Karnataka Assembly Elections 2023: ಬಿಜೆಪಿ- ಕಾಂಗ್ರೆಸ್ ಏಟು-ಎದಿರೇಟು..!
ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿದೆ. ಹೀಗಾಗಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಜನತೆಗೆ ಮನವಿ ಮಾಡಿದ ಕೇಂದ್ರ ಗೃಹ ಸಚಿವ ಅಮಿತ್ ಶಾ
ದೇವರಹಿಪ್ಪರಗಿ/ಹುಬ್ಬಳ್ಳಿ/ಟಿ. ನರಸೀಪುರ(ಏ.26): ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕರ್ನಾಟಕ ರಿವರ್ಸ್ ಗೇರ್‌ಗೆ ಹೋಗುತ್ತೆ. ನರೇಂದ್ರ ಮೋದಿ ನೇತೃತ್ವದ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯ ಮತ್ತಷ್ಟು ಅಭಿವೃದ್ಧಿಯನ್ನು ಕಾಣಲಿದೆ. ಹೀಗಾಗಿ, ರಾಜ್ಯದಲ್ಲಿ ಮತ್ತೊಮ್ಮೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತನ್ನಿ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಜನತೆಗೆ ಮನವಿ ಮಾಡಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಅಮಿತ್ ಶಾ, ಮಂಗಳವಾರ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ, ಯಾದಗಿರಿ, ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ಮಧ್ಯೆ, ದೇವರಹಿಪ್ಪರಗಿಯಲ್ಲಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಪರ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿ, ನವ ಭಾರತ, ನವ ಕರ್ನಾಟಕ ನಿರ್ಮಾಣ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಡಬಲ್ ಎಂಜಿನ್ ಸರ್ಕಾರದಿಂದ ಮಾತ್ರ ಸಾಧ್ಯ. 2024ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ, ಕರ್ನಾಟಕದಲ್ಲಿ ರಿವರ್ಸ್ ಗೇರ್ ಸರ್ಕಾರ ಬೇಡ ಎಂದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ತಲಾ 10 ಕೇಜಿ ಅಕ್ಕಿ, 2000 ಹಣ: ಬೈರತಿ
ಈ ಹಿಂದೆ ಕಾಂಗ್ರೆಸ್‌ನವರು ಉತ್ತರ ಕರ್ನಾಟಕದ ಅಭಿವೃದ್ಧಿಯನ್ನೇ ನಿರ್ಲಕ್ಷಿಸಿದ್ದಾರೆ. ಆದರೆ, ಮಹದಾಯಿ ಯೋಜನೆಯನ್ನು ಬಿಜೆಪಿ ಸರ್ಕಾರ ಜಾರಿ ಮಾಡಿದೆ. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರ ಕರ್ನಾಟಕದ ಅಭಿವೃದ್ಧಿಗೆ ಅನೇಕ ಕೆಲಸ, ಕಾರ್ಯಗಳನ್ನು ಮಾಡಿವೆ. ಬಿಜೆಪಿ ಸುಮಾರು 4 ಲಕ್ಷ ಬಡ ಕುಟುಂಬಗಳಿಗೆ ಮನೆ ನೀಡಿದೆ. 42 ಲಕ್ಷ ರೈತರಿಗೆ ಕಿಸಾನ್ ಸಮ್ಮಾನ್ ಪರಿಹಾರ ನೀಡಲಾಗುತ್ತಿದೆ. ಮಹಿಳೆಯರಿಗೆ ಗ್ಯಾಸ್ ಸಿಲಿಂಡರ್ ನೀಡಲಾಗಿದೆ. ಕಾಂಗ್ರೆಸ್‌ನವರು ನಾವು ಮಾಡಿದ ಅಭಿವೃದ್ಧಿ ಕೆಲಸಗಳ ಪೈಕಿ ಕೇವಲ ಶೇ.10ರಷ್ಟುಮಾಡಿದ್ದರೆ ಸಾಕಿತ್ತು. ಇವತ್ತು ಅವರಿಗೆ ಮತ ಕೇಳಲು ಬರುವ ಅವಶ್ಯಕತೆಯೇ ಇರಲಿಲ್ಲ ಎಂದು ಚಾಟಿ ಬೀಸಿದರು.
ಸಿಎಂ ಆಗಲು ನಂಬರ್ರೇ ಬಂದಿಲ್ಲ:
‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಆಗಲು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಗುದ್ದಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿ ಆಗಲು ಇನ್ನೂ ನಿಮಗೆ ನಂಬರ್ರೇ ಬಂದಿಲ್ಲ. ಸುಮ್ಮನೇ ಯಾಕೆ ಸಿಎಂ ಕುರ್ಚಿಗೆ ಕಿತ್ತಾಡುತ್ತೀರಾ’ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಟೀಕಾಪ್ರಹಾರ ನಡೆಸಿದರು.
ಭ್ರಷ್ಟಾಚಾರ ಸಾಬೀತುಪಡಿಸಿ: ಸಿದ್ದುಗೆ ಬೊಮ್ಮಾಯಿ ಸವಾಲ್
ಹುಬ್ಬಳ್ಳಿ: ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದಾಖಲೆ ನೀಡುವ ಮೂಲಕ ಅವನ್ನು ಸಾಬೀತುಪಡಿಸಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸವಾಲು ಹಾಕಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದ ಬಳಿಕ ಮಂಗಳವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ನಾನು ಸವಾಲು ಹಾಕುತ್ತಿದ್ದೇನೆ. ನನ್ನ ವಿರುದ್ಧ ಮಾಡಿರುವ ಭ್ರಷ್ಟಾಚಾರದ ಆರೋಪಗಳನ್ನು ಸಾಬೀತು ಮಾಡಲಿ ಎಂದು ಅಬ್ಬರಿಸಿದರು.
‘ನನ್ನ ವಿರುದ್ಧ ವಿಪಕ್ಷ ನಾಯಕ ಸಿದ್ದರಾಮಯ್ಯ ಸಲ್ಲದ ಆರೋಪ ಮಾಡುತ್ತಿರುವುದು ಜನರಿಗೆ ಗೊತ್ತಿದೆ. ಆದರೆ, ನನ್ನ ವಿರುದ್ಧದ ಆರೋಪಗಳಿಗೆ ಯಾವುದೇ ದಾಖಲೆಗಳನ್ನು ಅವರು ನೀಡುತ್ತಿಲ್ಲ. ಹೀಗಾಗಿ, ಅವರು ಆ ಆರೋಪಗಳನ್ನು ಸಾಬೀತುಪಡಿಸಲಿ. ಅಷ್ಟಕ್ಕೂ, ಅವರ ಮೇಲೆಯೇ ಸಾಕಷ್ಟುಪ್ರಕರಣಗಳಿವೆ. ಅವರು ಸುಳ್ಳು ಹೇಳಿ ಸಿಕ್ಕಿಹಾಕಿಕೊಂಡಿದ್ದಾರೆ. ಅವರ ಮೇಲಿನ ಪ್ರಕರಣಗಳನ್ನು ಲೋಕಾಯುಕ್ತ ತನಿಖೆಗೆ ವಹಿಸಲಾಗಿದೆ’ ಎಂದರು.
ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ. ಹೀಗಾಗಿ, ಕಾಂಗ್ರೆಸ್‌ನವರು ಭ್ರಷ್ಟಾಚಾರ ಕುರಿತು ಮಾತನಾಡುವುದು ಹಾಸ್ಯಾಸ್ಪದದಂತೆ ಕಾಣುತ್ತದೆ. ಅವರ ಪಕ್ಷದ ಎಷ್ಟೋ ನಾಯಕರು ಜೈಲಿಗೆ ಹೋಗಿದ್ದಾರೆ. ಕೆಲವರು ಜಾಮೀನಿನ ಮೇಲೆ ಹೊರ ಬಂದಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದು ವಾಗ್ದಾಳಿ ನಡೆಸಿದರು.
ಲೂಟಿಕೋರ ಬಿಜೆಪಿ ಸರ್ಕಾರ ಕಿತ್ತೊಗೆಯಿರಿ: ಪ್ರಿಯಾಂಕಾ ಕರೆ
ಟಿ. ನರಸೀಪುರ/ಕೆ.ಆರ್.ನಗರ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ 40 ಪರ್ಸೆಂಟ್ ಸರ್ಕಾರವಾಗಿದ್ದು, ಸಾರ್ವಜನಿಕರ ಹಣವನ್ನು ಲೂಟಿ ಮಾಡಿದೆ. ಇವರ ಹಿಂಸೆ ತಾಳಲಾರದೆ ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಲೂಟಿಕೋರ ಬಿಜೆಪಿ ಸರ್ಕಾರವನ್ನು ಕರ್ನಾಟಕದಿಂದ ಕಿತ್ತೊಗೆಯಿರಿ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ವಾದ್ರಾ ಜನತೆಗೆ ಮನವಿ ಮಾಡಿದ್ದಾರೆ.
ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪರ ಭರ್ಜರಿ ಪ್ರಚಾರ ಕೈಗೊಂಡಿರುವ ಅವರು, ಮಂಗಳವಾರ ಮೈಸೂರು ಜಿಲ್ಲೆಯ ಕೆ.ಆರ್.ನಗರ, ಟಿ.ನರಸೀಪುರ ತಾಲೂಕಿನ ಹೆಳವರಹುಂಡಿ, ಚಾಮರಾಜನಗರ ಜಿಲ್ಲೆಯ ಹನೂರುಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದರು. ಈ ವೇಳೆ ಮಾತನಾಡಿ, ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಬಿಜೆಪಿ ಆಡಳಿತದಲ್ಲಿ ಹಲವಾರು ಹಗರಣಗಳು ನಡೆದವು. ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯಿತು. ಒಬ್ಬ ಶಾಸಕನ ಪುತ್ರನ ಬಳಿ ಕೋಟಿಗಟ್ಟಲೇ ಹಣ ಸಿಕ್ಕಿತು. ಇವರ ಹಿಂಸೆ ತಾಳಲಾರದೆ ಕೆಲವು ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಭ್ರಷ್ಟಾಚಾರದಿಂದಾಗಿ ಈ ಸರ್ಕಾರಕ್ಕೆ ಏನು ಅಭಿವೃದ್ಧಿ ಕೆಲಸ ಮಾಡಬೇಕಾಗಿತ್ತೋ ಅದನ್ನು ಮಾಡಲು ಆಗಲಿಲ್ಲ. ಕೆಲವು ವರ್ಷಗಳಿಂದ ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರುವ ಅನುದಾನ ಕೂಡ ಕಡಿಮೆ ಆಗುತ್ತಿದೆ ಎಂದು ಆರೋಪಿಸಿದರು.
ಡಿಕೆ ಶಿವಕುಮಾರ ಮೇಲೆ ಮತದಾರರಿಗೆ ವಿಶ್ವಾಸವಿದೆ: ಪತ್ನಿ ಉಷಾ ಶಿವಕುಮಾರ
ಇಲ್ಲಿನ ಕಬ್ಬು ಬೆಳೆಗಾರರಿಗೆ ಸರಿಯಾದ ಬೆಲೆ ಸಿಗುತ್ತಿಲ್ಲ. ರಾಜ್ಯದಲ್ಲಿ 2.5 ಲಕ್ಷ ಹುದ್ದೆ ಖಾಲಿ ಇದ್ದರೂ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಪ್ರಾಧ್ಯಾಪಕ ಹುದ್ದೆಗೆ .30 ಲಕ್ಷ, ಜೆಇಗೆ .20 ಲಕ್ಷ ನಿಗದಿಪಡಿಸಿದ್ದಾರೆ. ಪ್ರಧಾನಿ ಮೋದಿಯವರು ಅಂಬಾನಿಗೆ . 16 ಸಾವಿರ ಕೋಟಿ ಲಾಭ ಮಾಡಿಕೊಟ್ಟಿದ್ದಾರೆ. ಸಣ್ಣ, ಪುಟ್ಟಪದಾರ್ಥಗಳ ಮೇಲೆ ಜಿಎಸ್‌ಟಿ ಹಾಕುತ್ತಿದ್ದಾರೆ. ಈ ಸರ್ಕಾರಕ್ಕೆ ಬಡವರಿಗೆ ಸಹಾಯ ಮಾಡುವ ಉದ್ದೇಶ ಇಲ್ಲ. ಕೇವಲ ಉದ್ಯಮಿಗಳಿಗೆ ಸಹಾಯ ಮಾಡುತ್ತಿದೆ ಎಂದು ಆರೋಪಿಸಿದರು.
ಈ ಹಿಂದೆ ಕಾಂಗ್ರೆಸ್ ಆಡಳಿತದ ವೇಳೆ ಕ್ಷೀರಭಾಗ್ಯ ಕಾರ್ಯಕ್ರಮ ನೀಡಲಾಗಿತ್ತು. ಒಂದು ಲೀಟರ್ ಹಾಲಿಗೆ .5 ಪ್ರೋತ್ಸಾಹ ಧನ ನೀಡಲಾಯಿತು. ಆದರೆ, ಬಿಜೆಪಿಯವರು ಎಲ್ಲವನ್ನೂ ಕಡಿತಗೊಳಿಸಿ ಗುಜರಾತಿನ ಅಮುಲ್ ಹಾಲನ್ನು ತಂದು ನಂದಿನಿಯನ್ನು ಮುಗಿಸುವ ಪ್ರಯತ್ನ ಮಾಡುತ್ತಿದ್ದಾರೆ. ಕರ್ನಾಟಕವನ್ನು ಎಷ್ಟುಸಾಧ್ಯವೋ ಅಷ್ಟುಲೂಟಿ ಮಾಡುತ್ತಿದ್ದಾರೆ. ಈಗ ಬಸವಣ್ಣ, ನಾರಾಯಣ ಗುರು ಅವರಂತಹ ಮಹಾತ್ಮರ ಹೆಸರನ್ನು ಚುನಾವಣೆಗೆ ಬಳಸಿಕೊಳ್ಳುತ್ತಿದ್ದಾರೆ. ಇದರ ಬಗ್ಗೆ ಮತದಾರರು ಎಚ್ಚರ ವಹಿಸಬೇಕು ಎಂದು ಕರೆ ನೀಡಿದರು. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರುತ್ತೇವೆ. ನಾವು ಮಾತು ಕೊಡುತ್ತಿಲ್ಲ, ಗ್ಯಾರಂಟಿ ಕೊಡುತ್ತಿದ್ದೇವೆ ಎಂದರು.