ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಆನ್‌ಲೈನ್ ಬೆಟ್ಟಿಂಗ್‌ಗೆ ತಡೆಹಾಕಿ ಬಡವರು ಅದಕ್ಕೆ ಬಲಿಯಾಗುವುದನ್ನು ತಪ್ಪಿಸುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್‌ನಲ್ಲಿರುವ ಬೆಟ್ಟಿಂಗ್ ಪ್ರಕರಣದ ಬಗ್ಗೆ ಕ್ರಮ ವಹಿಸಬೇಕು ಎಂದು ಸಂಸದ ಬೊಮ್ಮಾಯಿ ಒತ್ತಾಯಿಸಿದ್ದಾರೆ.
ಬೆಂಗಳೂರು (ಅ.06): ರಾಜ್ಯ ಸರ್ಕಾರಕ್ಕೆ ನಿಜವಾಗಿಯೂ ಆನ್‌ಲೈನ್ ಬೆಟ್ಟಿಂಗ್‌ಗೆ ತಡೆಹಾಕಿ ಬಡವರು ಅದಕ್ಕೆ ಬಲಿಯಾಗುವುದನ್ನು ತಪ್ಪಿಸುವ ಕಾಳಜಿ ಇದ್ದರೆ ಸುಪ್ರೀಂ ಕೊರ್ಟ್‌ನಲ್ಲಿರುವ ಬೆಟ್ಟಿಂಗ್ ಪ್ರಕರಣದ ಬಗ್ಗೆ ಕ್ರಮ ವಹಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಕೋರಮಂಗಲದಲ್ಲಿ ಕನ್ನಡಪರ ಸಂಘಟನೆಗಳು ಕೇಂದ್ರ ಸರ್ಕಾರ ಆನ್‌ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಿದರೂ ಅವ್ಯಾಹತವಾಗಿ ಪೊಲೀಸರ ಕಣ್ಣಡಿಯಲ್ಲೇ ಬೆಟ್ಟಿಂಗ್ ದಂಧೆ ನಡೆಯುತ್ತಿರುವುದನ್ನು ಬಹಿರಂಗಗೊಳಿಸಿದ್ದಾರೆ. ಇದರಿಂದ ಆನ್‌ಲೈನ್ ಬೆಟ್ಟಿಂಗ್ ಮಾಡುವವರು ಮತ್ತು ಪೊಲೀಸರು, ಸರ್ಕಾರದ ನಡುವೆ ಇರುವ ಸಂಬಂಧ ಗೊತ್ತಾಗುತ್ತದೆ ಎಂದು ತಿಳಿಸಿದ್ದಾರೆ.
ನಮ್ಮ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆ ಆನ್‌ಲೈನ್ ಬೆಟ್ಟಿಂಗ್ ವಿರುದ್ಧ ಜಾಮೀನುರಹಿತ ಪ್ರಕರಣ ಮಾಡಿ ಕಠಿಣ ಕಾನೂನು ಜಾರಿ ಮಾಡಿದ್ದೆವು. ಅದು ಸುಪ್ರೀಂ ಕೋರ್ಟ್‌ನಲ್ಲಿದೆ. ಆದರೆ ಅದನ್ನು ಎರಡೂವರೆ ವರ್ಷವಾದರೂ ಈ ಸರ್ಕಾರ ಸಂಪೂರ್ಣವಾಗಿ ನಿರ್ಲಕ್ಷ್ಯ ಮಾಡಿದೆ. ಈ ಮೂಲಕ ಸರ್ಕಾರ ಸಂಪೂರ್ಣ ಆನ್‌ಲೈನ್ ಬೆಟ್ಟಿಂಗ್ ಪರ ಇದೆ ಎನ್ನುವುದು ಗೊತ್ತಾಗುತ್ತದೆ. ಎಲ್ಲ ಬಡವರ, ಯುವಕರ ಪರ ಆನ್‌ಲೈನ್ ಬೆಟ್ಟಿಂಗ್ ಬ್ಯಾನ್ ಮಾಡಲು ಕೇಂದ್ರದ ಕಾನೂನು ಜಾರಿ ಮಾಡಬೇಕು ಮತ್ತು ಕರ್ನಾಟಕದ ಕಾನೂನಿಗೆ ಸುಪ್ರೀಂ ಕೋರ್ಟ್‌ನಲ್ಲಿ ಕಾನೂನಾತ್ಮಕ ಹೋರಾಟ ಮಾಡಿ ಶಕ್ತಿ ತುಂಬಬೇಕು ಎಂದು ಸಾಮಾಜಿಕ ಜಾಲತಾಣದ ಮೂಲಕ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಸುಳ್ಳನ್ನೇ ಸತ್ಯ ಮಾಡಲು ಹೊರಟಿರುವ ಸಿಎಂ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೇಂದ್ರದ ಜಿಎಸ್‌ಟಿ ಪರಿಹಾರದ ವಿಚಾರದಲ್ಲಿ ಒಂದು ಸುಳ್ಳನ್ನು ನೂರು ಸಲ ಹೇಳಿ ಸತ್ಯ ಮಾಡಲು ಹೊರಟಿದ್ದಾರೆ. ಮನಸ್ಸಿನಲ್ಲಿ ಮಂಡಿಗೆ ತಿಂದರೆ ಲೆಕ್ಕ ಕೊಡುವವರು ಯಾರು ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ. ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 11 ಸಾವಿರ ಕೋಟಿ ಅಂತ ಹೇಳುತ್ತಾರೆ. ಯಾವ ಲೆಕ್ಕ ಇದೆ. ಹಲವಾರು ಬಾರಿ ಹೇಳಿದ್ದೇವೆ. 15ನೇ ಹಣಕಾಸಿನಲ್ಲಿ 2014ರಿಂದ ₹ 1 ಲಕ್ಷ ಕೋಟಿಗೂ ಹೆಚ್ಚು ಮೊತ್ತ ರಾಜ್ಯಕ್ಕೆ ಬರುತ್ತಿದೆ. ಪ್ರತಿ ವರ್ಷಾಂತ್ಯದಲ್ಲಿ ₹ 3000 ಕೋಟಿ ಬರುತ್ತಿದೆ. ಕೇಂದ್ರದಿಂದ ಬಂದಿದ್ದನ್ನು ಸಿದ್ದರಾಮಯ್ಯ ಹೇಳುವುದಿಲ್ಲ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಕಲ್ಲು ತೂರಾಟ ಪ್ರಕರಣದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ದೇಶದಲ್ಲಿ ಅರಾಜಕತೆ, ಹಿಂಸೆ ಮಾಡಬೇಕು ಅನ್ನುವುದು ಒಂದು ವರ್ಗದ ಹುನ್ನಾರ. ಅದಕ್ಕೆ ಕೆಲವು ಶಕ್ತಿಗಳು ಬೆಂಬಲ ನೀಡುತ್ತಿದ್ದಾರೆ. ಉತ್ತರಪ್ರದೇಶದ ರಾಜ್ಯದಲ್ಲಿ ಮೊದಲು ಇತ್ತು. ದಾವಣಗೆರೆ ಘಟನೆ ನಡೆದ ನಂತರ ಕರ್ನಾಟಕದಲ್ಲಿ ನಿಯಂತ್ರಣ ಮಾಡಬೇಕು ಅನ್ನುವ ಆಗ್ರಹ ಮಾಡಿದ್ದೇವು, ನಿಯಂತ್ರಣ ಮಾಡುತ್ತೇವೆ ಅಂದಿದ್ದರು. ಹೆಚ್ಚಿನ ಜಾಗೃತಿ ತೆಗೆದುಕೊಳ್ಳುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಮಂಡ್ಯ, ಮದ್ದೂರು ಘಟನೆ ನೋಡಿದಾಗ ರಾಜ್ಯದಲ್ಲಿ ಸಂಪೂರ್ಣ ಕಾನೂನು ಸುವ್ಯವಸ್ಥಿತ ಕುಸಿದಿದೆ.
ರಾಜ್ಯದಲ್ಲಿ ಉಂಟಾದ ಪ್ರವಾಹದ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಕಳೆದ ಬಾರಿ ಮಳೆಹಾನಿ ಪರಿಹಾರ ಕೊಡುವುದಕ್ಕೆ, ಕೇಂದ್ರ ಸರ್ಕಾರ ಹಣ ಬಿಡುಗಡೆ ಮಾಡಿದ ನಂತರ ಹಣ ನೀಡಿದ್ದಾರೆ. ಈ ಬಾರಿ ಬೆಳೆಹಾನಿ ಘೋಷಣೆ ಮಾಡಿದ್ದಾರೆ. ಇನ್ನೂ ನೀಡಿಲ್ಲ. ನಾನು ಸಿ.ಎಂ ಇದ್ದಾಗ ಎರಡುಪಟ್ಟು ಹೆಚ್ಚು ಬೆಳೆಹಾನಿ ನೀಡಿದ್ದೆ. ಕೇಂದ್ರದ ಹಣವನ್ನ ಕಾಯಲಿಲ್ಲ. ಇವರಿಗೆ ರೈತರ ಬಗ್ಗೆ ನಿಜವಾದ ಕಾಳಜಿ ಇದ್ದರೆ, ಕೂಡಲೇ ಬಿಡುಗಡೆ ಮಾಡಬೇಕು. ಕೇಂದ್ರದ ಬಗ್ಗೆ ನೆಪ ಹೇಳಬಾರದು ಎಂದು ಆಗ್ರಹಿಸಿದರು.
