Asianet Suvarna News Asianet Suvarna News

5000 ಕಾರ್ಯಕರ್ತರಿಗೆ ಸಮಿತಿ ಹುದ್ದೆ ಗ್ಯಾರಂಟಿ: ಸಿಎಂ ಸಿದ್ದರಾಮಯ್ಯ

ಕಾರ್ಯಕರ್ತರಿಗೆ ಸಂಪುಟ ದರ್ಜೆಯ ಸ್ಥಾನ ಮಾನ ದೊರೆಯುವಂತೆಯೂ ಮಾಡಲು ಹೊಸ ಸಮಿತಿ ಸೃಷ್ಟಿಸಲು ಮುಂದಾಗಿದೆ. ಕಾಂಗ್ರೆಸ್‌ನ ಟ್ರಂಪ್ ಕಾರ್ಡ್ ಎನಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಂಬ ಹೊಸ ವ್ಯವಸ್ಥೆಯನ್ನು ರಾಜ್ಯ, ಜಿಲ್ಲಾ ಹಾಗೂ ವಿಧಾನಸಭಾವಾರು ಸಮಿತಿ ರಚನೆ ಮೂಲಕ ಸೃಷ್ಟಿಸಲು ಮುಂದಾಗಿದ್ದು, ಈ ಪೈಕಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ದಯಪಾಲಿಸುವ ಭರವಸೆ ನೀಡಿದೆ.

Committee Post Guaranteed for 5000 workers Says CM Siddaramaiah grg
Author
First Published Jan 11, 2024, 5:24 AM IST

ಬೆಂಗಳೂರು(ಜ.11): ಶಾಸಕರು ಹಾಗೂ ಪಕ್ಷದ ಮುಖಂಡರಿಗೆ ಮಾತ್ರ ಮಣೆ ಹಾಕಲಾಗುತ್ತಿದೆ ಎಂಬ ಕಾರ್ಯಕರ್ತರ ವ್ಯಾಪಕ ಆಕ್ರೋಶವನ್ನು ಒಂದೇ ನಡೆಯಿಂದ ಶಮನಗೊಳಿಸಲು ಮುಂದಾಗಿರುವ ಕಾಂಗ್ರೆಸ್‌ ನಾಯಕತ್ವ, ಮಹತ್ವದ ಗ್ಯಾರಂಟಿ ಯೋಜನೆಗಳ ಜಾರಿಗೆ ಹಾಗೂ ವಿವಿಧ ಉದ್ದೇಶಗಳಿಗೆ ಸರ್ಕಾರದ ವಿವಿಧ ಹಂತಗಳಲ್ಲಿ ಬರೋಬ್ಬರಿ 5 ಸಾವಿರ ಹುದ್ದೆಗಳಿಗೆ ಪಕ್ಷದ ಕಾರ್ಯಕರ್ತರನ್ನು ನೇಮಿಸಿಕೊಳ್ಳುವ ಅಭಯ ನೀಡಿದೆ. ಈ ನೇಮಕ ಪ್ರಕ್ರಿಯೆ ಈ ಮಾಸಾಂತ್ಯದ ವೇಳೆಗೆ ಪೂರ್ಣಗೊಳಿಸುವ ಸ್ವಯಂ ಗಡುವು ಸಹ ವಿಧಿಸಿಕೊಂಡಿದೆ.

ವಿಶೇಷವೆಂದರೇ ಕಾರ್ಯಕರ್ತರಿಗೆ ಸಂಪುಟ ದರ್ಜೆಯ ಸ್ಥಾನ ಮಾನ ದೊರೆಯುವಂತೆಯೂ ಮಾಡಲು ಹೊಸ ಸಮಿತಿ ಸೃಷ್ಟಿಸಲು ಮುಂದಾಗಿದೆ. ಕಾಂಗ್ರೆಸ್‌ನ ಟ್ರಂಪ್ ಕಾರ್ಡ್ ಎನಿಸಿರುವ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಎಂಬ ಹೊಸ ವ್ಯವಸ್ಥೆಯನ್ನು ರಾಜ್ಯ, ಜಿಲ್ಲಾ ಹಾಗೂ ವಿಧಾನಸಭಾವಾರು ಸಮಿತಿ ರಚನೆ ಮೂಲಕ ಸೃಷ್ಟಿಸಲು ಮುಂದಾಗಿದ್ದು, ಈ ಪೈಕಿ ರಾಜ್ಯ ಮಟ್ಟದ ಸಮಿತಿ ಅಧ್ಯಕ್ಷರಿಗೆ ಸಂಪುಟ ದರ್ಜೆ ಸ್ಥಾನಮಾನ ದಯಪಾಲಿಸುವ ಭರವಸೆ ನೀಡಿದೆ.
ಲೋಕಸಭಾ ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ರಾಜ್ಯ ಉಸ್ತುವಾರಿ ರಣದೀಪಸಿಂಗ್‌ ಸುರ್ಜೇವಾಲ ನೇತೃತ್ವದಲ್ಲಿ ಕೆಪಿಸಿಸಿ ಕಚೇರಿಯ ಇಂದಿರಾಭವನದಲ್ಲಿ ಬುಧವಾರ ನಡೆದ ಸಚಿವರು, ಶಾಸಕರು ಹಾಗೂ ಪಕ್ಷದ ಪ್ರಮುಖರ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.

ಸಿದ್ದರಾಮಯ್ಯರನ್ನು ಕೆಳಗಿಳಿಸಲು ಹರಿಪ್ರಸಾದ್‌ ಸಂಚು: ಯತ್ನಾಳ

ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯ, ಜಿಲ್ಲಾ ಹಾಗೂ ವಿಧಾನಸಭೆ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಗಳನ್ನು ರಚಿಸಲಾಗುವುದು. ರಾಜ್ಯಮಟ್ಟದಲ್ಲಿ ಒಬ್ಬರು ಅಧ್ಯಕ್ಷರು ಹಾಗೂ ಐದು ಜನ ಉಪಾಧ್ಯಕ್ಷರು ಇರಲಿದ್ದಾರೆ. ಅಧ್ಯಕ್ಷರಾದವರಿಗೆ ಸಂಪುಟ ದರ್ಜೆ ಸ್ಥಾನಮಾನ ಹಾಗೂ ಉಪಾಧ್ಯಕ್ಷರಿಗೆ ರಾಜ್ಯ ಸಚಿವ ಸ್ಥಾನ ನೀಡಲಾಗುವುದು. ಇವರೆ ಜತೆಗೆ 31 ಮಂದಿ ಕಾಂಗ್ರೆಸ್‌ ಕಾರ್ಯಕರ್ತರನ್ನು ಸದಸ್ಯರನ್ನಾಗಿ ನೇಮಿಸಲಾಗುವುದು ಎಂದು ಘೋಷಿಸಿದರು

ಇನ್ನು 31 ಜಿಲ್ಲಾ ಮಟ್ಟದ ಸಮಿತಿಗಳಲ್ಲಿ ಒಬ್ಬ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ಹಾಗೂ 21 ಮಂದಿ ಸದಸ್ಯರು ಇರಲಿದ್ದಾರೆ. ಅವರಿಗೆ ಕಚೇರಿ ವ್ಯವಸ್ಥೆ ಹಾಗೂ ಗೌರವ ಧನ ನೀಡುವ ವ್ಯವಸ್ಥೆ ಆಗಲಿದೆ. ಅಧ್ಯಕ್ಷರಿಗೆ ಪ್ರತಿ ತಿಂಗಳು 50 ಸಾವಿರ ರು. ಗೌರವಧನ ನೀಡಲಾಗುವುದು.

224 ಕ್ಷೇತ್ರಗಳಲ್ಲಿ ವಿಧಾನಸಭಾ ಮಟ್ಟದ ಸಮಿತಿ ರಚಿಸಿ ಅಧ್ಯಕ್ಷರು ಹಾಗೂ 11 ಸದಸ್ಯರನ್ನು ನೇಮಿಸಲಾಗುವುದು. ಅಧ್ಯಕ್ಷರಿಗೆ 20-25 ಸಾವಿರ ರು. ಗೌರವ ಧನ ನಿಗದಿ ಮಾಡಲಾಗುವುದು. ಇನ್ನು ಸಮಿತಿಗಳ ಸದಸ್ಯರಿಗೆ ಸಭೆ ಹಾಜರಾತಿ ಭತ್ಯೆ ಮಾತ್ರ ನೀಡಲಾಗುವುದು. ಇದನ್ನು ರಾಜ್ಯ ಸರ್ಕಾರದ ಖಜಾನೆಯಿಂದ ಭರಿಸಲಾಗುವುದು ಎಂದು ಮಾಹಿತಿ ನೀಡಿದರು.

ಕೈ ಕಾರ್ಯಕರ್ತರಿಗೆ ಅವಕಾಶ: ಸಿಎಂ:

ಒಂದು ವಾರದ ಒಳಗಾಗಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ನೇಮಕಾತಿ ಆದೇಶ ಹೊರಬೀಳಲಿದೆ. ತಕ್ಷಣದಿಂದ ಸಮಿತಿಗಳ ಕಾರ್ಯ ನಿರ್ವಹಣೆಯೂ ಶುರುವಾಗಲಿದೆ. ಇನ್ನು ಈ ಸಮಿತಿಗಳಲ್ಲಿ ಕಾಂಗ್ರೆಸ್‌ ಪಕ್ಷದ ಸಕ್ರಿಯ ಕಾರ್ಯಕರ್ತರಿಗಷ್ಟೇ ಅವಕಾಶ ನೀಡಲಾಗುವುದು. ಇದನ್ನು ಪುನರ್‌ವಸತಿ ಕೇಂದ್ರ ಎನ್ನಲು ಸಾಧ್ಯವಿಲ್ಲ. 60 ಸಾವಿರ ಕೋಟಿ ರು. ಖರ್ಚು ಮಾಡಿ ಜನರಿಗೆ ನೀಡುವ ಕಾರ್ಯಕ್ರಮಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಲು ವರ್ಷಕ್ಕೆ 6 ಕೋಟಿ ರು. ಖರ್ಚು ಮಾಡುವುದರಲ್ಲಿ ತಪ್ಪೇನಿಲ್ಲ ಎಂದು ಸಿದ್ದರಾಮಯ್ಯ ಸಮರ್ಥಿಸಿಕೊಂಡರು.

ಕಾರ್ಯಕರ್ತರಿಗೆ 5000 ಸ್ಥಾನಮಾನ:

ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಮಾತನಾಡಿ, ಸುರ್ಜೇವಾಲಾ ಅವರ ಆಶಯದಂತೆ ಗ್ಯಾರಂಟಿಗಳ ಅನುಷ್ಠಾನ ಸಮಿತಿ ಮಾತ್ರವಲ್ಲದೆ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗೆ ಸುಮಾರು 5 ಸಾವಿರ ವಿವಿಧ ಹುದ್ದೆಗಳಿಗೆ ಕಾರ್ಯಕರ್ತರು ಹಾಗೂ ಜನಸಾಮಾನ್ಯರಿಗೆ ಅವಕಾಶ ನೀಡುವ ಮೂಲಕ ಈ ಸರ್ಕಾರವನ್ನು ಜನರ ಸರ್ಕಾರ ಮಾಡುವುದಾಗಿ ತಿಳಿಸಿದರು.

ಬಸವಣ್ಣ ಸಾಂಸ್ಕೃತಿಕ ರಾಯಭಾರಿ, ಸಂಪುಟದಲ್ಲಿ ಚರ್ಚೆ: ಸಿಎಂ ಸಿದ್ದರಾಮಯ್ಯ

ವಿಧಾನಸಭಾವಾರು ಇರುವ ಆಶ್ರಯ ಸಮಿತಿ, ಆರಾಧನಾ ಸಮಿತಿ, ನೀರಾವತಿ ಇಲಾಖೆ ಕೆರೆಗಳ ಸಮಿತಿ, ಬಗರ್‌ ಹುಕುಂ ಸಾಗುವಳಿ ಸಮಿತಿ, ಕೆಡಿಪಿ ಸೇರಿದಂತೆ ತಾಲೂಕು ಮಟ್ಟದಿಂದ ರಾಜ್ಯ ಮಟ್ಟದವರೆಗಿನ ವಿವಿಧ ಹುದ್ದೆಗಳಿಗೆ ಸೇರಿದಂತೆ ಎಲ್ಲಾ ಸಮಿತಿಗಳಿಗೆ ನಾಮನಿರ್ದೇಶನ ಮಾಡಬೇಕು.

ಜಿಲ್ಲಾಧ್ಯಕ್ಷರು ಹಾಗೂ ಸ್ಥಳೀಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ತಿಂಗಳಾಂತ್ಯದ ಒಳಗಾಗಿ ಜಿಲ್ಲಾ ಮಂತ್ರಿಗಳು ನಾಮ ನಿರ್ದೇಶನ ಮಾಡಿ ಕಾರ್ಯಕರ್ತರಿಗೆ ಶಕ್ತಿ ತುಂಬಬೇಕು ಎಂದು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios