ಉತ್ತರ ಕರ್ನಾಟಕದ 13 ಕ್ಷೇತ್ರಗಳಿಗೆ ಕಾಂಗ್ರೆಸ್ ‘ಹೆಚ್ಚುವರಿ ಉಸ್ತುವಾರಿ ಸಚಿವರು’: ಡಿಕೆಶಿ
ರಾಜ್ಯದ ಪಾಲಿನ ಲೋಕಸಭೆ ಮೊದಲ ಹಂತದ ಚುನಾವಣೆಯಲ್ಲಿ ದಕ್ಷಿಣದ 14 ಕ್ಷೇತ್ರಗಳಿಗೆ ಮತದಾನ ಮುಗಿದ ಬೆನ್ನಲ್ಲೇ ಹದಿಮೂರು ಮಂದಿ ಸಚಿವರನ್ನು ಉತ್ತರ ಕರ್ನಾಟಕ ಭಾಗದ 13 ಕ್ಷೇತ್ರಗಳಿಗೆ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಿ ಕಾಂಗ್ರೆಸ್ ಆದೇಶ ಹೊರಡಿಸಿದೆ.
ಬೆಂಗಳೂರು (ಏ.28): ರಾಜ್ಯದ ಪಾಲಿನ ಲೋಕಸಭೆ ಮೊದಲ ಹಂತದ ಚುನಾವಣೆಯಲ್ಲಿ ದಕ್ಷಿಣದ 14 ಕ್ಷೇತ್ರಗಳಿಗೆ ಮತದಾನ ಮುಗಿದ ಬೆನ್ನಲ್ಲೇ ಹದಿಮೂರು ಮಂದಿ ಸಚಿವರನ್ನು ಉತ್ತರ ಕರ್ನಾಟಕ ಭಾಗದ 13 ಕ್ಷೇತ್ರಗಳಿಗೆ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಿ ಕಾಂಗ್ರೆಸ್ ಆದೇಶ ಹೊರಡಿಸಿದೆ. ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಹೆಚ್ಚುವರಿ ಉಸ್ತುವಾರಿ ಸಚಿವರು ಕೂಡಲೇ ಆಯಾ ಕ್ಷೇತ್ರಗಳಿಗೆ ಹೋಗಿ ಪಕ್ಷದ ಅಭ್ಯರ್ಥಿಗಳು ಗೆಲ್ಲಲು ಕೆಲಸ ಮಾಡುವಂತೆ ಆದೇಶದಲ್ಲಿ ತಿಳಿಸಿದ್ದಾರೆ.
ರಾಮಲಿಂಗಾರೆಡ್ಡಿ ಬಳ್ಳಾರಿ ಕ್ಷೇತ್ರ, ದಿನೇಶ್ ಗುಂಡೂರಾವ್- ಹುಬ್ಬಳ್ಳಿ-ಧಾರವಾಡ, ಬೈರತಿ ಸುರೇಶ್- ಕೊಪ್ಪಳ ಕ್ಷೇತ್ರ, ಡಾ.ಜಿ.ಪರಮೇಶ್ವರ್- ದಾವಣಗೆರೆ, ಕೆ.ಜೆ.ಜಾರ್ಜ್- ಉತ್ತರ ಕನ್ನಡ, ಕೃಷ್ಣ ಬೈರೇಗೌಡ- ಹಾವೇರಿ, ಡಿ.ಸುಧಾಕರ್- ಚಿಕ್ಕೋಡಿ, ಡಾ.ಎಂ.ಸಿ.ಸುಧಾಕರ್- ಬೆಳಗಾವಿ, ಕೆ.ಎಚ್.ಮುನಿಯಪ್ಪ- ರಾಯಚೂರು, ಕೆ.ವೆಂಕಟೇಶ್- ಬೀದರ್, ಎನ್. ಚಲುವರಾಯಸ್ವಾಮಿ- ಶಿವಮೊಗ್ಗ, ಡಾ.ಎಚ್.ಸಿ.ಮಹದೇವಪ್ಪ- ವಿಜಯಪುರ ಹಾಗೂ ಕೆ.ಎನ್.ರಾಜಣ್ಣ ಅವರನ್ನು ಬಾಗಲಕೋಟೆ ಕ್ಷೇತ್ರದ ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಲಾಗಿದೆ.
ಪಿತ್ರೊಡಾ ಹೇಳಿಕೆ ವೈಯಕ್ತಿಕ: ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಡೆತ್ ಟ್ಯಾಕ್ಸೂ (ಇನ್‌ಹೆರಿಟೆನ್ಸ್) ಹಾಕಲ್ಲ, ಬರ್ತ್ ಟ್ಯಾಕ್ಸೂ ಹಾಕಲ್ಲ. ಸ್ಯಾಮ್ ಪಿತ್ರೊಡಾ ಅವರ ಹೇಳಿಕೆ ವೈಯಕ್ತಿಕ, ಅದಕ್ಕೂ ಕಾಂಗ್ರೆಸ್ ಪಕ್ಷಕ್ಕೂ ಸಂಬಂಧವಿಲ್ಲ. ಅಂತಹ ಯಾವುದೂ ಕೂಡ ನಮ್ಮ ಪಕ್ಷದಲ್ಲಿ ತೀರ್ಮಾನ ಆಗಿಲ್ಲ. ಪಕ್ಷದ ಪ್ರಣಾಳಿಕೆಯಲ್ಲಿರುವ ಅಂಶಗಳು ಮಾತ್ರ ಕಾಂಗ್ರೆಸ್‌ನವು. ಅದರಿಂದ ಆಚೆಗಿನ ವೈಯಕ್ತಿಕ ಹೇಳಿಕೆಗಳಿಗೂ ನಮಗೂ ಸಂಬಂಧವಿಲ್ಲ’ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.
ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್‌ಗೆ ಧನ್ಯವಾದ: ಸಿಎಂ ಸಿದ್ದರಾಮಯ್ಯ
ಇದೇ ವೇಳೆ, ‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಸೋಲಿನ ಅರಿವಾಗಿದೆ. ಹೀಗಾಗಿ ಕಾಂಗ್ರೆಸ್ ವಿರುದ್ಧ ಸುಳ್ಳು ಟೀಕೆ ಮಾಡುತ್ತಿದ್ದಾರೆ’ ಎಂದು ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿತ್ರಾರ್ಜಿತ ಆಸ್ತಿಯಲ್ಲಿ ಶೇ.45ರಷ್ಟು ಆಸ್ತಿ ಸರ್ಕಾರಕ್ಕೆ ನೀಡಬೇಕು ಎಂಬುದು ಶುದ್ಧ ಸುಳ್ಳು. ಡೆತ್ ಟ್ಯಾಕ್ಸ್, ಬರ್ತ್ ಟ್ಯಾಕ್ಸ್ ಯಾವುದೂ ಇಲ್ಲ. ಸ್ಯಾಮ್ ಪಿತ್ರೊಡಾ ಏನು ಹೇಳಿದ್ದಾರೆ ಗೊತ್ತಿಲ್ಲ. ಏನೇ ಹೇಳಿದ್ದರೂ ಅದು ಅವರ ವೈಯಕ್ತಿಕ ಹೇಳಿಕೆ. ಅದಕ್ಕೂ ನಮ್ಮ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.