Asianet Suvarna News Asianet Suvarna News

ಪಶ್ಚಿಮ ಬಂಗಾಳದಲ್ಲಿ ಕೆಂಪು ಪಕ್ಷಗಳ ದೌರ್ಬಲ್ಯ ಏನು?

ಕಾಂಗ್ರೆಸ್‌ ಮೇಲ್ಮಟ್ಟದಲ್ಲಿ ಗಾಂಧಿಗಳನ್ನು ಇಟ್ಟುಕೊಂಡರೂ ಕಾರ್ಯಕರ್ತರ ಮಟ್ಟದಲ್ಲಿ ಬದಲಾವಣೆ ತಂದು ಬಹುಕಾಲ ಆಳ್ವಿಕೆ ನಡೆಸಿತು. 

Communist parties and their weakness in west Bengal hls
Author
Bengaluru, First Published Oct 23, 2020, 5:22 PM IST

ನವದೆಹಲಿ (ಅ. 23): ಪ್ರಜಾಪ್ರಭುತ್ವದ ಪ್ರಕ್ರಿಯೆಯಲ್ಲಿ ಭಾರತದ ಸಂದರ್ಭದಲ್ಲಿ ರಾಜಕೀಯ ಅ​ಧಿಕಾರ ಬ್ರಾಹ್ಮಣರಿಂದ ಶೋಷಿತ ಜಾತಿಗಳ ಕಡೆಗೆ, ಶ್ರೀಮಂತರಿಂದ ವಂಚಿತರ ಕಡೆ ಹೋಗುವುದು ಸಹಜ ಮತ್ತು ಸಾಮಾನ್ಯ ಪ್ರಕ್ರಿಯೆ. ಸಂಘಟನೆಗಳು ಬಹುಕಾಲ ಜೀವಂತ ಇರಬೇಕಾದರೆ ಇದನ್ನು ಪ್ರಜ್ಞಾಪೂರ್ವಕವಾಗಿ ಮಾಡಲೇಬೇಕು.

ಕಾಂಗ್ರೆಸ್‌ ಮೇಲ್ಮಟ್ಟದಲ್ಲಿ ಗಾಂಧಿಗಳನ್ನು ಇಟ್ಟುಕೊಂಡರೂ ಕಾರ್ಯಕರ್ತರ ಮಟ್ಟದಲ್ಲಿ ಬದಲಾವಣೆ ತಂದು ಬಹುಕಾಲ ಆಳ್ವಿಕೆ ನಡೆಸಿತು. ಬಿಜೆಪಿ ಮುಖರ್ಜಿ, ಉಪಾಧ್ಯಾಯ, ಅಟಲ್‌ಜಿ ಅವರಂಥ ಬ್ರಾಹ್ಮಣರ ಪಾರ್ಟಿಯಾಗಿ ಶುರುವಾದರೂ ಕಲ್ಯಾಣ್‌ ಸಿಂಗ್‌, ಉಮಾಭಾರತಿಯವರ ಪ್ರಯೋಗ ಮಾಡುತ್ತಾ ಹಿಂದುಳಿದ ಜಾತಿಯ ಮೋದಿಯವರನ್ನು ತಂದಿತು. ಹಿಂದುತ್ವ ಒಂದು ಹೆಚ್ಚುವರಿ ಅಸ್ತ್ರ ಆದರೂ ಶೋಷಿತ, ಪೀಡಿತ, ವಂಚಿತರಿಗೆ ಅ​ಧಿಕಾರ ಕೊಟ್ಟಿದ್ದು ಬಿಜೆಪಿ ಉಳಿಯಲು ಮತ್ತು ಬೆಳೆಯಲು ಕಾರಣ. ಆದರೆ ಜಾತಿರಹಿತ ಸಮಾಜದ ಮಾತು ಆಡುತ್ತಿದ್ದ ಕಮ್ಯುನಿಸ್ಟರು ಇದನ್ನು ಮಾಡಲು ಹೋಗಲಿಲ್ಲ.

ಮಾತುಗಳನ್ನು ಶೋಷಿತರ ಬಗ್ಗೆ ಆಡಿದರೂ ನೇತೃತ್ವ ಮೇಲ್ಜಾತಿಯವರಾದ ಶ್ರೀಪಾದ ಡಾಂಗೆಯಿಂದ ಹಿಡಿದು ಕಾರಟ್‌, ಯೆಚೂರಿ ಬಳಿಯೇ ಉಳಿಯಿತು. ಕೇರಳದಲ್ಲಿ ಹಿಂದುಳಿದ ಅಚ್ಚುತಾನಂದನ್‌, ಪಿಣರಾಯಿ ನಾಯಕರಾದರೆ, ಬಂಗಾಳದಲ್ಲಿ ಅಧಿ​ಕಾರ ಇದ್ದದ್ದು ಜ್ಯೋತಿಬಸು, ಬುದ್ಧದೇಬ್‌, ಸೋಮನಾಥ್‌ ಚಟರ್ಜಿ, ಇಂದ್ರಜಿತ್‌ ಗುಪ್ತಾ ಬಳಿ ಮಾತ್ರ. ಭಾರತದ ಜಾತಿಗಳ ಬಗ್ಗೆ ಆಳವಾದ ಅಧ್ಯಯನ ನಡೆಸಿದ ಕಮ್ಯುನಿಸ್ಟರು ತಮ್ಮ ರಾಜಕೀಯ ಪಕ್ಷದಲ್ಲಿ ಮಾತ್ರ ಈ ಪ್ರಯೋಗ ನಡೆಸಲು ವಿಫಲರಾದರು. ಯುಪಿ, ಬಿಹಾರದಲ್ಲಿ ಕಾಂಗ್ರೆಸ್‌ ಕೇವಲ ಬ್ರಾಹ್ಮಣರನ್ನು ಮುಖ್ಯಮಂತ್ರಿ ಮಾಡುತ್ತಲೇ ಅಪ್ರಸ್ತುತವಾಯಿತು ಅಲ್ಲವೇ. ಹಾಗೆಯೇ ಬಂಗಾಳದ ಕೆಂಪು ಪಕ್ಷಗಳ ಕಥೆ ಕೂಡ.

ಈಗಿನ ಯುವಜನತೆ 'ಕೇಸರಿ'ಯತ್ತ ವಾಲುತ್ತಿರುವುದೇಕೆ?

ಕೆಂಪು ಪೂರ್ತಿ ಅಳಿಯಿತೇ?

ಇವತ್ತಿನ ಮಟ್ಟಿಗೆ ಬಿಜೆಪಿ ಸಮರ್ಥಕರಿಗೆ ಕೆಂಪು ಶಬ್ದವೇ ನಿಷಿದ್ಧ. ಅದರರ್ಥ ಕೆಂಪು ರಾಜಕೀಯದ ಅವಸಾನವೇ ಎಂಬ ಪ್ರಶ್ನೆ ಆಗಾಗ ಕೇಳುತ್ತೇವೆ. ಕೆಂಪು ರಾಜಕೀಯ ಪಕ್ಷಗಳು ನಿಶ್ಚಿತವಾಗಿ ಕೇರಳ ಹೊರತುಪಡಿಸಿ ಎಲ್ಲ ಕಡೆಗೆ ಅವಸಾನದ ಅಂಚಿನಲ್ಲಿವೆ. ಆದರೆ ಆಶ್ಚರ್ಯ ನೋಡಿ, ಸಮಾಜವಾದಿ ಆರ್ಥಿಕ ನೀತಿಗಳು ಅತಿ ಹೆಚ್ಚು ಚಾಲ್ತಿಯಲ್ಲಿವೆ.

ಮೋದಿಯಿಂದ ಹಿಡಿದು ಮಮತಾ, ಕೇಜ್ರಿವಾಲ್‌, ಯಡಿಯೂರಪ್ಪರಿಂದ ಹಿಡಿದು ಜಗನ್‌ವರೆಗೆ ಎಲ್ಲರೂ ನಾವು ಬಡವರ, ರೈತರ, ಕೂಲಿ ಕಾರ್ಮಿಕರ, ಮಹಿಳೆಯರ ಪರ ಎಂದು ಯೋಜನೆ ಘೋಷಿಸುತ್ತಾರೆ. ಸಮಸ್ಯೆ ಆರ್ಥಿಕ ನೀತಿಗಳದ್ದಲ್ಲ; ಭಾರತೀಯ ಕಮ್ಯುನಿಸ್ಟರು ಹೊಸ ತಲೆಮಾರಿನೊಂದಿಗೆ ಹೊಂದಿಕೊಳ್ಳಲಿಲ್ಲ. ಚೀನಾ, ಕ್ಯೂಬಾದ ಪ್ರಯೋಗಗಳಿಂದ ಕಲಿಯದೇ ಬುದ್ಧಿಜೀವಿಗಳ ಮಟ್ಟದಲ್ಲಿ ಉಳಿದುಕೊಂಡರು. ರಾಜಕೀಯವಾಗಿ ಭಾರತದಲ್ಲಿ ಅಪ್ರಸ್ತುತರಾದರು.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕಾರಣ

Follow Us:
Download App:
  • android
  • ios