ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸದೆ ಕಾಂಗ್ರೆಸ್‌ ಕರ್ನಾಟಕ ಜನತೆಯನ್ನು ವಂಚಿಸಿದೆ. ಆದ್ದರಿಂದ ತೆಲಂಗಾಣ ಜನತೆ ಕಾಂಗ್ರೆಸ್‌ ನೀಡುವ ಸುಳ್ಳು ಹಾಗೂ ಪೊಳ್ಳು ಭರವಸೆಗಳಿಗೆ ಜೋತು ಬೀಳಬಾರದು ಎಂದು ಮನವಿ ಮಾಡಿದ ಯಡಿಯೂರಪ್ಪ 

ಹೈದರಾಬಾದ್‌(ನ.23):  ಕೆಲವು ದಿನಗಳು ಬಾಕಿ ಇರುವ ತೆಲಂಗಾಣ ವಿಧಾನಸಭೆ ಚುನಾವಣೆ ಪ್ರಚಾರದ ಅಖಾಡಕ್ಕೆ ಈಗ ಕರ್ನಾಟಕದ ಬಿಜೆಪಿ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಧುಮುಕಿದ್ದಾರೆ. ಈ ವೇಳೆ ವಿವಿಧ ಕಡೆ ಪ್ರಚಾರ ನಡೆಸಿರುವ ಅವರು ರಾಜ್ಯದಲ್ಲೂ ನೀಡಿರುವ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್‌ ವಿರುದ್ಧ ಹರಿಹಾಯ್ದಿದ್ದಾರೆ.

ಇಲ್ಲಿ ಮಾತನಾಡಿದ ಯಡಿಯೂರಪ್ಪ, ಅಧಿಕಾರಕ್ಕೆ ಬರುವ ಮುನ್ನ ನೀಡಿದ್ದ ಐದು ಗ್ಯಾರಂಟಿಗಳನ್ನು ಈಡೇರಿಸದೆ ಕಾಂಗ್ರೆಸ್‌ ಕರ್ನಾಟಕ ಜನತೆಯನ್ನು ವಂಚಿಸಿದೆ. ಆದ್ದರಿಂದ ತೆಲಂಗಾಣ ಜನತೆ ಕಾಂಗ್ರೆಸ್‌ ನೀಡುವ ಸುಳ್ಳು ಹಾಗೂ ಪೊಳ್ಳು ಭರವಸೆಗಳಿಗೆ ಜೋತು ಬೀಳಬಾರದು ಎಂದು ಮನವಿ ಮಾಡಿದರು.

ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಪಟ್ಟ ಹಾಸ್ಯಾಸ್ಪದ: ಶಾಸಕ ನಾರಾಯಣಸ್ವಾಮಿ

ಈ ವರ್ಷ ಮೇನಲ್ಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಚುನಾವಣಾ ಪೂರ್ವ ಐದು ಗ್ಯಾರಂಟಿಗಳ ಭರವಸೆ ನೀಡಿ ಗೆಲುವು ಸಾಧಿಸಿತ್ತು. ಇದೇ ‘ಕರ್ನಾಟಕ ಮಾದರಿ’ಯನ್ನು ಕಾಂಗ್ರೆಸ್‌ ಚುನಾವಣೆ ನಡೆಯುತ್ತಿರುವ ತೆಲಂಗಾಣ ಮತ್ತು ಇತರ ರಾಜ್ಯಗಳಲ್ಲಿ ಬಿಕರಿ ಮಾಡುತ್ತಿದೆ. ಜನರು ಈ ಬಗ್ಗೆ ಎಚ್ಚರ ವಹಿಸಬೇಕು ಎಂದು ಲೇವಡಿ ಮಾಡಿದರು.

‘ಆರು ಗ್ಯಾರಂಟಿಗಳ ಒಳಗೊಂಡ ಕಾಂಗ್ರೆಸ್‌ ಪ್ರಣಾಳಿಕೆ ತೆಲಂಗಾಣ ಮತದಾರರನ್ನು ವಂಚಿಸುವುದು ಮಾತ್ರವಾಗಿದೆ. ಕಾಂಗ್ರೆಸ್‌ನ ಇಂತಹ ಸುಳ್ಳು ಪೊಳ್ಳು ಭರವಸೆಗಳಿಗೆ ಮರುಳಾಗಬೇಡಿ ಎಂದು ತೆಲಂಗಾಣ ಜನರನ್ನು ಮನವಿ ಮಾಡುತ್ತೇನೆ’ ಎಂದು ಯಡಿಯೂರಪ್ಪ ಹೇಳಿದರು.