ಸಚಿವ ಚಲುವರಾಯಸ್ವಾಮಿಯಿಂದ ಹಣ ಬೇಡಿಕೆ: ತನಿಖೆಗೆ ರಾಜ್ಯಪಾಲರ ಸೂಚನೆ

ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಮಂಡ್ಯದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ಬಹಿರಂಗಗೊಂಡಿದ್ದು, ಅದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. 

Complaint Against Minister N Cheluvarayaswamy For Bribe Demand gvd

ಮಂಡ್ಯ/ಬೆಂಗಳೂರು (ಆ.08): ಕೃಷಿ ಸಚಿವ ಎನ್‌.ಚಲುವರಾಯಸ್ವಾಮಿ ಅವರು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆಂದು ಆರೋಪಿಸಿ ಮಂಡ್ಯದ ಕೃಷಿ ಅಧಿಕಾರಿಗಳು ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರವೊಂದು ಬಹಿರಂಗಗೊಂಡಿದ್ದು, ಅದೀಗ ರಾಜ್ಯ ರಾಜಕಾರಣದಲ್ಲಿ ತೀವ್ರ ಸಂಚಲನ ಸೃಷ್ಟಿಸಿದೆ. ರಾಜಕೀಯ ಕಾರಣಕ್ಕೆ ಚಲುವರಾಯಸ್ವಾಮಿ ತಮ್ಮನ್ನು ವರ್ಗಾವಣೆ ಮಾಡಿಸಿದ್ದಾರೆಂದು ಆರೋಪಿಸಿ ನಾಗಮಂಗಲದಲ್ಲಿ ಸಾರಿಗೆ ನೌಕರನೊಬ್ಬ ಆತ್ಮಹತ್ಯೆಗೆ ಯತ್ನಿಸಿದ ವಿವಾದದ ಬೆನ್ನಲ್ಲೇ ಅವರ ವಿರುದ್ಧ ಇನ್ನೊಂದು ಆರೋಪ ಕೇಳಿಬಂದಿದೆ.

ಆದರೆ, ಅಧಿಕಾರಿಗಳು ಮಾತ್ರ ನಾವು ಆ ರೀತಿಯ ಪತ್ರ ಬರೆದಿಲ್ಲ ಎಂದು ಸ್ಪಷ್ಟನೆ ನೀಡಿದರೆ, ಅದೊಂದು ನಕಲಿ ಪತ್ರ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದ್ದಾರೆ. ಇದರ ನಡುವೆ, ತಮಗೆ ಬಂದಿರುವ ಪತ್ರದಲ್ಲಿನ ಆರೋಪವನ್ನು ಪರಿಶೀಲಿಸಿ ಸೂಕ್ತ ಕ್ರಮ ವಹಿಸುವಂತೆ ರಾಜ್ಯಪಾಲರು ಸರ್ಕಾರದ ಮುಖ್ಯಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದು, ಇದು ತೀವ್ರ ಕುತೂಹಲ ಮೂಡಿಸಿದೆ.

ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ: ಸಚಿವ ಸಂತೋಷ್‌ ಲಾಡ್‌

ಏನಿದು ಪ್ರಕರಣ?: ತಲಾ 6ರಿಂದ 8 ಲಕ್ಷ ನೀಡುವಂತೆ ಸಚಿವರು ಜಂಟಿ ಕೃಷಿ ನಿರ್ದೇಶಕರ ಮೂಲಕ ಒತ್ತಡ ಹೇರುತ್ತಿದ್ದಾರೆಂದು ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲೂಕು ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿ ರಾಜ್ಯಪಾಲರಿಗೆ ಬರೆದಿದ್ದಾರೆನ್ನಲಾದ ಪತ್ರದಲ್ಲಿ ಆರೋಪಿಸಿದ್ದಾರೆ. ಯಾವುದೇ ಅಧಿಕಾರಿಗಳು ಈಗ ಕರ್ತವ್ಯ ನಿರ್ವಹಿಸುತ್ತಿರುವ ಜಾಗದಲ್ಲೇ ಮುಂದುವರಿಯಬೇಕಿದ್ದರೆ ನಿಗದಿಪಡಿಸಿದಷ್ಟುಹಣವನ್ನು ಕೃಷಿ ಇಲಾಖೆ ಜಂಟಿ ನಿರ್ದೇಶಕರಿಗೆ ಪಾವತಿಸಬೇಕು. 

ಇಲ್ಲವಾದರೆ ಅಂಥ ಅಧಿಕಾರಿಗಳನ್ನು ನೀರು, ನೆರಳಿಲ್ಲದ ಜಾಗಕ್ಕೆ ವರ್ಗಾವಣೆ ಮಾಡಲಾಗುವುದು ಅಥವಾ ಯಾವುದಾದರೂ ತನಿಖೆ ಕೈಗೊಂಡು ಅಮಾನತು ಮಾಡಲಾಗುವುದು ಎಂದು ಜಂಟಿ ನಿರ್ದೇಶಕರು ಕೃಷಿ ಸಚಿವರ ಪರ ಒತ್ತಡ ಹೇರುತ್ತಿದ್ದಾರೆಂದು ಪತ್ರದಲ್ಲಿ ದೂರಲಾಗಿದೆ. ಅಲ್ಲದೆ, ಲಂಚ ಕೇಳುವ ಇಂಥ ಅನಿಷ್ಟಪದ್ಧತಿಗೆ ಕಡಿವಾಣ ಹಾಕುವ ಸಂಬಂಧ ಕ್ರಮ ವಹಿಸದಿದ್ದಲ್ಲಿ ಅಧಿಕಾರಿಗಳು ಕುಟುಂಬದ ಸದಸ್ಯರ ಜೊತೆಗೆ ವಿಷ ಕುಡಿಯುವುದಾಗಿಯೂ ಪತ್ರದಲ್ಲಿ ಹೇಳಲಾಗಿದೆ. ಅದರಂತೆ ಈ ದೂರಿನ ಕುರಿತು ನಿಯಮಾನುಸಾರ ಪರಿಶೀಲಿಸಿ ಕ್ರಮ ವಹಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ರಾಜ್ಯಪಾಲರು ಪತ್ರ ಬರೆದಿದ್ದಾರೆ.

ನಾವು ಪತ್ರವನ್ನೇ ಬರೆದಿಲ್ಲ: ಕೃಷಿ ಸಚಿವರ ವಿರುದ್ಧದ ಪತ್ರ ತೀವ್ರ ಸಂಚಲನ ಮೂಡಿಸಿದ ಬೆನ್ನಲ್ಲೇ ತಾವು ಮಾತ್ರ ಅಂಥ ಪತ್ರವನ್ನೇ ಬರೆದಿಲ್ಲ ಎಂದು ಅಧಿಕಾರಿಗಳು ಹೇಳಿಕೊಂಡಿದ್ದಾರೆ. ಈ ಸಂಬಂಧ ಪ್ರತಿಕ್ರಿಯಿಸಿರುವ ಜಿಲ್ಲೆಯ ಸಹಾಯಕ ಕೃಷಿ ನಿರ್ದೇಶಕ ಎಸ್‌.ಅಶೋಕ್‌ ಅವರು ರಾಜ್ಯಪಾಲರಿಗೆ ಯಾರೂ, ಯಾವ ದೂರನ್ನೂ ನೀಡಿಲ್ಲ. ನಾನು ಈಗಾಗಲೇ ಸಹಾಯಕ ನಿರ್ದೇಶಕರನ್ನು ಗೂಗಲ್‌ ಮೀಟ್‌ ಮೂಲಕ ಸಂಪರ್ಕಿಸಿದ್ದೇನೆ. ಸಚಿವರ ವಿರುದ್ಧ ಯಾವುದೇ ಪತ್ರ ಬರೆದಿಲ್ಲವೆಂದು ಅವರು ಹೇಳಿದ್ದಾರೆ. ಹಾಗಾಗಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಮೂಲಕ ಈ ಬಗ್ಗೆ ತನಿಖೆ ಮಾಡಲಾಗುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ತನಿಖೆ ಶುರು: ಕೃಷಿ ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರಿ ಬರೆದಿದ್ದಾರೆನ್ನಲಾದ ಪತ್ರ ನಕಲಿ ಎಂಬ ದೂರು ಕೇಳಿಬಂದ ಬೆನ್ನಲ್ಲೇ ಪ್ರಕರಣದ ಕುರಿತು ತನಿಖೆ ಆರಂಭಗೊಂಡಿದೆ. ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಇ.ತಿಮ್ಮಯ್ಯ ಅವರು ಮಂಡ್ಯ ಕೃಷಿ ಇಲಾಖೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ. ಜಂಟಿ ಕೃಷಿ ನಿರ್ದೇಶಕರ ಕಚೇರಿ, ಸಹಾಯಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿದ ಅವರು, ಅಶೋಕ್‌ ಅವರಿಂದ ಮಾಹಿತಿ ಪಡೆದರು. ನಂತರ ಮಂಡ್ಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲೂ ಮಾಹಿತಿ ಸಂಗ್ರಹಿಸಿದರು.

ಏನಿದು ವಿವಾದ?
- ಕೃಷಿ ಸಚಿವರು ಜಂಟಿ ಕೃಷಿ ನಿರ್ದೇಶಕರ ಮೂಲಕ ಹಣಕ್ಕೆ ಒತ್ತಡ ಹೇರುತ್ತಿದ್ದಾರೆಂದು ಪತ್ರದಲ್ಲಿ ಉಲ್ಲೇಖ
- ಮಂಡ್ಯ ಜಿಲ್ಲೆಯ ವಿವಿಧ ತಾಲೂಕುಗಳ ಸಹಾಯಕ ಕೃಷಿ ನಿರ್ದೇಶಕರ ಹೆಸರಿನಲ್ಲಿ ಗೌರ್ನರ್‌ಗೆ ಪತ್ರ ರವಾನೆ
- ನಾವು ಆ ರೀತಿಯ ಪತ್ರ ಬರೆದಿಲ್ಲ ಎಂದು ಕೃಷಿ ಅಧಿಕಾರಿಗಳ ಹೇಳಿಕೆ
- ಆರೋಪದ ತನಿಖೆ ನಡೆಸುವಂತೆ ಸರ್ಕಾರಕ್ಕೆ ಗೆಹಲೋತ್‌ ಸೂಚನೆ

ಮೋದಿ ಬಂದ ಮೇಲೆ ರೈಲ್ವೆ ಇಲಾಖೆ ಚಿತ್ರಣ ಬದಲು: ಪ್ರಲ್ಹಾದ್‌ ಜೋಶಿ

ಕೆಲವರು ನನ್ನನ್ನು ಟಾರ್ಗೆಟ್‌ ಮಾಡಿಕೊಂಡಿದ್ದಾರೆ. ಹುಡುಕಿ ಹುಡುಕಿ ಏನಾದರೂ ಗೊಂದಲ ಸೃಷ್ಟಿಮಾಡಲು ಕಾದಿದ್ದಾರೆ. ಯಾರು ರಾಜ್ಯಪಾಲರಿಗೆ ಪತ್ರ ಬರೆದಿದ್ದಾರೋ ಗೊತ್ತಿಲ್ಲ. ಈ ಕುರಿತು ಜಂಟಿ ಕೃಷಿ ನಿರ್ದೇಶಕರನ್ನು ಕೇಳಿದರೆ ಅದು ನಕಲಿ ಪತ್ರ, ನಮ್ಮಲ್ಲಿ ಯಾರೂ ಆ ರೀತಿಯ ಅಧಿಕಾರಿಗಳಿಲ್ಲ ಎಂದಿದ್ದಾರೆ. ಎಸ್ಪಿಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ.
- ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

Latest Videos
Follow Us:
Download App:
  • android
  • ios