ಕರ್ನಾಟಕ ವಿಧಾನಸಭೆ ಚುನಾವಣೆ 2023: ಕರಾವಳಿಗೆ ಕಾಂಗ್ರೆಸ್ 8 ಭರವಸೆ
ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರಚನೆ, ವಾರ್ಷಿಕ 2500 ಕೋಟಿ ನೆರವು, ಬಿಲ್ಲವ, ಬಂಟರಿಗೆ ಮಂಡಳಿ, ಬೆಸ್ತರಿಗೆ 10 ಲಕ್ಷ ವಿಮೆ, ಡೀಸೆಲ್ ಸಬ್ಸಿಡಿ.
ಮಂಗಳೂರು(ಜ.23): ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಕರಾವಳಿ ಭಾಗದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿರುವ ಬಿಲ್ಲವರು, ಬಂಟರು, ಮೊಗವೀರರ ಮತ ಸೆಳೆಯಲು ಕಾಂಗ್ರೆಸ್ ಮಹತ್ವದ ಹೆಜ್ಜೆ ಇಟ್ಟಿದೆ. ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರೂಪಿಸಿ ಅದಕ್ಕೆ ವಾರ್ಷಿಕ 2500 ಕೋಟಿ ನೀಡುವುದು, ಬಿಲ್ಲವರು, ಬಂಟರಿಗೆ ಪ್ರತ್ಯೇಕ ಅಭಿವೃದ್ಧಿ ಮಂಡಳಿ, ಮೊಗವೀರರಿಗೆ ತಲಾ 10 ಲಕ್ಷ ವಿಮೆ ಸೇರಿದಂತೆ ಕರಾವಳಿ ಭಾಗಕ್ಕೆ ಎಂಟು ಭರವಸೆಗಳುಳ್ಳ ಪ್ರತ್ಯೇಕ ಚುನಾವಣಾ ಪ್ರಣಾಳಿಕೆಯನ್ನು ಕಾಂಗ್ರೆಸ್ ಘೋಷಿಸಿದೆ.
ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆದ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ವಿಧಾನ ಪರಿಷತ್ ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಅವರು ಕಾಂಗ್ರೆಸ್‌ನ ಪ್ರಣಾಳಿಕೆಯನ್ನು ಪ್ರಕಟಿಸಿದರು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರಾವಳಿ ಭಾಗಕ್ಕೆ ನಾವು ನೀಡಿದ ಎಲ್ಲ ಭರವಸೆಗಳನ್ನು ಈಡೇರಿಸಿಯೇ ಸಿದ್ಧ ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ವಾಗ್ದಾನ ನೀಡಿದರು.
ಸೋಲಿಲ್ಲದ ಸರದಾರ ಅಂಗಾರ ರಾಜಕೀಯ ನಿವೃತ್ತಿ!?, ಯುವ ನಾಯಕರಿಗೆ ಮಣೆ ಹಾಕಿದ ಸುಳ್ಯ ಬಿಜೆಪಿ!
ಸಾಧ್ಯವಾಗೋದನ್ನೇ ಹೇಳಿದ್ದೇವೆ: ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಬರೀ ಘೋಷಣೆ ಮಾಡಲ್ಲ, ಘೋಷಿಸಿದ ಪ್ರತಿ ಯೋಜನೆಗಳನ್ನು ಅಳೆದು, ತೂಗಿ, ಅದಕ್ಕೆ ತಗಲುವ ಹಣಕಾಸು ಬಗ್ಗೆ ಸುದೀರ್ಘ ಚರ್ಚೆ ನಡೆಸಿ, ಯಾವುದನ್ನು ಈಡೇರಿಸಲು ಸಾಧ್ಯವೋ ಆ ಭರವಸೆಗಳನ್ನು ಮಾತ್ರ ಜನರ ಮುಂದೆ ಇರಿಸಿದ್ದೇವೆ ಎಂದರು.
ಬಿಜೆಪಿಯಂತೆ ಅಸಾಧ್ಯವಾದ ಸುಳ್ಳು ಭರವಸೆಗಳನ್ನು ನೀಡಲ್ಲ. ಕಾಂಗ್ರೆಸ್ ಭರವಸೆ ಸುಳ್ಳು ಎನ್ನುವುದಾದರೆ ಮುಖ್ಯಮಂತ್ರಿಬೊಮ್ಮಾಯಿ ಅವರಿಗೆ ನಿಜವಾಗಿಯೂ ತಾಕತ್ತು, ದಮ್ ಇದ್ದರೆ ಒಂದೇ ವೇದಿಕೆಯಲ್ಲಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದ ಅವರು, ಆದರೆ ಅವರು ಚರ್ಚೆಗೆ ಬರಲ್ಲ. ಬರೇ ಮಾತಿನಲ್ಲಿ ತಾಕತ್ತು ದಮ್ ಬರಲ್ಲ, ಜನರಿಗೆ ನೀಡಿದ ಮಾತಿಗೆ ತಕ್ಕಂತೆ ನಡೆದರೆ ಮಾತ್ರ ಬರುತ್ತದೆ ಎಂದು ಲೇವಡಿ ಮಾಡಿದರು.
ಬಿಲ್ಲವ, ಬಂಟರಿಗೆ ಬಿಜೆಪಿ ಏನು ಮಾಡಿದೆ?: ಬಿಜೆಪಿ ಸರ್ಕಾರ ಮೊಗವೀರರು, ಬಿಲ್ಲವರು, ಬಂಟ ಸಮುದಾಯಕ್ಕೆ ಏನು ಮಾಡಿದೆ? ಎಂದು ಪ್ರಶ್ನಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ನಮ್ಮ ಪ್ರಣಾಳಿಕೆ ನಮ್ಮ ಪಕ್ಷದ ಬದ್ಧತೆ ಎಂದರು.
ಕೇಂದ್ರ ಮಾಜಿ ಸಚಿವ ಜನಾರ್ದನ ಪೂಜಾರಿ ತಮ್ಮ ಅನಾರೋಗ್ಯದ ನಡುವೆಯೂ ಸಮಾವೇಶಕ್ಕೆ ಆಗಮಿಸಿ ನಾಯಕರೊಂದಿಗೆ ವೇದಿಕೆ ಹಂಚಿಕೊಂಡರು. ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ, ಮುಖಂಡರಾದ ಡಾ.ಜಿ. ಪರಮೇಶ್ವರ್, ರೋಜಿ ಜಾನ್, ರಮಾನಾಥ ರೈ, ಯು.ಟಿ. ಖಾದರ್, ಅಭಯಚಂದ್ರ ಜೈನ್, ಶಕುಂತಳಾ ಶೆಟ್ಟಿ, ಜೆ.ಆರ್. ಲೋಬೊ, ಮಿಥುನ್ ರೈ, ಮೊಹಿಯುದ್ದೀನ್ ಬಾವ, ವಿನಯ ಕುಮಾರ್ ಸೊರಕೆ ಮತ್ತಿತರರಿದ್ದರು.
ರಾಷ್ಟ್ರ ಪ್ರೇಮ ಯುವ ಜನತೆಯ ಧ್ಯೇಯವಾಗಿರಲಿ: ಬಿ.ಸಿ.ನಾಗೇಶ್
ಏನೇನು ಘೋಷಣೆ?:
1.ಕರಾವಳಿ ಅಭಿವೃದ್ಧಿ ಪ್ರಾಧಿಕಾರ ರೂಪಿಸಿ ಅದಕ್ಕೆ ವಾರ್ಷಿಕ .2500 ಕೋಟಿ ಅನ್ನು ಬಜೆಟ್‌ನಲ್ಲಿ ಮೀಸಲಿಡಲಾಗುವುದು. ಈ ಮೂಲಕ ಕರಾವಳಿಯಲ್ಲಿ ಬಂಡವಾಳ ಹೂಡಿಕೆ, ಉದ್ಯೋಗ ಸೃಷ್ಟಿ, ಪ್ರವಾಸೋದ್ಯಮಕ್ಕೆ ಆದ್ಯತೆ.
2. ಮಂಗಳೂರನ್ನು ಭಾರತದ ಮುಂದಿನ ಐಟಿ ಮತ್ತು ಗಾರ್ಮೆಂಟ್ ಕೈಗಾರಿಕಾ ಹಬ್ ಮಾಡಿ ಒಂದು ಲಕ್ಷ ಉದ್ಯೋಗ.
3. ಪ್ರತಿ ಮೊಗವೀರರಿಗೆ .10 ಲಕ್ಷದ ವಿಮೆ, ಮೀನುಗಾರಿಕಾ ಬೋಟ್ ಖರೀದಿಗೆ ಶೇ.25ರಷ್ಟುಸಬ್ಸಿಡಿ (.25 ಲಕ್ಷ ಸಬ್ಸಿಡಿ), ಡೀಸೆಲ್ ಸಬ್ಸಿಡಿಯನ್ನು ಈಗಿರುವ .10.71ರಿಂದ .25ಕ್ಕೆ ಹೆಚ್ಚಳ, ಡೀಸೆಲ್ ಪ್ರಮಾಣವನ್ನು 300 ಲೀ.ನಿಂದ 500ಕ್ಕೆ ಏರಿಕೆ, ಮಲ್ಪೆ, ಗಂಗೊಳ್ಳಿ, ಮಂಗಳೂರು ಮೀನುಗಾರಿಕಾ ಬಂದರುಗಳ ಡ್ರೆಜ್ಜಿಂಗ್ ಕಾರ್ಯವನ್ನು ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ 6 ತಿಂಗಳಲ್ಲಿ ಪೂರ್ಣ.
4 ಬಿಲ್ಲವರ ಅಭಿವೃದ್ಧಿಗಾಗಿ ಶ್ರೀ ನಾರಾಯಣ ಗುರು ಅಭಿವೃದ್ಧಿ ಬೋರ್ಡ್ ಸ್ಥಾಪಿಸಿ ಪ್ರತಿವರ್ಷ .250 ಕೋಟಿಯಂತೆ 5 ವರ್ಷಗಳಲ್ಲಿ .1,250 ಕೋಟಿ ಅನುದಾನ.
5. ಬಂಟ ಸಮುದಾಯದ ಅಭಿವೃದ್ಧಿಗೂ ಬಂಟರ ಅಭಿವೃದ್ಧಿ ಬೋರ್ಡ್ ಸ್ಥಾಪಿಸಿ ವಾರ್ಷಿಕ .250 ಕೋಟಿನಂತೆ 5 ವರ್ಷಗಳಲ್ಲಿ .1,250 ಕೋಟಿ ಅನುದಾನ.
6. ಅಲ್ಪಸಂಖ್ಯಾತರ ಹಳೆ ಸ್ಕೀಂ ಪುನಾರಂಭ: ಸಿದ್ದರಾಮಯ್ಯ ಕಾಲದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಬಿಡುಗಡೆ ಮಾಡಿದ್ದ .3150 ಕೋಟಿ ಯೋಜನೆ ಪುನರ್ ಆರಂಭ , ಮೋದಿ ಸರ್ಕಾರ ನಿಲ್ಲಿಸಿದ್ದ ಅಲ್ಪಸಂಖ್ಯಾತರ ಸ್ಕಾಲರ್‌ಶಿಪ್ ಪುನರ್ ಆರಂಭ.
7. ಅಡಕೆಗೆ ತಗುಲಿರುವ ಹಳದಿ ರೋಗ, ಕೊಳೆ ರೋಗ ಸಮಸ್ಯೆಗೆ ಪರಿಹಾರ ಕಂಡುಹಿಡಿಯಲು .50 ಕೋಟಿ.
8. ಕೋಮು ಸೌಹಾರ್ದತೆಗಾಗಿ ಪ್ರತಿ ಗ್ರಾಪಂನಲ್ಲಿ ಸ್ವಾಮಿ ವಿವೇಕಾನಂದರ ಹೆಸರಿನಲ್ಲಿ ಸಮಿತಿ ರಚಿಸಿ ಅದಕ್ಕೆ ಸರ್ಕಾರದಿಂದ ಅನುದಾನ.
ಇತರೆ ಭರವಸೆ
- ಮಂಗಳೂರನ್ನು ಐಟಿ, ಗಾರ್ಮೆಂಟ್ಸ್ ಹಬ್ ಮಾಡಿ 1 ಲಕ್ಷ ಉದ್ಯೋಗ ಸೃಷ್ಟಿ
- ಅಲ್ಪಸಂಖ್ಯಾತರ ಅಭಿವೃದ್ಧಿಗೆ .3150 ಕೋಟಿ, ಸ್ಕಾಲರ್‌ಶಿಪ್ ಪುನಾರಂಭ
- ಮಲ್ಪೆ, ಗಂಗೊಳ್ಳಿ, ಮೀನುಗಾರಿಕಾ ಬಂದರು ಡ್ರೆಡ್ಜಿಂಗ್ 6 ತಿಂಗಳಲ್ಲಿ ಪೂರ್ಣ
- ಅಡಕೆಯ ಹಳದಿ, ಕೊಳೆ ರೋಗ ಸಮಸ್ಯೆ ಪರಿಹಾರ ಶೋಧಕ್ಕೆ .50 ಕೋಟಿ
- ಕೋಮು ಸೌಹಾರ್ದತೆಗಾಗಿ ಪ್ರತಿ ಗ್ರಾಪಂನಲ್ಲಿ ವಿವೇಕಾನಂದ ಹೆಸರಲ್ಲಿ ಸಮಿತಿ