*   ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದೆ, ಅದನ್ನು ಮರೆಯೋಣ*  ಸಿದ್ದು ಕೋಪದಲ್ಲಿದ್ದಾರೆ, ಅವರ ಜತೆ ಬಳಿಕ ಮಾತಾಡ್ತೀನಿ* 2018ರ ನಂತರ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಹಿಡಿಯಲಿಲ್ಲವೇ? 

ಬೆಂಗಳೂರು(ಜೂ.09): ಕೋಮುವಾದಿ ಬಿಜೆಪಿಯನ್ನು ದೂರ ಇಡುವುದಕ್ಕಾಗಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಒಂದಾಗಬೇಕು ಎಂದು ಜೆಡಿಎಸ್‌ ನಾಯಕ ಎಚ್‌.ಡಿ.ರೇವಣ್ಣ ಹೇಳಿದ್ದಾರೆ.

ಮಂಗಳವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷಗಳು ಸೇರಿ ಕೋಮುವಾದಿ ಪಕ್ಷ ಬಿಜೆಪಿಯನ್ನು ದೂರ ಇಡಬೇಕು. ಮೊದಲಿನಿಂದಲೂ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಅವರದ್ದು ಅದೇ ಆಶಯ ಇತ್ತು. ಹಿಂದೆ ಸರ್ಕಾರ ರಚನೆಯಾಗಿದ್ದಾಗ, ನಂತರ ನಡೆದ ಘಟನೆಗಳಿಂದ ಸಣ್ಣಪುಟ್ಟಭಿನ್ನಾಭಿಪ್ರಾಯ ಇರುತ್ತದೆ. ಅದನ್ನು ಮರೆಯಬೇಕು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಸಹ ಅದನ್ನೆಲ್ಲಾ ಮರೆಯಬೇಕು ಎಂದು ಮನವಿ ಮಾಡಿದರು.

ಪ್ರೀತಂಗೌಡಗೆ ಪ್ರತಿಸವಾಲು ಹಾಕಿದ ಕುಮಾರಸ್ವಾಮಿ, ಈ ಸಲ ಹಾಸನ ರಾಜಕೀಯ ರಣಾಂಗಣ ಗ್ಯಾರಂಟಿ

ಯಾವುದನ್ನೂ ನಾನು ವಿಮರ್ಶೆ ಮಾಡಲು ಹೋಗುವುದಿಲ್ಲ. ಇದು ಆ ಸಮಯವೂ ಅಲ್ಲ. ಕಾಂಗ್ರೆಸ್‌ನ ಎಲ್ಲಾ ನಾಯಕರು ಮತ್ತು ಜೆಡಿಎಸ್‌ನ ನಾಯಕರು ಸೇರಿ ಕೋಮುವಾದಿಗಳನ್ನು ದೂರ ಇಡಬೇಕು. ಮಾಜಿ ಪ್ರಧಾನಿ ಎ.ಬಿ.ವಾಜಪೇಯಿ ಅವರು ಕೆಳಗಿಳಿಯುವಾಗ ಬೆಂಬಲ ನೀಡಬಹುದಿತ್ತು. ಆದರೆ ನಾವು ಆಗ ಬೆಂಬಲ ನೀಡಲಿಲ್ಲ ಎಂದರು.

ಕಾಂಗ್ರೆಸ್‌ಗೆ ಬೆಂಬಲ ನೀಡುವ ವಿಚಾರ ಸಂಬಂಧ ಪ್ರತಿಕಿಯಿಸಿದ ಅವರು, ರಾಜ್ಯಸಭಾ ಚುನಾವಣೆ ಸಂಬಂಧ ನಮ್ಮ ಬಳಿ 32 ಮತಗಳಿವೆ. ದೇವೇಗೌಡ ಅವರು ಸ್ಪರ್ಧಿಸಿದಾಗ 38 ಇತ್ತು. ಕಾಂಗ್ರೆಸ್‌ ಮುಖಂಡರು ಜೆಡಿಎಸ್‌ ಅಭ್ಯರ್ಥಿಯನ್ನು ಬೆಂಬಲಿಸಬೇಕು. ನಮ್ಮ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಬೇಕು. ರಾಷ್ಟ್ರೀಯ ಮುಖಂಡರ ಬಳಿಯೂ ಚರ್ಚೆಯಾಗಿದೆ. ಸಿದ್ದರಾಮಯ್ಯ ಅವರು ಕೋಪದಲ್ಲಿದ್ದಾರೆ. ಅವರೊಂದಿಗೆ ತಡವಾಗಿ ಮಾತನಾಡುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರು ಲೋಕಸಭೆ ಚುನಾವಣೆ ಮುನ್ನ ಐದು ವರ್ಷ ನೀವೇ ಮುಖ್ಯಮಂತ್ರಿ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಗೆ ಹೇಳಿದರು. ಆದರೆ, ನಾವು ಅದಕ್ಕೆ ಒಪ್ಪದೆ, ಕಾಂಗ್ರೆಸ್‌ ಜತೆ ಹೋದೆವು. 2018ರ ನಂತರ ಕಾಂಗ್ರೆಸ್‌-ಜೆಡಿಎಸ್‌ ಅಧಿಕಾರ ಹಿಡಿಯಲಿಲ್ಲವೇ? ಕೋಮುವಾದಿಗಳನ್ನು ದೂರ ಇಡುವುದಕ್ಕೆ ಸಹಕರಿಸಬೇಕಿದೆ. ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಯಬೇಕಿದೆ ಎಂದು ಹೇಳಿದರು.