* ಕೃಷ್ಣಾ ಕೊಳ್ಳಕ್ಕೆ .10000 ಕೊಡ್ತೀನಿ ಎಂದು ಆಣೆ ಮಾಡಿದ್ದ ಸಿದ್ದು ಮಾತು ತಪ್ಪಿದರು* ಕಾಂಗ್ರೆಸ್ಸಿಂದ ನೀರಾವರಿ ಮೋಸ: ಸಿಎಂ* ಕಾಂಗ್ರೆಸ್‌ ಅಚ್ಛೇದಿನ್‌ ಮುಕ್ತಾಯ* ಸಿಂದಗಿಯಲ್ಲಿ ಪ್ರತಿಪಕ್ಷಕ್ಕೆ ಬೊಮ್ಮಾಯಿ ಚಾಟಿ 

ಆಲಮೇಲ(ಅ.20): ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ(Irrigation Projects in North Karnataka) ವಿಚಾರವಾಗಿ ಕಾಂಗ್ರೆಸ್ಸಿಗರು(Congress) ಎ, ಬಿ ಸ್ಕೀಮ್‌ ಎಂದು ಕಳೆದ 40 ವರ್ಷಗಳಿಂದ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡಿದ್ದಾರೆ. ಆದರೆ ಉತ್ತರ ಕರ್ನಾಟಕ ಅಭಿವೃದ್ಧಿಗೆ(Development Of Uttara Karnataka) ನಮ್ಮ ಯೋಜನೆಗಳು ಸಾಕ್ಷಿಯಾಗಿವೆ. ಕೆರೆ ತುಂಬಿಸುವ ಯೋಜನೆ ವಿಜಯಪುರ ಜಿಲ್ಲೆಯಿಂದಲೇ ಪ್ರಾರಂಭವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(CM Badsavaraj Bommai) ತಿರುಗೇಟು ನೀಡಿದ್ದಾರೆ.

ವಿಜಯಪುರ ಜಿಲ್ಲೆಯ ಆಲಮೇಲದ ಎ.ಕೆ.ನಂದ ಕಾಲೇಜು ಆವರಣದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್‌ ಭೂಸನೂರು ಪರವಾಗಿ ಆಯೋಜಿಸಿದ್ದ ಪ್ರಚಾರ ಸಮಾವೇಶದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ನೀರಾವರಿ ಯೋಜನೆಗಳ ವಿಚಾರವಾಗಿ ಪ್ರತಿಪಕ್ಷ ಕಾಂಗ್ರೆಸ್‌ ಅನ್ನು ತೀವ್ರವಾಗಿ ಟೀಕಿಸಿದರು. ಈ ವೇಳೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ಅವರನ್ನೂ ತರಾಟೆಗೆ ತೆಗೆದುಕೊಂಡರು. ಕೃಷ್ಣೆ ವಿಚಾರವಾಗಿ ಆಣೆ ಮಾಡಿ ಮಾತು ತಪ್ಪಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಇದೀಗ ಪ್ರಧಾನಿ ಮೋದಿ(PM Narendra Modi) ಬಗ್ಗೆ ಹಗುರವಾಗಿ ಮಾತನಾಡುತ್ತಿದ್ದಾರೆ ಎಂದು ದೂರಿದರು.

ಮುಳವಾಡ, ರೇವಣಸಿದ್ದ ಏತ ನೀರಾವರಿ ಸೇರಿದಂತೆ ಇತರೆ ನೀರಾವರಿ ಯೋಜನೆಗಳಿಗೆ ನಾನು ನೀರಾವರಿ ಮಂತ್ರಿ ಆಗಿದ್ದಾಗ ಅನುದಾನ ಮಂಜೂರು ಮಾಡಿದ್ದೇನೆ. ಕಾಂಗ್ರೆಸ್‌ನವರು ಎ, ಬಿ ಸ್ಕೀಮ್ ಎಂದು 40 ವರ್ಷಗಳಿಂದ ಬರೀ ಸುಳ್ಳು ಹೇಳುತ್ತಾ ಜನರಿಗೆ ಮೋಸ ಮಾಡಿದ್ದಾರೆ ಎಂದರು.

ಮಾತು ತಪ್ಪಿದ ಸಿದ್ದು:

‘ಕಾಂಗ್ರೆಸ್‌ ನಡೆ ಕೃಷ್ಣೆ ಕಡೆಗೆ’ ನಡೆಸಿ ಕೃಷ್ಣಾ ಯೋಜನೆಗಳಿಗೆ(Krishna Project) ಪ್ರತಿವರ್ಷ .10 ಸಾವಿರ ಕೋಟಿ ಕೊಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ, ನಂತರ ಮಾತು ಬದಲಿಸಿ, ರಾಜ್ಯದ ಇಡೀ ನೀರಾವರಿ ಯೋಜನೆಗಳಿಗೆ ಅನುದಾನ ಕೊಡುತ್ತೇವೆ ಎಂದು ಹೇಳಿದರು. ಕೃಷ್ಣೆ ಮೇಲೆ ಆಣೆ ಮಾಡಿದ್ದ ಸಿದ್ದರಾಮಯ್ಯ(Siddaramaiah) ಮಾತು ತಪ್ಪಿದ್ದಾರೆ. ಈಗ ಪ್ರಧಾನಿ ಮೋದಿ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ. ಇದರಿಂದ ಅವರೇ ಸಣ್ಣವರಾಗುತ್ತಿದ್ದಾರೆ. ಮೋದಿ ದೊಡ್ಡವರಾಗುತ್ತಾರೆ. ಸಿದ್ದರಾಮಣ್ಣ ನಮ್ಮ ಜೊತೆ ಚೆನ್ನಾಗಿದ್ದರು, ಕಾಂಗ್ರೆಸ್‌ಗೆ ಹೋಗಿ ಕೆಟ್ಟರು ಎಂದು ವ್ಯಂಗ್ಯವಾಡಿದರು.

ವಿಶೇಷ ಯೋಜನೆ ತರುತ್ತೇವೆ:

ಇದೇ ವೇಳೆ, ಎಸ್‌ಸಿ- ಎಸ್‌ಟಿ ಹೆಣ್ಣು ಮಕ್ಕಳಿಗೆ ವಿಶೇಷ ಯೋಜನೆಯನ್ನು ತರುತ್ತೇವೆ. ತಳವಾರ, ಪರಿವಾರ ಜಾತಿಗಳ ಬೇಡಿಕೆ ಈಡೇರುವ ಕಾಲ ಬಂದಿದೆ ಎಂದ ಸಿಎಂ ಬೊಮ್ಮಾಯಿ, ಕುರುಬ, ಲಿಂಗಾಯತ, ತಳವಾರ, ಪರಿವಾರ ಸಮುದಾಯಗಳಿಗೆ ಆದ ಅನ್ಯಾಯವನ್ನು ಸರಿಪಡಿಸುತ್ತೇವೆ. ಕಾನೂನು ಸಮಿತಿ ರೂಪಿಸಿ ನ್ಯಾಯ ಕೊಡುತ್ತೇವೆ ಎಂದು ಭರವಸೆ ನೀಡಿದರು.

ಮನೆಗಳಿಗೆ ‘ಭಾಗ್ಯ’ ತಲುಪಲಿಲ್ಲ:

ಜನರು ಬರಿ ಭಾಗ್ಯಗಳಿಗೆ ಮರುಳಾಗುತ್ತಾರೆ ಎಂಬ ಭ್ರಮೆಯಲ್ಲಿದ್ದ ಸಿದ್ದರಾಮಯ್ಯ, ಮತ್ತೆ ತಮ್ಮದೇ ಸರ್ಕಾರ ಬರುತ್ತದೆ ಎಂದು ತಿಳಿದುಕೊಂಡಿದ್ದರು. ಕಾಂಗ್ರೆಸ್‌ನವರು ಅಧಿಕಾರಕ್ಕೆ ಬಂದಿದ್ದೇ ನಮ್ಮ ದೌರ್ಭಾಗ್ಯ. ಆದರೆ, ರಾಜ್ಯದ ಜನರು ಮೂರ್ಖರಲ್ಲ. ಹೀಗಾಗಿ, 2018ರಲ್ಲಿ ಕಾಂಗ್ರೆಸ್‌ಗೆ ಬಹುಮತ ನೀಡಲಿಲ್ಲ. ಅವರ ಭಾಗ್ಯಗಳು ಯಾರ ಮನೆಗೂ ತಲುಪಿಲ್ಲ. ಹೀಗಾಗಿ ಜನ ಅವರನ್ನು ಬಹಿಷ್ಕಾರ ಮಾಡಿದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಕಾಂಗ್ರೆಸ್‌ನವರಿಗೆ ಬಹುಮತ ಸಿಗದ ಕಾರಣ ಅಪವಿತ್ರ ಸಮ್ಮಿಶ್ರ ಸರ್ಕಾರ ಮಾಡಿಕೊಂಡರು. ಜೆಡಿಎಸ್‌ನವರ ಮನೆ ಬಾಗಿಲಿಗೆ ಹೋಗಿ ಅಧಿಕಾರದ ಭಿಕ್ಷೆ ಬೇಡಿದರು. ಇದು ಪೂರ್ಣಾವಧಿ ಸರ್ಕಾರ ಅಲ್ಲ ಎಂದು ತಿಳಿದುಕೊಂಡ ಅಲ್ಲಿನ ಕೆಲ ಶಾಸಕರು ಬಿಜೆಪಿ ಸೇರಿದರು ಎಂದು ಹೇಳಿದರು. ಈ ಮೂಲಕ ಬಿಜೆಪಿಯದ್ದು ಅಪವಿತ್ರ ಮೈತ್ರಿ ಎಂದು ಟೀಕಿಸುತ್ತಿದ್ದ ಸಿದ್ದರಾಮಯ್ಯ ಅವರಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.

ಕಾಂಗ್ರೆಸ್‌ನವರು ಏನು ತ್ಯಾಗ ಮಾಡಿದ್ದಾರೆ ಎನ್ನುವುದನ್ನು ಹೇಳಲಿ. ಸುಭಾಶ್ಚಂದ್ರ ಬೋಸ್‌, ಲೋಕಮಾನ್ಯ ತಿಲಕ್‌, ಭಗತ್‌ ಸಿಂಗ್‌, ಚಂದ್ರಶೇಖರ ಆಜಾದ್‌ ಸೇರಿ ಲಕ್ಷಾಂತರ ಜನರು ದೇಶಕ್ಕೆ ಪ್ರಾಣ ಕೊಟ್ಟಿದ್ದಾರೆ. ಇವರೆಲ್ಲ ಏನು ಕಾಂಗ್ರೆಸ್‌ನವರಾ? ಆದರೆ, ಕಾಂಗ್ರೆಸ್‌ನವರು ಕೇವಲ ನೆಹರು ಮನೆತನದ ತ್ಯಾಗದ ಬಗ್ಗೆ ಮಾತ್ರ ಏಕೆ ಹೇಳುತ್ತಾರೆ? ಸ್ವಾತಂತ್ರ್ಯ ಬಂದಿದ್ದು ವೀರರಿಂದ ವಿನಃ ಹೇಡಿಗಳಿಂದಲ್ಲ. ಪ್ರತಿಯೊಬ್ಬ ದೇಶಾಭಿಮಾನಿಯೂ ಆರ್‌ಎಸ್‌ಎಸ್‌ಗೆ ಸೇರಿದವರು ಎಂಬುದನ್ನು ಸಿದ್ದರಾಮಯ್ಯ ಸೇರಿ ಕಾಂಗ್ರೆಸ್‌ ಮುಖಂಡರು ಅರಿತುಕೊಳ್ಳಬೇಕು ಎಂದು ಖಾರವಾಗಿಯೇ ಹೇಳಿದರು.

ಕಾಂಗ್ರೆಸ್‌ ಅಚ್ಛೇದಿನ್‌ ಮುಗಿದಿದೆ:

ಕಾಂಗ್ರೆಸ್‌ನವರಿಗೆ ಅಧ್ಯಕ್ಷರು ಯಾರು ಎನ್ನುವುದೇ ಗೊತ್ತಿರಲಿಲ್ಲ. ಅಂದೇ ಮಹಾತ್ಮ ಗಾಂಧೀಜಿ ಕಾಂಗ್ರೆಸ್‌ ವಿಸರ್ಜನೆ ಮಾಡಲು ಹೇಳಿದ್ದರು ಎಂದ ಅವರು, ನರೇಂದ್ರ ಮೋದಿ ಪ್ರಧಾನಿಯಾದ ಮೇಲೆ ಕಾಂಗ್ರೆಸ್‌ನ ಅಚ್ಛೇದಿನ್‌ ಮುಗಿದಿದೆ. ಕಾಂಗ್ರೆಸ್‌ನವರು ಇನ್ನು ಮನೆಗೆ ಹೋಗುವುದು ಖಚಿತ. ಕಾಂಗ್ರೆಸ್‌ ಪಕ್ಷಕ್ಕೆ ಬೇರಾರೂ ಗತಿಯೇ ಇಲ್ಲ. ಹೀಗಾಗಿ, ಸೋನಿಯಾ ಗಾಂಧಿ ನಾನೇ ಅಧ್ಯಕ್ಷೆ ಎಂದು ಸ್ವಯಂ ಆಗಿ ಘೋಷಿಸಿಕೊಂಡಿದ್ದಾರೆ ಎಂದು ಟೀಕಿಸಿದರು.

ಅಚ್ಛೇ ದಿನ್‌ ಯಾರಿಗೆ ಬಂದಿದೆ ಎಂಬ ಮಾಜಿ ಸಿಎಂ ಸಿದ್ದರಾಮಯ್ಯ ಟೀಕೆಗೆ ಉತ್ತರಿಸಿದ ಅವರು, ಅಚ್ಛೇದಿನ್‌ ರೈತರಿಗೆ ಬಂದಿದೆ. ರೈತರನ್ನು ಕೇಳಿ ಅಚ್ಛೇ ದಿನ್‌ ಹೇಗೆ ಬಂದಿದೆ ಎಂದು. ಮಹಿಳೆಯರಿಗೆ ಗ್ಯಾಸ್‌ ಸಿಲಿಂಡರ್‌ ಮೂಲಕ ಅಚ್ಛೇದಿನ್‌ ಬಂದಿದೆ ಎಂದು ತಿರುಗೇಟು ನೀಡಿದರು.

ಬೊಮ್ಮಾಯಿ ತರಾಟೆ

- ಕಾಂಗ್ರೆಸ್ಸಿಗರಿಗೆ ಅಧ್ಯಕ್ಷರು ಯಾರೆಂದೇ ಗೊತ್ತಿಲ್ಲ

- ಲಕ್ಷಾಂತರ ಜನರು ದೇಶಕ್ಕೆ ಪ್ರಾಣ ಕೊಟ್ಟಿದ್ದಾರೆ

- ನೆಹರು ಮನೆತನದ ಬಗ್ಗೆಯಷ್ಟೇ ಕಾಂಗ್ರೆಸ್‌ ಮಾತು

- ಸಿದ್ದು ನಮ್ಮ ಜತೆಗಿದ್ದರು, ಕಾಂಗ್ರೆಸ್‌್ಸಗೆ ಹೋಗಿ ಕೆಟ್ಟರು

- ಕೃಷ್ಣಾ ಎ, ಬಿ ಸ್ಕೀಂ ಎಂದು ಕಾಂಗ್ರೆಸ್ಸಿಗರಿಂದ ಮೋಸ

- ಮೋದಿ ಬಗ್ಗೆ ಸಿದ್ದರಾಮಯ್ಯರಿಂದ ಹಗುರ ಮಾತು

- ಇದರಿಂದ ಮೋದಿ ದೊಡ್ಡವರಾಗ್ತಾರೆ, ಸಿದ್ದು ಸಣ್ಣವರಾಗ್ತಾರೆ