ತನ್ನ ಎರಡನೇ ಅಭ್ಯರ್ಥಿ ಗೆಲುವಿನ ಸಾಧ್ಯತೆ ಕಡಿಮೆಯಿದ್ದರೂ ಕಣದಲ್ಲಿ ಉಳಿದುಕೊಳ್ಳುವ ತನ್ನ ನಿಲುವಿಗೆ ಕಾಂಗ್ರೆಸ್‌ ಅಂಟಿಕೊಂಡಿದ್ದು, ಜೆಡಿಎಸ್‌ ಅನ್ನು ಬೆಂಬಲಿಸುವ ಅಥವಾ ಕಣದಿಂದ ನಿವೃತ್ತಿಯಾಗುವಂತಹ ಯಾವುದೇ ತೀರ್ಮಾನ ಕೈಗೊಳ್ಳದಿರಲು ನಿರ್ಧರಿಸಿದೆ. 

ಬೆಂಗಳೂರು (ಜೂ.10): ತನ್ನ ಎರಡನೇ ಅಭ್ಯರ್ಥಿ ಗೆಲುವಿನ ಸಾಧ್ಯತೆ ಕಡಿಮೆಯಿದ್ದರೂ ಕಣದಲ್ಲಿ ಉಳಿದುಕೊಳ್ಳುವ ತನ್ನ ನಿಲುವಿಗೆ ಕಾಂಗ್ರೆಸ್‌ ಅಂಟಿಕೊಂಡಿದ್ದು, ಜೆಡಿಎಸ್‌ ಅನ್ನು ಬೆಂಬಲಿಸುವ ಅಥವಾ ಕಣದಿಂದ ನಿವೃತ್ತಿಯಾಗುವಂತಹ ಯಾವುದೇ ತೀರ್ಮಾನ ಕೈಗೊಳ್ಳದಿರಲು ನಿರ್ಧರಿಸಿದೆ. ಜಾತ್ಯತೀತ ಶಕ್ತಿಗಳು ಒಗ್ಗೂಡಬೇಕು ಎಂಬ ಬಯಕೆಯಿದ್ದರೆ ಜೆಡಿಎಸ್‌ ತನ್ನ ಎರಡನೇ ಅಭ್ಯರ್ಥಿಗೆ ಬೆಂಬಲ ನೀಡಲಿ ಎಂಬುದು ಕಾಂಗ್ರೆಸ್‌ ಬಯಕೆ. ಇದಕ್ಕಾಗಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೇರವಾಗಿ ಜೆಡಿಎಸ್‌ ಶಾಸಕರಿಗೆ ಆತ್ಮಸಾಕ್ಷಿಗೆ ಮತ ಹಾಕಿ ಎಂದು ಕರೆ ನೀಡಿ ಬಹಿರಂಗ ಪತ್ರ ಬರೆದರೆ, ರಾಜ್ಯ ಉಸ್ತುವಾರಿ ರಣದೀಪ್‌ ಸುರ್ಜೇವಾಲಾ ಅವರು ಜೆಡಿಎಸ್‌ ನಾಯಕರಿಗೆ ಕರೆ ಮಾಡಿ ತಮ್ಮ ಅಭ್ಯರ್ಥಿಗೆ ಬೆಂಬಲ ನೀಡುವಂತೆ ಮನವಿ ಮಾಡಿದರು.

ಗುರುವಾರವಿಡೀ ಜೆಡಿಎಸ್‌ ಹಾಗೂ ಕಾಂಗ್ರೆಸ್‌ ನಾಯಕರ ನಡುವೆ ಮೈತ್ರಿ ಕುರಿತು ಹಗ್ಗ-ಜಗ್ಗಾಟ ನಡೆಯಿತು. ಬುಧವಾರ ತಡರಾತ್ರಿ ಜೆಡಿಎಸ್‌ ನಾಯಕ ಎಚ್‌.ಡಿ. ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದು, ಈ ವೇಳೆ ಕುಮಾರಸ್ವಾಮಿ ಅವರು ತಮ್ಮ ಅಭ್ಯರ್ಥಿ ಬೆಂಬಲಿಸುವಂತೆ ಮನವಿ ಮಾಡಿದರು. ಈ ಬಗ್ಗೆ ಗುರುವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವಕುಮಾರ್‌ ಅವರು, ರಾಜ್ಯಸಭೆಗೆ ಎರಡನೇ ಅಭ್ಯರ್ಥಿ ನಿಲ್ಲಿಸುವುದು ಹೈಕಮಾಂಡ್‌ನ ತೀರ್ಮಾನ. 

ರಾಜ್ಯಸಭೆ ಚುನಾವಣೆ ಕ್ಲೈಮ್ಯಾಕ್ಸ್: ಮೈತ್ರಿಗೆ 'ನೋ' ಎಂದ ಸಿದ್ದರಾಮಯ್ಯ, ಜೆಡಿಎಸ್‌ ಶಾಸಕರಿಗೆ ಪತ್ರ!

ಇಲ್ಲಿ ನಾನೊಬ್ಬನೇ ಯಾವುದೇ ತೀರ್ಮಾನ ಮಾಡಲು ಆಗುವುದಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ಮೊದಲು ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, ಈ ಹಿಂದೆ ಹಲವು ಬಾರಿ ನಾವು ಜೆಡಿಎಸ್‌ಗೆ ಬೆಂಬಲ ನೀಡಿದ್ದೇವೆ. ಈ ಬಾರಿ ಜೆಡಿಎಸ್‌ ನಮಗೆ ಬೆಂಬಲ ನೀಡಲಿ ಎಂದರು. ಇದಾದ ನಂತರ ಶಿವಕುಮಾರ್‌ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೇರಾನೇರ ಮಾತುಕತೆ ನಡೆಸಿ, ಜೆಡಿಎಸ್‌ ನಾಯಕರ ನಿಲುವಿನ ಬಗ್ಗೆ ಚರ್ಚಿಸಿದರು. ಅಂತಿಮವಾಗಿ ಪಕ್ಷದ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಲು ತೀರ್ಮಾನಿಸಿದರು.

ಶಾಸಕಾಂಗ ಪಕ್ಷದ ಸಭೆ: ಗುರುವಾರ ಸಂಜೆ ನಡೆದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಪಕ್ಷದ ಈ ನಿಲುವನ್ನು ಶಾಸಕರಿಗೆ ಸ್ಪಷ್ಟಪಡಿಸಿದರು.

ಡಿಕೆಶಿಯೇ ಕಾಂಗ್ರೆಸ್‌ ಚುನಾವಣೆ ಏಜೆಂಟ್‌?: ರಾಜ್ಯಸಭೆ ಚುನಾವಣೆ ವೇಳೆ ಪಕ್ಷದ ಏಜೆಂಟ್‌ ಆಗಿ ಖುದ್ದು ಡಿ.ಕೆ. ಶಿವಕುಮಾರ್‌ ಅವರೇ ಕಾರ್ಯ ನಿರ್ವಹಿಸುವ ಸಾಧ್ಯತೆಯಿದೆ. ಮತದಾರರು ತಾವು ಯಾರಿಗೆ ಮತ ಹಾಕುತ್ತಿದ್ದೇವೆ ಎಂದು ತಮ್ಮ ಪಕ್ಷದ ಏಜೆಂಟರಿಗೆ ಮತಪತ್ರವನ್ನು ತೋರಿಸಿ ಅನಂತರ ಮತ ಚಲಾಯಿಸಬೇಕು. ಹೀಗಾಗಿ, ಏಜೆಂಟ್‌ ಆಗಿ ಕಾರ್ಯ ನಿರ್ವಹಿಸಲು ಶಿವಕುಮಾರ್‌ ಆಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಜೆಡಿಎಸ್‌ ಬೆಂಬಲ ನೀಡಲಿ ಅಥವಾ ನೀಡದಿರಲಿ ಪಕ್ಷದ ಅಭ್ಯರ್ಥಿಗಳು ಕಣದಲ್ಲಿ ಇರುತ್ತಾರೆ. ಇದರಲ್ಲಿ ಯಾವುದೇ ಬದಲಾವಣೆಯಿಲ್ಲ ಎಂದು ಸಭೆಗೆ ತಿಳಿಸಿದರು ಎಂದು ಮೂಲಗಳು ಹೇಳಿವೆ. 

ಜೆಡಿಎಸ್‌ಗೇ ಮತ ಹಾಕ್ಬೇಕು ಅಂತ ಅಂದ್ಕೊಂಡಿದ್ದೇನೆ, ಕೊನೆ ಕ್ಷಣದಲ್ಲಿ ಏನ್‌ ಬೇಕಾದ್ರೂ ಆಗಬಹುದು: ಗುಬ್ಬಿ ಶಾಸಕ

ಇದೇ ವೇಳೆ ಪಕ್ಷದ ಅಭ್ಯರ್ಥಿಗಳ ಪರವಾಗಿ ಮತ ಚಲಾಯಿಸಲು ಎಲ್ಲ ಶಾಸಕರಿಗೂ ವಿಪ್‌ ನೀಡಲಾಯಿಕು. ಜತೆಗೆ, ಕಾಂಗ್ರೆಸ್‌ನ ಮೊದಲ ಅಭ್ಯರ್ಥಿಯಾದ ಜೈರಾಮ್‌ ರಮೇಶ್‌ ಅವರಿಗೆ ಗೆಲ್ಲಲು ಅಗತ್ಯವಾದ ಮತಗಳನ್ನು ನಿರ್ಧರಿಸಲಾಯಿತು ಹಾಗೂ ಅವರಿಗೆ ಯಾರು ಮತ ಚಲಾಯಿಸಬೇಕು ಎಂಬ ನಿರ್ದೇಶನವನ್ನು ನೀಡಲಾಯಿತು. ಅನಂತರ ಉಳಿದ ಶಾಸಕರು ತಮ್ಮ ಮತವನ್ನು ಎರಡನೇ ಅಭ್ಯರ್ಥಿ ಮನ್ಸೂರ್‌ ಅಲಿಖಾನ್‌ ಅವರಿಗೆ ಚಲಾಯಿಸುವಂತೆ ಸೂಚಿಸಲಾಯಿತು. ಅಲ್ಲದೆ, ಎರಡನೇ ಪ್ರಾಶಸ್ತ್ಯದ ಮತಗಳನ್ನು ಸಹ ಯಾರು ಯಾರಿಗೆ ನೀಡಬೇಕು ಎಂಬ ಬಗ್ಗೆಯೂ ಸೂಚನೆ ನೀಡಲಾಯಿತು ಎಂದು ಮೂಲಗಳು ಹೇಳಿವೆ.