ಇಡೀ ದಲಿತ ಸಮಾಜ ಒಗ್ಗಟ್ಟಾಗಿ, ಒಟ್ಟಾಗಿ ಇರಬೇಕು ಎನ್ನುವ ಕಾರಣಕ್ಕೆ ನಾನು ಮತ್ತು ಪರಮೇಶ್ವರ್‌ ಒಟ್ಟಾಗಿ ದಲಿತ ಸಮಾವೇಶ ಆಯೋಜಿಸಲು ನಿರ್ಧರಿಸಿದ್ದೇವೆ. ಇದು ಕಾಂಗ್ರೆಸ್‌ ಶಕ್ತಿ ಹೆಚ್ಚಿಸುವ ನಿರೀಕ್ಷೆ ಇದೆ ಎಂದ ಮುನಿಯಪ್ಪ 

ಬೆಂಗಳೂರು(ನ.23): ಗುಂಪುಗಳಾಗಿರುವ ದಲಿತ ಸಮುದಾಯವನ್ನು ಒಟ್ಟುಗೂಡಿಸಲು ನಾನು ಮತ್ತು ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ಸೇರಿ ದೊಡ್ಡ ಮಟ್ಟದ ದಲಿತ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ಕೇಂದ್ರದ ಮಾಜಿ ಸಚಿವ ಕೆ.ಎಚ್‌.ಮುನಿಯಪ್ಪ ತಿಳಿಸಿದ್ದಾರೆ.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲತಃ ದಲಿತ ಸಮುದಾಯ ಕಾಂಗ್ರೆಸ್‌ ಪರವಾಗಿ ಇದ್ದ ಸಮುದಾಯ. ರಾಜಕೀಯ ಕಾರಣಗಳಿಂದ ಇಂದು ಈ ಸಮುದಾಯ ಗುಂಪುಗಳಾಗಿ ವಿಂಗಡಣೆಯಾಗಿದೆ. ಇದು ಸರಿಯಲ್ಲ. ಇಡೀ ದಲಿತ ಸಮಾಜ ಒಗ್ಗಟ್ಟಾಗಿ, ಒಟ್ಟಾಗಿ ಇರಬೇಕು ಎನ್ನುವ ಕಾರಣಕ್ಕೆ ನಾನು ಮತ್ತು ಪರಮೇಶ್ವರ್‌ ಒಟ್ಟಾಗಿ ದಲಿತ ಸಮಾವೇಶ ಆಯೋಜಿಸಲು ನಿರ್ಧರಿಸಿದ್ದೇವೆ. ಇದು ಕಾಂಗ್ರೆಸ್‌ ಶಕ್ತಿ ಹೆಚ್ಚಿಸುವ ನಿರೀಕ್ಷೆ ಇದೆ ಎಂದರು.

ಮೋದಿ ಸಲಹೆಯಂತೆ ದಲಿತ ಮೀಸಲು ಏರಿಕೆ: ಸಿಎಂ ಬೊಮ್ಮಾಯಿ

ಬಿಜೆಪಿ ಸರ್ಕಾರಗಳ ಅಧಿಕಾರಾವಧಿಯಲ್ಲಿ ದಲಿತ ಸಮುದಾಯಕ್ಕೆ ಸಾಕಷ್ಟುನಷ್ಟವಾಗಿದೆ. ದಲಿತ ಸಮುದಾಯದ ಜನರ ಅಭ್ಯುದಯಕ್ಕಾಗಿ ಸುಮಾರು 28ರಿಂದ 30 ಸಾವಿರ ಕೋಟಿ ರು.ನಷ್ಟು ಅನುದಾನವನ್ನು ಈ ಬಾರಿಯ ರಾಜ್ಯ ಬಜೆಟ್‌ನಲ್ಲಿ ಮೀಸಲಿಡಲಾಗಿತ್ತು. ಆದರೆ, ಜನಸಂಖ್ಯೆ ಆಧಾರದಲ್ಲಿ ಸುಮಾರು 42 ಕೋಟಿ ರು.ನಷ್ಟುಅನುದಾನವನ್ನೂ ಈ ಸಮುದಾಯದ ಏಳಿಗೆಗೆ ನೀಡಬೇಕಿತ್ತು. ಮೀಸಲಿಟ್ಟಹಣವನ್ನು ಸಮರ್ಪಕವಾಗಿ ಬಳಕೆ ಮಾಡಿಲ್ಲ. ದಲಿತರಿಗೆ ಸರ್ಕಾರ ಅನ್ಯಾಯ ಮಾಡುತ್ತಿದೆ. ಈ ವಿಷಯ ಪ್ರಸ್ತಾಪಿಸಿದರೆ ಅನಗತ್ಯ ಗೊಂದಲ ಸೃಷ್ಠಿಸಿ ಜನರ ಗಮನ ಬೇರೆಡೆ ಸೆಳೆಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.

ಕ್ಷೇತ್ರಕ್ಕೆ ಬೇಡಿಕೆ ಇಲ್ಲ:

ವಿಧಾನಸಭಾ ಚುನಾವಣೆಗೆ ನಾನು ಪಕ್ಷದ ಟಿಕೆಟ್‌ಗಾಗಿ ಸಲ್ಲಿಸಿರುವ ಅರ್ಜಿಯಲ್ಲಿ ಯಾವುದೇ ಕ್ಷೇತ್ರದ ಬಗ್ಗೆ ನಮೂದಿಸಿಲ್ಲ. ನಾನು ಎಐಸಿಸಿ ಸಮಿತಿಯಲ್ಲಿ ಇದ್ದು ಇಂತಹದ್ದೇ ಕ್ಷೇತ್ರಕೊಡಿ ಎಂದು ಕೇಳುವುದು ಸರಿಯಲ್ಲ. ಹೈಕಮಾಂಡ್‌ ಹೇಳಿದ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂದು ಇದೇ ವೇಳೆ ಮುನಿಯಪ್ಪ ಹೇಳಿದರು.