ಬೆಂಗಳೂರು [ಜ.22]:  ಕೆಪಿಸಿಸಿ ಅಧ್ಯಕ್ಷರ ಜತೆಗೆ ನಾಲ್ವರು ಕಾರ್ಯಾಧ್ಯಕ್ಷರ ನೇಮಕವಾಗಬೇಕು ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಿಲುವಿಗೆ ಕಾಂಗ್ರೆಸ್ ಪಕ್ಷದಲ್ಲಿ ವಿರೋಧ ಪ್ರಬಲವಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷ ಹುದ್ದೆ ಆಕಾಂಕ್ಷಿ ಡಿ.ಕೆ.ಶಿವಕುಮಾರ್ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಅವರು ವಿರೋಧ ವ್ಯಕ್ತಪಡಿಸಿದ ಬೆನ್ನಲ್ಲೇ ಇದೀಗ ಕೆಪಿಸಿಸಿ ಹುದ್ದೆಯ ಮತ್ತೊಬ್ಬ ಆಕಾಂಕ್ಷಿ ಕೆ.ಎಚ್.ಮುನಿಯಪ್ಪ ಹಾಗೂ ಪಕ್ಷದ ಹಿರಿಯ ನಾಯಕ ಎಚ್.ಕೆ. ಪಾಟೀಲ್ ಅವರೂ ಸಿದ್ದರಾಮಯ್ಯ ನಿಲುವಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕೆ.ಎಚ್. ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷ ಹುದ್ದೆ ಸಾಮಾನ್ಯವಾಗಿ ಒಂದು ಇಲ್ಲವೇ ಎರಡು ಮಾತ್ರ ಇರುತ್ತದೆ.  ಅಧ್ಯಕ್ಷರಿಗೆ ಸಹಾಯ ಮಾಡಲಿ ಎಂದು ಕಾರ್ಯಾಧ್ಯಕ್ಷರ ನೇಮಕ ಮಾಡಲಾಗುತ್ತದೆ. ಇದಕ್ಕಿಂತ ಹೆಚ್ಚಿನ ಕಾರ್ಯಾಧ್ಯಕ್ಷರ ನೇಮಕ ಅಗತ್ಯವಿಲ್ಲ. ನಾಲ್ಕೈದು ಕಾರ್ಯಾಧ್ಯಕ್ಷರ ನೇಮಕ ಮಾಡಿ ಎಂದು ಸಿದ್ದರಾಮಯ್ಯ ಹೇಳಿದ್ದರೆ ಅದು ಅವರ ಅಭಿಪ್ರಾಯ ಅಷ್ಟೆ ಎಂದರು.

ಇನ್ನು, ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ಪ್ರತಿಪಕ್ಷ ನಾಯಕ ಸ್ಥಾನ ಪ್ರತ್ಯೇಕ ಮಾಡುವ ವಿಚಾರಕ್ಕೂ ಬೆಂಬಲ ವ್ಯಕ್ತಪಡಿಸಿದ ಅವರು, ಇಂತಹ ಪ್ರಯತ್ನ ಮಹಾರಾಷ್ಟ್ರದಲ್ಲಿ ಈಗಾಗಲೇ ಮಾಡಲಾಗಿದೆ. ಅಧಿ ಕಾರ ಹಂಚಿಕೆಯಿಂದ ಪಕ್ಷ ಕಟ್ಟಲು ಸಾಧ್ಯ. ಕಾಂಗ್ರೆಸ್‌ನಲ್ಲಿ ಹಲವು ಮಂದಿ ಹಿರಿಯರಿದ್ದಾರೆ. ಅವರಿಗೆಲ್ಲ ಅವಕಾಶ ದೊರೆಯಬೇಕಾಗುತ್ತದೆ. ಸಿದ್ದರಾಮಯ್ಯ ಕಾಂಗ್ರೆಸ್‌ಗೆ ಬಂದು 14 ವರ್ಷ ಆಯ್ತು. ಅವರಿಗೆ ಪಕ್ಷ ಎಲ್ಲಾ ಜವಾಬ್ದಾರಿ ಕೊಟ್ಟಿದೆ. 

ಅದೇ ರೀತಿ ಪಕ್ಷದಲ್ಲಿ40 ವರ್ಷಗಳಿಂದ ಇರುವವರೂ ಇದ್ದಾರೆ. ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಎಚ್.ಕೆ. ಪಾಟೀಲ್, ಬಿ. ಕೆ.ಹರಿಪ್ರಸಾದ್ ನಾನು ಎಲ್ಲರೂ ಇದ್ದೇವೆ. ನಾವೆಲ್ಲ ಅಧಿಕಾರ ಇಲ್ಲದಿದ್ದರೂ ಪಕ್ಷ ಬಿಡದೆ ಶಿಸ್ತಿನಿಂದ ಇರುವವರು. ಪಕ್ಷದಲ್ಲಿ ಮೂಲ, ವಲಸಿಗ ಎಂಬ ತಾರತಮ್ಯ ಇರಬಾರದು. ಎಲ್ಲರೂ ಸರಿಯಾಗಿ ನಡೆದುಕೊಳ್ಳಬೇಕು. ಹಾಗೂ ಎಲ್ಲರನ್ನೂ ಸರಿಯಾಗಿ ನಡೆಸಿಕೊಂಡು ಹೋಗಬೇಕು. ಆಗ ಪಕ್ಷದಲ್ಲಿ ಯಾವ ಅಸಮಾಧಾನವೂ ಇರುವುದಿಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಹೌದು ಹುಲಿಯಾ ಅಲ್ಲಾ ಅವರು ಹೌದು ಸೋನಿಯಾ..

ಎಚ್‌ಕೆ ಪಾಟೀಲ್ ವಿರೋಧ: ಮುನಿಯಪ್ಪ ಅವರ ಧಾಟಿಯಲ್ಲೇ ಮಾತನಾಡಿದ ಮತ್ತೊಬ್ಬ ನಾಯಕ ಎಚ್.ಕೆ. ಪಾಟೀಲ್, ನಾಲ್ಕು ಕಾರ್ಯಾ ಧ್ಯಕ್ಷರ ನೇಮಕ ಅವಶ್ಯಕತೆಯಿಲ್ಲ ಎಂದು ನೇರವಾಗಿ ಸಿದ್ದರಾಮಯ್ಯ ನಿಲುವಿಗೆ ವಿರೋಧ ವ್ಯಕ್ತಪಡಿಸಿ ದರು. ವಿಧಾನಸೌಧದಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಪಕ್ಷದ ಹಿತದೃಷ್ಟಿಯಿಂದ ಕೂಡಲೇ  ಕೆಪಿಸಿಸಿ ಅಧ್ಯಕ್ಷರ ಆಯ್ಕೆ ಆಗಬೇಕು.ಇದರ ಜತೆಗೆ ಹಾಲಿ ಇರುವ ಒಬ್ಬ ಕಾರ್ಯಾಧ್ಯಕ್ಷರನ್ನು ಮುಂದುವರೆಸ ಬೇಕು. ಹೆಚ್ಚಿನ ಕಾರ್ಯಾಧ್ಯಕ್ಷರನ್ನು ನೇಮಕ ಮಾಡಬಾರದು ಎಂದರು. 

ಅಲ್ಲದೆ, ಈ ಹಿಂದೆ ಯುಪಿಎ ಅವಧಿಯಲ್ಲಿ ಹಾಗೂ ಪ್ರಸ್ತುತ ಮಹಾರಾಷ್ಟ್ರದಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕ ಎಂಬ ಎರಡು ಹುದ್ದೆಗಳನ್ನು ಸೃಜಿಸಲಾಗಿದೆ. ನಮ್ಮದು ರಾಷ್ಟ್ರೀಯ ಪಕ್ಷ. ಎಲ್ಲೆಡೆ ಒಂದೇ ಮಾದರಿ ಇರಬೇಕು. ರಾಜ್ಯದಲ್ಲಿ ಶಾಸಕಾಂಗ ಪಕ್ಷದ ನಾಯಕ ಹಾಗೂ ಪ್ರತಿಪಕ್ಷ ನಾಯಕ ಹುದ್ದೆಯನ್ನು ಪ್ರಸ್ತುತ ಒಬ್ಬರಿಗೇ ನೀಡಲಾಗಿದೆ. ಈ ಹುದ್ದೆಯನ್ನು ಇಬ್ಬರಿಗೆ ನೀಡಬೇಕು ಎಂದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ತಾವು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಆಕಾಂಕ್ಷಿಯಲ್ಲ ಎಂದು ಸ್ಪಷ್ಟಪಡಿಸಿದರು.