Asianet Suvarna News Asianet Suvarna News

Karnataka Monsoon Session: ಸಲೀಂ ಪ್ರಶ್ನೆಗೆ ಸಿಗದ ಉತ್ತರ: ಪರಿಷತ್‌ನಲ್ಲಿ ಕೋಲಾಹಲ..!

ಮೂಲ ವಿಷಯ ಬಿಟ್ಟು ಮಿಕ್ಕೆಲ್ಲ ವಿಷಯಗಳ ಬಗ್ಗೆ ಕೋಲಾಹಲ, ಸಭಾಪತಿ ಪೀಠದ ಮುಂದೆ ಕಾಂಗ್ರೆಸ್‌ ಧರಣಿ, ಕೆಲ ಕಾಲ ಸದನ ಮುಂದೂಡಿಕೆ

Congress and BJP Altercation in Vidhan Parishat Session grg
Author
First Published Sep 22, 2022, 8:37 AM IST

ಬೆಂಗಳೂರು(ಸೆ.22):  ಕಾಂಗ್ರೆಸ್‌ ಸದಸ್ಯ ಸಲೀಂ ಅಹಮದ್‌ ಅವರು ಕೇಳಿದ ಪ್ರಶ್ನೆಗೆ ಕಂದಾಯ ಸಚಿವ ಆರ್‌. ಅಶೋಕ್‌ ಅವರು ಕಾಲಾವಕಾಶ ಕೇಳಿದ ವಿಷಯ ಆಡಳಿತ ಹಾಗೂ ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರವಾದ ಆರೋಪ-ಪ್ರತ್ಯಾರೋಪ, ವಾಗ್ವಾದ ನಡೆಯಿತಲ್ಲದೇ, ಕಾಂಗ್ರೆಸ್‌ ಸದಸ್ಯರು ಸಭಾಪತಿಗಳ ಮುಂದೆ ಧರಣಿ ನಡೆಸಿದರು. ಗದ್ದಲ ಮಿತಿ ಮೀರಿದಾಗ ಸದನವನ್ನು ಕೆಲ ಕಾಲ ಮುಂದೂಡಿದ ಪ್ರಸಂಗ ನಡೆಯಿತು. ಪ್ರಶ್ನೋತ್ತರ ವೇಳೆ ಸಲೀಂ ಅಹಮದ್‌ ಅವರ ಪ್ರಶ್ನೆಗೆ ಕಂದಾಯ ಸಚಿವ ಆರ್‌.ಅಶೋಕ್‌ ಅವರು, ಉತ್ತರ ನೀಡಲು ಕಾಲಾವಕಾಶ ಕೇಳಿದರು ಹಾಗೂ ಬೇರೆ ಸದಸ್ಯರಿಗೆ ಪ್ರಶ್ನೆ ಕೇಳುವಂತೆ ಕೋರಿದರು. ಆದರೆ ಈ ಮಾತಿನಿಂದ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಲೀಂ ಅಹಮದ್‌ ಅವರು, ಇವತ್ತಿನ ಪ್ರಶ್ನೋತ್ತರ ಪಟ್ಟಿಯಲ್ಲಿ ಹೆಸರು ಇರುವಾಗ ಉತ್ತರ ಕೊಡುವ ಜವಾಬ್ದಾರಿ ಸರ್ಕಾರದ್ದಾಗಿರುತ್ತದೆ ಎಂದರು.

ಇದಕ್ಕೆ ಅಶೋಕ್‌ ಅವರು, ಸದಸ್ಯರು ನಿರ್ದಿಷ್ಟ ಅವಧಿಯ ಮಾಹಿತಿ ಕೇಳಿಲ್ಲ, ಹಾಗಾಗಿ ಈ ಎಲ್ಲ ಮಾಹಿತಿ ನೀಡಲು ಸಮಯ ಬೇಕಾಗುತ್ತದೆ’ ಎಂದು ಉತ್ತರಿಸಿದರು. ಆದರೆ ಇದರಿಂದ ಅಸಮಾಧಾನಗೊಂಡ ಸಲೀಂ ಅಹಮದ್‌, ‘ಇದೊಂದು ಬೇಜವಾಬ್ದಾರಿ ಸರ್ಕಾರ, ಭ್ರಷ್ಟಾಚಾರ ತಾಂಡವವಾಡುತ್ತಿದೆ’ ಎಂದು ಏರಿದ ದನಿಯಲ್ಲಿ ಹೇಳಿದರು. ಇದರಿಂದ ಕೊಂಚ ಸಿಟ್ಟಾದ ಅಶೋಕ್‌, ‘ಪ್ರತಿಪಕ್ಷ ಕಾಂಗ್ರೆಸ್‌ ಸದಸ್ಯರದ್ದು ಬೇಜವಾಬ್ದಾರಿ ನಡವಳಿಕೆ’ ಎಂದರು. ಈ ವೇಳೆ ಉತ್ತರ ನೀಡಬೇಕೆಂದು ಆಗ್ರಹಿಸಿ ಕಾಂಗ್ರೆಸ್‌ ಸದಸ್ಯರು ಪ್ರತಿಭಟನೆ ಆರಂಭಿಸಿದರು.

ಕೃಷ್ಣನ ರೂಪದಲ್ಲಿ ಮೋದಿ: ಪ್ರಾಣೇಶ್‌ ಹೇಳಿಕೆಗೆ ಕಾಂಗ್ರೆಸ್‌ ಕಿಡಿ

ಈ ಮಧ್ಯ ಉಭಯ ಕಡೆಯ ಸದಸ್ಯರು ವಾಗ್ವಾದದಲ್ಲಿ ತೊಡಗಿದಾಗ ಸಭಾಪತಿ ರಘುನಾಥ್‌ರಾವ್‌ ಮಲ್ಕಾಪುರೆ ಅವರು ಸದನವನ್ನು ಐದು ನಿಮಿಷಗಳ ಕಾಲ ಮುಂದೂಡಿದರು. ಪುನಃ ಸದನ ಸೇರಿದಾಗ ಕಂದಾಯ ಸಚಿವ ಅಶೋಕ್‌ ಅವರು, ಆದಷ್ಟುಬೇಗ ಉತ್ತರ ನೀಡುವುದಾಗಿ ಹೇಳಿದ ನಂತರ ಸಭಾಪತಿಗಳು ಪ್ರಶ್ನೋತ್ತರ ಕಲಾಪ ಮುಂದುವರಿಸಿದರು.

ಈ ಮಧ್ಯೆ, ‘ಕಂದಾಯ ಇಲಾಖೆಯಲ್ಲಿ ಭಾರಿ ಭ್ರಷ್ಟಚಾರ ನಡೆಯುತ್ತಿದೆ, ಹಾಗಾಗಿ ಸರ್ಕಾರಕ್ಕೆ ಉತ್ತರ ನೀಡಲು ಆಗುತ್ತಿಲ್ಲ’ ಎಂದು ಪ್ರತಿಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಟೀಕಿಸುತ್ತಿದ್ದಂತೆ, ‘ಕಂದಾಯ ಇಲಾಖೆಯಲ್ಲಿ ಯಾವ ಸರ್ಕಾರದ ಅವಧಿಯಲ್ಲಿ ಎಷ್ಟುಭ್ರಷ್ಟಾಚಾರ ನಡೆದಿತ್ತು ಎಂದು ಪ್ರಶ್ನೆ ಕೇಳಿದ್ದರೆ ಉತ್ತರ ನೀಡುತ್ತಿದ್ದೆ’ ಎಂದು ಅಶೋಕ್‌ ತಿರುಗೇಟು ನೀಡಿದರು. ತಾವು ಕೂಡಾ 15 ವರ್ಷ ಪ್ರತಿಪಕ್ಷದಲ್ಲಿ ಇದ್ದಾಗ, ಪ್ರಶ್ನೆಗೆ ಉತ್ತರ ನೀಡಲು ಸರ್ಕಾರ ಕಾಲಾವಕಾಶ ಕೇಳಿದಾಗ ಅದನ್ನು ಒಪ್ಪಿಕೊಂಡಿದ್ದೇವೆ. ಅದನ್ನು ಮರೆತು ಗಲಾಟೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಇದಕ್ಕೆ ಹರಿಪ್ರಸಾದ್‌, ‘ಇದೊಂದು ಬೇಜವಾಬ್ದಾರಿ ಹೇಳಿಕೆ, ನಾವು ಮಾಡಿದ್ದನ್ನು ನೀವೇ ಮಾಡಬೇಕೇ?’ ಎಂದಾಗ, ಅಶೋಕ್‌ ‘ನೀವು ಮಾಡಿದ್ದನ್ನೇ ನಾವು ಮಾಡುತ್ತೇವೆ. ನೀವು ಅದೇನು ಮಾಡುತ್ತಿರೋ ಅದನ್ನು ನೋಡುತ್ತೇವೆ’ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

ಈ ನಡುವೆ ಭ್ರಷ್ಟಾಚಾರ ಮತ್ತು ಲಂಚ ಜಾಸ್ತಿಯಾಗಿರುವುದರಿಂದ ಸರ್ಕಾರಕ್ಕೆ ಉತ್ತರ ಕೊಡಲು ಆಗುತ್ತಿಲ್ಲ ಎಂದು ಕಾಂಗ್ರೆಸ್‌ ಸದಸ್ಯರು ಹೇಳಿದರೆ, ಬಿಜೆಪಿ ಸದಸ್ಯರು ‘ಹಿಂದೆ ರಾಜೀವ್‌ಗಾಂಧಿ ಅವರೇ ಒಂದು ರುಪಾಯಿ ಸರ್ಕಾರ ನೀಡಿದರೆ ಜನರಿಗೆ ಕೇವಲ 15 ಪೈಸೆ ಮಾತ್ರ ಸಿಗುತ್ತದೆ ಎಂದು ಹೇಳಿದ್ದರು, ನಿಮ್ಮ ಸರ್ಕಾರದಲ್ಲಿ ಶೇ. 85ರಷ್ಟು ಭ್ರಷ್ಟಾಚಾರ ಇತ್ತು’ ಎಂದು ವಾಗ್ದಾಳಿ ನಡೆಸಿದರು.

ಇಂದು ಭ್ರಷ್ಟಾಚಾರಿಗಳ ಹೆಸರು ಬಯಲು: ಕಾಂಗ್ರೆಸ್‌ಗೆ ತಿರುಗೇಟು ಕೊಟ್ಟ ಸಿಎಂ

ವಾಗ್ವಾದ, ಆರೋಪ-ಪ್ರತ್ಯಾರೋಪಗಳ ಮಧ್ಯ ವಸತಿ ಸಚಿವ ವಿ. ಸೋಮಣ್ಣ ಅವರು, ‘ಈ ವಿಷಯದಲ್ಲಿ ಪ್ರತಿಷ್ಠೆ ಬೇಡ ಸಚಿವರು ಆದಷ್ಟುಬೇಗ ಉತ್ತರ ಕೊಡುತ್ತಾರೆ. ಪ್ರಶ್ನೋತ್ತರ ನಡೆಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಅದಕ್ಕೆ ಬಿ.ಕೆ ಹರಿಪ್ರಸಾದ್‌ ಅವರು ಗದ್ದಲ ಶುರು ಮಾಡಿದ್ದೇ ಆಡಳಿತ ಪಕ್ಷದ ಸದಸ್ಯರು ಎಂದರು.

ಈ ಮಧ್ಯ ಸಚಿವ ಡಾ. ಸಿ.ಎನ್‌. ಅಶ್ವತ್ಥನಾರಾಯಣ ಅವರು, ‘ಭ್ರಷ್ಟಾಚಾರದ ಬಗ್ಗೆ ಮಾತನಾಡಲು ನಿಮಗೆ ನೈತಿಕ ಹಕ್ಕಿಲ್ಲ. ಎಲ್ಲ ಕಾಲದ ಭ್ರಷ್ಟಾಚಾರ ತನಿಖೆ ಆಗಲಿ’ ಎಂದರು. ಇದಕ್ಕೆ ಹರಿಪ್ರಸಾದ್‌ ಅವರು, ‘ನಿಮ್ಮ ಕ್ಷೇತ್ರದಲ್ಲಿ ಆಗಿರುವ 1700 ಕೋಟಿ ರು. ಹಗರಣದ ತನಿಖೆ ನಡೆಯಲಿ’ ಎಂದು ತಿರುಗೇಟು ನೀಡಿದರು.
 

Follow Us:
Download App:
  • android
  • ios