Asianet Suvarna News Asianet Suvarna News

ಸದನದಲ್ಲಿ ಬಿಜೆಪಿ ಹಣಿಯಲು ಕಾಂಗ್ರೆಸ್‌ ರಣತಂತ್ರ

*  ಸಿದ್ದರಾಮಯ್ಯ ನೇತೃತ್ವದ ಶಾಸಕಾಂಗ ಪಕ್ಷದ ಸಭೆಯಲ್ಲಿ ನಿರ್ಧಾರ
*  ಜಾತಿ ಗಣತಿ, ಬೆಲೆಯೇರಿಕೆ, ಶಿಕ್ಷಣ ನೀತಿ, ಕಾನೂನು ಸುವ್ಯವಸ್ಥೆ ಪ್ರಸ್ತಾಪ
*  ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ: ಸಿದ್ದರಾಮಯ್ಯ 
 

Congress Decided to Fight in the Session against BJP Government grg
Author
Bengaluru, First Published Sep 8, 2021, 7:23 AM IST

ಬೆಂಗಳೂರು(ಸೆ.08): ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ನಡೆಸಲಾಗಿದ್ದ ಸಾಮಾಜಿಕ ಆರ್ಥಿಕ ಸಮೀಕ್ಷಾ (ಜಾತಿ ಜನಗಣತಿ) ವರದಿ ಜಾರಿಗೆ ಆಗ್ರಹಿಸುವುದು, ಜನರನ್ನು ತತ್ತರಗೊಳಿಸಿರುವ ಬೆಲೆ ಏರಿಕೆ, ಕುಸಿದಿರುವ ಕಾನೂನು ಸುವ್ಯವಸ್ಥೆ, ತರಾತುರಿಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಸೇರಿದಂತೆ ಹಲವು ವಿಚಾರಗಳನ್ನು ಅಸ್ತ್ರವಾಗಿಟ್ಟುಕೊಂಡು ಸೆ.13ರಿಂದ ಆರಂಭವಾಗುವ ರಾಜ್ಯ ವಿಧಾನ ಮಂಡಲ ಅಧಿವೇಶನದಲ್ಲಿ ಹೋರಾಟ ನಡೆಸಲು ಪ್ರತಿಪಕ್ಷ ಕಾಂಗ್ರೆಸ್‌ ನಿರ್ಧರಿಸಿದೆ.
ವಿಧಾನ ಮಂಡಲ ಅಧಿವೇಶನದಲ್ಲಿ ಯಾವ್ಯಾವ ವಿಚಾರಗಳನ್ನು ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಬೇಕು, ತರಾಟೆಗೆ ತೆಗೆದುಕೊಳ್ಳಬೇಕೆಂಬ ಬಗ್ಗೆ ಮಂಗಳವಾರ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಮಹತ್ವದ ಸಭೆ ನಡೆಸಲಾಯಿತು.

ಸಭೆಯಲ್ಲಿ ಪ್ರಮುಖವಾಗಿ ಈ ಬಾರಿಯ ಅಧಿವೇಶನದಲ್ಲಿ ಜಾತಿ ಜನಗಣತಿ ವರದಿಯನ್ನು ಅನುಮೋದಿಸಿ ಜಾರಿಗೊಳಿಸಲು ಸರ್ಕಾರದ ಮೇಲೆ ತೀವ್ರ ಒತ್ತಡ ತರಲು ತೀರ್ಮಾನಿಸಲಾಗಿದೆ. ಸ್ವಾತಂತ್ರ್ಯ ಪೂರ್ವದ ಜಾತಿ ಜನಗಣತಿ ಆಧಾರದ ಮೇಲೆ ಸರ್ಕಾರ ಕಾರ್ಯಕ್ರಮಗಳನ್ನು ರೂಪಿಸುತ್ತಿದೆ. ಇದರಿಂದ ಎಲ್ಲ ಸಮುದಾಯಗಳಿಗೆ ಜನಸಂಖ್ಯೆಗೆ ಅನುಗುಣವಾಗಿ ಕಾರ್ಯಕ್ರಮಗಳು ತಲುಪುತ್ತಿಲ್ಲ. ಹಾಗಾಗಿ ಜಾತಿ ಗಣತಿ ವರದಿ ಜಾರಿಗೆ ಆಗ್ರಹಿಸಿ ಹೋರಾಟ ನಡೆಸಲು ಪಕ್ಷ ತೀರ್ಮಾನಿಸಿದೆ.

ಅದೇ ರೀತಿ ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಯಿಂದ ಜನಸಾಮಾನ್ಯರು ತತ್ತರಿಸಿ ಹೋಗಿದ್ದಾರೆ. ಹಾಗಾಗಿ ತಮಿಳುನಾಡು ಮಾದರಿಯಲ್ಲಿ ತೈಲೋತ್ಪನ್ನಗಳ ಮೇಲಿನ ಜಿಎಸ್‌ಟಿ ದರ ಕಡಿಮೆ ಮಾಡಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಸುವಂತೆ ಸರ್ಕಾರವನ್ನು ಒತ್ತಾಯಿಸಲು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಜತೆಗೆ, ಮೈಸೂರಿನಲ್ಲಿ ನಡೆದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ನಿಭಾಯಿಸುವಲ್ಲಿ ಸರ್ಕಾರದ ವೈಫಲ್ಯ, ಘಟನೆ ಬಗ್ಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ನಿರ್ಲಕ್ಷ್ಯದ ಹೇಳಿಕೆ ಪ್ರಸ್ತಾಪಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುವುದು ಹಾಗೂ ತಪ್ಪಿತಸ್ಥರನ್ನು ತಕ್ಷಣ ಪತ್ತೆಹಚ್ಚದೆ ಘಟನೆ ನಿಭಾಯಿಸುವಲ್ಲಿ ಮೈಸೂರು ಜಿಲ್ಲಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿ ವಿಫಲವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದನದಲ್ಲಿ ಆಗ್ರಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಜಾತಿ ಗಣತಿ ವರದಿ ಜಾರಿಗಾಗಿ ಕಲಾಪದಲ್ಲಿ ಹೋರಾಟ: ಸಿದ್ದು

ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಇದಕ್ಕೆ ಮೈಸೂರು ಘಟನೆಯೇ ಸಾಕ್ಷಿ. ನಿತ್ಯ ಕೊಲೆ, ಸುಲಿಗೆ, ದರೋಡೆ ಪ್ರಕರಣಗಳು ವರದಿಯಾಗುತ್ತಿವೆ. ಸರ್ಕಾರದಲ್ಲಿ ಭ್ರಷ್ಟಾಚಾರವೂ ಮಿತಿ ಮೀರಿದ್ದು, ಈ ಸರ್ಕಾರ 20 ಪರ್ಸೆಂಟ್‌ ಸರ್ಕಾರ ಎಂಬುದು ಈಗಾಗಲೇ ಜಗಜ್ಜಾಹೀರಾಗಿದೆ. ಹಣಕಾಸು ಪರಿಸ್ಥಿತಿ ಅಧೋಗತಿಗೆ ಇಳಿದಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಇಲ್ಲ. ಸಂಸತ್‌ನಲ್ಲಾಗಲಿ, ರಾಜ್ಯ ವಿಧಾನ ಮಂಡಲದಲ್ಲಾಗಲಿ ಚರ್ಚಿಸದೆ ಅನೇಕ ಲೋಪಗಳಿರುವ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೊಳಿಸಿ ಏಕಚಕ್ರಾಧಿಪತ್ಯ ನಡೆಸಲಾಗುತ್ತಿದೆ. ನೆರೆ ಸಂತ್ರಸ್ತರಿಗೆ ಪರಿಹಾರ ಸಿಕ್ಕಿಲ್ಲ. ಬಡ ಜನರಿಗೆ ಜಾರಿಗೊಳಿಸಿದ್ದ ಅನೇಕ ಕಾರ್ಯಕ್ರಮಗಳಲ್ಲಿ ಫಲಾನುಭವಿಗಳಿಗೆ ಅನುದಾನ ತಲುಪುತ್ತಿಲ್ಲ. ಈ ಎಲ್ಲ ವಿಷಯಗಳ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿ ನಾವು ಜನರ ದನಿಯಾಗಿ ಕೆಲಸ ಮಾಡಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌, ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಎಸ್‌.ಆರ್‌.ಪಾಟೀಲ್‌, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸಲೀಂ ಅಹಮದ್‌, ಧ್ರುವನಾರಾಯಣ, ಹಿರಿಯ ಮುಖಂಡರುಗಳಾದ ಎಚ್‌.ಕೆ.ಪಾಟೀಲ್‌, ಡಾ.ಜಿ.ಪರಮೇಶ್ವರ್‌, ರಮೇಶ್‌ ಕುಮಾರ್‌, ದಿನೇಶ್‌ ಗುಂಡೂರಾವ್‌, ಕೆ.ಜೆ.ಜಾಜ್‌ರ್‍, ಅಲ್ಲಂ ವೀರಭದ್ರಪ್ಪ, ಬಿ.ಕೆ.ಹರಿಪ್ರಸಾದ್‌ ಮತ್ತಿತತರು ಹಾಜರಿದ್ದರು.
 

Follow Us:
Download App:
  • android
  • ios