ನಾನಿಂದು ರಾಜಕೀಯ ಜೀವನದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ನಾನು ಶಾಲೆ ಕಲಿತ ಈ ಕಾಲೇಜು ಚುನಾವಣೆಯೇ ನನಗೆ ಪ್ರೇರಣೆ ಎಂದು ಕನ್ನಡ ಮತ್ತು ಸಂಸ್ಕೃತಿಕ ಸಚಿವ ಶಿವರಾಜ ತಂಗಡಗಿ ತಿಳಿಸಿದರು.

ಇಳಕಲ್ಲ (ಮೇ.20): ನಾನಿಂದು ರಾಜಕೀಯ ಜೀವನದಲ್ಲಿ ಇಷ್ಟು ಎತ್ತರಕ್ಕೆ ಬೆಳೆಯಲು ನಾನು ಶಾಲೆ ಕಲಿತ ಈ ಕಾಲೇಜು ಚುನಾವಣೆಯೇ ನನಗೆ ಪ್ರೇರಣೆ ಎಂದು ಕನ್ನಡ ಮತ್ತು ಸಂಸ್ಕೃತಿಕ ಸಚಿವ ಶಿವರಾಜ ತಂಗಡಗಿ ತಿಳಿಸಿದರು. ನಗರದ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ವಿಜಯ ಮಹಾಂತೇಶ್ವರ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಸಂಘದ ೨೦ನೇ ಸರ್ವಸಾಧರಣ ಸಭೆಯ ಮುಖ್ಯ ಅತಿಥಿಗಳಾಗಿ ಗೌರವ ಸತ್ಕಾರ ಸ್ವೀಕರಿಸಿ ಮಾತನಾಡಿ, ಯಾವುದೇ ಒಬ್ಬ ವಿದ್ಯಾರ್ಥಿಯಾಗಿರಲಿ ಅವನ ಜೀವನ ರೂಪಿಸುವುದು ಕಾಲೇಜು ಜೀವನ. ಇಲ್ಲಿ ನಾವು ಸರಿಯಾಗಿ ಇದರ ಉಪಯೋಗ ಪಡೆದರೆ ಉನ್ನತ ಹುದ್ದೆ ಅಲಂಕರಿಸುವುದರಲ್ಲಿ ಸಂಶಯವೇ ಇಲ್ಲ, 

ನಾವು ಕಲಿಯುವಾಗ ಇದ್ದ ಪ್ರಾಧ್ಯಾಪಕರು ನಮಗೆ ನಮ್ಮ ಜೀವನ ರೂಪಿಸಿದ ಶಿಲ್ಪಿಗಳು. ನಾನು ಕಲಿತ ಈ ಶಾಲೆಯಲ್ಲಿ ಇಂದು ಸಚಿವನಾಗಿ ಬಂದು ಗೌರವ ಸತ್ಕಾರ ಪಡೆದು ಮಾತನಾಡುತ್ತಿರುವುದು ಸಂತಸ ತಂದಿದೆ. ಈ ಸಮಾರಂಭಕ್ಕೆ ನನ್ನ ಜೊಗೆತೆ ಕಲಿತ ನನ್ನ ಗೆಳೆಯರು ಹಾಗೂ ಕಲಿಸಿದ ಗುರುಗಳನ್ನು ನೋಡಿ ಸಂತಸವಾಯಿತು. ಶಾಲೆಯ ನೂರಕ್ಕೆ ನೂರು ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸುವುದು ಹೆಮ್ಮೆಯ ವಿಷಯ. ನಮ್ಮ ಸಮಯದಲ್ಲಿ ೩೫ ಅಂಕ ಪಡೆದು ಪಾಸಾದರೆ ಅದುವೇ ಸಾಧನೆ ಆಗುತ್ತಿತ್ತು. 

ನಾವ್ಯಾರು ನೂರು ಅಂಕ ಪಡೆದು ಇಂತಹ ಸತ್ಕಾರ ಪಡೆಯದಿರುವುದು ಮನಸ್ಸಿಗೆ ಬೇಜಾರಾಯಿತು ಎಂದರು. ಈ ಭಾಗದಲ್ಲಿ ಅತ್ತುತ್ತಮ ವಿದ್ಯೆ ಕೊಡುವ ಈ ಸಂಸ್ಥೆಗೆ ನನ್ನಿಂದ ಸಾಧ್ಯವಾಗುವ ಸಹಕಾರ ನೀಡುವುದಾಗಿ ತಿಳಿಸಿದ ಸಚಿವರು, ಈ ಕಾಲೇಜಿನಲ್ಲಿ ಕಲಿತವರಿಗೆ ರಾಜ್ಯದ ಎಲ್ಲ ಕಡೆ ಉದ್ಯೋಗ ಸಿಗುತ್ತದೆ. ಈ ಕಾಲೇಜಿನಲ್ಲಿ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ ಎಂದರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರೊ. ಕಂದಗಲ್ಲ ಅಧ್ಯಕ್ಷತೆ ವಹಿಸಿದ್ದರು. 

ಹಿಂದೂಗಳ ಹೆಸರಿನಲ್ಲಿ ಮತ ಕೇಳುವ ದುಸ್ಥಿತಿ ಬಿಜೆಪಿಗೆ ಬಂದಿದೆ: ಸಚಿವ ಶಿವರಾಜ ತಂಗಡಗಿ

ವೇದಿಕೆಯ ಮೇಲೆ ವಿಜಯ ಮಹಾಂತೇಶ್ವರ ವಿದ್ಯಾವರ್ಧಕ ಸಂಘದ ಚೇರ್ಮನ್‌ ಎಸ್.ಎಂ. ಗೊಂಗಡಶೆಟ್ಟಿ, ವೈಸ್‌ ಚೇರ್ಮನ್‌ ಅರುಣ ಬಿಜ್ಜಲ, ಕಾರ್ಯದರ್ಶಿ ದಿಲೀಪ ದೇವಗಿರಕರ, ಕಾಲೇಜಿನ ಚೇರ್ಮನ್‌ ಶರಣಪ್ಪ ಅಕ್ಕಿ, ಹಿರಿಯರಾದ ಎಂ.ವಿ. ಪಾಟೀಲ, ಪದವಿ ಕಾಲೇಜು ಪ್ರಾಚಾರ್ಯ ಎಸ್.ಎಸ್. ಅವಟೆ, ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಎಸ್.ವಿ. ಕಂಬಿ, ಹಳೆಯ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಧರೇಶ ಕಮತಗಿ ಇತರರು ಉಪಸ್ಥಿತರಿದ್ದರು. ಇದೇ ವೇಳೆಯಲ್ಲಿ ಕಾಲೇಜಿನಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಗಳನ್ನು ಗೌರವಿಸಿ ಸತ್ಕರಿಸಿ ನಗದು ಬಹುಮಾನ ನೀಡಲಾಯಿತು.