ಕಾಂಗ್ರೆಸ್‌ ಪಕ್ಷವು ಕೊನೆಗೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ರಾಜ್ಯಸಭೆ ಚುನಾವಣೆಗೆ ಮೊದಲನೇ ಅಭ್ಯರ್ಥಿಯಾಗಿ ಜೈರಾಮ್‌ ರಮೇಶ್‌ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್‌ ಅಲಿಖಾನ್‌ ಅವರು ಸೋಮವಾರ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. 

ಬೆಂಗಳೂರು (ಮೇ.31): ಕಾಂಗ್ರೆಸ್‌ ಪಕ್ಷವು ಕೊನೆಗೂ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದು, ರಾಜ್ಯಸಭೆ ಚುನಾವಣೆಗೆ ಮೊದಲನೇ ಅಭ್ಯರ್ಥಿಯಾಗಿ ಜೈರಾಮ್‌ ರಮೇಶ್‌ ಹಾಗೂ ಎರಡನೇ ಅಭ್ಯರ್ಥಿಯಾಗಿ ಮನ್ಸೂರ್‌ ಅಲಿಖಾನ್‌ ಅವರು ಸೋಮವಾರ ಉಮೇದುವಾರಿಕೆ ಸಲ್ಲಿಕೆ ಮಾಡಿದ್ದಾರೆ. ಜೂನ್‌ 10ರಂದು ನಾಲ್ಕು ಸ್ಥಾನಗಳಿಗೆ ನಡೆಯಲಿರುವ ರಾಜ್ಯಸಭೆ ಚುನಾವಣೆಗೆ ಕಾಂಗ್ರೆಸ್‌ ಸ್ವಂತ ಬಲದಿಂದ ಒಂದು ಸ್ಥಾನ ಗೆಲ್ಲಲು ಮಾತ್ರ ಅವಕಾಶವಿದ್ದರೂ, ಅಂತಿಮ ಹಂತದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಮನ್ಸೂರ್‌ ಅಲಿ ಖಾನ್‌ ಅವರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ.

ವಿಧಾನಸೌಧದ ಕಾಂಗ್ರೆಸ್‌ ಶಾಸಕಾಂಗ ಪಕ್ಷದ ಕಚೇರಿಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಂದ ಬಿ-ಫಾರಂ ಸ್ವೀಕರಿಸಿದ ಜೈರಾಮ್‌ ರಮೇಶ್‌, ಮನ್ಸೂರ್‌ ಅಲಿ ಖಾನ್‌ ಅವರು ವಿಧಾನಸಭೆ ಕಾರ್ಯದರ್ಶಿ ಹಾಗೂ ರಾಜ್ಯಸಭೆ ಚುನಾವಣೆಯ ಚುನಾವಣಾಧಿಕಾರಿಯಾಗಿರುವ ಎಂ.ಕೆ. ವಿಶಾಲಾಕ್ಷಿ ಅವರಿಗೆ ನಾಮಪತ್ರ ಸಲ್ಲಿಸಿದರು. ಈ ವೇಳೆ ಜೈರಾಮ್‌ ರಮೇಶ್‌ ಅವರಿಗೆ ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕ ಎಚ್‌.ಕೆ. ಪಾಟೀಲ್‌ ಅವರು ಸಾಥ್‌ ನೀಡಿದರು. ಮನ್ಸೂರ್‌ ಅಲಿ ಖಾನ್‌ ಅವರಿಗೆ ಡಿ.ಕೆ. ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರು ಸಾಥ್‌ ನೀಡಿದರು.

Rajya Sabha Election: ಸಿದ್ದು, ಡಿಕೆಶಿ ಭೇಟಿಯಾದ ಜೈರಾಂ: 30ಕ್ಕೆ ನಾಮಪತ್ರ?

ಎರಡನೇ ಅಭ್ಯರ್ಥಿ ಗೆಲ್ಲುವ ವಿಶ್ವಾಸ: ನಾಮಪತ್ರ ಸಲ್ಲಿಕೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಶಿವಕುಮಾರ್‌, ನಮ್ಮದೂ ಕೆಲವು ಲೆಕ್ಕಾಚಾರ ಇರುತ್ತದೆ. ನಾಲ್ಕನೇ ಅಭ್ಯರ್ಥಿ ಗೆಲುವಿಗೆ ಎಲ್ಲಾ ಪಕ್ಷಗಳಿಗೂ ಹೆಚ್ಚುವರಿ ಮತಗಳು ಅಗತ್ಯವಿದೆ. ಹೀಗಾಗಿ ಒಬ್ಬ ಸಜ್ಜನ ವ್ಯಕ್ತಿ, ಯುವಕನಿಗೆ ಎರಡನೇ ಅಭ್ಯರ್ಥಿಯಾಗಿ ಅವಕಾಶ ಕೊಟ್ಟಿದ್ದೇವೆ. ಎಲ್ಲ ಶಾಸಕರು ತಮ್ಮ ಆತ್ಮ ಸಾಕ್ಷಿಯಿಂದ ಇವರಿಗೆ ಮತ ನೀಡಬೇಕು. ನಮ್ಮ ಪ್ರಕಾರ ಮನ್ಸೂರ್‌ ಅಲಿಖಾನ್‌ ಅವರು ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ. ಜೆಡಿಎಸ್‌ ಅವರು ನಮ್ಮನ್ನು ಬೆಂಬಲ ಕೊಡಿ ಎಂದು ಕೇಳಿದ್ದಾರೆ. ನಾವು ನೀವು ನಮ್ಮ ಎರಡನೇ ಅಭ್ಯರ್ಥಿಗೆ ಬೆಂಬಲ ಕೊಡಿ ಎಂದು ಕೇಳಿದ್ದೇವೆ. ಏನಾಗುತ್ತೋ ನೋಡೋಣ ಎಂದು ಹೇಳಿದರು.

ಕಾಂಗ್ರೆಸ್‌ ಕೈ ಬಿಟ್ಟ ಸಿಬಲ್, ಹಿರಿಯ ನಾಯಕನ ಈ ನಡೆ ಹಿಂದಿದೆ ಆ ಒಂದು ಕಾರಣ!

ಜೈರಾಂ ರಮೇಶ್‌ ಬಗ್ಗೆ ಸಮರ್ಥನೆ: ಜೈರಾಮ್‌ ರಮೇಶ್‌ ಅವರ ಸ್ಪರ್ಧೆಯನ್ನು ಸಮರ್ಥಿಸಿಕೊಂಡ ಅವರು, ಜೈರಾಮ್‌ ರಮೇಶ್‌ ಅವರ ಕೊಡುಗೆ ನಿಮ್ಮ ಕಣ್ಣಿಗೆ ಕಾಣದಿರಬಹುದು. ಅವರು ಕರ್ನಾಟಕ ಮೂಲದವರು. ಇಡೀ ರಾಷ್ಟ್ರಕ್ಕೆ ಪಕ್ಷದ ಮೂಲಕ ಕೊಡುಗೆ ನೀಡಿದ್ದಾರೆ. ಹೀಗಾಗಿ ಹೈಕಮಾಂಡ್‌ ನಿರ್ಧಾರದಂತೆ ಅವರು ಕಣಕ್ಕಿಳಿದಿದ್ದಾರೆ ಎಂದು ಹೇಳಿದರು. ಇದೇ ವೇಳೆ ನಮ್ಮಲ್ಲಿ ಕೆಲವರಿಗೆ ಅನ್ಯಾಯವಾಗಿದೆ. ಅವರು ನಮ್ಮ ಸ್ನೇಹಿತರಾಗಿದ್ದು, ಅತಿ ಶೀಘ್ರದಲ್ಲಿ ಅವರಿಗೆ ನ್ಯಾಯ ಕೊಡಿಸುವ ಪ್ರಯತ್ನ ಮಾಡುತ್ತೇನೆ. ಇನ್ನು ಸುದರ್ಶನ್‌ ಅವರ ಹೇಳಿಕೆ ಬಗ್ಗೆ ನನಗೆ ಗೊತ್ತಿಲ್ಲ. ಈ ಬಗ್ಗೆ ಸೋನಿಯಾ ಗಾಂಧಿ ಅವರ ಬಳಿ ಕೇಳಿ ಹೇಳುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.