ಬೆಂಗಳೂರು, (ನ.10):  ರಾಜರಾಜೇಶ್ವರಿ ನಗರ ಕ್ಷೇತ್ರದ ಉಪ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ 57,936 ಮತಗಳ ಅಂತದಿಂದ ಗೆಲುವು ಸಾಧಿಸಿದರು. 

ಈ ಮೂಲಕ ಮುನಿರತ್ನ ಅವರು ಹ್ಯಾಟ್ರಿಕ್ ಜಯ ಸಾಧಿಸಿದರು. ಇನ್ನು ಕಾಂಗ್ರೆಸ್ ಅಭ್ಯರ್ಥಿ ಹೆಚ್. ಕುಸುಮಾ ಮೊದಲ ಚುನಾವಣೆಯಲ್ಲಿ ಸೋಲು ಕಂಡಿದ್ದಾರೆ. 

RR ನಗರ ಬೈ ಎಲೆಕ್ಷನ್: ಬಿಜೆಪಿ ಗೆಲುವಿಗೆ, ಕಾಂಗ್ರೆಸ್ ಸೋಲಿಗೆ ಕಾರಣಗಳು...!

 ಬಿಜೆಪಿಯ ಮುನಿರತ್ನ1,25,734 ಮತಗಳನ್ನು ಪಡೆದು ಜಯಗಳಿಸಿದರು. ಮೊದಲ ಚುನಾವಣೆ ಎದುರಿಸಿದ ಕಾಂಗ್ರೆಸ್‌ನ ಹೆಚ್. ಕುಸುಮಾ 67,798 ಮತ ಪಡೆಯುವ ಮೂಲಕ 2ನೇ ಸ್ಥಾನಕ್ಕೆ ತೃಪ್ತಿಪಟ್ಟರು. ಇನ್ನು ಜೆಡಿಎಸ್‌ನ ಕೃಷ್ಣಮೂರ್ತಿ 10,251 ಮತಗಳನ್ನು ಪಡೆದು ಮೂರನೇ ಸ್ಥಾನ ಪಡೆದರು.

ಫಲಿತಾಂಶದ ಕುರಿತು ಕುಸುಮಾ ಅವರು ಫೇಸ್ ಬುಕ್ ಪೋಸ್ಟ್ ಮೂಲಕ ತಮ್ಮ ಮೊದಲ ಪ್ರತಿಕ್ರಿಯಿಸಿದ್ದು, ಚುನಾವಣೆಯಲ್ಲಿ ನೀವು ಕೊಟ್ಟಿರುವ ಈ ತೀರ್ಪನ್ನು ತಲೆಬಾಗಿ ಸ್ವೀಕರಿಸುತ್ತೇನೆ. ಕಾಂಗ್ರೆಸ್ ಪಕ್ಷವನ್ನು, ಆ ಮೂಲಕ ನನ್ನನ್ನು ಬೆಂಬಲಿಸಿದ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಎಂದಿದ್ದಾರೆ.

ಮತಯಾಚನೆಗಾಗಿ ಮನೆ ಬಾಗಿಲಿಗೆ ಬಂದಾಗ ಮನೆ ಮಗಳಂತೆ ಬರಮಾಡಿಕೊಂಡು ಕುಂಕುಮ ಇಟ್ಟು, ಹೂ ಮುಡಿಸಿ, ಉಡಿ ತುಂಬಿದ ನೀವು ತೋರಿದ ಪ್ರೀತಿಗೆ ಋಣಿ. ನಮ್ಮ ರಾಜರಾಜೇಶ್ವರಿ ನಗರ ಕ್ಷೇತ್ರ ಎದೆಂದಿಗೂ ನನ್ನ ಕರ್ಮ ಭೂಮಿ. ಎಂದಿನಂತೆ ನಿಮ್ಮೊಂದಿಗಿದ್ದು ನನ್ನಸಮಾಜ ಸೇವಾ ಕಾರ್ಯಗಳನ್ನು ಮುಂದುವರೆಸು ಮೂಲಕ ನೋಂದವರ ಧ್ವನಿಯಾಗುತ್ತೇನೆ ಎಂದು ಪೋಸ್ಟ್ ಮಾಡಿದ್ದಾರೆ.