ಭೋಪಾಲ್, (ಡಿ.22)​: ಕಾಂಗ್ರೆಸ್​ ತನ್ನ ಪಕ್ಷದ ಯುವ ಘಟಕಕ್ಕೆ ತನ್ನ ಪಕ್ಷದ ಕಾರ್ಯಕರ್ತರನ್ನು ಆಯ್ಕೆ ಮಾಡುವ ಬದಲು ಬಿಜೆಪಿಯ ನಾಯಕನನ್ನು ಆಯ್ಕೆ ಮಾಡಿ ನಗೆಪಾಟಲಿಗಿಡಾಗಿದೆ. 

ಹೌದು... ಜ್ಯೋತಿರಾದಿತ್ಯ ಸಿಂಧ್ಯಾ ಅವರ ಜತೆ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದ ಹಾಗೂ ಈಗ ಬಿಜೆಪಿ ನಾಯಕನಾಗಿರುವ ಹರ್ಷಿತ್ ಸಿಂಘೈ ಎಂಬವರನ್ನು ಮಧ್ಯ ಪ್ರದೇಶದ ತನ್ನ ಯುವ ಘಟಕದ ಪ್ರಧಾನ ಕಾರ್ಯದರ್ಶಿಯನ್ನಾಗಿ ಆಯ್ಕೆ ಮಾಡಿ ಕಾಂಗ್ರೆಸ್ ಪೇಚಿಗೀಡಾಗಿದೆ. 

'ಕೈ'ಗೆ ಗುಡ್​​ಬೈ: ಜೆಡಿಎಸ್ ಜೊತೆ ಮೈತ್ರಿ ಬಗ್ಗೆ ಬಿಜೆಪಿ ಶಾಸಕ ಸುಳಿವು

ಮಧ್ಯಪ್ರದೇಶದ ರಾಜಕೀಯ ನಾಯಕ ಜ್ಯೋತಿರಾದಿತ್ಯಾ ಸಿಂಧ್ಯಾ ಕಾಂಗ್ರೆಸ್​ ತ್ಯಜಿಸಿ, ಬಿಜೆಪಿ ಸೇರ್ಪಡೆಗೊಂಡು ಹಲವು ತಿಂಗಳುಗಳೇ ಕಳೆದಿದೆ. ಜ್ಯೋತಿರಾದಿತ್ಯಾ ಅವರ ಬೆನ್ನಲ್ಲೇ ಹಲವು ನಾಯಕರು ಕಾಂಗ್ರೆಸ್​ ತ್ಯಜಿಸಿ ಬಿಜೆಪಿ ಸೇರ್ಪಡೆಗೊಂಡಿದ್ದರು. ಅದರಲ್ಲಿ ಎನ್​ಎಸ್​ಯುಐ ನಾಯಕ ಹರ್ಷಿತ್​ ಸಿಂಘೈ ಕೂಡ ಒಬ್ಬರು. 

ಅವರು ಪಾರ್ಟಿ ತ್ಯಜಿಸಿ ಸರಿ ಸುಮಾರು 9 ತಿಂಗಳು ಕಳೆದಿದೆ. ಇದೀಗ ಮಧ್ಯಪ್ರದೇಶ ಯುವ ಕಾಂಗ್ರೆಸ್​ ಘಟಕವು ಹರ್ಷಿತ್​ ಅವರನ್ನು ಜಬಲ್ಪುರದ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಆಯ್ಕೆ ಮಾಡಿ, ಹಲವು ಗಂಟೆಗಳ ನಂತರ ಎಚ್ಚೆತ್ತುಕೊಂಡ ಪಕ್ಷ ನೇಮಕಾತಿಯನ್ನು ರದ್ದು ಮಾಡಿದೆ.

ಹರ್ಷಿತ್​ ಅವರು ಪ್ರಧಾನ ಕಾರ್ಯದರ್ಶಿ ಚುನಾವಣೆಗೆ 2018ರಲ್ಲಿಯೇ ನಾಮಪತ್ರ ಸಲ್ಲಿಸಿದ್ದರಂತೆ. ಆದರೆ ಅದಾದ ಮೇಲೆ ಚುನಾವಣೆಯನ್ನು ಸ್ಥಗಿತಗೊಳಿಸಲಾಗಿತ್ತು. ಈ ವರ್ಷದ ಆರಂಭದಲ್ಲಿ ಅವರು ಕಾಂಗ್ರೆಸ್​ ತ್ಯಜಿಸಿ ಬಿಜೆಪಿ ಸೇರಿದ್ದು, ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದರು. ಅದರ ಜತೆ ನಾಮಪತ್ರವೂ ರದ್ದಾಗಿತ್ತು. ನವೆಂಬರ್​ನಲ್ಲಿ ನಾಮಪತ್ರ ಹಿಂಪಡೆದಿರುವುದಾಗಿಯೂ ಕಾಂಗ್ರೆಸ್​ನ ಕಚೇರಿಗೆ ಇ ಮೇಲ್​ ಮಾಡಿದ್ದರಂತೆ. ಆದರೂ ಅದನ್ನು ಗಮನಿಸದ ಪಕ್ಷ, ಅವರನ್ನೇ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆ ಮಾಡಿದೆ. ಚುನಾವಣಾ ಫಲಿತಾಂಶ ಹೊರಬಿದ್ದಂತೆ ಸಾಕಷ್ಟು ಜನರು ಹರ್ಷಿತ್​ ಅವರಿಗೆ ಅಭಿನಂದನೆಗಳನ್ನೂ ಸಲ್ಲಿಸಿದ್ದಾರೆ.