ಬೆಂಗಳೂರು (ಅ.16):  ಬಿಜೆಪಿಯ ಯಾವುದಾದರೂ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಬರುವುದಾದರೆ ಅಂತಹವರ ಸೇರ್ಪಡೆ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ತಿಳಿಸಿದ್ದಾರೆ.

ಉಪಚುನಾವಣೆಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಸಂಬಂಧ ಮಂಗಳವಾರ ಕೆಪಿಸಿಸಿ ಕಚೇರಿಯಲ್ಲಿ ನಡೆದ ವೀಕ್ಷಕರ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬರುತ್ತೇವೆಂದರವನ್ನೆಲ್ಲಾ ಸೇರಿಸಿಕೊಳ್ಳಲು ಆಗುವುದಿಲ್ಲ. ಮೆರಿಟ್‌ ಆಧಾರದಲ್ಲಿ ಪರಿಶೀಲಿಸಿ ನಿರ್ಧಾರ ಕೈಗೊಳ್ಳುತ್ತೇವೆ ಎಂದರು.

ರಾಜ್ಯದಲ್ಲಿ ಉಪಚುನಾವಣೆ ನಡೆಯಲಿರುವ 15 ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಗಳ ಆಯ್ಕೆ ಬಗ್ಗೆ ವೀಕ್ಷಕರ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ. ಗೆಲುವಿನ ಮಾನದಂಡ ಇಟ್ಟುಕೊಂಡು ಅಭ್ಯರ್ಥಿಗಳನ್ನು ಅಂತಿಮಗೊಳಿಸುತ್ತೇವೆ. ಎಲ್ಲ ಕ್ಷೇತ್ರಗಳಲ್ಲೂ ಕಾಂಗ್ರೆಸ್‌ ಗೆಲ್ಲುವ ವಿಶ್ವಾಸವಿದೆ ಎಂದರು.

ತನಿಖಾ ಸಂಸ್ಥೆಗಳು ಕೇಂದ್ರದ ಕೈಗೊಂಬೆ:  ಇದೇ ವೇಳೆ ಐಟಿ ದಾಳಿ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಅವರು, ದೇಶದ ಉನ್ನತ ತನಿಖಾ ಸಂಸ್ಥೆಗಳನ್ನೆಲ್ಲಾ ಕೇಂದ್ರ ಸರ್ಕಾರ ತನ್ನ ಕೈಗೊಂಬೆಗಳನ್ನಾಗಿ, ತನ್ನ ವಿರೋಧಿಗಳನ್ನು ಹಣಿಯುವ ಅಸ್ತ್ರಗಳಾಗಿ ಬಳಸಿಕೊಳ್ಳುತ್ತಿದೆ. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್‌ ನಾಯಕರನ್ನು ಗುರಿಯಾಗಿಸಿ ಐಟಿ, ಇ.ಡಿ. ದಾಳಿ ನಡೆಸುವುದು ಸಾಮಾನ್ಯವಾಗಿಬಿಟ್ಟಿದೆ. ಕಾಂಗ್ರೆಸ್‌ ನಾಯಕರ ಮೇಲಷ್ಟೇ ದಾಳಿಗಳು ಏಕೆ ನಡೆಯುತ್ತಿವೆ. ಬಿಜೆಪಿ ನಾಯಕರ ಮೇಲೂ ಸಾಕಷ್ಟುದೂರುಗಳಿವೆ. ಆದರೆ, ಅವರ ಮೇಲೆ ಏಕೆ ಯಾವೊಂದು ದಾಳಿಯೂ ನಡೆಸುತ್ತಿಲ್ಲ. ಕೋಟ್ಯಂತರ ರು. ಹಣ, ಅಧಿಕಾರದ ಆಮಿಷವೊಡ್ಡಿ ನಡೆಸಿದ ಮೈತ್ರಿ ಶಾಸಕರ ಕುದುರೆ ವ್ಯಾಪಾರದಲ್ಲಿ ಸಾಕಷ್ಟುಕಪ್ಪು ಹಣ ವರ್ಗಾವಣೆ ಆಗಿದೆ. ಈ ಬಗ್ಗೆ ಏಕೆ ದೇಶದ ತನಿಖಾ ಸಂಸ್ಥೆಗಳೂ ತನಿಖೆ ಮಾಡುವುದಿಲ್ಲ. ಕುದುರೆ ವ್ಯಾಪಾರ ನಡೆಸಿದವರ ಮೇಲೆ, ವ್ಯಾಪಾರಕ್ಕೆ ಒಳಗಾದವರ ಮೇಲೆ ಏಕೆ ದಾಳಿ ನಡೆಸುವುದಿಲ್ಲ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‌ ನಾಯಕರು ಯಾವುದಕ್ಕೂ ಹೆದರುವುದಿಲ್ಲ. ಕಾನೂನಾತ್ಮಕವಾಗಿ ಎಲ್ಲವನ್ನೂ ಎದುರಿಸಲಿದ್ದಾರೆ. ಕೇಂದ್ರದ ಈ ಆಟ ಹೆಚ್ಚುದಿನ ನಡೆಯುವುದಿಲ್ಲ. ದೇಶದ ಜನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಿದ್ದು, ತಕ್ಕ ಪಾಠ ಕಲಿಸುತ್ತಾರೆ ಎಂದು ವೇಣುಗೋಪಾಲ್‌ ಎಚ್ಚರಿಕೆ ನೀಡಿದರು.

ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳ ಜತೆಗೆ ಚುನಾವಣಾ ಆಯೋಗವನ್ನೂ ದುರುಪಯೋಗಪಡಿಸಿಕೊಳ್ಳುತ್ತಿದೆ. ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾದರೂ ನೀತಿ ಸಂಹಿತಿ ಜಾರಿಗೊಳಿಸಿಲ್ಲ. ಪರೋಕ್ಷವಾಗಿ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಚುನಾವಣೆಯಲ್ಲಿ ಅನುಕೂಲ ಮಾಡಿಕೊಡಲು ಈ ರೀತಿ ಮಾಡಲಾಗಿದೆ. ಆಯೋಗ ಎಲ್ಲವೂ ಗೊತ್ತಿದ್ದರೂ ಕಣ್ಣುಮುಚ್ಚಿ ಕೂತಿರುವುದು ಬೇಸರದ ಸಂಗತಿ ಎಂದರು.

ದೇಶದಲ್ಲಿ ಆರ್ಥಿಕ ಕ್ಷೇತ್ರ ಕುಸಿದು ಹೋಗಿದೆ. ಈ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪತಿ ಪರಕಾಲ ಪ್ರಭಾಕರ್‌ ಅವರೇ ಟೀಕಿಸಿದ್ದು, ದೇಶವನ್ನು ಆರ್ಥಿಕತೆಯ ಸಂಕಷ್ಟದಿಂದ ಮೇಲೆತ್ತಲು ಮಾಜಿ ಪ್ರಧಾನಿಗಳಾದ ವಿ.ವಿ.ನರಸಿಂಹರಾವ್‌ ಮತ್ತು ಮನಮೋಹನ್‌ಸಿಂಗ್‌ ಅವರ ಯಜ್ಞ ಮಾದರಿಯ ಆರ್ಥಿಕ ನೀತಿಗಳನ್ನು ಅನುಸರಿಸುವಂತೆ ಸಲಹೆ ನೀಡಿದ್ದಾರೆ. ಈಗಲಾದರೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಳ್ಳಲಿ.

- ಕೆ.ಸಿ.ವೇಣುಗೋಪಾಲ್‌, ಎಐಸಿಸಿ ಪ್ರಧಾನ ಕಾರ್ಯದರ್ಶಿ

ಬಿಜೆಪಿಯ ಯಾವುದಾದರೂ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್‌ ಸೇರಲು ಮುಂದೆ ಬಂದರೆ ಯಾರನ್ನು ಸೇರ್ಪಡೆ ಮಾಡಿಕೊಳ್ಳಬಹುದು ಎಂಬ ಬಗ್ಗೆ ಪಕ್ಷದ ನಾಯಕರು ಹಾಗೂ ಸ್ಥಳೀಯ ಕ್ಷೇತ್ರಗಳ ಮುಖಂಡರು, ಕಾರ್ಯಕರ್ತರೊಂದಿಗೆ ಚರ್ಚಿಸಿ ತೀರ್ಮಾನ ಮಾಡುತ್ತೇವೆ. ಬಿಜೆಪಿಯ ಪರಾಜಿತ ಅಭ್ಯರ್ಥಿಗಳು ಕಾಂಗ್ರೆಸ್‌ಗೆ ಬರುವುದಾದರೆ ಅಂತಹವರ ಸೇರ್ಪಡೆ ಬಗ್ಗೆ ಪಕ್ಷದಲ್ಲಿ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.