ಎಸ್ಸೆಂ ಕೃಷ್ಣ ಪಾಂಚಜನ್ಯ ಮಾದರಿ ರಥಯಾತ್ರೆ,  3 ತಿಂಗಳಲ್ಲಿ 224 ಕ್ಷೇತ್ರಗಳ ಸಂಚಾರಕ್ಕೆ ಸಿದ್ಧತೆ

ಎಸ್‌.ಗಿರೀಶ್‌ ಬಾಬು

ಬೆಂಗಳೂರು(ಸೆ.18): ಮೇಕೆ ದಾಟು ಆಯ್ತು, ಸಿದ್ದರಾಮೋತ್ಸವ ಬಂತು, ಸ್ವಾತಂತ್ರ್ಯ ನಡಿಗೆ ನಡೀತು, ಇದೀಗ ಭಾರತ್‌ ಜೋಡೋ ಸಾಗಿದೆ. ಈ ಸರಣಿಯಲ್ಲಿ ಮತ್ತೊಂದು ಮೆಗಾ ಯಾತ್ರೆಗೆ ಕಾಂಗ್ರೆಸ್‌ ಪಕ್ಷ ಸದ್ದಿಲ್ಲದೆ ಸಜ್ಜಾಗುತ್ತಿದೆ. ಅದು ಸಿದ್ದರಾಮಯ್ಯ ಅವರ ರಥಯಾತ್ರೆ! ಎಸ್‌.ಎಂ.ಕೃಷ್ಣ ಅವರು 1999ರಲ್ಲಿ ನಡೆಸಿದ ಪಾಂಚಜನ್ಯ ರಥಯಾತ್ರೆ ಮಾದರಿಯಲ್ಲಿ ಸಿದ್ದರಾಮಯ್ಯ ರಥಯಾತ್ರೆ ಆಯೋಜಿಸಲು ಕಾಂಗ್ರೆಸ್‌ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಅಭಿಮಾನಿಗಳು ಹಾಗೂ ಹಿತೈಷಿಗಳ ಬಳಗ ಸದ್ದಿಲ್ಲದೆ ಸಿದ್ಧತೆ ಆರಂಭಿಸಿದೆ. ಅಕ್ಟೋಬರ್‌ ಮಾಸಾಂತ್ಯ ಅಥವಾ ನವೆಂಬರ್‌ ಮಾಸದ ಆರಂಭದಲ್ಲಿ ನಡೆಸಲು ಉದ್ದೇಶಿಸಿರುವ ಈ ಯಾತ್ರೆಯು ರಾಜ್ಯದ ಎಲ್ಲ 224 ಕ್ಷೇತ್ರಗಳಲ್ಲೂ ಸಂಚರಿಸಲಿದೆ. ಹೀಗಾಗಿ ಅಜಮಾಸು ಎರಡರಿಂದ ಮೂರು ತಿಂಗಳ ಅವಧಿಯವರೆಗೂ ಈ ಯಾತ್ರೆ ನಡೆಯಲಿದ್ದು, ರಾಜ್ಯದಲ್ಲಿ ಕಾಂಗ್ರೆಸ್‌ ಪರ ಅಲೆ ಸೃಷ್ಟಿಸುವ ಉದ್ದೇಶ ಹೊಂದಿದೆ.

ಪಾದಯಾತ್ರೆ ಇತಿಹಾಸ:

ಚುನಾವಣೆ ಪ್ರಚಾರಕ್ಕಾಗಿ ಯಾತ್ರೆ ನಡೆಸುವ ಪರಿಪಾಠ ಕಾಂಗ್ರೆಸ್‌ನಲ್ಲಿ ಹಿಂದಿನಿಂದಲೂ ನಡೆದು ಬಂದಿದೆ. 1999ರಲ್ಲಿ ಎಸ್‌.ಎಂ. ಕೃಷ್ಣ ಪಾಂಚಜನ್ಯ ರಥಯಾತ್ರೆ ನಡೆಸಿದರು. ಒಂದೇ ಬಸ್‌ನಲ್ಲಿ ಕಾಂಗ್ರೆಸ್‌ನ ನಾಯಕರೆಲ್ಲ ರಾಜ್ಯದ ಬಹುತೇಕ ಎಲ್ಲ ಕ್ಷೇತ್ರ ಸುತ್ತಾಡಿ ನಡೆಸಿದ ಪ್ರಚಾರ ಪರಿಣಾಮ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಿತ್ತು. ಇನ್ನು 2010ರಲ್ಲಿ ಬಳ್ಳಾರಿ ಗಣಿ ಧಣಿಗಳ ಸವಾಲು ಸ್ವೀಕರಿಸಿ ಸಿದ್ದರಾಮಯ್ಯ ಬಳ್ಳಾರಿ ಪಾದಯಾತ್ರೆ ನಡೆಸಿದರು. ಇದರಿಂದ ನಿರ್ಮಾಣವಾದ ಕಾಂಗ್ರೆಸ್‌ ಪರ ಅಲೆಯಿಂದಾಗಿ 2013ರಲ್ಲಿ ಕಾಂಗ್ರೆಸ್‌ ಸ್ವ ಸಾಮರ್ಥ್ಯದಿಂದ ಅಧಿಕಾರ ಹಿಡಿಯಿತು.

ಸಿದ್ದು, ಡಿಕೆಶಿ ನಡುವೆ ಭಿನ್ನಾಭಿಪ್ರಾಯ ಇದೆ ಎಂಬುದು ಸುಳ್ಳು: ಪರಮೇಶ್ವರ್‌

ಶಾಸಕರ ಆಗ್ರಹದಿಂದ ಯಾತ್ರೆ!:

ಈ ಬಾರಿಯೂ ಇಂತಹುದೇ ಬೃಹತ್‌ ಯಾತ್ರೆ ಮಾಡಬೇಕು ಎಂಬ ಚಿಂತನೆ ಸಿದ್ದು ಅಭಿಮಾನಿಗಳು ಹಾಗೂ ಹಿತೈಷಿ ಬಳಗ ಹೊಂದಿದ್ದರ ಫಲವೇ ಈ ರಥಯಾತ್ರೆ. ಇದಲ್ಲದೆ, ಪಕ್ಷದ ಬಹುತೇಕ ಶಾಸಕರು, ಆಕಾಂಕ್ಷಿಗಳು ತಮ್ಮ ಕ್ಷೇತ್ರದಲ್ಲಿ ಪ್ರವಾಸ ಕೈಗೊಳ್ಳಬೇಕು ಎಂದು ಪ್ರತ್ಯೇಕವಾಗಿ ಸಿದ್ದರಾಮಯ್ಯ ಮನವಿ ಮಾಡುತ್ತಾ ಬಂದಿದ್ದಾರೆ. ಹೀಗಾಗಿ ಎಲ್ಲಾ ಕ್ಷೇತ್ರಗಳಿಗೂ ಸಂಚರಿಸುವಂತಹ ಯಾತ್ರೆಯನ್ನು ಆಯೋಜಿಸುವುದೇ ಉತ್ತಮ ಎಂಬುದು ಈ ಯಾತ್ರೆ ರೂಪಿಸಲು ಕಾರಣವಾಗಿದೆ.

ರಾಹುಲ್‌ ಒಪ್ಪಿಗೆ ಬಾಕಿ:

ಸಿದ್ದರಾಮಯ್ಯ ಅವರ 75ನೇ ಹುಟ್ಟುಹಬ್ಬವನ್ನು ಅಮೃತ ಮಹೋತ್ಸವವಾಗಿ ಆಚರಿಸಿದ ಸಿದ್ದರಾಮಯ್ಯ ಅವರ ಆಪ್ತ ಬಳಗವೇ ಈ ರಥಯಾತ್ರೆಯ ರೂಪರೇಷೆಯ ಸಿದ್ಧತೆಯಲ್ಲಿ ತೊಡಗಿಸಿಕೊಂಡಿದೆ. ಮೂಲಗಳ ಪ್ರಕಾರ ಈ ರಥಯಾತ್ರೆ ಕುರಿತ ಮೊದಲ ಸಭೆ ಈ ಮಾಸಾಂತ್ಯದ ವೇಳೆಗೆ ನಡೆಯಲಿದೆ. ಸಭೆಯ ನಂತರ ಸಿದ್ದರಾಮಯ್ಯ ಅವರು ಕಾಂಗ್ರೆಸ್‌ ವರಿಷ್ಠ ರಾಹುಲ್‌ ಗಾಂಧಿ ಅವರನ್ನು ಭೇಟಿ ಮಾಡಿ ಯಾತ್ರೆಗೆ ಹೈಕಮಾಂಡ್‌ನ ಒಪ್ಪಿಗೆ ಪಡೆಯುವ ಉದ್ದೇಶ ಹೊಂದಿದ್ದಾರೆ ಎನ್ನಲಾಗಿದೆ.

ಯಾತ್ರೆಯಲ್ಲಿ ಯಾರಾರ‍ಯರು?:

ಈ ರಥಯಾತ್ರೆಯು ಯಾವ ವಿಧಾನಸಭಾ ಕ್ಷೇತ್ರಕ್ಕೆ ಭೇಟಿ ನೀಡುವುದೋ ಆ ಕ್ಷೇತ್ರದ ಶಾಸಕ ಅಥವಾ ಆಕಾಂಕ್ಷಿ ಸಿದ್ದರಾಮಯ್ಯ ಅವರೊಂದಿಗೆ ಪ್ರಧಾನವಾಗಿ ಸಂಚರಿಸುವರು. ಅಲ್ಲದೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್‌, ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕಾರ್ಯಾಧ್ಯಕ್ಷರಿಗೂ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಲು ಉದ್ದೇಶಿಸಲಾಗಿದೆ.

ಎಲ್ಲರಿಗೂ ಆಹ್ವಾನ:

ಕಾಂಗ್ರೆಸ್‌ನ ಎಲ್ಲ ನಾಯಕರು ಒಟ್ಟಿಗೆ ಯಾತ್ರೆ ನಡೆಸಿದರೆ ಹೆಚ್ಚು ಪ್ರಯೋಜನಾಕಾರಿ ಎಂಬ ಕಾರಣಕ್ಕೆ ಎಲ್ಲ ನಾಯಕರನ್ನು ಈ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವೂ ಆಯೋಜಕರಿಗೆ ಇದೆ. ಮೂಲಗಳ ಪ್ರಕಾರ ರಾಹುಲ್‌ ಅವರ ಭಾರತ್‌ ಜೋಡೋ ಯಾತ್ರೆ ರಾಜ್ಯದಲ್ಲಿ ನಡಿಗೆ ಪೂರ್ಣಗೊಳಿಸಿದ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯ ರಥಯಾತ್ರೆ ಆರಂಭಿಸುವ ಉದ್ದೇಶವಿದೆ.

ಐಕ್ಯತಾ ಯಾತ್ರೆ ಮೂಲಕ ದೇಶದಲ್ಲಿ ಬದಲಾವಣೆ ತರಬೇಕು: ಡಿಕೆಶಿ

ವಿಶೇಷ ಕ್ಯಾರವಾನ್‌:

ಈ ಯಾತ್ರೆಗಾಗಿ ಸಿದ್ದರಾಮಯ್ಯ ಅವರ ಅಭಿಮಾನಿಯೊಬ್ಬರು ಮಿತ್ಸುಬಿಷಿ ಸಂಸ್ಥೆಯ, ವಿಶೇಷವಾಗಿ ಸಿದ್ದಪಡಿಸಲಾಗಿರುವ ಕ್ಯಾರವಾನ್‌ (ವಿಶೇಷ ಒಳಾಂಗಣ ವ್ಯವಸ್ಥೆ ಹೊಂದಿರುವ ಬಸ್‌) ಅನ್ನು ಕೊಡುಗೆಯಾಗಿ ನೀಡಿದ್ದಾರೆ. ಈ ಕ್ಯಾರವಾನ್‌ ಬೆಂಗಳೂರಿಗೆ ಈಗಾಗಲೇ ಬಂದಿದ್ದು, ಅದನ್ನು ಯಾತ್ರೆಗಾಗಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದೆ. ಈ ಕ್ಯಾರವಾನ್‌ ಯಾತ್ರೆಯ ವೇಳೆ ವೇದಿಕೆಯಾಗಿಯೂ ಪರಿವರ್ತನೆಯಾಗುವ ಸಾಮರ್ಥ್ಯ ಹೊಂದಿದೆ. ವಾಹನದ ಮೇಲು ಭಾಗಕ್ಕೆ ತೆರಳಿ ಅಲ್ಲಿಂದಲೇ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡುವ ವ್ಯವಸ್ಥೆಯಿರಲಿದೆ. ಒಳಾಂಗಣದಲ್ಲಿ ಒಂದು ಸುಸಜ್ಜಿತ ಮಲಗುವ ಕೋಣೆ, ಒಂದು ಶೌಚಾಲಯ, ಎಂಟು ಮಂದಿ ಒಟ್ಟಿಗೆ ಕುಳಿತು ಸಭೆ ನಡೆಸಲು ಸಾಧ್ಯವಿರುವಂತಹ ಸಭಾ ಕೋಣೆಯನ್ನು ಹೊಂದಿರಲಿದೆ.

ಈ ವಾಹನ ಸಂಪೂರ್ಣ ಹವಾನಿಯಂತ್ರಿತವಾಗಿರಲಿದ್ದು, ಎರಡು ಟಿ.ವಿ., ಸುಖಾಸೀನದಂತಹ ವ್ಯವಸ್ಥೆ ಹೊಂದಿರುತ್ತದೆ. ವಿದ್ಯುತ್‌ ಪೂರೈಕೆಗಾಗಿ ಜನರೇಟರ್‌ ಹಾಗೂ ನೀರಿನ ಟ್ಯಾಂಕ್‌ ಸಹ ಹೊಂದಿರುತ್ತದೆ. ಪ್ರಸ್ತುತ ಈ ವಾಹನದ ಹೊರಾಂಗಣವನ್ನು ಯಾತ್ರೆಗೆ ಅಗತ್ಯವಾದಂತೆ ಸ್ಟಿಕರಿಂಗ್‌ ಮಾಡುವ ಸಿದ್ಧತೆಯನ್ನು ಸಿದ್ದರಾಮಯ್ಯ ಅವರ ಆಪ್ತ ಬಳಗ ನಡೆಸಿದೆ.