ವಿಧಾನ ಪರಿಷತ್‌ ಚುನಾವಣೆ: ದಕ್ಷಿಣ ಶಿಕ್ಷಕರ ಕ್ಷೇತ್ರಕ್ಕಾಗಿ ಜೆಡಿಎಸ್‌ನಲ್ಲಿ ಸಂಘರ್ಷ..!

ಕೆ.ಟಿ.ಶ್ರೀಕಂಠೇಗೌಡ ಅವರು ಗಲಾಟೆ ವೇಳೆ ಕೈಗೆ ಏಟಾಗಿದೆ ಎಂದು ಹೇಳಿ ನೇರವಾಗಿ ನಗರದ ಆಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾದರು. ನಾಮಪತ್ರ ಸಲ್ಲಿಕೆಗೆ ಕಡೇ ದಿನವಾದ ಹಿನ್ನೆಲೆಯಲ್ಲಿ ಸಂಜೆಯಾದರೂ ಅವರು ನಾಮಪತ್ರ ಸಲ್ಲಿಸಬಹುದೆಂದು ಕೆಲವರ ನಿರೀಕ್ಷೆ ಇತ್ತು. ಆದರೆ ನಾಮಪತ್ರ ಸಲ್ಲಿಕೆಗೆ ಆಗಮಿಸಲಿಲ್ಲ. 
 

Conflict in JDS for South Teachers Constituency in Mysuru grg

ಮೈಸೂರು(ಮೇ.17):  ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಜೆಡಿಎಸ್‌ ಟಿಕೆಟ್‌ ಸಿಗದೆ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲು ಮುಂದಾಗಿದ್ದ ವಿಧಾನ ಪರಿಷತ್‌ ಮಾಜಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡರ ಮನವೊಲಿಕೆಗೆ ಪಕ್ಷದ ಮುಖಂಡರು ತೆರಳಿದ ವೇಳೆ ತೀವ್ರ ನೂಕಾಟ-ತಳ್ಳಾಟ ಆಗಿ ಒಂದು ರೀತಿ ಸಂಘರ್ಷದ ವಾತಾವರಣ ನಿರ್ಮಾಣವಾದ ಪ್ರಸಂಗ ನಡೆದಿದೆ. ಬಳಿಕ ಶ್ರೀಕಂಠೇಗೌಡರು ಕೈಗೆ ಏಟಾಗಿ ಎಂದು ಹೇಳಿಕೊಂಡು ಆಸ್ಪತ್ರೆಗೆ ದಾಖಲಾದ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಯಿಂದ ದೂರವುಳಿದರು.

ಕೆ.ಟಿ.ಶ್ರೀಕಂಠೇಗೌಡ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ಜೆಡಿಎಸ್‌ ಟಿಕೆಟ್‌ಗೆ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ ಪಕ್ಷವು ಅರಣ್ಯ ವಸತಿ ಮತ್ತು ವಿಹಾರಧಾಮ ಮಾಜಿ ಅಧ್ಯಕ್ಷ ಕೆ.ವಿವೇಕಾನಂದ ಅವರಿಗೆ ಬಿ ಫಾರಂ ನೀಡಿತು. ಇದನ್ನು ವಿರೋಧಿಸಿ ಶ್ರೀಕಂಠೇಗೌಡರು ಬಂಡಾಯವಾಗಿ ಸ್ಪರ್ಧಿಸಲು ಮುಂದಾಗಿದ್ದರು. ನಾಮಪತ್ರ ಸಲ್ಲಿಕೆಗೆ ಗುರುವಾರ ಕೊನೇ ದಿನವಾಗಿತ್ತು. ಈ ಹಿನ್ನೆಲೆಯಲ್ಲಿ ಅವರು ಮೈಸೂರಲ್ಲಿ ಬೆಂಬಲಿಗರ ಸಭೆ ಕರೆದಿದ್ದರು. ಇದರಿಂದ ಒಂದೆಡೆ ಜೆಎಲ್‌.ಬಿ ರಸ್ತೆಯ ಗೋವಿಂದರಾವ್‌ ಸ್ಮಾರಕ ಭವನದಲ್ಲಿ ಬಿಜೆಪಿ ಮತ್ತು ಜೆಡಿಎಸ್‌ ನಾಯಕರ ನೇತೃತ್ವದಲ್ಲಿ ನೂರಾರು ಮಂದಿ ಕಾರ್ಯಕರ್ತರ ಬೃಹತ್‌ ಸಭೆ ನಡೆಯುತ್ತಿದ್ದರೆ, ಮತ್ತೊಂದೆಡೆ ಕೆ.ಟಿ.ಶ್ರೀಕಂಠೇಗೌಡರು ಸಮೀಪದ ಶಿವರಾಮಪೇಟೆಯ ಆಲಮ್ಮ ಛತ್ರದಲ್ಲಿ ತಮ್ಮ ಬೆಂಬಲಿಗರ ಸಭೆ ಆಯೋಜಿಸಿದ್ದರು.

ಕಾಂಗ್ರೆಸ್‌ನವರು ಬಹಳ ಮೆರೆಯುತ್ತಿದ್ದಾರೆ, ಬುದ್ಧಿ ಕಲಿಸಬೇಕು: ಆರ್ ಅಶೋಕ್ ವಾಗ್ದಾಳಿ

ಸುದ್ದಿ ತಿಳಿದು ಜಿ.ಟಿ.ದೇವೇಗೌಡ ಅವರು, ಕೆ.ಟಿ.ಶ್ರೀಕಂಠೇಗೌಡರನ್ನು ಬಿಜೆಪಿ-ಜೆಡಿಎಸ್‌ ಸಭೆಗೆ ಕರೆತರುವುದಾಗಿ ಹೊರಟರು. ಮೈತ್ರಿ ಸಭೆಯಲ್ಲಿ ಇನ್ನೇನು ಕೆಲವೇ ಕ್ಷಣದಲ್ಲಿ ಕೆ.ಟಿ.ಶ್ರೀಕಂಠೇಗೌಡರನ್ನು ಶಾಸಕ ಜಿ.ಟಿ.ದೇವೇಗೌಡರು ಕರೆತರುತ್ತಿರುವುದಾಗಿ ಹೇಳಲಾಯಿತು. ಆದರೆ ಆಲಮ್ಮನ ಛತ್ರದ ಬಳಿ ಕೆ.ಟಿ.ಶ್ರೀಕಂಠೇಗೌಡರ ಬೆಂಬಲಿಗರು ಮತ್ತು ಜಿ.ಟಿ.ದೇವೇಗೌಡರ ನಡುವೆ ಹೈಡ್ರಾಮವೇ ನಡೆಯಿತು. 

ಜಿ.ಟಿ.ದೇವೇಗೌಡರಿಗೆ, ಕೆ.ಟಿ.ಶ್ರೀಕಂಠೇಗೌಡರ ಬೆಂಬಲಿಗರು ಘೇರಾವ್ ಹಾಕಿದರು. ಅವರ ಜತೆಗಿದ್ದ ಮಾಜಿ ಸಚಿವ ಸಿ.ಎಸ್‌.ಪುಟ್ಟರಾಜು, ಎಂಎಲ್ಸಿ ಸಿ.ಎನ್‌.ಮಂಜೇಗೌಡ ಅವರನ್ನೂ ಶ್ರೀಕಂಠೇಗೌಡರ ಬೆಂಬಲಿಗರು ಆಲಮ್ಮ ಛತ್ರದ ಒಳ ಹೋಗದಂತೆ ತಡೆದರು. ಜೆಡಿಎಸ್‌-ಬಿಜೆಪಿ ಮೈತ್ರಿ ಕೂಟದ ಸಭೆಗೆ ತೆರಳದಂತೆ ಶ್ರೀಕಂಠೇಗೌಡರನ್ನೂ ತಡೆದರು. ಮೈತ್ರಿ ಸಭೆಗೆ ಹೋಗಬೇಡಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿ ಎಂದು ಪಟ್ಟು ಹಿಡಿದರು. ಈ ವೇಳೆ ಕಾರ್ಯಕರ್ತರು ಪಕ್ಷದ ಪರ ಮತ್ತು ಶ್ರೀಕಂಠೇಗೌಡರ ಪರ ಘೋಷಣೆ ಕೂಗಿದರು. ಇದರಿಂದ ಎರಡು ಗುಂಪುಗಳ ನಡುವಿನ ತಿಕ್ಕಾಟ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗುತ್ತಿದ್ದಂತೆ ಪಕ್ಷದ ನಾಯಕರೇ ಕಾರ್ಯಕರ್ತರನ್ನು ಸಮಾಧಾನಪಡಿಸಲು ಮುಂದಾದರು. ಆಗ ತಳ್ಳಾಟ-ನೂಕಾಟ ಜೋರಾಯಿತು. ವಿಷಯ ತಿಳಿದು ಮಾಜಿ ಸಚಿವ ಸಾ.ರಾ.ಮಹೇಶ್‌ ಕೂಡ ಆಲಮ್ಮನ ಛತ್ರದತ್ತ ಬಂದರು. ಆಗಲೂ ಗಲಾಟೆ ನಡೆಯುತ್ತಿತ್ತು. ಕೊನೆಗೆ ಜಿ.ಟಿ.ದೇವೇಗೌಡರು ಬರಿಗೈಯಲ್ಲಿ ಮೈತ್ರಿಕೂಟದ ಸಭೆಗೆ ಹಿಂತಿರುಗಿದರು.

ಆಸ್ಪತ್ರೆಗೆ ದಾಖಲು: 

ಮಧ್ಯಾಹ್ನ 1 ಗಂಟೆ ಸುಮಾರಿಗೆ ನಡೆದ ಈ ಗದ್ದಲ ಮುಗಿಯುತ್ತಿದ್ದಂತೆ ಕೆ.ಟಿ.ಶ್ರೀಕಂಠೇಗೌಡ ಅವರು ಗಲಾಟೆ ವೇಳೆ ಕೈಗೆ ಏಟಾಗಿದೆ ಎಂದು ಹೇಳಿ ನೇರವಾಗಿ ನಗರದ ಆಪೋಲೋ ಆಸ್ಪತ್ರೆಗೆ ತೆರಳಿ ಚಿಕಿತ್ಸೆಗೆ ದಾಖಲಾದರು. ನಾಮಪತ್ರ ಸಲ್ಲಿಕೆಗೆ ಕಡೇ ದಿನವಾದ ಹಿನ್ನೆಲೆಯಲ್ಲಿ ಸಂಜೆಯಾದರೂ ಅವರು ನಾಮಪತ್ರ ಸಲ್ಲಿಸಬಹುದೆಂದು ಕೆಲವರ ನಿರೀಕ್ಷೆ ಇತ್ತು. ಆದರೆ ನಾಮಪತ್ರ ಸಲ್ಲಿಕೆಗೆ ಆಗಮಿಸಲಿಲ್ಲ. ಮೈತ್ರಿ ಕೂಟದ ಸಭೆಗೆ ತೆರಳುವ ಮನಸ್ಸಿನಲ್ಲಿದ್ದರೂ ಅವರಿಗೆ ಅಭಿಮಾನಿಗಳು ಅಡ್ಡಿಪಡಿಸಿದ್ದರು. ಇದರಿಂದ ಪರೋಕ್ಷವಾಗಿ ಶ್ರೀಕಂಠೇಗೌಡರು ಕಣದಿಂದ ಹಿಂದೆ ಸರಿದರು.

Latest Videos
Follow Us:
Download App:
  • android
  • ios