ರಾಜ್ಯದಲ್ಲಿ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವ ಲಾರಿಗಳ ಮಾಲೀಕರಿಗೆ ಕೊಡಬೇಕಾದ ₹250 ಕೋಟಿ ಬಾಡಿಗೆ ಬಾಕಿ ಇಟ್ಟುಕೊಂಡಿದೆ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಚಿಕ್ಕಬಳ್ಳಾಪುರ (ಜು.10): ರಾಜ್ಯದಲ್ಲಿ ಜನರ ಪಾಲಿಗೆ ಕಾಂಗ್ರೆಸ್ ಸರ್ಕಾರ ಸತ್ತು ಹೋಗಿದೆ. ಅನ್ನಭಾಗ್ಯದ ಅಕ್ಕಿ ಸರಬರಾಜು ಮಾಡುವ ಲಾರಿಗಳ ಮಾಲೀಕರಿಗೆ ಕೊಡಬೇಕಾದ ₹250 ಕೋಟಿ ಬಾಡಿಗೆ ಬಾಕಿ ಇಟ್ಟುಕೊಂಡಿದ್ದು, ಚಾಲಕರ ಬದುಕು ದುಸ್ತರವಾಗಿದೆ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಜನರೊಂದಿಗೆ ಜನತಾದಳ- ಜೆಡಿಎಸ್ ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಜೆಡಿಎಸ್ ಹಳೆ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷವಲ್ಲ.

ನಮ್ಮ ಪಕ್ಷದ ಶಾಸಕರಲ್ಲಿ 50ರಷ್ಟು ಮಂದಿ ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ ಭಾಗದಿಂದ ಆಯ್ಕೆಯಾಗುತ್ತಾರೆ. ಈ ಭಾಗಗಳಿಗೆ ನಾನು ನಿರಂತರವಾಗಿ ಭೇಟಿ ನೀಡುತ್ತೇನೆ ಎಂದರು. ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಎನ್ನುವುದು ಕೇವಲ ಜೆಡಿಎಸ್ ಕಾರ್ಯಕರ್ತರ ಭಾವನೆ ಅಷ್ಟೇ ಅಲ್ಲ ರಾಜ್ಯದ ಜನರ ಭಾವನೆಯಾಗಿದೆ. ಕುಮಾರಸ್ವಾಮಿ ಅವರು ಸಿಎಂ ಆಗಿದ್ದಾಗ ಕೊಟ್ಟ ಕೊಡುಗೆಗಳನ್ನ ಜನರು ಈಗಲೂ ಸ್ಮರಿಸಿಕೊಳ್ಳುತ್ತಿದ್ದು, ನಾನು ರಾಜ್ಯದ ಹಲವೆಡೆ ಪ್ರವಾಸ ಮಾಡಿದಾಗ, ಜನ ಕುಮಾರಣ್ಣ ಸಿಎಂ ಆಗಲಿ ಎಂದು ಬಯಸುತ್ತಿದ್ದಾರೆ ಎಂದರು.

ಬಿಜೆಪಿ-ಜೆಡಿಎಸ್ ಮೈತ್ರಿಗೆ ಬಹುಮತ: ಮುಂದಿನ 2028ರ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಗೆ 150ಕ್ಕೂ ಹೆಚ್ಚು ಸ್ಥಾನಗಳು ಲಭಿಸಲಿದ್ದು, ಮೈತ್ರಿ ಸರ್ಕಾರ ರಚನೆ ಮಾಡಲಿದ್ದೇವೆ. ಕುಮಾರಸ್ವಾಮಿ ಅವರು ಸಿಎಂ ಆಗಬೇಕು ಎಂಬುದು ಕಾರ್ಯಕರ್ತರ ಅಪೇಕ್ಷೆ ಆಗಿದೆ. ಚಿಕ್ಕಬಳ್ಳಾಪುರ ಮತ್ತು ಕೋಲಾರ ಜೆಡಿಎಸ್‌ಗೆ ಅಂದಿನಿಂದಲೂ ಬಲ ತುಂಬಿದ್ದು, ಶಿಡ್ಲಘಟ್ಟ ಶಾಸಕ ರವಿಕುಮಾರ್ ಚಿಂತಾಮಣಿ ಮಾಜಿ ಶಾಸಕ ಜೆ.ಕೆ.ಕೃಷ್ಣಾರೆಡ್ಡಿ ಎರಡು ಆಧಾರ ಸ್ಥಂಬಗಳಿದ್ದಂತೆ ಎಂದು ಬಣ್ಣಿಸಿದರು.

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೆಡಿಎಸ್ ಕಾರ್ಯಕರ್ತರಿಲ್ಲದಿದ್ದರೆ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲವೆಂದು ಸಂಸದ ಡಾ.ಕೆ.ಸುಧಾಕರ್ ಅವರೇ ಹೇಳಿರುವುದು ನಮ್ಮ ಪಕ್ಷದ ಶಕ್ತಿ ತೋರಿಸುತ್ತದೆ. ಲೋಕಸಭಾ ಚುನಾವಣೆಯಲ್ಲಿ ಮೈತ್ರಿ ಯಶಸ್ವಿಯಾಗಿದೆ. ಸದ್ಯ 50 ಲಕ್ಷಕ್ಕೂ ಹೆಚ್ಚು ಸದಸ್ಯತ್ವ ಗುರಿ ಇಟ್ಟುಕೊಂಡು ರಾಜ್ಯ ಪ್ರವಾಸ ಮಾಡುತ್ತಿದ್ದು, ಮುಂದಿನ ಚುನಾವಣೆ ಹೇಗೆ ನಡೆಸಬೇಕೆಂಬ ಮಾಹಿತಿ ನಿಮಗೆ ನೀಡುತ್ತೇವೆ ಎಂದು ತಿಳಿಸಿದರು. ಮಾಜಿ ಸಚಿವ ಎ.ಮಂಜು, ಶಾಸಕ ಬಿ.ಎನ್.ರವಿಕುಮಾರ್, ಮಾಜಿ ಎಂಎಲ್‌ಸಿ ಆರ್.ಚೌಡರೆಡ್ಡಿ ತೂಪಲ್ಲಿ, ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

ನಿಖಿಲ್‌ಗೆ ಹೂವಿನ ಮಳೆ: ಕಾರ್ಯಕ್ರಮಕ್ಕೂ ಮೊದಲು ನಿಖಿಲ್ ಕುಮಾರಸ್ವಾಮಿ ಅವರನ್ನು ತಿಪ್ಪೆನಹಳ್ಳಿಯಿಂದ ಕನಜೇನಹಳ್ಳಿ, ನಗರದ ಅಂಕನಗೊಂದಿ, ಎಪಿಎಂಸಿ, ಎಂ.ಜಿ.ರಸ್ತೆ, ಅಂಬೇಡ್ಕರ್ ವೃತ್ತ, ಬಿಬಿ ರಸ್ತೆ ಮೂಲಕವಾಗಿ ಮೆರವಣಿಗೆ ಮಾಡಲಾಯಿತು. ಈ ವೇಳೆ ಹೂವಿನ ಮಳೆ ಸುರಿಸಲಾಗಿದ್ದು, ಜೆಡಿಎಸ್‌ ಕಾರ್ಯಕರ್ತರು ಸುಮಾರು 5 ಕಿಲೋಮೀಟರ್ ಬೈಕ್ ಹಾಗೂ ಟ್ರ್ಯಾಕ್ಟರ್ ರ್ಯಾಲಿ ಮೂಲಕ ಸ್ವಾಗತಿಸಿದರು.