ಬೆಂಗಳೂರು, (ಅ.30):  ರಾಜರಾಜೇಶ್ವರಿ ನಗರ ಹಾಗೂ ಶಿರಾದಲ್ಲಿ ಉಪಚುನಾವಣೆ ನಡೆಯಲಿದ್ದು, ಈಗಾಗಲೇ ಚುನಾವಣಾ ಪ್ರಚಾರದಲ್ಲಿ ರಾಜಕೀಯ ಘಟಾನುಘಟಿಗಳಾದ ಜೆಡಿಎಸ್ ವರಿಷ್ಠ ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಚ್.ಡಿ.ಕುಮಾರಸ್ವಾಮಿ ಹಾಗೂ ಡಿಕೆ.ಶಿವಕುಮಾರ್ ತೊಡಗಿದ್ದಾರೆ.

 ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ ಅವರೂ ಮಾತ್ರ ಇನ್ನೂ ಪ್ರಚಾರಕ್ಕಳಿದಿರಲಿಲ್ಲ. ಇದೀಗ ಪ್ರಚಾರಕ್ಕೆ ಯಡಿಯೂರಪ್ಪ ಕೂಡ ಧುಮುಕಿದ್ದು, ಮತದಾರರನ್ನು ಸೆಳೆಯಲು ಮುಂದಾಗಿದ್ದಾರೆ.

ಶಿರಾದಲ್ಲಿ ಪ್ರಚಾರ ನಡೆಸುವುದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿರುವ ಯಡಿಯೂರಪ್ಪ, ನಾನು ಉಪಚುನಾವಣೆಯ ಪ್ರಚಾರಕ್ಕೆ ಹೋಗಬೇಕೆಂದು ಇರಲಿಲ್ಲ. ಆದರೆ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಡಿಕೆ.ಶಿವಕುಮಾರ್, ಕುಮಾರಸ್ವಾಮಿ ಹಾಗೂ ದೇವೇಗೌಡರೇ ಪ್ರಚಾರಕ್ಕೆ ಹೋಗಿರುವಾಗ ನಾನು ಪ್ರಚಾರಕ್ಕೆ ಹೋಗಲಿಲ್ಲ ಎಂದರೆ ತಪ್ಪಾಗುತ್ತದೆ. ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ. ಹೀಗಾಗಿ ಪ್ರಚಾರದಲ್ಲಿ ಭಾಗಿಯಾಗುತ್ತೇನೆಂದು ಎಂದು ಹೇಳಿದರು.

ಶಿರಾ ಅಖಾಡಕ್ಕೆ ರಾಜಾಹುಲಿ ಎಂಟ್ರಿ; ರಾರಾದಲ್ಲಿ ಕಮಲ ಪಾಳಯ ಸೇರಿದ ಕೈ ನಾಯಕ

ಉಪಚುನಾವಣೆಯಿಂದ ರಾಜ್ಯ ರಾಜಕೀಯದಲ್ಲಿ ದೊಡ್ಡ ಮಟ್ಟದ ಬದಲಾವಣೆಗಳಾಗಲಿವೆ ಎಂಬ ವಿರೋಧ ಪಕ್ಷ ನಾಯಕರ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿ, ಹೌದು, ಬದಲಾವಣೆಗಳಾಗಲಿವೆ. ಎರಡೂ ಕ್ಷೇತ್ರದಲ್ಲಿಯೂ ಭಾರೀ ಮತಗಳ ಅಂತರದಿಂದ ನಾವು ಗೆಲುವು ಸಾಧಿಸಲಿದ್ದೇವೆ. ಕಾಂಗ್ರೆಸ್ ಅದರಿಂದ ಅವಮಾನಕ್ಕೊಳಗಾಗಲಿದೆ ಎಂದು ಟಾಂಗ್ ಕೊಟ್ಟರು.

ಇದೇ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್‌ವೈ, ಉಪಚುನಾವಣೆ ಪೂರ್ಣಗೊಳ್ಳಬೇಕು. ಪ್ರಸ್ತುತ ಚುನಾವಣೆಯಲ್ಲಿ ಕಾರ್ಯಮಗ್ನರಾಗಿದ್ದೇವೆ. ಚುನಾವಣೆ ಪೂರ್ಣಗೊಂಡ ಬಳಿಕ ದೆಹಲಿಗೆ ತೆರಳಿ ಹೈಕಮಾಂಡ್ ಜೊತೆಗೆ ಚರ್ಚಿಸಿ ಸಂಪುಟ ವಿಸ್ತರಣೆ ಮಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.