ಒಬಿಸಿ ವೋಟ್‌ಬ್ಯಾಂಕ್ ಮಾಡಿಕೊಳ್ಳುವ ಕಾಂಗ್ರೆಸ್‌ ಹುನ್ನಾರ ಫಲಿಸುವುದಿಲ್ಲ: ಮಾಜಿ ಸಿಎಂ ಬೊಮ್ಮಾಯಿ

ಜಾತಿ ಗಣತಿ ವರದಿ ಪಡೆದಿದ್ದರೂ ಬಹಿರಂಗಪಡಿಸದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಲಾಭಕ್ಕೆ ಜಾತಿ ಮತಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು.

Congress attempt to make OBC vote bank will not work Says Basavaraj Bommai gvd

ಹಾನಗಲ್ಲ (ಮಾ.18): ಹಿಂದುಳಿದ ವರ್ಗಗಳನ್ನು ವೋಟ್‌ಬ್ಯಾಂಕ್ ಮಾಡಿಕೊಳ್ಳುವ ಕಾಂಗ್ರೆಸ್‌ನ ಹುನ್ನಾರ ಈ ಬಾರಿ ಫಲಿಸುವುದಿಲ್ಲ. ಜಾತಿ ಗಣತಿ ವರದಿ ಪಡೆದಿದ್ದರೂ ಬಹಿರಂಗಪಡಿಸದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣಾ ಲಾಭಕ್ಕೆ ಜಾತಿ ಮತಗಳನ್ನು ಬಳಸಿಕೊಳ್ಳುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ಹಾವೇರಿ ಲೋಕಸಭಾ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಕಿಡಿ ಕಾರಿದರು. ಹಾನಗಲ್ಲಿನಲ್ಲಿ ಭಾನುವಾರ ಬಿಜೆಪಿ ಕಾರ್ಯಕರ್ತರ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ವೀರಾವೇಶದಿಂದ ಭಾಷಣ ಮಾಡುತ್ತಾರೆಯೇ ಹೊರತು ರಾಜ್ಯದ ಪ್ರಗತಿ ಮಾತ್ರ ಶೂನ್ಯ. 

ಸುಳ್ಳು ಹಾಗೂ ಮೋಸದ ವ್ಯವಸ್ಥೆಯನ್ನು ಕಟ್ಟಿಕೊಡುವ ಕರ್ನಾಟಕದ ದರಿದ್ರ ಸರ್ಕಾರದ ಬಗ್ಗೆ ಜನ ಬೇಸತ್ತಿದ್ದಾರೆ. ಖಜಾನೆ ಖಾಲಿ ಮಾಡಿ ಯಾವುದೇ ನೀರಾವರಿ, ಕೃಷಿ ಇತರ ಅಭಿವೃದ್ಧಿ ಕೆಲಸಗಳಿಗೆ ಒಂದು ನಯಾಪೈಸೆಯನ್ನು ಬಿಡುಗಡೆ ಮಾಡದ ಈ ಕಾಂಗ್ರೆಸ್ ಸರ್ಕಾರದ್ದು ಸಾಲ ಮಾಡಿದ್ದೇ ಸಾಧನೆ. ಬಡವರು ರೈತರನ್ನು ಬರ ಕಾಡುತ್ತಿದೆ. ಈ ವರೆಗೂ ಕುಡಿಯುವ ನೀರಿಗಾಗಿ ಅನುದಾನ ಬಿಡುಗಡೆಯಾಗಿಲ್ಲ. ರೈತರಿಗೆ ಬರ ಪರಿಹಾರವಿಲ್ಲ. ಮೋದಿ ಸರ್ಕಾರ ನೀಡುವ ೫ ಕೆಜಿ ಅಕ್ಕಿಯನ್ನು ತಮ್ಮ ಯೋಜನೆ ಎಂದು ಹೇಳಿಕೊಳ್ಳುವುದನ್ನು ಬಿಟ್ಟರೆ ಒಂದು ಕಾಳು ಅಕ್ಕಿ ಕೊಡಲು ಇವರಿಂದ ಸಾಧ್ಯವಾಗಿಲ್ಲ ಎಂದು ಹರಿಹಾಯ್ದ ಅವರು, ಕಾಂಗ್ರೆಸ್‌ನವರದು ಶೇಖ ಮಹಮ್ಮದನ ಕಥೆಯಾಗಿದೆ ಎಂದು ಕಥೆ ಹೇಳಿದರು.

ವಿಧಾನಸಭೆ ಮಾಜಿ ಉಪಸಭಾಪತಿ ಮನೋಹರ ತಹಶೀಲ್ದಾರ ಮಾತನಾಡಿ, ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಇದ್ದ ಪರಿಸ್ಥಿತಿಯೇ ಬೇರೆ. ಈಗ ಇಡೀ ದೇಶದಲ್ಲಿ ಮೋದಿಜೀ ಅಭಿವೃದ್ಧಿ ಕಾರ್ಯಗಳು ಮಾತನಾಡುತ್ತಿವೆ. ಮತದಾರರು ಬಿಜೆಪಿ ಗೆಲ್ಲಿಸಲು ಕಾತರದಿಂದ ಕಾಯುತ್ತಿದ್ದಾರೆ. ಈಗ ಭಾರತ ವಿಶ್ವ ಭೂಪಟದಲ್ಲಿ ಕಂಗೊಳಿಸುತ್ತಿದೆ. ನರೇಂದ್ರ ಮೋದಿ ವಿಶ್ವನಾಯಕರಾಗಿದ್ದಾರೆ. ಭಾರತದ ಜನರ ಆರ್ಥಿಕ, ಸಾಮಾಜಿಕ ಉನ್ನತಿಗಾಗಿ ಹತ್ತು ವರ್ಷಗಳ ಕಾಲ ಜನಮೆಚ್ಚುವ ಆಡಳಿತ ನೀಡಿದ ಮೋದಿಜೀಯನ್ನು ಮೂರನೇ ಬಾರಿಗೆ ಪ್ರಧಾನಿ ಮಾಡಲು ನಾವೆಲ್ಲ ಬಿಜೆಪಿಗೆ ಮತದಾನ ಮಾಡೋಣ ಎಂದರು.

ಲೋಕಸಭೆ ಅಭ್ಯರ್ಥಿಗಳ ಹಿನ್ನೆಲೆ ತಿಳಿಸಲು ಆ್ಯಪ್‌: ಚುನಾವಣಾಧಿಕಾರಿ ಮನೋಜ್ ಕುಮಾರ್

ಮಾಜಿ ಶಾಸಕ ಶಿವರಾಜ ಸಜ್ಜನರ ಮಾತನಾಡಿ, ಹಾನಗಲ್ಲು ಬಿಜೆಪಿಯ ಭದ್ರಕೋಟೆ, ಕಾಂಗ್ರೆಸಿಗರ ಸುಳ್ಳು ಆಶ್ವಾಸನೆಗಳಿಂದ ಮತದಾರರು ಮೋಸಹೋಗಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ವಿಧಾನಸಭೆಯಲ್ಲಿ ಕಳೆದುಕೊಂಡ ಮತಗಳನ್ನು ಮತ್ತೆ ಪಡೆದು ಎರಡರಷ್ಟು ಅಂತರದ ಗೆಲುವು ಸಾಧಿಸುತ್ತೇವೆ ಎಂದರು. ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ ಪೂಜಾರ, ತಾಲೂಕಾಧ್ಯಕ್ಷ ಮಹೇಶ ಕಮಡೊಳ್ಳಿ, ಜಿಲ್ಲಾ ಉಪಾಧ್ಯಕ್ಷ ರಾಜಶೇಖರಗೌಡ ಕಟ್ಟೇಗೌಡರ, ನಿಂಗಪ್ಪ ಗೊಬ್ಬೇರ, ಶಿವಲಿಂಗಪ್ಪ ತಲ್ಲೂರ, ಮುಖಂಡರಾದ ಪದ್ಮನಾಭ ಕುಂದಾಪುರ, ರಾಜಣ್ಣ ಪಟ್ಟಣದ, ಬಸವರಾಜ ಹಾದಿಮನಿ, ಶೋಭಾ ನಿಸ್ಸಿಂಗೌಡರ, ಬಿ.ಎಸ್. ಅಕ್ಕಿವಳ್ಳಿ, ಎ.ಎಸ್. ಬಳ್ಳಾರಿ, ಸಿದ್ದಣ್ಣ ಚಿಕ್ಕಬಿದರಿ, ಚಂದ್ರಪ್ಪ ಹರಿಜನ, ಎಸ್.ಎಂ. ಕೊತಂಬರಿ, ಮಲ್ಲಿಕಾರ್ಜುನ ಅಗಡಿ, ಸಂತೋಷ ಟೀಕೋಜಿ, ಸಂತೋಷ ಭಜಂತ್ರಿ ಇದ್ದರು.

Latest Videos
Follow Us:
Download App:
  • android
  • ios