎಲ್ -6ಎ, ಸಿಎಲ್ -7, ಸಿಎಲ್ -7ಎ ಸನ್ನದು (ಲೈಸೆನ್ಸ್) ಮಂಜೂರು ಮಾಡಬಹುದು ಎಂದು ಹೇಳಲಾಗಿದೆ.
ಬೇನಾಮಿ ಗುತ್ತಿಗೆ ಸಕ್ರಮ: ರಾಜ್ಯದಲ್ಲಿ ಪರವಾನಗಿದಾರರ ಅಥವಾ ಸನ್ನದುದಾರರ ಬದಲಿಗೆ ಬೇನಾಮಿ ವ್ಯಕ್ತಿಗೆ ಗುತ್ತಿಗೆ ನೀಡಿ ಸುಮಾರು ಶೇ.40ರಷ್ಟು ಮಳಿಗೆಗಳು ನಡೆಯುತ್ತಿವೆ. ಇವುಗಳನ್ನು ಸನ್ನದು ಶುಲ್ಕ ಹಾಗೂ ಹೆಚ್ಚುವರಿ ಶೇ.25ರಷ್ಟು ಶುಲ್ಕ ಪಾವತಿಸಿ ಸಕ್ರಮಗೊಳಿಸಬಹುದು. ಇನ್ನು ಸನ್ನದು ವರ್ಗಾವಣೆ ಶುಲ್ಕ ನಾಲ್ಕು ಪಟ್ಟು ಹೆಚ್ಚಳ ಮಾಡಬಹುದು. ಪ್ರಸ್ತುತ ಸ್ಥಗಿತಗೊಂಡ ಸನ್ನದುದಾರರಿಗೆ ಒಂದು ತಿಂಗಳ ನೋಟಿಸ್ ನೀಡಿ ಮತ್ತೆ ಸಕ್ರಿಯಗೊಳಿಸಲು ಬಾರದಿದ್ದರೆ ಹರಾಜು ಮಾಡಬಹುದು ಎಂದೂ ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.
ರೀಟೆಲ್ ವೆಂಡ್ ಆಫ್ ಬಿಯರ್ (ಆರ್.ವಿ.ಬಿ): ಹೊಸದಾಗಿ ಸ್ವತಂತ್ರ ಆರ್.ವಿ.ಬಿ. ಲೈಸೆನ್ಸ್ ನೀಡಿ ಸನ್ನದು ಶುಲ್ಕವನ್ನು 2 ಲಕ್ಷ ರು.ಗಳಿಗೆ ನಿಗದಿ ಮಾಡಲು ಪ್ರಸ್ತಾಪಿಸಲಾಗಿದೆ. ರಾಜ್ಯದಲ್ಲಿ 10 ವರ್ಷಗಳ ಹಿಂದೆಯೇ ಆರ್.ವಿ.ಬಿ. ಲೈಸೆನ್ಸ್ ಸ್ಥಗಿತಗೊಳಿಸಲಾಗಿತ್ತು. ಕೇವಲ ಬಿಯರ್‌ನ್ನು ಚಿಲ್ಲರೆಯಾಗಿ ಮಾರಾಟ ಮಾಡಲು ನೀಡುವ ಪರವಾನಿಗಯನ್ನು ಸ್ವಂತ್ರವಾಗಿ 71 ಮಂದಿ ಪಡೆದಿದ್ದಾರೆ. ಉಳಿದಂತೆ ಸ್ಟಾರ್ ಹೋಟೆಲ್, ಸಿಎಲ್-7 ಮತ್ತಿತರ ಕಡೆ ಹೆಚ್ಚುವರಿಯಾಗಿ ಕೆಗ್‌ನಲ್ಲಿ ಟ್ಯಾಪ್ ಮೂಲಕ ಬಿಯರ್ ನೀಡುವ ಆಯ್ಕೆ ಇರುತ್ತದೆ. ಇಂತಹವುಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಪರವಾನಗಿ ನೀಡಲು ಸಹ ಪ್ರಸ್ತಾವನೆ ಸಿದ್ಧಪಡಿಸಲಾಗಿದೆ.
ಸೂಪರ್ ಮಾರುಕಟ್ಟೆಗಳಲ್ಲಿ ಅವಕಾಶ: ಬೆಂಗಳೂರು ಮಹಾನಗರ, ಜಿಲ್ಲಾ ಕೇಂದ್ರಗಳ ಸೂಪರ್ ಮಾರುಕಟ್ಟೆ, ಹೈಪರ್ ಮಾರುಕಟ್ಟೆ ಹಾಗೂ ಮಾಲ್‌ಗಳಲ್ಲಿ ಸಿಎಲ್-2 (ಎ) ಎಂಬ ಹೊಸ ಸನ್ನದು ಮಂಜೂರು ಮಾಡಬೇಕು.ಕನಿಷ್ಠ 7,500 ಚದರಡಿ ವಿಸ್ತೀರ್ಣವಿರುವ ಮಾಲ್, ಸೂಪರ್ ಮಾರುಕಟ್ಟೆಗಳಲ್ಲಿ 400 ಚದರಡಿ ವ್ಯಾಪ್ತಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಮದ್ಯ ಮಳಿಗೆ ಮಾಡಲು ಅನುಮತಿ ನೀಡಲು ಪ್ರಸ್ತಾಪಿಸಲಾಗಿದೆ.
ಬಿಜೆಪಿ-ಜೆಡಿಎಸ್ ಮೈತ್ರಿ ಈಗ ಅಧಿಕೃತ: ದಸರಾ ಬಳಿಕ ಲೋಕಸಭೆ ಸೀಟು ಹಂಚಿಕೆ ನಿರ್ಧಾರ
ಅಬಕಾರಿ ಇಲಾಖೆ ಪ್ರಸ್ತಾವನೆ ಸಲ್ಲಿಕೆ
- ಈ ಬಾರಿ ಸರ್ಕಾರಕ್ಕೆ ಸಂಪನ್ಮೂಲ ಹೆಚ್ಚು ಸಂಗ್ರಹಿಸಲು ಅಬಕಾರಿ ಇಲಾಖೆಯಲ್ಲಿ ಪ್ರಸ್ತಾವನೆ ಸಿದ್ಧ
- 10 ವರ್ಷದ ಹಿಂದೆ ನಿಂತಿದ್ದ ಹೊಸ ಮದ್ಯದಂಗಡಿ ಲೈಸೆನ್ಸ್ ವಿತರಣೆಗೆ ನಿರ್ಧರಿಸಿ ಶಿಫಾರಸು ಸಲ್ಲಿಕೆ
- ಈ ಹಿಂದೆ ಕೈಬಿಟ್ಟಿದ್ದ ‘ಸ್ವತಂತ್ರ ಬಿಯರ್ ಮಾರಾಟ ಮಳಿಗೆ’ ಲೈಸೆನ್ಸ್ ಪುನರ್‌ವಿತರಣೆಗೆ ಶಿಫಾರಸು
- ಈಗಾಗಲೇ ರಾಜ್ಯದಲ್ಲಿ 12,593 ಮದ್ಯದಂಗಡಿ ಇವೆ; ಈಗ ಹೊಸತಾಗಿ 389 ತೆರೆಯಲು ನಿರ್ಧಾರ
- ರಾಷ್ಟ್ರೀಯ, ರಾಜ್ಯ ಹೆದ್ದಾರಿಗಳ ಇಕ್ಕೆಲಗಳಲ್ಲಿ ಹೊಸತಾಗಿ ಮದ್ಯದಂಗಡಿ ತೆರೆಯುವಂತೆ ಪ್ರಸ್ತಾಪ
- ಶೇ.25ರಷ್ಟು ಹೆಚ್ಚು ಶುಲ್ಕ ಪಾವತಿಸಿ ಬೇನಾಮಿ ಮದ್ಯದಂಗಡಿಗಳನ್ನು ಸಕ್ರಮ ಮಾಡಿಕೊಳ್ಳಬಹುದು