ಜನತೆ ನನಗೆ ಸೋತು ಗೆದ್ದಿರುವವರು ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ: ಜಾರಕಿಹೊಳಿ
ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಅಲ್ಪ ಅಂತರದಲ್ಲಿ ಸೋಲುಕಂಡಿರುವ ಕಾಂಗ್ರೆಸ್ ಅಭ್ಯರ್ಥಿ ಮೊದಲ ಬಾರಿಗೆ ಫಲಿತಾಂಶದ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಬೆಳಗಾವಿ, (ಮೇ.04): ತೀವ್ರ ಜಿದ್ದಾಜಿದ್ದಿಯಿಂದ ಕೂಡಿದ್ದ ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಕೇವಲ 5000 ಚಿಲ್ಲರೇ ಮತಗಳಿಂದ ಗೆಲುವು ಸಾಧಿಸಿದೆ.
ಇನ್ನು ಫಲಿತಾಂಶದ ಬಗ್ಗೆ ಮೊದಲ ಬಾರಿಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸತೀಶ್ ಜಾರಕಿಹೊಳಿ, ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಚುನಾವಣೆ ಆಯೋಗ ಗೆದ್ದಿರುವ ಸರ್ಟಿಫಿಕೇಟ್ ನೀಡಿರಬಹುದು. ಆದರೆ, ರಾಜ್ಯದ ಜನತೆ ನಮಗೆ ಸೋತು ಗೆದ್ದವರು ಎಂಬ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ಬೆಳಗಾವಿ ಲೋಕಸಭಾ ಚುನಾವಣೆಯ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಹೇಳಿದರು.
ನಾವು ಸೋತಿದ್ದರೂ ತೀವ್ರ ಪೈಪೋಟಿ ಕೊಟ್ಟಿದ್ದೇವೆ. ಸ್ವತಃ ಬಿಜೆಪಿ ನಾಯಕರೆ ಇದನ್ನು ಒಪ್ಪಿಕೊಂಡಿದ್ದಾರೆ. ನಮ್ಮ ಜನರು ನನ್ನನ್ನು ಗೆಲುವಿನ ದಡ ಸೇರಿಸಿದ್ದಾರೆ. ಬಿಜೆಪಿಗೆ ನಮ್ಮ ಶಕ್ತಿ ಎನು ಎಂಬುದನ್ನು ಈ ಚುನಾವಣೆ ಮೂಲಕ ತೋರಿಸಿದ್ದೆವೆ ಎಂದರು.
ಭದ್ರಕೋಟೆಯಲ್ಲೇ ತಿಣುಕಾಡಿ ಗೆಲ್ಲುವಂತಾಯ್ತು? ಬಿಜೆಪಿಗೆ ಹೊಡೆತಬಿದ್ದಿದ್ದೆಲ್ಲಿ?
ಜನತೆಯ ವಿಶ್ವಾಸಕ್ಕೆ ಸ್ವಲ್ಪ ಹಿನ್ನಡೆಯಾಗಿದೆ. ಚುನಾವಣೆ ಸೋತಿರಬಹುದು ಆದರೆ, ಪಕ್ಷಕ್ಕೆ ಬಹಳಷ್ಟು ಲಾಭವಾಗಿದೆ. ರಾಜ್ಯದ ಜನತೆಯ ಚಿತ್ತ ಬೆಳಗಾವಿ ಚುನಾವಣೆ ಮೇಲೆ ನೆಟ್ಟಿತ್ತು ಅಷ್ಟು ಸಾಕು. ಮುಂದಿನ ಚುನಾವಣೆಗೆ ಈ ಫಲಿತಾಂಶ ದಿಕ್ಸೂಚಿಯಾಗಿದೆ ಎಂದು ಹೇಳಿದರು.
ಈ ಚುನಾವಣೆಯಲ್ಲಿ ನಾವು ಸೋತರೂ, ನಾವೇ ಗೆದ್ದಿದ್ದೇವೆ. ತಾಂತ್ರಿಕವಾಗಿ ಚುನಾವಣೆ ಸೊತಿದ್ದೇವೆ ಅಷ್ಟೇ. ನಮ್ಮ ಎಲ್ಲ ಶಾಸಕರು ಮಾಜಿ ಶಾಸಕರು ನಮ್ಮ ಪರವಾಗಿ ಉತ್ತಮ ಕೆಲಸ ಮಾಡಿದ್ದಾರೆ. ವಿಷೇಶವಾಗಿ ಈ ಚುನಾವಣೆಯಲ್ಲಿ ಸ್ವಯಂ ಪ್ರೇರಣೆಯಿಂದ ಜನರು ನಮ್ಮ ಪರ ಪ್ರಚಾರ ಮಾಡಿದ್ದಾರೆ ಎಂದು ತಿಳಿಸಿದರು.
'ಬೆಳಗಾವಿಯಲ್ಲಿ ಕಾಂಗ್ರೆಸ್ ಸೋತರೂ ಗೆದ್ದಂತೆ'
ನನ್ನ 30 ವರ್ಷಗಳ ರಾಜಕೀಯಲ್ಲಿ ಮೊದಲ ಬಾರಿಗೆ ತೀವ್ರ ಕುತೂಹಲ ಮೂಡಿಸಿದ ಫಲಿತಾಂಶ ಇದಾಗಿದೆ. ಅಲ್ಪ ಹಿನ್ನೆಡೆಯಾಗಿದೆ. ಆದರೆ ಕಾಂಗ್ರೆಸ್ ಪ್ರಭಾವ ಬಿಜೆಪಿಗೆ ಅರಿವಾಗಿದೆ ಎಂದರು.
ಗೋಕಾಕ ವಿಧಾನ ಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ ಸಿಕ್ಕಿರುವ ವಿಚಾರವಾಗಿ ಮಾತನಾಡಿದ ಅವರು, ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಪೈಟ್ ಮಾಡುವ ಅವಕಾಶವಿದೆ. ರಾಜ್ಯದ ರಾಜಕಾರಣಕ್ಕೆ ಗೋಕಾಕ್ ರಾಜಕಾರಣವನ್ನು ಹೋಲಿಸಲು ಸಾಧ್ಯವಿಲ್ಲ. ಈ ಕ್ಷೇತ್ರದಲ್ಲಿ ನಮಗೆ ಬರಬೇಕಾದ ಮತಗಳು ಬಂದಿದೆ. ಬೆಳಗಾವಿ ದಕ್ಷಿಣ ಹಾಗೂ ಗ್ರಾಮೀಣ ಕ್ಷೇತ್ರದಲ್ಲಿ ತಪ್ಪಿದೆ. ಇದರ ಬಗ್ಗೆ ಪರಿಶೀಲಿಸಲಾಗುವುದು ಎಂದು ಹೇಳಿದರು.